ಪುತ್ತೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುವ ಸಿದ್ಧತೆಯಲ್ಲಿದ್ದು, ಹಿಂದುಳಿದ ವರ್ಗಗಳ ಆಯೋಗವು ಪ್ರಕಟಿಸಿದ ಪಟ್ಟಿಯಲ್ಲಿ ಬಂಟ ಮತ್ತು ನಾಡವ ಜಾತಿ ಬೇರೆ ಬೇರೆ ಜಾತಿಯಾಗಿ ತೋರಿಸಿದ್ದರಿಂದ 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (ಎ-0227) ರಂತೆ ಬಂಟ ಎಂದು ನಮೂದಿಸುವ ಸಮಾಜ ಬಾಂಧವರು, 11ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು ಎಂದಿರುವ ಜಾಗದಲ್ಲಿ (ಎ-1026) ರಂತೆ ನಾಡವ ಎಂದು ನಮೂದಿಸಬೇಕೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರೂ ಮತ್ತು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರೂ ಆಗಿರುವ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಟಿಯಲ್ಲಿ ವಿನಂತಿಸಿದ್ದಾರೆ.
ಇತ್ತೀಚೆಗೆ ಶ್ರೀ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ ವರದಿಯಲ್ಲಿ ಬಂಟರ/ನಾಡವರ ಜನಸಂಖ್ಯೆ ಮೂರು ಲಕ್ಷದ ಹದಿನೈದು ಸಾವಿರ ಇದೆ ಎಂದು ನಮೂದಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉಡುಪಿ, ದ.ಕ ಜಿಲ್ಲೆ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಅಂದಾಜು 20 ಲಕ್ಷಕ್ಕಿಂತ ಹೆಚ್ಚು ಬಂಟ ಸಮಾಜದವರು ಇದ್ದಾರೆ. ಶ್ರೀ ಕಾಂತರಾಜ್ ನೇತೃತ್ವದ ಆಯೋಗವು ಅವೈಜ್ಞಾನಿಕವಾಗಿ ವರದಿಯನ್ನು ತಯಾರಿಸಿರುವುದರಿಂದ ಮತ್ತು ಅದು ಕಾಲ ಬಾದಿತವಾಗಿರುವ ಕಾರಣ ಅದನ್ನು ಮಂಡಿಸಬಾರದು ಮತ್ತು ಮಾನ್ಯ ಮಾಡಬಾರದು ಎಂದು ಮುಖ್ಯಮಂತ್ರಿ ಯವರಿಗೆ ಹಾಗೂ ಉಪ ಮುಖ್ಯ ಮಂತ್ರಿಯವರಿಗೆ ಮನವಿಯನ್ನು ನೀಡಿದ್ದೇವೆ. ಇದೀಗ ಹಿಂದುಳಿದ ವರ್ಗಗಳ ಆಯೋಗವು ಪ್ರಕಟಿಸಿದ ಪಟ್ಟಿಯಲ್ಲಿ ಬಂಟ ಮತ್ತು ನಾಡವ ಜಾತಿಯನ್ನು ಬೇರೆ ಬೇರೆ ಜಾತಿಯಾಗಿ ತೋರಿಸಿದ್ದಾರೆ. ಈ ಕುರಿತು ವಿದಾನಸಭಾಧ್ಯಕ್ಷ ಯು. ಟಿ ಖಾದರ್‌ರವರ ಅಧ್ಯಕ್ಷತೆಯಲ್ಲಿ ಸೆ.17ರಂದು ನಡೆದ ಜಿಲ್ಲಾಧಿಕಾರಿಯವರು ಮತ್ತು ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಯವರು ಹಾಗೂ ಹಿರಿಯ ಅಧಿಕಾರಿಗಳು ನಡೆಸಿದ ಸಮೀಕ್ಷೆಯ ವಿಷಯದಲ್ಲಿ ಮಾಹಿತಿ ನೀಡುವ ಸಭೆಯಲ್ಲಿ ಬಂಟ ಮತ್ತು ನಾಡವ ಸಮಾಜ ಒಂದೆ ಒಂದು ಉಲ್ಲೇಖಿಸಲಾಗಿದೆ. ಸಮಸ್ಯೆಯನ್ನು ಮುಂದಿಟ್ಟಾಗ ಪರ್ಯಾಯ ಪದದ ಬಳಕೆ ಮೂಲಕ ಸಲಹೆ ನೀಡಿದ್ದಾರೆ. ಅದರಂತೆ ಪ್ರಜ್ಞಾವಂತರಾದ ಸಮಾಜ ಬಾಂಧವರು ಮೀಸಲಾತಿ ಮತ್ತು ಇತರ ವಿಷಯಗಳಲ್ಲಿ ನಮಗಾದ ಕಷ್ಟ-ನಷ್ಟಗಳನ್ನು ಮನವರಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸರಕಾರದ/ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆಗೆ ಬರುವವರ ಮೊಬೈಲ್ ಆಪ್‌ನಲ್ಲಿರುವ 8ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಿ, 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (ಎ-0227) ರಂತ ಬಂಟ ಎಂದು ನಮೂದಿಸಿ. 11ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು’ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (ಎ 1026)ರಂತೆ ನಾಡವ ಎಂದು ನಮೂದಿಸುವಂತೆ ವಿನಂತಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾಧ್ ರೈ, ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ರವಿಪ್ರಸಾದ್ ಶೆಟ್ಟಿ, ಮೋಹನ್ ರೈ ನರಿಮೊಗರು ಉಪಸ್ಥಿತರಿದ್ದರು.
