ಭಜನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, 5 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ
ಪುತ್ತೂರು: ಸಪರಿವಾರ ಶ್ರೀರಾಮಚಂದ್ರ ದೇವರು ಅನುಗ್ರಹ ನೀಡುತ್ತಿರುವ ಕೆದಂಬಾಡಿ ಗ್ರಾಮದ ಅತ್ಯಂತ ಕಾರಣಿಕ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ ನವರಾತ್ರಿ ಉತ್ಸವವು ಸೆ.22 ರಿಂದ ಆರಂಭಗೊಂಡು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.30 ರ ತನಕ ಜರಗಿತು. ಪ್ರತಿ ದಿನ ಭಕ್ತಾಧಿಗಳ ಸೇವಾರ್ಥವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪ್ರತಿ ದಿನ ವಿವಿಧ ತಂಡಗಳಿಂದ ಸಾಂಸ್ಕೃತಿಕ ವೈವಿಧ್ಯ, ನೃತ್ಯ ಕಾರ್ಯಕ್ರಮ, ಯಕ್ಷಗಾನ ಬಯಲಾಟ ಇತ್ಯಾದಿ ಜರಗಿತು. ವಿಶೇಷವಾಗಿ ಶ್ರೀ ದುರ್ಗಾನಮಸ್ಕಾರ ಪೂಜೆ, ವಾಹನ ಪೂಜೆ ಜರಗಿತು. ಊರಪರವೂರ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕಾರದೊಂದಿಗೆ ಅನ್ನಪ್ರಸಾದ ಸ್ವೀಕರಿಸಿದರು. ಸೆ.30 ರಂದು ನವರಾತ್ರಿ ಉತ್ಸವದ ಸಮಾರೋಪ ಸಮಾರಂಭ ನಡೆಯಿತು.
ಧಾರ್ಮಿಕ ಆಚರಣೆಗಳನ್ನು ತಿಳಿದುಕೊಳ್ಳುವುದು ಅತೀ ಅವಶ್ಯ: ಎ.ಕೆ ಜಯರಾಮ ರೈ
ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎ.ಕೆ ಜಯರಾಮ ರೈಯವರು, ಹಿಂದೂ ಧರ್ಮದ ಆಚಾರ ವಿಚಾರಗಳನ್ನು ತಿಳಿದುಕೊಂಡು ಧಾರ್ಮಿಕ ಕಟ್ಟುಪಾಡುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ದೇವರ ಅನುಗ್ರಹ ಪಡೆಯಲು ಸಾಧ್ಯವಿದೆ. ನಾವು ದೇವಸ್ಥಾನಕ್ಕೆ ಯಾವ ರೀತಿಯಲ್ಲಿ ಹೋಗಬೇಕು, ಹೇಗೆ ನಮಸ್ಕಾರ ಮಾಡಬೇಕು, ಪೂಜಾ ಕಾರ್ಯಕ್ರಮಗಳಲ್ಲಿ ಯಾವ ರೀತಿ ಕುಳಿತುಕೊಳ್ಳಬೇಕು ಎಂಬಿತ್ಯಾದಿ ಆಚರಣೆಗಳನ್ನು ನಾವು ತಿಳಿದುಕೊಂಡು ನಮ್ಮ ಮಕ್ಕಳಿಗೂ ಕಲಿಸಿಕೊಡಬೇಕಾದ ಅಗತ್ಯತೆ ಇದೆ ಎಂದ ಜಯರಾಮ ರೈಯವರು, ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀರಾಮ ಮಂದಿರದಲ್ಲಿ ಬಹಳ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆದಿದೆ. ಶ್ರೀರಾಮಚಂದ್ರ ದೇವರು ಎಲ್ಲರಿಗೂ ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ವಿನಯ ಸುವರ್ಣಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಅಂಗನವಾಡಿ ಕೇಂದ್ರದ ಶಿಕ್ಷಕಿ, ಸಹಾಯಕಿಯರಿಗೆ ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ವಿಶೇಷವಾಗಿ ಕೆದಂಬಾಡಿ ಗ್ರಾಮ ಪಂಚಾಯತ್ನ 2 ನೇ ವಾರ್ಡ್ನ ಅಂಗನವಾಡಿ ಶಿಕ್ಷಕಿಯರಿಗೆ ಮತ್ತು ಸಹಾಯಕಿಯರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಸಾರೆಪುಣಿ ಅಂಗನವಾಡಿ ಕೇಂದ್ರದ ಕಮಲಾಕ್ಷಿ ಮಂಜುನಾಥ ಗೌಡ ಇದ್ಯಪೆ, ಶ್ವೇತಾ ಪ್ರವೀಣ ಕೋಡಿಯಡ್ಕ, ನಿವೃತ್ತ ಸಹಾಯಕಿಯರಾದ ಕುಸುಮಾವತಿ ರಾಧಾಕೃಷ್ಣ ಪೂಜಾರಿ, ಕುಸುಮ ಕೊಲ್ಲಾಜೆ, ಇದ್ಪಾಡಿ ಅಂಗನವಾಡಿ ಕೇಂದ್ರದ ಜಾನಕಿ ಇ.