ಪುತ್ತೂರು: ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವೆ ಪಾಕ್ಷಿಕ 2025 ಅಭಿಯಾನ ಕಾರ್ಯಕ್ರಮದಡಿ ಒಳಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಸೆ.17 ರಿಂದ ಆರಂಭಗೊಂಡಿದ್ದು ಗ್ರಾಮದ ವಿವಿಧ ಕಡೆಗಳಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಸೆ.21 ರಂದು ಕುಂಬ್ರ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಪೇಟೆಯ ಸುತ್ತಮುತ್ತ ಸ್ವಚ್ಛತೆ ಮಾಡುವ ಮೂಲಕ ಪ್ಲಾಸ್ಟಿಕ್ ಇತ್ಯಾದಿಗಳನ್ನು ಸಂಗ್ರಹಿಸಿ ಗ್ರಾಪಂ ಸ್ವಚ್ಛತಾ ವಾಹಿನಿಯ ಮೂಲಕ ಘನ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡಲಾಯಿತು. ಸ್ವಚ್ಛತಾ ಶ್ರಮದಾನ ಕಾರ್ಯದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ, ಸದಸ್ಯರುಗಳು, ಗ್ರಾಪಂ ವ್ಯಾಪ್ತಿಯ ಸಂಘ ಸಂಸ್ಥೆಯ ಮುಖ್ಯಸ್ಥರು, ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು,ಗ್ರಾಪಂ ಸ್ವಚ್ಛತಾ ಸೇನಾನಿಗಳು, ಗ್ರಾಪಂ ಸಿಬ್ಬಂದಿಗಳು ಭಾಗವಹಿಸಿದ್ದರು.

ಗ್ರಾಮದ ವಿವಿದ ಕಡೆಗಳಲ್ಲಿ ಸ್ವಚ್ಛತೆ
ಅ.2 ರ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದ್ದು ಒಳಮೊಗ್ರು ಗ್ರಾಪಂನಿಂದ ಈಗಾಗಲೇ ಕುಂಬ್ರ ಭಜನಾ ಮಂದಿರ ವಠಾರ, ಅಜ್ಜಿಕಲ್ಲು, ಪರ್ಪುಂಜ ಜಂಕ್ಷನ್, ಕುಟ್ಟಿನೋಪಿನಡ್ಕ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲಿ ಇತರ ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು, ಗ್ರಾಮಸ್ಥರು ಗ್ರಾಪಂನೊಂದಿಗೆ ಕೈಜೋಡಿಸುವ ಮೂಲಕ ಗ್ರಾಮವನ್ನು ಸ್ವಚ್ಛ ಸುಂದರ ಗ್ರಾಮವನ್ನಾಗಿ ಮಾಡುವಲ್ಲಿ ಸಹಕರಿಸುವಂತೆ ಗ್ರಾಪಂ ಮನವಿ ಮಾಡಿಕೊಂಡಿದೆ.
ಪಿಡಿಒ ಸ್ವಚ್ಚತೆಗೂ ಸೈ
ಗ್ರಾಪಂನ ಪ್ರಭಾರ ಪಿಡಿಒ ಆಗಿರುವ ಸುರೇಶ್ ಕೆ.ರವರು ಸ್ವತಃ ತಾನೇ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂತು. ಹುಲ್ಲು ಕತ್ತರಿಸುವ ಯಂತ್ರವನ್ನು ತಾನೇ ಚಲಾಯಿಸಿಕೊಂಡು ರಸ್ತೆ ಬದಿಯಲ್ಲಿನ ಹುಲ್ಲು ಕತ್ತರಿಸಿದ್ದು ಅಲ್ಲದೆ ರಸ್ತೆ ಬದಿಯಲ್ಲಿರುವ ಕಸ,ಪ್ಲಾಸ್ಟಿಕ್ ಇತ್ಯಾದಿಗಳನ್ನು ಹೆಕ್ಕಿ ಸ್ವಚ್ಛ ಮಾಡುವ ಸ್ವಚ್ಛತೆಯ ಅರಿವು ಮೂಡಿಸಿದರು.
‘ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನದಡಿಯಲ್ಲಿ ಗ್ರಾಪಂನಿಂದ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ಹಾಗೇ ಎಲ್ಲರ ಸಹಕಾರ ಪಡೆದುಕೊಂಡು ಗ್ರಾಮದ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಶ್ರಮದಾನ ಮಾಡಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಕಸ ಸುರಿದಿರುವುದು ಕಂಡು ಬಂದರೆ ಆ ಕಸದಲ್ಲಿರುವ ಕುರುಹುಗಳ ಆಧಾರದಲ್ಲಿ ಕಸ ಸುರಿದ ವ್ಯಕ್ತಿಗೆ ದಂಡನೆ ವಿಧಿಸುವ ಕೆಲಸವೂ ಆಗುತ್ತಿದೆ. ಸ್ವಚ್ಚ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರ ಸಹಕಾರ ಅತೀ ಅಗತ್ಯ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