ಸಮೀಕ್ಷೆಯಿಂದ ನಮ್ಮ ಸಮಾಜಕ್ಕೆ ಅನ್ಯಾಯ ಆಗಬಾರದು
ಬಂಟ ಮತ್ತು ನಾಡವ ಬೇರೆ ಬೇರೆ ಅಲ್ಲ. ಬಂಟ ಮತ್ತು ನಾಡವ ಒಂದೆ. ಸಮೀಕ್ಷೆ ಪಟ್ಟಿಯಲ್ಲಿ ಬೇರೆ ಬೇರೆ ಮಾಡಿದ್ದಾರೆ. ಅಲ್ಲಿ ಬಂಟ ಗೆ ಬೇರೆ ಕೋಡ್, ನಾಡವ ಗೆ ಬೇರೆ ಕೋಡ್ ನೀಡಲಾಗಿದೆ. ಅದನ್ನು ಒಟ್ಟಿಗೆ ಸೇರಿಸಿದರೆ ಆಪ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಸ್ಪಷ್ಟತೆಗಾಗಿ ಸಮಾಜಕ್ಕೆ ಆಗುವ ಅನ್ಯಾಯವನ್ನು ಸರಿಪಡಿಸುವ ಒತ್ತಾಯವನ್ನು ಇತ್ತಿಚೆಗೆ ಆಯೋಗದ ಸಭೆ ಮುಂದಿಡಲಾಯಿತು. ಅಲ್ಲಿ ಸಮಸ್ಯೆಗೆ ಕಂಡು ಕೊಂಡ ಪರಿಹಾರವಾಗಿ ಧರ್ಮದಲ್ಲಿ ಹಿಂದು, ಜಾತಿಯಲ್ಲಿ ಬಂಟ, ಪರ್ಯಾಯ ಶಬ್ದದಲ್ಲಿ ನಾಡವ ಎಂಬ ತೀರ್ಮಾಣ ಕೈಗೊಳ್ಳಲಾಗಿದೆ. ಇದು ಇನ್ನೂ ಸ್ಪಷ್ಟತೆ ಆಗಿಲ್ಲ. ತಾತ್ಕಾಲಿಕ ವ್ಯವಸ್ಥೆ ಇದೀಗ ಆಗಿದೆ. ಬಂಟ ಮತ್ತು ನಾಡವ ಒಂದೇ ಎಂದು ಉಲ್ಲೇಖಸಲಾಗಿದೆ. ಇನ್ನು ಆಯೋಗದಲ್ಲಿ ಅದಕ್ಕೆ ಸಿಗುವ ಸೌಲಭ್ಯ ಸಿಗಬೇಕು. ಇದನ್ನು ಜಂಟಿಯಾಗಿ ಸೇರಿಸಿ. ನಮ್ಮ ಜನಸಂಖ್ಯೆ ಎಷ್ಟು ಎಂದು ಮುಂದೆ ಬರಬಹುದು. ಆದರೆ ನಮ್ಮ ಸಮಾಜಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು ಎಂಬ ದೃಷ್ಟಿಯಲ್ಲಿ ಸಮಾಜ ಬಾಂಧವರಲ್ಲಿ ತಿಳುವಳಿಕೆಗಾಗಿ ಈ ವಿಚಾರ ತಿಳಿಸುತ್ತಿದ್ದೇವೆ. ಸಮೀಕ್ಷೆಯಲ್ಲಿ ಎರಡು ಕೋಡ್ ಒಂದೇ ಆಗಬೇಕೆಂಬ ಒತ್ತಾಯವಿದೆ.
ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಪುತ್ತೂರು