ಪುತ್ತೂರು: ಜನರ ಪ್ರಬಲ ವಿರೋಧದ ನಡುವೆಯೂ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕಂಪೆನಿ ಮುಂದಾಗಿದೆ. ವಿವಿಧ ಇಲಾಖೆಗಳ ಮೂಲಕ ಒತ್ತಡ ತಂದು ಹೋರಾಟಗಾರರನ್ನು ದಮನಿಸುವ ಕಾರ್ಯ ಮಾಡಿ ಜನ ವಿರೋಧದ ನಡುವೆಯೂ ಅನುಷ್ಠಾನಕ್ಕೆ ಮುಂದಾದರೆ, ಸಮಸ್ಯೆಗಳು ಉದ್ಬವಿಸಿದರೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ನೇರ ಹೊಣೆ ಹೊರಬೇಕು ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಜನರ ವಿರೋಧದ ನಡುವೆಯೂ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ತಕ್ಕ ಉತ್ತರ ನೀಡಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದರು.
400ಕೆವಿ ವಿದ್ಯುತ್ ಪ್ರಸರಣ ಮಾರ್ಗದ ವಿರುದ್ಧ ಬಂಟ್ವಾಳ ತಾಲೂಕಿನ ವೀರಕಂಬ ಮಂಗಳಪದವಿನಲ್ಲಿ ಸನಾತನ ಹಿಂದು ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ ವಿಟ್ಲ, ವಿವಿಧ ಹಿಂದೂ ಸಂಘಟನೆ, ರೈತ ಸಂಘಟನೆಗಳ ವತಿಯಿಂದ ನಡೆದ ಬೃಹತ್ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಗ್ಮಿ ಮಂಜುನಾಥ ಉಡುಪ ಮಾತನಾಡಿ, ಚುನಾವಣೆ ಬಂದಾಗ ಜನರ ಕೈಕಾಲು ಹಿಡಿದು ಮತ ಕೇಳುವ ರಾಜಕಾರಣಿಗಳು ಈಗ ಎಲ್ಲಿದ್ದಾರೆ. ಸ್ವಾರ್ಥ ಮತ್ತು ಲಾಭದ ಉದ್ದೇಶದಿಂದ ನಡೆಯುತ್ತಿರುವ ಯೋಜನೆಯಿಂದ ಸುಳ್ಳುಗಳನ್ನು ಹೇಳಿ ಜನರ ಹಾದಿ ತಪ್ಪಿಸುವ ಕಾರ್ಯವಾಗುತ್ತಿದೆ. ಹೇಡಿತನವನ್ನು ಬಿಟ್ಟು ಹೋರಾಟಕ್ಕೆ ಇಳಿದಿದ್ದು, ದಂಗೆಯಾಗಿ ಪರಿವರ್ತನೆಯಾಗುವ ಮೊದಲು ಎಚ್ಚೆತ್ತುಕೊಳ್ಳುವುದು ಉತ್ತಮ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದರು.
ಸಮಸ್ಯೆಯ ಬಗ್ಗೆ ಬಂಟ್ವಾಳ ತಹಶೀಲ್ದಾರ್ ಮಂಜುನಾಥರವರಿಗೆ ಮನವಿ ನೀಡಲಾಯಿತು. ವಿಟ್ಲ ಕಂದಾಯ ನಿರೀಕ್ಷಕ ರವಿ ಜೊತೆಗಿದ್ದರು. ಮಂಗಳಪದವುನಲ್ಲಿ ಪ್ರತಿಭಟನೆ ನಡೆದ ಬಳಿಕ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಪಾದಯಾತ್ರೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಅಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ಡಾ| ಎಲ್. ಕೆ. ಸುವರ್ಣ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಹಿಂದೂ ಸಂಘಟನೆ ಮುಖಂಡ ಅಕ್ಷಯ್ ರಜಪೂತ್, ರೈತ ಸಂಘದ ಇದಿನಬ್ಬ, ಅಲ್ಪೋನ್ಸ್ ಡಿ’ಸೋಜ ನಿಡ್ಡೋಡಿ, ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಇನ್ನಾ ಚಂದ್ರಹಾಸ ಶೆಟ್ಟಿ, ರೈತ ಸಂಘ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡುಕಂಬಳ ಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ಚಿನ್ಮಯ ರೈ, ಮುರುವ ಮಹಾಬಲ ಭಟ್, ರಾಜೀವ ಗೌಡ, ಕೃಷ್ಣಪ್ರಸಾದ್ ತಂತ್ರಿ, ಶ್ಯಾಮಪ್ರಸಾದ್, ಶಿವಾನಂದ, ಚಿತ್ತರಂಜನ್, ದೇವಿಪ್ರಸಾದ್ ಶೆಟ್ಟಿ ಬೆಂಜತ್ತಿಮಾರುಗುತ್ತು ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು ತಹಶೀಲ್ದಾರ್ರವರಿಂದ ಮನವೊಲಿಕೆ
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಯವರು ಆಗಮಿಸಬೇಕು. ಅವರು ಬರದೇ ಹೋದರೆ ಸಹಾಯಕ ಆಯುಕ್ತರನ್ನಾದರೂ ಕಳುಹಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ವಿಟ್ಲ- ಕಲ್ಲಡ್ಕ ರಸ್ತೆ ಸಂಪರ್ಕ ಬಂದ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು. ಬಳಿಕ ತಹಶೀಲ್ದಾರ್ ಮಂಜುನಾಥ್ರವರು ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ, ವಿದ್ಯುತ್ ಪ್ರಸರಣ ಯೋಜನೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಗುತ್ತಿಗೆ ವಹಿಸಿಕೊಂಡವರಿಗೆ ತಿಳಿಸಲಾಗಿದೆ. ಅಧಿಕಾರಿಗಳು ಹಾಗೂ ಮುಖಂಡರ ನಡುವೆ ವಿವಿಧ ಹಂತದ ಮಾತುಕತೆ ನಡೆದು ಕೊನೆ ವಾರದೊಳಗೆ ರೈತರ ಹಾಗೂ ಪ್ರಮುಖರ ಸಭೆಯನ್ನು ತಾಲೂಕು ಮಟ್ಟದಲ್ಲಿ ನಡೆಸುವುದಾಗಿ ತಹಸೀಲ್ದಾರ್ ಭರವಸೆಯನ್ನು ನೀಡಿದರು.