ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಪುತ್ತೂರಿನ ತೋಟಗಾರಿಕಾ ಅಧಿಕಾರಿಗಳು ಸೆ. 18 ರಂದು ಭೇಟಿ ನೀಡಿ ಸದ್ರಿ ವರ್ಷದಲ್ಲಿ ಕೊಳೆರೋಗದಿಂದ ಬಾಧಿತವಾದ ಕೃಷಿಯನ್ನು ವೀಕ್ಷಿಸಿದರು.
ಈ ಬಾರಿ ವಿಪರೀತ ಮಳೆಯಿಂದಾಗಿ ಅಡಿಕೆ, ತೆಂಗು, ಕಾಳುಮೆಣಸು ಮತ್ತು ಕೊಕ್ಕೋ ಬೆಳೆಗಳು ಕೊಳೆರೋಗಕ್ಕೆ ಬಾಧಿತವಾಗಿ ನಾಶಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಡಮಜಲು ಸುಭಾಸ್ ರೈಯವರಿಂದ ಮಾಹಿತಿ ಪಡೆದುಕೊಂಡರು. ಕೊಳೆರೋಗದಿಂದಾಗಿ ನಾಶಗೊಂಡಿರುವ ಅಡಿಕೆ ಮರಗಳ ಬಗ್ಗೆಯೂ ಮಾಹಿತಿ ಪಡೆದರು. ಇದೇ ವೇಳೆ ಸುಭಾಸ್ ರೈಯವರು ತೀವ್ರತರಾಗಿ ಕೊಳೆರೋಗ ಬಾಧಿಸಲ್ಪಟ್ಟು ಒಂದು ಭಾಗದ ತೋಟದ ಸಂಪೂರ್ಣ ಅಡಿಕೆ ಮರಗಳು ನಾಶಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ ಅಡಿಕೆ ಕೃಷಿಕರು ತೀರಾ ಸಂಕಷ್ಟದಲ್ಲಿದ್ದು ತಕ್ಷಣ ಸರಕಾರ ಪರಿಹಾರ ನೀಡುವಂತೆ ವರದಿ ಸಲ್ಲಿಸಲು ಅಧಿಕಾರಿಗಳನ್ನು ಆಗ್ರಹಿಸಿದರು.
ಸಮೀಕ್ಷಾ ಸಂದರ್ಶನ ತಂಡದಲ್ಲಿ ಪುತ್ತೂರು ಸಹಾಯಕ ತೋಟಗಾರಿಕಾ ನಿರ್ದೇಶಕಿ ರೇಖಾ, ಕೃಷಿ ಇಲಾಖೆಯ ಪುತ್ತೂರು ಸಹಾಯಕ ನಿರ್ದೇಶಕ ಚೆಲುವ ರಂಗಪ್ಪ, ಕ್ಯಾಡ್ಬರಿ ಪ್ರೈ. ಲಿ. ಇದರ ಕೊಕ್ಕೋ ತಾಂತ್ರಿಕ ಸಂಪನ್ಮೂಲ ಅಧಿಕಾರಿ ಸತ್ಯನಾರಾಯಣ ಭಟ್, ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಕಾಶ್ ಎಂ. ಮತ್ತು ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಜೊತೆಗಿದ್ದರು. ಇದೇ ದಿನ ಕೆದಂಬಾಡಿ ಸನ್ಯಾಸಿಗುಡ್ಡೆಯಲ್ಲಿ ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ, ಕೃಷಿ ಇಲಾಖಾ ಮಾಹಿತಿ ಕಾರ್ಯಕ್ರಮವೂ ನಡೆಯಿತು. ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದರು. ರೈತ ಫಲಾನುಭವಿಗಳು ಪಾಲ್ಗೊಂಡರು.
ಸುದ್ದಿ ವರದಿಯ ಬಳಿಕ ಭೇಟಿ
ಕೊಳೆರೋಗದಿಂದ ಅಡಿಕೆ ಕೃಷಿ ನಾಶವಾಗುತ್ತಿರುವ ಬಗ್ಗೆ ಸುದ್ದಿ ಬಿಡುಗಡೆ ಚಾನೆಲ್ ನಲ್ಲಿ ವಿಡಿಯೋ ವರದಿ ಮತ್ರು ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರಲ್ಲಿ ಕೃಷಿಕರು ‘ತೋಟಗಾರಿಕ ಇಲಾಖೆಯವರು ತಕ್ಷಣ ನಾಶಗೊಂಡ ಅಡಿಕೆ ಮತ್ತು ಅಡಿಕೆ ತೋಟದ ಬಗ್ಗೆ ಸಮೀಕ್ಷೆ ನಡೆಸಿ ಸರಕಾರದ ಗಮನಕ್ಕೆ ತರಬೇಕು’ ಎಂದು ಆಗ್ರಹಿಸಿದ್ದರು. ಆದರೆ ಈ ಬಗ್ಗೆ ತೋಟಗಾರಿಕಾ ಅಧಿಕಾರಿಯಲ್ಲಿ ಕೇಳಿದಾಗ ನಮಗೆ ಆ ರೀತಿ ಸಮೀಕ್ಷೆ ನಡೆಸಲಾಗುವುದಿಲ್ಲ. ನಮ್ಮಲ್ಲಿ ಬೋರ್ಡೋ ದ್ರಾವಣ ಸಿಂಪಡಣೆಗೆ ಉತ್ತೇಜಿಸಲು ಮಾತ್ರ ಅವಕಾಶವಿದೆ’ ಎಂದಿದ್ದರು. ಆದರೆ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ತೋಟಗಾರಿಕಾ ಇಲಾಖಾಧಿಕಾರಿಗಳು ಕೊಳೆರೋಗ ನಾಶದ ಬಗ್ಗೆ ಪರಿಶೀಲಿಸಿದ್ದಾರೆ.
ಜನಪ್ರತಿನಿಧಿಗಳು ಧ್ವನಿ ಎತ್ತಬೇಕು – ಕೃಷಿಕರ ಆಗ್ರಹ
ಜಿಲ್ಲೆಯ ಅಡಿಕೆ ಕೃಷಿಕರ ಸಮಸ್ಯೆ ಬಗ್ಗೆ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಿ ಮುಖ್ಯಮಂತ್ರಿಯವರಿಗೆ ಸಮಸ್ಯೆಯ ಗಂಭೀರತೆಯನ್ನು ತಿಳಿಸಿ ಸರಕಾರದಿಂದ ಪರಿಹಾರ ಕ್ರಮಕ್ಕೆ ಆಗ್ರಹಿಸಬೇಕು. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಈಗಾಗಲೇ ಧ್ವನಿ ಎತ್ತಿದ್ದರೂ, ಜಿಲ್ಲೆಯ ಎಲ್ಲಾ ಶಾಸಕರು ಸರಕಾರಕ್ಕೆ ತೀವ್ರ ಒತ್ತಡ ಹಾಕಿದರೆ ಮಾತ್ರ ಪರಿಣಾಮಕಾರಿಯಾದೀತು ಎಂದು ಕೃಷಿಕರು ‘ಸುದ್ದಿ’ ಮೂಲಕ ಒತ್ತಾಯಿಸಿದ್ದಾರೆ.