ಉಪ್ಪಿನಂಗಡಿ: ಕೇಂದ್ರ ಸರಕಾರದ ಅಧೀನದಲ್ಲಿರುವ ಅಂಚೆಕಚೇರಿಯಲ್ಲಿ ಉತ್ತಮ ಸೇವೆ ನೀಡುತ್ತಿದ್ದ ಆಧಾರ್ ಸೇವೆಯು ಸಿಬ್ಬಂದಿ ಕೊರತೆಯಿಂದ ಸ್ಥಗಿತಗೊಂಡು 15 ತಿಂಗಳು ಕಳೆದರೂ ಇನ್ನೂ ಇದು ಇಲ್ಲಿ ಪುನಾರಾರಂಭಗೊಂಡಿಲ್ಲ. ನಾಲ್ಕು ತಾಲೂಕುಗಳ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ, ಇದರಿಂದ ಪುತ್ತೂರು ತಾಲೂಕಿನ ಹೋಬಳಿ ಕೇಂದ್ರವಾಗಿರುವ ಉಪ್ಪಿನಂಗಡಿಯಲ್ಲಿ ಸಮರ್ಪಕ ಆಧಾರ್ ಸೇವೆ ಒದಗಿಸುವ ಕೇಂದ್ರವಿಲ್ಲದೆ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮೊದಲು ಇಲ್ಲಿನ ನಾಡ ಕಚೇರಿಯಲ್ಲಿ ಆಧಾರ್ ಸೇವೆ ಒದಗಿಸಲಾಗುತ್ತಿತ್ತು. ಕೆಲ ಕಾಲ ಸೇವೆ ನೀಡಿದ ಬಳಿಕ ಅದನ್ನು ಸ್ಥಗಿತಗೊಳಿಸಲಾಯಿತು. ಖಾಸಗಿ ಸಂಸ್ಥೆಯ ನೇತೃತ್ವದಲ್ಲಿ ಇಲ್ಲಿನ ಬಿಎಸ್ಎನ್ಎಲ್ ಕಚೇರಿಯಲ್ಲಿ ಆಧಾರ್ ಸೇವೆ ಲಭಿಸುತ್ತಿದ್ದರೂ ಅಲ್ಲಿ ಎಲ್ಲಾ ಸ್ವರೂಪದ ಸೇವೆಗಳು ಲಭಿಸುತ್ತಿಲ್ಲ. ಮುಖ್ಯವಾಗಿ ಸಣ್ಣ ಮಕ್ಕಳ ಆಧಾರ್ ಕಾರ್ಡ್ ಅಪ್ಡೇಟ್ ಕಾರ್ಯ ನಡೆಯದಿರುವುದರಿಂದ ದಿನವಿಡೀ ಸರತಿ ಸಾಲಿನಲ್ಲಿ ನಿಂತು ಬಳಿಕ ನಿರಾಸೆಯಿಂದ ನಿರ್ಗಮಿಸುವ ಸ್ಥಿತಿ ಪ್ರಸಕ್ತ ಇದೆ. ಇದರಿಂದಾಗಿ ಎಳೆಯ ಮಕ್ಕಳನ್ನು ದೂರದ ಪುತ್ತೂರಿಗೆ ಕರೆದೊಯ್ದು ಅಲ್ಲಿ ಸರತಿ ಸಾಲಿನಲ್ಲಿ ನಿಂತು ಆಧಾರ್ ಸೇವೆ ಪಡೆದುಕೊಳ್ಳುವ ಸ್ಥಿತಿ ಇದೆ.
