ಪುತ್ತೂರು: ಇತ್ತೀಚೆಗೆ ನಿಧನರಾದ, ‘ಪಿಲಿ ರಾಧಣ್ಣ’ಎಂದೇ ಹೆಸರುವಾಸಿಯಾಗಿದ್ದ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆಯು ಸೆ.18ರಂದು ಸಾಲ್ಮರ ಕೊಟೇಚಾ ಹಾಲ್ನಲ್ಲಿ ನಡೆಯಿತು.
ನುಡಿ ನಮನ ಸಲ್ಲಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರಿನ ಪ್ರಥಮ ಮರಿ ಹುಲಿಯಾಗಿ ಹೆಸರು ಪಡೆದು, ನಂತರ ಹೆಬ್ಬುಲಿಯಾಗಿ ಘರ್ಜಿಸಿದ ರಾಧಾಕೃಷ್ಣ ಶೆಟ್ಟಿಯವರು ವ್ಯಕ್ತಿತ್ವ ವೈವಿದ್ಯಮಯವಾದುದು. ದೈವಿ ಶಕ್ತಿಯಿರುವ ಹುಲಿ ವೇಷದಲ್ಲಿ ರಾಧಾಕೃಷ್ಣ ಶೆಟ್ಟಿಯವರ ಸೇವೆ ಅನನ್ಯವಾದುದು. ನವರಾತ್ರಿ ಸಮಯದಲ್ಲಿ ಸುಮಾರು ಅರ್ಧ ಶತಮಾನಗಳ ಕಾಲ ಹುಲಿವೇಷ ಧರಿಸಿ ಇತಿಹಾಸ ನಿರ್ಮಿಸಿ, ಎಲ್ಲರಿಗೂ ಆದರ್ಶವಾಗಿದ್ದರು. ಸಾಮಾಜಿಕ ಧಾರ್ಮಿಕ, ರಾಜಕೀಯವಾಗಿಯೂ ಕೊಡುಗೆ ನೀಡಿರುವ ರಾಧಾಕೃಷ್ಣ ಶೆಟ್ಟಿಯವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂದು ಹೇಳಿದರು.
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸುಧೀರ್ಘ 48 ವರ್ಷಗಳ ಕಾಲ ಸಾಂಪ್ರದಾಯಿಕ ಹುಲಿ ವೇಷ ಧರಿಸುವ ಮೂಲಕ ರಾಧಾಕೃಷ್ಣ ಶೆಟ್ಟಿಯವರು ಪಿಲಿ ರಾಧಣ್ಣ ಎಂದೇ ಜನ ಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. ಇನ್ನು ಅವರು ನೆನಪು ಮಾತ್ರ. ಹುಲಿ ವೇಷದಲ್ಲಿ ಧರ್ಮದ ಅಭಿಮಾನಿಯಾಗಿ ಬದ್ದತೆಯಿಂದ ಕೆಲಸ ಮಾಡಿರುವ ರಾಧಾಕೃಷ್ಣ ಶೆಟ್ಟಿಯವರಿಗೆ ರಾಧಾಕೃಷ್ಣ ಶೆಟ್ಟಿಯವರೇ ಸಾಟಿ. ಸಾಂಪ್ರದಾಯಿಕ ಹುಲಿ ವೇಷಕ್ಕೆ ರಾಧಾಕೃಷ್ಣ ಶೆಟ್ಟಿಯವರಿಗೆ ನೀಡಿದ ಶಕ್ತಿಯನ್ನು ಅವರ ಪುತ್ರನಿಗೂ ನೀಡಬೇಕು ಎಂದು ಹೇಳಿದರು.
ಗುತ್ತಿಗೆದಾರ ಜುನೈದ್ ಬಿ.ಜಿ ಮಾತನಾಡಿ, ಬಹಳಷ್ಟು ಒಡನಾಡಿಯಾಗಿದ್ದ ರಾಧಾಕೃಷ್ಣ ಶೆಟ್ಟಿಯವರು, ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎನ್ನುವುದನ್ನು ಅಚ್ಚುಕಟ್ಟಾಗಿ ಹೇಳಿಕೊಟ್ಟವರು. ಅವರಿಗಿದ್ದ ಘನತೆ ಅವರ ಅಂತಿಮ ಯಾತ್ರೆಯಲ್ಲಿ ಅರಿವಾಗಿದೆ ಎಂದರು.
ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಹುಲಿ ವೇಷದ ಮೂಲಕ ಹೆಸರು ಪಡೆದ ರಾಧಾಕೃಷ್ಣ ಶೆಟ್ಟಿಯವರು ಜೀವನದಲ್ಲಿ ಹಲವಾರು ಸ್ನೇಹಿತರನ್ನು ಪಡೆದ ಭಾಗ್ಯವಂತರು. ಎಲ್ಲಿ ಠಾಸೆಯ ಪೆಟ್ಟು ಕೇಳಿದರೂ ರಾಧಾಕೃಷ್ಣ ಶೆಟ್ಟಿಯವರ ನೆನಪಾಗಲಿದೆ. ಅವರನ್ನು ಮರೆಯುದು ಸಾಧ್ಯವಿಲ್ಲ. ಪ್ರತಿ ಹೆಜ್ಜೆಗೂ, ಪ್ರತಿ ವಿಚಾರದಲ್ಲಿಯೂ ನೆನಪಾಗುವವರು ಎಂದರು.
ವಿಡಿಯೋ ಪ್ರದರ್ಶನ:
ರಾಧಾಕೃಷ್ಣ ಶೆಟ್ಟಿಯವರ ಅಭಿಮಾನಿಗಳು ನಿರ್ಮಿಸಿದ ರಾಧಾಕೃಷ್ಣ ಶೆಟ್ಟಿಯವರ ಜೀವನ, ಹುಲಿ ವೇಷಧಾರಿಯಾಗಿ ಸುದೀರ್ಘ 48 ವರ್ಷಗಳ ಕಾಲ ನಡೆದು ಬಂದ ಪಯಣದ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಎಲ್ಇಡಿ ಮೂಲಕ ಪ್ರದರ್ಶನಗೊಂಡಿತು.
ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಶಶಾಂಕ ಕೊಟೇಚಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಮಿತ್ತೂರು, ಉದ್ಯಮಿಗಳಾದ ಶಿವರಾಮ ಆಳ್ವ, ಪ್ರಸನ್ನ ಶೆಟ್ಟಿ, ಕರುಣಾಕರ ರೈ ದೇರ್ಲ, ಸಹಜ್ ರೈ ಬಳೆಜ್ಜ, ಜಯಂತ ಶೆಟ್ಟಿ ಕಂಬಳತ್ತಡ್ಡ, ಬಿಜೆಪಿ ನಗರ ಮಂಡಲದ ಕಾರ್ಯದರ್ಶಿ ಅನಿಲ್ ತೆಂಕಿಲ, ಸುದೇಶ್ ಶೆಟ್ಟಿ, ನ್ಯಾಯವಾದಿ ಹರಿಣಾಕ್ಷಿ, ನಯನಾ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಸಂತೋಷ ರೈ ಇಳಂತಾಜೆ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ, ರಾಧಾಕೃಷ್ಣ ಶೆಟ್ಟಿಯವರ ಪತ್ನಿ ಸುನಂದ ಶೆಟ್ಟಿ, ಪುತ್ರರಾದ ಅವಿನಾಶ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಪುತ್ರಿ ಅಶ್ವಿನಿ ಶೆಟ್ಟಿ, ಅಳಿಯ ಪ್ರವೀಣ ಶೆಟ್ಟಿ, ಸಹೋದರ ಮೋಹನ್ ಶೆಟ್ಟಿ, ಸಹೋದರಿಯರಾದ ಶಾಂಭವೀ ಶೆಟ್ಟಿ, ಪುಷ್ಪಾವತಿ ಹಾಗೂ ರತಿ ಸೇರಿದಂತೆ ಹಲವು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.