ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಹೊಳೆ ನೀರಿಗೆ ರಾಸಾಯನಿಕ ಮಿಶ್ರಿತ ಸಿಮೆಂಟ್ ಕಾಂಕ್ರಿಟ್ ಮಿಕ್ಸಿಂಗ್ ಸುರಿದ ಪರಿಣಾಮ ಮೀನುಗಳು ಸಾವನ್ನಪ್ಪಿದ್ದು, ಈ ಹೊಳೆನೀರು ಪಕ್ಕದ ಕೃಷಿ ತೋಟಗಳಿಗೂ ಹರಿದು ಹೋಗುತ್ತಿರುವುದರಿಂದ ಕೃಷಿಕರಲ್ಲಿ ಆತಂಕ ಉಂಟಾಗಿದೆ.

ಹೆದ್ದಾರಿ ಬದಿಯ ಸಣ್ಣ ಹೊಳೆಗೆ ಯಾರೋ ಕಿಡಿಗೇಡಿಗಳು ರಾಸಾಯನಿಕ ಮಿಶ್ರಿತ, ಸಿಮೆಂಟ್ ಕಾಂಕ್ರಿಟ್ ಮಿಕ್ಸಿಂಗ್ ಮಾಡಲಾಗಿದ್ದ ಸಿಮೆಂಟ್ ಸುರಿದು ಹೋಗಿದ್ದರು ಎನ್ನಲಾಗಿದೆ. ಇದರಿಂದಾಗಿ ಹೊಳೆಯ ನೀರಿನಲ್ಲಿ ರಾಸಾಯನಿಕ ಮಿಶ್ರಣಗೊಂಡಿದ್ದರಿಂದ ಹೊಳೆ ನೀರಿನಲ್ಲಿದ್ದ ಅನೇಕ ಮೀನುಗಳು ಸತ್ತು ಮೇಲಕ್ಕೆ ತೇಲುತ್ತಿರುವುದು ಕಂಡುಬಂದಿದೆ. ಈ ಹೊಳೆಯಲ್ಲಿನ ನೀರು ಪಕ್ಕದ ಕೃಷಿ ತೋಟಗಳಿಗೂ ಹರಿದು ಹೋಗುತ್ತಿದ್ದು ಇದರಿಂದ ಕೃಷಿಕರಲ್ಲಿ ಆತಂಕ ಉಂಟಾಗಿದೆ. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಉಳಿಕೆಯಾದ ರಾಸಾಯನಿಕ ಮಿಶ್ರಿತ ಕಾಂಕ್ರೀಟ್ ಅನ್ನು ತೋಡಿಗೆ ಸುರಿದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.