ಬಳ್ಳಮಜಲು, ಗೀತಾಲಕ್ಷ್ಮೀ ಇದ್ಪಾಡಿರವರುಗಳನ್ನು ಶಾಲು, ಹಾರ ಹಾಕಿ, ಫಲಪುಷ್ಪ ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೆ ಶ್ರೀರಾಮ ಮಂದಿರಕ್ಕೆ ಹಾರ್ಮೋನಿಯಂ ಕೊಡುಗೆಯಾಗಿ ನೀಡಿದ ದಿನಕರ ರೈ ಮಾಣಿಪ್ಪಾಡಿ, ಮಂದಿರದ ವಿದ್ಯುತ್ ವ್ಯವಸ್ಥೆಗಳನ್ನು ಉಚಿತವಾಗಿ ನೋಡಿಕೊಳ್ಳುತ್ತಿರುವ ನೇಮಣ್ಣ ಗೌಡ ಮತ್ತು ಶ್ರೀರಾಮ ಭಜನಾ ಸಮಿತಿ ಮಾಜಿ ಅಧ್ಯಕ್ಷ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಗೌರವಾರ್ಪಣೆ ಸ್ವೀಕರಿಸಿದ ಅಂಗನವಾಡಿ ಶಿಕ್ಷಕಿ ಜಾನಕಿ ಇ.ಬಳ್ಳಮಜಲುರವರು ಮಾತನಾಡಿ ಅಂಗನವಾಡಿ ಶಿಕ್ಷಕಿ, ಸಹಾಯಕಿಯರನ್ನು ಗುರುತಿಸಿ ಗೌರವಿಸಿರುವುದು ಖುಷಿ ತಂದಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗರವರು ಮಾತನಾಡಿ, ಕೃಷಿಕ ಸಮಾಜದ ಜಿಲ್ಲೆಯ ಅಧ್ಯಕ್ಷ ಹುದ್ದೆಯಂತಹ ದೊಡ್ಡ ಹುದ್ದೆ ಸಿಕ್ಕಿರುವುದು ಶ್ರೀ ದೇವರ ಅನುಗ್ರಹವಾಗಿದೆ. ಜಿಲ್ಲೆಗೆ ನನ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಅಭಿವೃದ್ಧಿ ಪೂರಕ ಯೋಜನೆಗಳನ್ನು ತರಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ದೇವರ ಹಾಗೇ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಆಡಳಿತ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಕೋರಂಗರವರು ಸನ್ಮಾನಿತರ ಪರಿಚಯ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆಯವರು ಮಾತನಾಡಿ, ಶ್ರೀ ದೇವರ ಅನುಗ್ರಹ ಮತ್ತು ಭಕ್ತಾಧಿಗಳ ಸಹಕಾರದಿಂದ 9 ದಿನಗಳ ನವರಾತ್ರಿ ಉತ್ಸವವು ಅತ್ಯಂತ ಸಂಭ್ರಮದಿಂದ ನಡೆದಿದೆ. ಪ್ರತಿದಿನ ಭಜನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಊರಪರವೂರ ಭಕ್ತರ ತನು,ಮನ,ಧನ ಸಹಕಾರದಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸಹಕಾರ ನೀಡಿದ ಸರ್ವ ಭಕ್ತಾಧಿಗಳಿಗೂ ಸಪರಿವಾರ ಶ್ರೀರಾಮಚಂದ್ರ ದೇವರು, ಜಗನ್ಮಾತೆ ಶ್ರೀ ದುರ್ಗಾ ದೇವಿಯೂ ಅನುಗ್ರಹ, ಆಶೀರ್ವಾದವನ್ನು ನೀಡುವ ಮೂಲಕ ಒಳ್ಳೆಯದನ್ನು ಮಾಡಲಿ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಬಾಲಕೃಷ್ಣ ರೈ ಮಾಡಾವು, ಆಡಳಿತ ಸಮಿತಿ ಉಪಾಧ್ಯಕ್ಷ ಲಿಖಿತ್ ಗೌಡ ಇದ್ಯಪೆ, ಶ್ರೀರಾಮ ಭಜನಾ ಸಮಿತಿಯ ಅಧ್ಯಕ್ಷ ವಿನೋದ್ ಪೂಜಾರಿ ಕೋಡಿಯಡ್ಕ, ಕಾರ್ಯದರ್ಶಿ ನಿತೇಶ್ ರೈ ಕೋರಂಗ ಉಪಸ್ಥಿತರಿದ್ದರು

