ಪುತ್ತೂರು: ಬೀಡಿ ಕಾರ್ಮಿಕರ ಕಾನೂನು ಬದ್ದ ವೇತನ ನೀಡದಿರುವ ಬೀಡಿ ಮಾಲಕರ ಮೇಲೆ ಸರಕಾರ ಕಾನೂನು ಕ್ರಮ ಕೈಗೊಂಡು, ಕಳೆದ 8 ವರ್ಷಗಳ ಬಾಕಿ ವೇತನ ಕೊಡಿಸಬೇಕೇ ವಿನಃ ನಮಗೆ ಬೀಡಿ ಮಾಲಕರ ಭಿಕ್ಷೆ ಬೇಕಿಲ್ಲ ಎಂದು ಸಿಐಟಿಯು ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಅವರು ತಿಳಿಸಿದರು.

ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಪುತ್ತೂರು ಗಣೇಶ್ ಬೀಡಿ ಡಿಪೋದ ಎದುರು ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. 01.04.2018 ರಿಂದ 31.03.2024 ತನಕ ಬೀಡಿ ಮಾಲಕರು ಕನಿಷ್ಟ 1 ಲಕ್ಷ ಬೀಡಿ ಕಟ್ಟಿದ ಬೀಡಿ ಕಾರ್ಮಿಕರಿಗೆ ಪ್ರತಿ 1000 ಬೀಡಿಗೆ ರೂ. 40 ರಂತೆ ದುಡಿದ ವೇತನ ನೀಡಲು ಬಾಕಿ ಮಾಡಿದ ವೇತನ ಒಟ್ಟು ತಲಾ ರೂ.24,000 ಮತ್ತು 01.04.2024 ರಿಂದ 31.03.2025 ತನಕ ಪ್ರತಿ 1000 ಬೀಡಿಗೆ ರೂ 23.24ರಂತೆ ಬಾಕಿ ಮಾಡಿದ ವೇತನ ತಲಾ ರೂ. 2,324 ಒಟ್ಟು 26,324 ರೂ ವೇತನ ಬಾಕಿ ಪ್ರತಿ ಬೀಡಿ ಕಾರ್ಮಿಕರಿಗೆ ಬೀಡಿ ಮಾಲಕರು ನೀಡಬೇಕಾಗಿದೆ ಎಂದರು. ಇದರ ಜೊತೆ ಇದಕ್ಕೆ ಸಂಬಂದಿಸಿದ ಬೋನಸ್, ಪಿಎಫ್ ಹಣವೂ ನೀಡಬೇಕಿದೆ. 01.04.2025 ರಿಂದ ಸರಕಾರ ನಿಗದಿ ಪಡಿಸಿದ ವೇತನ ಪ್ರತಿ 1000 ಬೀಡಿಗೆ ರೂ 301.92ರಂತೆ ವೇತನ ನೀಡಬೇಕಿದ್ದು, ಬೀಡಿ ಮಾಲಕರು ತಲಾ ರೂ 284.88 ರಂತೆ ನೀಡಿ ಪ್ರತಿ 1000 ಬೀಡಿಯಲ್ಲಿ ತಲಾ ರೂ 17.04ರಂತೆ ವೇತನ ಬಾಕಿ ಮಾಡಿದ್ದಾರೆ ಎಂದರು.

ನಾವು ಕಾರ್ಮಿಕರು ಯಾರ ಭಿಕ್ಷೆಗೂ ಕೈಚಾಚುವುದಿಲ್ಲ, ನಮಗೆ ನೀಡಲು ಬಾಕಿ ಮಾಡಿದ ಪೂರ್ತಿ ವೇತನ ಸಿಗುವ ತನಕ ಸರಕಾರದ ವಿರುದ್ದ ಅನಿರ್ಧಿಷ್ಟ ಕಾಲದ ಹೋರಾಟಕ್ಕೆ ನಾವು ಮುಂದಾಗುತ್ತೇವೆ ಎಂದರು. 01.04.2024 ರಿಂದ ಕಾನೂನು ಬದ್ದವಾಗಿ ಪ್ರತಿ 1000 ಬೀಡಿಗೆ 315 ರೂ ವೇತನವಿದ್ದುನ್ನು ಹಿಮ್ಮುಖವಾಗಿ ತೀರ್ಮಾನಿಸಿ ರೂ. 270 ಕೊಟ್ಟರೆ ಸಾಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಈಶ್ವರಿ, ಬೀಡಿ ಕಾರ್ಮಿಕರೆಂದರೆ ಎಲ್ಲಾ ರಾಜಕೀಯದವರಿಗೂ ಸಸಾರವಾಗಿದೆ. ಇಂದು ಕೆಂಬಾವುಟದ ರಾಜಕೀಯ ಮಾತ್ರ ನಮ್ಮ ಜೊತೆಗಿದೆ ಎಂದರು.
ಸಿಐಟಿಯು ಜಿಲ್ಲಾ ಸಮಿತಿ ಸದಸ್ಯೆ ಜಯಶ್ರೀ ಸ್ವಾಗತಿಸಿದರು. ಪುಷ್ಪ ವಂದಿಸಿದರು. ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾದ ವಕೀಲರಾದ ಪಿ.ಕೆ.ಸತೀಶನ್, ಡಿವೈ.ಎಫ್. ಜಿಲ್ಲಾ ಸಮಿತಿ ಸದಸ್ಯರಾದ ಅಭಿಷೇಕ್, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ವಿನುಶರಮಣ, ಕಾರ್ಮಿಕ ಮುಖಂಡರುಗಳಾದ ದಿನೇಶ್, ಪವಿತ್ರ, ನಯನ, ನೆಬಿಸ ಮೊದಲಾದವರು ಉಪಸ್ಥಿತರಿದ್ದರು.