ಪುತ್ತೂರು: ಅಜ್ಜನ ಮೊಬೈಲ್ ವಾಟ್ಸಪ್ ಹ್ಯಾಕ್ ಮಾಡಿ ಮೊಮ್ಮಗನ ವಾಟ್ಸಪ್‌ಗೆ ’ಪಿಎಂ ಕಿಸಾನ್ ಯೋಜನ. ಆ್ಯಪ್’ ಎಂಬ ಆ್ಯಪ್ ಫೈಲ್ ಕಳಿಸಿ 1,63,190 ರೂ.ವಂಚಿಸಿರುವ ಪ್ರಕರಣವೊಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವ ಕಡಬದ ಯುವಕ ಈ ಬಗ್ಗೆ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಡಬದ 19 ವರ್ಷದ ಯುವಕನ ಮೊಬೈಲ್‌ಗೆ ಸೆ.26ರಂದು ಅವರ ಅಜ್ಜನ ವಾಟ್ಸಪ್ ನಂಬ್ರದಿಂದ ’ಪಿಎಂ ಕಿಸಾನ್ ಯೋಜನ. ಆ್ಯಪ್’ ಎಂಬ ಹೆಸರಿನ ಆ್ಯಪ್ ಫೈಲ್ ಬಂದಿದೆ. ’ಪಿಎಂ ಕಿಸಾನ್ ಯೋಜನ’ ಎಂದು ಬರೆದಿದ್ದರಿಂದ ಅದನ್ನು ಯುವಕ ಕ್ಲಿಕ್ ಮಾಡಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ನಂತರ ಸೆ.27ರಂದು ಯುವಕನ ಸಿಮ್‌ಕಾರ್ಡ್ ನೆಟ್‌ವರ್ಕ್ ತೋರಿಸದೇ ಇದ್ದ ಹಿನ್ನೆಲೆಯಲ್ಲಿ ಅವರು ಸೆ.30ರಂದು ಸಮೀಪದ ಮೊಬೈಲ್ ಶಾಪ್‌ಗೆ ಹೋಗಿ ಹೊಸ ಸಿಮ್ ಕಾರ್ಡ್ ಖರೀದಿಸಿದ್ದರು. ಅ.1ರಂದು ಯುವಕ ಪೇಟಿಎಂ ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಲ್ಲಿ ಅಂತಿಮ ಶಿಲ್ಕು ರೂ.414 ಮಾತ್ರ ತೋರಿಸುತಿತ್ತು. ಅ.1 ಮತ್ತು 2 ರಂದು ಬ್ಯಾಂಕ್‌ಗೆ ರಜೆ ಇದ್ದ ಹಿನ್ನೆಲೆಯಲ್ಲಿ ಅ.3ರಂದು ಬ್ಯಾಂಕ್‌ಗೆ ತೆರಳಿ ಪರಿಶೀಲನೆ ಮಾಡಿದಾಗ ಯುಪಿಐ ಮೂಲಕ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿರುವುದರಿಂದ ಪಾಸ್ ಬುಕ್ ಎಂಟ್ರಿ ಮಾಡಿ ನೋಡಿದಾಗ ಯುವಕನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತಗೊಂಡಿರುವುದು ಕಂಡುಬಂದಿದೆ.
ಇದಾದ ನಂತರ ಯುವಕನ ಅಜ್ಜನ ಮೊಬೈಲ್ ಹ್ಯಾಕ್ ಮಾಡಿ ಅವರ ಸಂಪರ್ಕದಲ್ಲಿರುವ ಎಲ್ಲರಿಗೂ ಆಪ್ ಫೈಲ್ ಕಳುಹಿಸಿರುವುದು ತಿಳಿದುಬಂದು ಅವರಲ್ಲಿ ವಿಚಾರಿಸಿದಾಗ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ ಸರಿಪಡಿಸಿದ್ದಾಗಿ ತಿಳಿಸಿದ್ದಾರೆ. ಈ ರೀತಿಯಾಗಿ ಯುವಕನ ಅಜ್ಜನ ವಾಟ್ಸಪ್ ಹ್ಯಾಕ್ ಮಾಡಿ ಯುವಕನ ವಾಟ್ಸಪ್‌ಗೆ ’ಪಿ.ಎಂ.ಕಿಸಾನ್ ಯೋಜನ.ಆ್ಯಪ್’ ಎಂಬ ಹೆಸರಿನ ಆಪ್ ಕಳುಹಿಸಿ 1,63,190 ರೂ.ವಂಚಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಯುವಕ ನೀಡಿದ ದೂರಿನಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.