ಅಂಚೆ ಕಚೇರಿಯಲ್ಲಿ ಸೇವೆ ಪುನರಾರಂಭವಾಗಲಿ
ಈ ಹಿಂದೆ ಉಪ ಅಂಚೆ ಕಛೇರಿಯಾಗಿರುವ ಉಪ್ಪಿನಂಗಡಿಯಲ್ಲಿ ಆಧಾರ್ ಸೇವೆಗೆಂದೇ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಿನಂಪ್ರತಿ 40ಕ್ಕೂ ಮಿಕ್ಕಿದ ಮಂದಿಗೆ ಆಧಾರ್ ಸೇವೆ ಒದಗಿಸಲಾಗುತ್ತಿತ್ತು. ಆದರೆ ಸಿಬ್ಬಂದಿ ವರ್ಗಾವಣೆಯ ಬಳಿಕ ಸಿಬ್ಬಂದಿ ಇಲ್ಲ ಎಂಬ ಕಾರಣ ನೀಡಿ 2024ರ ಜೂನ್ ತಿಂಗಳಿಂದ ಆಧಾರ್ ಸೇವೆ ಸ್ಥಗಿತಗೊಳಿಸಿರುವುದು ಮತ್ತೆ ಪುನರಾಂಭವಾಗದಿರುವುದು ಈ ಪರಿಸರದ ಜನತೆಯನ್ನು ಹೈರಾಣವಾಗಿಸಿದೆ. ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ಆಧಾರ್ ಸೇವೆ ದೊರಕುವಂತಾಗಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
ಅವಶ್ಯಕತೆ ಹೆಚ್ಚಾದಂತೆ ಸೇವೆ ಕುಂಠಿತವಾಗುವುದು ಸರಿಯಲ್ಲ
ಪ್ರಸಕ್ತ ಆಧಾರ್ ದಾಖಲೆಯನ್ನು ಹೊಂದುವುದು ಮತ್ತು ಅದನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕಾಗುವುದು ಅತ್ಯಗತ್ಯವಾಗಿರುವಾಗ ಅದಕ್ಕೆ ಸಂಬಂಧಿಸಿ ಸೇವೆ ಲಭಿಸುವಂತೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಸಿಬ್ಬಂದಿ ಕೊರತೆಯ ಕಾರಣಕ್ಕೆ ಅಂಚೆ ಕಚೇರಿಯಲ್ಲಿ ಹದಿನೈದು ತಿಂಗಳಿಂದ ಆಧಾರ್ ಸೇವೆ ಸ್ಥಗಿತಗೊಂಡಿದೆ ಎನ್ನುವುದು ಆಡಳಿತ ವ್ಯವಸ್ಥೆಗೆ ಶೋಭೆಯಲ್ಲ. ಜನರು ಆಧಾರ್ ಸೇವೆಗಾಗಿ ದಿನಗಟ್ಟಲೆ ಅಲೆದಾಡುವ ಸ್ಥಿತಿ ಇಂದಿಗೂ ಇದೆ ಎನ್ನುವುದು ಖೇದಕರ. ಜನಪ್ರತಿನಿಧಿಗಳು ಇದರತ್ತ ಗಮನಹರಿಸಿ ಉಪ್ಪಿನಂಗಡಿಯಲ್ಲಿ ಮುಖ್ಯವಾಗಿ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ದೊರಕುವಂತಾಗಲು ಕ್ರಮ ಕೈಗೊಳ್ಳಬೇಕು ಎಂದು ಉಪ್ಪಿನಂಗಡಿ ವ್ಯಾಪಾರ ಮತ್ತು ವಾಣಿಜ್ಯ ಮಂಡಳಿಯ ಪೂರ್ವಾಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ ಆಗ್ರಹಿಸಿದ್ದಾರೆ.
ಅಂಚೆಕಚೇರಿಯಲ್ಲಿ ಸೇವೆ ಕಣ್ಮರೆಯಾಗುತ್ತಿರುವುದು ಯಾಕೆ ?
ದೇಶದ ವಿಶ್ವಾಸಾರ್ಹ ಸಂಸ್ಥೆಯಾಗಿರುವ ಅಂಚೆ ಕಚೇರಿಯಲ್ಲಿ ಕಳೆದ ಕೆಲ ತಿಂಗಳ ವರೆಗೆ ಮೆಸ್ಕಾಂ ಬಿಲ್ ಪಾವತಿ , ಎಲ್ ಐ ಸಿ ಪ್ರೀಮಿಯಂ ಪಾವತಿ ವ್ಯವಸ್ಥೆ ಇದ್ದು, ಗ್ರಾಹಕರಿಗೆ ದಿನ ನಿತ್ಯ ಸೇವೆ ಲಭಿಸುತ್ತಿತ್ತು. ಆದರೆ ಅದೆರಡೂ ಸೇವೆಯೂ ಸದ್ದಿಲ್ಲದೆ ಕಣ್ಮರೆಯಾಗಿದೆ. ಉತ್ತಮ ಆದಾಯವನ್ನು ತಂದುಕೊಡುತ್ತಿದ್ದ ಆಧಾರ್ ಸೇವೆ ಕೂಡಾ ಸಿಬ್ಬಂದಿ ಇಲ್ಲವೆಂಬ ಕಾರಣಕ್ಕೆ ಕಳೆದ ಹದಿನೈದು ತಿಂಗಳಿಂದ ಸ್ಥಗಿತಗೊಂಡಿರುವುದು ಗ್ರಾಹಕರನ್ನು ತೀವ್ರ ಸಮಸ್ಯೆಗೆ ಸಿಲುಕುವಂತೆ ಮಾಡಿದೆ. ಉತ್ತಮ ಸೇವೆಯೊಂದಿಗೆ ಜನಮಾನಸದಲ್ಲಿ ಬೆರೆತಿರುವ ಅಂಚೆ ಕಚೇರಿಯಲ್ಲಿ ಸೇವೆಗಳು ನಿರಂತರ ದೊರಕುವಂತೆ ಮಾಡಬೇಕಾದ ಅಗತ್ಯತೆ ಇದೆ ಎಂದು ಗೆಳೆಯರು-94 ಸಂಸ್ಥೆಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು ಅಭಿಪ್ರಾಯಿಸಿದ್ದಾರೆ.