ಆಡಳಿತ ಸಮಿತಿಯ ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಮಂದಿರದ ಅಭಿವೃದ್ಧಿ ಕಾರ್ಯಗಳು ನಡೆದುಬಂದ ರೀತಿಯನ್ನು ಸಭೆಯ ಮುಂದಿಟ್ಟರು. ಪ್ರಧಾನ ಕಾರ್ಯದರ್ಶಿ ಅಗರಿ ಯಶೋಧರ ಚೌಟ ಪಟ್ಟೆತ್ತಡ್ಕ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಚಂದ್ರ ನಲಿಕೆ ಇದ್ಪಾಡಿ ವಂದಿಸಿದರು. ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಭಜನಾ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯುವರಂಗದ ಸದಸ್ಯರಿಂದ ಮತ್ತು ಊರವರಿಂದ ಕಾರ್ಯಕ್ರಮ ವೈವಿಧ್ಯ ಮನರಂಜಿಸಿತು.
5 ಸಾವಿರಕ್ಕೂ ಅಧಿಕ ಮಂದಿಗೆ ಅನ್ನ ಸಂತರ್ಪಣೆ
ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. 9 ದಿನಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭಕ್ತಾಧಿಗಳು ಅನ್ನ ಪ್ರಸಾದ ಸ್ವೀಕರಿಸಿದರು.
ಪ್ರತಿ ದಿನ ಭಜನೆ, ಸಾಂಸ್ಕೃತಿಕ ಸಂಭ್ರಮ
ಒಂಭತ್ತು ದಿನಗಳಲ್ಲೂ ರಾತ್ರಿ ಭಜನಾ ಸೇವಾರ್ಥಿಗಳಿಂದ ಭಜನಾ ಸೇವೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನೆಯ ಬಳಿಕ ವಿವಿಧ ತಂಡಗಳಿಂದ ಸಾಂಸ್ಕೃತಿಕ ಸಂಭ್ರಮ, ಯಕ್ಷಗಾನ ಬಯಲಾಟ, ತಾಳಮದ್ದಳೆ, ನೃತ್ಯ ಕಾರ್ಯಕ್ರಮ ಇತ್ಯಾದಿ ಮನರಂಜಿಸಿತು.
“ ನವರಾತ್ರಿ ಉತ್ಸವವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಜರಗಿದೆ. 9 ದಿನಗಳಲ್ಲಿ 5 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನದಾನ ನಡೆದಿದ್ದು ಅನ್ನದಾನ ಸೇವಾರ್ಥಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇವೆ. ಅನ್ನದಾನ ಕಾರ್ಯದಲ್ಲಿ ಪ್ರತಿದಿನ ಹತ್ತು ಮಹಿಳೆಯರು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ ಅವರಿಗೂ ಹಾಗೇ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಪದಾಧಿಕಾರಿಗಳಿಗೆ,ಸದಸ್ಯರುಗಳಿಗೆ, ಊರಪರವೂರ ಭಕ್ತಾಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಭಕ್ತಾಧಿಗಳ ಸಹಕಾರದಿಂದ ಮಂದಿರದ ಬೋಜನಾಲಯದ ಕಾಮಗಾರಿ ಯಶಸ್ವಿಯಾಗಿ ನಡೆಯುತ್ತಿದ್ದು ಇನ್ನಷ್ಟು ಕಾಮಗಾರಿ ಬಾಕಿ ಇದ್ದು ಭಕ್ತಾಧಿಗಳ ತನು,ಮನ,ಧನ ಸಹಕಾರ ನೀಡುವ ಮೂಲಕ ಶ್ರೀರಾಮಚಂದ್ರ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸುತ್ತಾ, ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ.”
ರಾಘವ ಗೌಡ ಕೆರೆಮೂಲೆ, ಅಧ್ಯಕ್ಷರು ಶ್ರೀರಾಮ ಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