ಪುತ್ತೂರು:ಸುದೀರ್ಘ 67 ವರ್ಷಗಳ ಇತಿಹಾಸವಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 17ನೇ ಶಾಖೆಯು ಅ.2ರಂದು ಕಲ್ಲಡ್ಕದ ಕೆ.ಸಿ ರೋಡ್ ಈಶಾನ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ಹೇಳಿದರು.
ಸೆ.29ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಬಾರಿಕೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳ ಅಭಿವೃದ್ಧಿಗಾಗಿ 1958ರಲ್ಲಿ ಸ್ಥಾಪನೆಗೊಂಡ ಸಹಕಾರಿ ಸಂಘವು ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ಈಗಾಗಲೇ 16 ಕಡೆಗಳಲ್ಲಿ ಶಾಖೆಗಳು ಪ್ರಾರಂಭಗೊಂಡಿದ್ದು ಬ್ಯಾಂಕಿಂಗ್ ವ್ಯವಹಾರಗಳ ಜೊತೆಗೆ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿದೆ. ಪುತ್ತೂರು ಮತ್ತು ಬಿಸಿ ರೊಡ್ನಲ್ಲಿ ಕುಂಬಾರಿಕೆ ಪ್ರದರ್ಶನ ಮಳಿಗೆ ಮತ್ತು ಒಂದು ಕುಂಬಾರಿಕೆ ಉತ್ಪಾದನಾ ತರಬೇತಿ ಕೇಂದ್ರದ ಮುಖಾಂತರ ಸದಸ್ಯರಿಗೆ ನೆರವು ನೀಡುತ್ತಿರುವ ರಾಜ್ಯ ಏಕೈಕ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮೀಣ ಕುಶಲ ಕರ್ಮಿಗಳಿಗೆ ಆಧುನಿಕ ಕುಂಬಾರಿಕೆಯ ತರಬೇತಿ ನೀಡಿ ಸ್ವತಂತ್ರ ಉತ್ಪಾದನೆ ನಡೆಸಲು ಪೂರಕ ಮಾರ್ಗದರ್ಶನ ನೀಡಲಾಗುತ್ತಿದೆ.
ಸಂಘದ ಕೇಂದ್ರ ಕಚೇರಿಯು ಪುತ್ತೂರಿನ ಹೃದಯ ಭಾಗದಲ್ಲಿದೆ. ಕೌಡಿಚ್ಚಾರು, ಬೆಳ್ಳಾರೆ, ಗುರುವಾಯನಕೆರೆ, ಮಾಣಿ, ವಿಟ್ಲ, ಕುಡ್ತಮುಗೇರು, ಉಪ್ಪಿನಂಗಡಿ, ಬಿ.ಸಿ ರೋಡ್, ಮೆಲ್ಕಾರು, ಬೆಳ್ತಂಗಡಿ, ಸಿದ್ದಕಟ್ಟೆ, ಮುಡಿಪು, ಫರಂಗಿಪೇಟೆ, ಮಡಂತ್ಯಾರು, ಮಾಡೂರು ಸೇರಿದಂತೆ 16 ಶಾಖೆಗಳು ಈಗಾಗಲೇ ಕಾರ್ಯನಿರ್ವವಹಿಸುತ್ತಿದೆ. 17ನೇ ಶಾಖೆ ಕಲ್ಲಡ್ಕದಲ್ಲಿ ಶುಭಾರಂಭಗೊಳ್ಳುತ್ತಿದೆ. 18ನೇ ಶಾಖೆ ಕಡಬದಲ್ಲಿ ಅ.22ರಂದು ಶುಭಾರಂಭಗೊಳ್ಳಲಿದೆ. ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು ಅಲ್ಲಿಗೂ ಶಾಖೆಗಳನ್ನು ವಿಸ್ತರಿಸುವ ಯೋಚನೆಯಿದೆ ಎಂದು ಹೇಳಿದರು.
ಸಂಘದಲ್ಲಿ 39,809 ಸದಸ್ಯ ಬಲವನ್ನು ಹೊಂದಿದೆ. 2025ರ ಆಗಸ್ಟ್ ಅಂತ್ಯಕ್ಕೆ ಸಂಘದಲ್ಲಿ ರೂ.135ಕೋಟಿ ಠೇವಣಿ ಸಂಗ್ರಹವಾಗಿದೆ. ಸದಸ್ಯರ ಆವಶ್ಯಕತೆಗೆ ಅನುಗುಣವಾಗಿ ವಿತರಿಸಲಾದ ಸಾಲಗಲ್ಲಿ ರೂ.103.15ಕೋಟಿ ಸಾಲ ಹೊರಬಾಕಿಯಿರುತ್ತದೆ. ಕುಂಬಾರಿಕೆ ಕೈಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೇ.9ರ ಬಡ್ಡಿ ದರದಲ್ಲಿ ಕುಂಬಾರಿಕೆ ಅಭಿವೃದ್ಧಿ ಸಾಲ ನೀಡಲಾಗುತ್ತಿದೆ. ಸಂಘವು 2024-25ನೇ ಸಾಲಿನಲ್ಲಿ ರೂ.626.53 ಕೋಟಿ ವ್ಯವಹಾರ ನಡೆಸಿ, ರೂ.2.64ಕೋಟಿ ಲಾಭಗಳಿಸಿದೆ. ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿಯನ್ನು ನಿರಂತವಾಗಿ ಪಡದುಕೊಂಡಿದೆ. ಸತತ ಆರು ವರ್ಷಗಳಿಂದ ಡಿಸಿಸಿ ಬ್ಯಾಂಕ್ನಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪಡೆಯುತ್ತಿದೆ. ರಾಜ್ಯ ಸಹಕಾರ ಮಹಾಮಂಡಲದಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪಡೆದಿರುತ್ತದೆ.
ಸಂಘದ ಪುತ್ತೂರು, ಬಿ.ಸಿ ರೋಡ್, ಬೆಳ್ತಂಗಡಿ ಶಾಖೆಗಳಲ್ಲಿ ಇ-ಸ್ಟ್ಯಾಂಪಿಂಗ್, ಆರ್ಟಿಸಿ ಸೌಲಭ್ಯವಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವಂತೆ ನೆಫ್ಟ್ ಹಾಗೂ ಆರ್ಟಿಸಿಜಿಎಸ್ ಸೌಲಭ್ಯಗಳನ್ನು ಹೊಂದಿರುತ್ತದೆ. ಕಲ್ಲಡ್ಕ ಶಾಖೆಯ ಶುಭಾರಂಭದ ಪ್ರಯುಕ್ತ ಸ್ವೀಕರಿಸುವ ಠೇವಣಗೆಳಿಗೆ ಶೇ.10 ಆಕರ್ಷಕ ಬಡ್ಡಿ ದರ ನೀಡಲಾಗುವುದು ಎಂದರು.
ನೂತನ ಕಲ್ಲಡ್ಕದ ಶಾಖೆಯನ್ನು ದ.ಕ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಟ್ಲದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಂಗಳೂರಿನ ನ್ಯಾಯವಾದಿ ಕುಶಾಲಪ್ಪ ಕುಲಾಲ್, ಗೊಳ್ತಮಜಲು ಗ್ರಾ.ಪಂ ಸದಸ್ಯ ಕೆ.ಮಹಮ್ಮದ್ ಮುಸ್ತಾಫಾ, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ವಿ., ದ.ಕ ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ನಾರಾಯಣ ಸಿ.ಪೆರ್ನೆ ಹಾಗೂ ಈಶಾನ ಕಾಂಪ್ಲೆಕ್ಸ್ ಮ್ಹಾಲಕ ಗೋಪಾಲ್ ಆಗಮಿಸಲಿದ್ದಾರೆ ಎಂದು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ, ನಿರ್ದೇಶಕ ಗಣೇಶ್ ಪಿ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.