ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಜಂಟಿ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿಯ ಇಂಗ್ಲಿಷ್, ಕನ್ನಡ ಮತ್ತು ಹಿಂದಿ ವಿಭಾಗದ ವತಿಯಿಂದ ಓದುಗರ ವೇದಿಕೆಯ ಉದ್ಘಾಟನಾ ಸಮಾರಂಭ ರೋಟರಿ ಮನಿಷಾ ಸಭಾಭವನದಲ್ಲಿ ಸೆ. 17ರಂದು ನಡೆಯಿತು.
ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಪೀಳಿಗೆಯ ಮಾನಸಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಅತ್ಯುತ್ತಮ ಮಾಧ್ಯಮ ಓದುವಿಕೆ ಹಾಗೂ ಓದು ಸೃಜನಶೀಲ ಬರಹಕ್ಕೆ ಪೂರಕ ಎಂದು ತಿಳಿಸಿ, ಅದರ ಅರ್ಥ ವಿಸ್ತಾರವನ್ನು ದ.ರಾ ಬೇಂದ್ರೆಯವರ ನಾಕು ತಂತಿ ಕವನದ ಸಾಲುಗಳನ್ನು ವಿದ್ಯಾರ್ಥಿಗಳಿಗೆ ಅರ್ಥೈಸಿ ತಿಳಿಸಿಕೊಡತ್ತಾ ಓದಿನಲ್ಲಿ ಸದಾ ತೊಡಗಿಸಿಕೊಳ್ಳಿ. ಐಕ್ಯೂ ಮತ್ತು ಪಿಕ್ಯೂನ ಜೊತೆಗೆ ಇಕ್ಯೂ ಇಂದಿನ ಕಾರ್ಪೋರೆಟ್ ಜಗತ್ತಿನಲ್ಲಿ ಎಷ್ಟು ಪ್ರಸ್ತುತ ಎಂಬುದನ್ನು ಮನನ ಮಾಡಿಸಿದ ಅವರು, ಪಠ್ಯ ಓದುವುದರ ಜೊತೆಗಿನ ಸಾಮಾನ್ಯ ಓದು ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ. ಕ್ರೌರ್ಯವನ್ನೇ ಬಿಂಬಿಸುತ್ತಿರುವ ಇಂದಿನ ಸಾಮಾಜಿಕ ತಾಣಗಳಿಂದ ವಿದ್ಯಾರ್ಥಿ ಯುವಜನತೆಯಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿದ್ದು, ನಿರಂತರ ಓದು ಇದನ್ನು ಮರು ಸ್ಥಾಪಿಸಬಲ್ಲದು ಎಂದರು.

ಇನ್ನರ್ ವೀಲ್ ಕ್ಲಬ್ಬಿನ ಅಧ್ಯಕ್ಷೆ ರೂಪಲೇಖರವರು ಇಂತಹ ವೇದಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ ಎಂದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈರವರು, ಇಂತಹ ಕಾರ್ಯಕ್ರಮಗಳಿಗೆ ರೋಟರಿ ಕ್ಲಬ್ ಸಹಕಾರ ನಿರಂತರವಾಗಿ ಇರುತ್ತದೆ ಎಂದು ಹೇಳಿದರು.
ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ನಂದಕಿಶೋರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಸ್ಟೀವನ್ ಕ್ವಾಡ್ರಸ್ ರವರು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಿಟಿ ಸದಸ್ಯ ರಾಮಚಂದ್ರ, ಗ್ರಂಥಪಾಲಕ ರವಿಚಂದ್ರ, ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆವನಿ ನಿರೂಪಿಸಿದರು ಚೈತನ್ಯ ಅತಿಥಿಗಳನ್ನು ಪರಿಚಯಿಸಿದರು, ಸ್ವಾತಿ ವಂದಿಸಿದರು.
ಪುಸ್ತಕ ದೇಣಿಗೆ…
ಇದೇ ಸಂದರ್ಭದಲ್ಲಿ ರೋಟರಿ ಸಿಟಿ ಮತ್ತು ಇನ್ನರ್ ವೀಲ್ ಕ್ಲಬ್ ಗಳು ಕಾಲೇಜಿನ ಓದುಗರ ವೇದಿಕೆಗೆ ಸುಮಾರು ರೂ.15,000 ಮೊತ್ತದ ಆಂಗ್ಲ ಮತ್ತು ಕನ್ನಡ ಭಾಷಾ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು.