ಉತ್ತಮ ಆರೋಗ್ಯಕ್ಕೆ ಕ್ರೀಡೆ ಔಷಧಿ: ರವಿ ಬಿ.ಎಸ್.
ಉಪ್ಪಿನಂಗಡಿ: ಶಿಕ್ಷಣ ಹಾಗೂ ಆರೋಗ್ಯವಂತ ಯುವ ಜನತೆ ಈ ದೇಶದ ಸಂಪತ್ತಾಗಿದ್ದು, ಉತ್ತಮ ಆರೋಗ್ಯಕ್ಕೆ ಕ್ರೀಡೆ ಬಹುದೊಡ್ಡ ಔಷಧಿ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತದ ವೃತ್ತ ನಿರೀಕ್ಷಕ ರವಿ ಬಿ.ಎಸ್. ಹೇಳಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಮತ್ತು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಬಾಲಕ ಹಾಗೂ ಬಾಲಕಿಯರ ಮ್ಯಾಟ್ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯವಾಗಿದ್ದು, ಹಳ್ಳಿ ಸೊಗಡಿನ ಆಟವಾದ ಕಬಡ್ಡಿಗೆ ಪ್ರೋ ಕಬಡ್ಡಿಯಿಂದ ಹೊಸ ಮೆರುಗು ದೊರೆತಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧಕರಾಗಬೇಕು. ಕ್ರೀಡೆಯಲ್ಲಿ ಸಾಧಕರಾಗಬೇಕಾದರೆ ಜೀವನದಲ್ಲಿ ಶಿಸ್ತು, ಸಂಯಮ ಅತೀ ಮುಖ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಉಪ್ಪಿನಂಗಡಿ ವಲಯ 15ರ ಸಹಾಯಕ ಗವರ್ನರ್ ಡಾ. ರಾಜಾರಾಮ್ ಕೆ.ಬಿ., ಇದು ಸರಕಾರಿ ಕಾಲೇಜಾದರೂ ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಗುಣಮಟ್ಟದ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ನೀಡಲಾಗುತ್ತಿದೆ. ಪರಸ್ಪರ ಸಹಕಾರ ಮನೋಭಾವ, ಒಗ್ಗಟ್ಟು ಇದ್ದರೆ ಸರಕಾರಿ ಕಾಲೇಜೊಂದು ಕೂಡಾ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜಿಸಬಹುದೆಂದು ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜು ತೋರಿಸಿದೆ ಎಂದರು.
ದ.ಕ. ಜಿಲ್ಲಾ ಕ್ರೀಡಾ ಸಂಚಾಲಕ ಪ್ರೇಮನಾಥ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್, ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಯು.ಟಿ. ತೌಸೀಫ್, ಸದಸ್ಯರಾದ ಅಬ್ದುಲ್ ರಹಿಮಾನ್ ಕೆ., ಅಬ್ದುಲ್ ರಝಾಕ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಕೆನ್ಯೂಟ್, ಅರಫಾ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಶಫೀಕ್ ಅರಫಾ, ಜೋಸಿಸ್ ಆಯುರ್ವೇದ ಆಸ್ಪತ್ರೆಯ ಡಾ. ಸುಪ್ರೀತ್ ಲೋಬೋ, ನಿವೃತ ಸೈನಿಕ ಜಯಕುಮಾರ್ ಪೂಜಾರಿ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಕೃಷ್ಣಾನಂದ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅನಿ ಮಿನೇಜಸ್, ನಝೀರ್ ಮಠ, ಅಬ್ದುರ್ರಹ್ಮಾನ್ ಯುನಿಕ್, ನಾಗೇಶ ಪ್ರಭು, ಆದಂ ಕೊಪ್ಪಳ, ಇಬ್ರಾಹೀಂ ಕೆ., ವೆಂಕಪ್ಪ ಪೂಜಾರಿ ಮರುವೇಲು, ಉಷಾ ಎ.ಎಸ್. ಉಪಸ್ಥಿತರಿದ್ದರು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಮಿಥುನ್ ಗೌಡ, ಹಸನ್ ಮಹಮ್ಮದ್ ನಿಶಾನ್, ನಾಸಿರ್ ಕುಪ್ಪೆಟ್ಟಿ ಅವರನ್ನು ಅವರ ಕ್ರೀಡಾ ಸಾಧನೆಗಾಗಿ ಹಾಗೂ ಉತ್ತಮ ಕರ್ತವ್ಯಕ್ಕೆ ರಾಷ್ಟ್ರಪತಿ ಪದಕ ಪಡೆದ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಉಪ್ಪಿನಂಗಡಿ ಗ್ರಾ.ಪಂ. ವತಿಯಿಂದ ಕಾಲೇಜಿಗೆ 2.೦5 ಲಕ್ಷ ರೂ. ವೆಚ್ಚದ ಕಬಡ್ಡಿ ಮ್ಯಾಟ್ ಅನ್ನು ನೀಡಲಾಯಿತು.
ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಸ್ವಾಗತಿಸಿದರು. ಪ್ರಾಂಶುಪಾಲ ಇಬ್ರಾಹೀಂ ಎಂ. ವಂದಿಸಿದರು. ಉಪನ್ಯಾಸಕಿ ನವ್ಯಶ್ರೀ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು.