ಶಿಕ್ಷಣವಿಲ್ಲದ ಮನೆ ಇಸ್ಲಾಮಿಕವಾಗಿ ಇರಲು ಸಾಧ್ಯವಿಲ್ಲ-ಜಿಫ್ರಿ ತಂಙಳ್
ರಾಮಕುಂಜ: ಹೆಣ್ಣು ಮಕ್ಕಳು ಶಿಕ್ಷಿತರಾದರೆ ಮನೆ, ಕುಟುಂಬ ಸಂಸ್ಕಾರಯುತವಾಗಿರುತ್ತದೆ. ಅದೇ ರೀತಿಯಾಗಿ ಮನೆ ಮಂದಿಯಲ್ಲಿ ಶಿಕ್ಷಣವೇ ಇಲ್ಲದಿದ್ದರೆ ಆ ಮನೆ ಇಸ್ಲಾಮಿಕವಾಗಿ ಇರಲು ಸಾಧ್ಯವೇ ಇಲ್ಲ ಎಂದು ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೆಯ್ಯದ್ ಜುನೈದ್ ಜಿಫ್ರಿ ತಂಙಳ್ ಹೇಳಿದರು.

ಅವರು ಸೆ.16ರಂದು ಆತೂರು ಡಾ. ಶಾಹ್ ಮುಸ್ಲಿಯಾರ್ ಮೆಮೋರಿಯಲ್ ಬದ್ರಿಯಾ ಮಹಿಳಾ ಶರೀಅತ್ ಮತ್ತು ಫಾಲಿಳಾ ಕಾಲೇಜಿನಲ್ಲಿ “ಮನರ ರಬೀಹ್ ಮಿಲಾದ್ ಫೆಸ್ಟ್-25” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲಿಕೆಯಿಲ್ಲದ ಹೆಣ್ಣು ಮಕ್ಕಳು ಅಪಮಾನಕ್ಕೆ ಒಳಗಾಗುವುದನ್ನು ಮನಗಂಡ ನೆಬಿವರ್ಯರು ಹೆಣ್ಣು ಮಕ್ಕಳ ಕಲಿಕೆಗೆ ಪ್ರೇರಣೆ ನೀಡಲು ಮುಂದಾಗಿದ್ದರು. ಇಂದು ಶಿಕ್ಷಣದಲ್ಲಿ ಹುಡುಗಿಯರೇ ಮೇಲುಗೈ ಸಾಧಿಸುತ್ತಿದ್ದು, ಇದು ನಮಗೆ ಅಭಿಮಾನವಾಗಿದೆ, ಹೀಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಬೇಕು. ಜೊತೆಗೆ ಅವರು ದಾರಿ ತಪ್ಪದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ ಎಂದರು.
ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಆಶಿಫ್ ಅಝ್ಹರಿ, ಬದ್ರಿಯಾ ಸ್ಕೂಲ್ ಪ್ರಾಚಾರ್ಯ ಸಮದ್, ತದ್ಬೀರುಲ್ ಇಸ್ಲಾಂ ಮದ್ರಸದ ಮುಖ್ಯ ಶಿಕ್ಷಕ ಸತ್ತಾರ್ ಅಸ್ನವಿ ಮಾತನಾಡಿದರು. ಸಮಾರಂಭದಲ್ಲಿ ನೀರಾಜೆ ಮದ್ರಸದ ಶೌಕತ್ತಾಳಿ ಅಸ್ಲಮಿ, ಅಬ್ದುಲ್ ಲತೀಫ್ ಮುಸ್ಲಿಯಾರ್, ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹೈದರ್ ಕಳಾಯಿ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹಮದ್ ಕುಂಞಿ, ಪದಾಧಿಕಾರಿಗಳಾದ ಪೊಡಿಕುಂಞಿ ನೀರಾಜೆ, ಎನ್.ಎ. ಇಸಾಕ್ ಕೆಮ್ಮಾರ, ಬಡಿಲ ಹುಸೈನ್, ನಝೀರ್ ಕೆ., ಇಬ್ರಾಹಿಂ ಮೋನು, ಹಲ್ಯಾರ್ ಅಝೀಜ್, ನೌಫಲ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಹಂಝ ಸಖಾಫಿ ಸ್ವಾಗತಿಸಿ, ಅಜೀಝ್ ಕಿಡ್ಸ್ ವಂದಿಸಿದರು.