ಮಣ್ಣು ಕುಸಿತದಿಂದ ಅರ್ಧ ಮರಕ್ಕೆ ಬುಡವೇ ಇಲ್ಲ, ಮರ ಬಿದ್ದರೆ ಸಂಪರ್ಕ ಕಡಿತ…!?
ಪುತ್ತೂರು: ಮಳೆಗಾಲ ಬಂತು ಎಂದರೆ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿ ಸಮಸ್ಯೆಗಳು ಉಂಟಾಗುವುದು, ವಾಹನ ಸವಾರರ, ವಾಹನಗಳ ಮೇಲೆ ಮರಗಳು ಉರುಳಿಬಿದ್ದು ಅನಾಹುತ ಸಂಭವಿಸಿರುವ ಘಟನೆಗಳನ್ನು ನಾವೆಲ್ಲರೂ ಗಮನಿಸಿದ್ದೇವೆ. ಅನೇಕ ಸಂದರ್ಭಗಳಲ್ಲಿ ಇಂತಹ ಅಪಾಯಗಳು ಮೇಲ್ನೋಟಕ್ಕೆ ಕಂಡುಬರುವಂತೆ ಇರುವ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಗಮನಹರಿಸಿ ಇಂತಹ ಸಂಭಾವ್ಯ ಅಪಾಯಗಳನ್ನು ನಿವಾರಿಸಿರುವ ನಿದರ್ಶನಗಳೂ ಇವೆ. ಆದರೆ ಇಲ್ಲಿರುವ ಅಪಾಯ ಮಾತ್ರ ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ. ಆದರೆ ದರದೃಷ್ಟವಶಾತ್ ಏನಾದರೂ ಅನಾಹುತ ಸಂಭವಿಸಿದರೆ ಆಗುವ ಹಾನಿ ಮಾತ್ರ ಸಣ್ಣದಲ್ಲ.
ಹೌದು, ಬಂಟ್ವಾಳ ತಾಲೂಕಿನ, ಪುತ್ತೂರು ವಿಧಾನಸಭಾ ಕ್ಷೇತ್ರದ ಪುಣಚ ಗ್ರಾಮದ ಮಲೆತ್ತಡ್ಕ ಎಂಬಲ್ಲಿ ರಸ್ತೆಬದಿಯಲ್ಲಿರುವ ಈ ಮರ ಭಾರೀ ಅಪಾಯವನ್ನು ಆಹ್ವಾನಿಸುತ್ತಿದೆ. ಇಲ್ಲಿನ ಕಿರು ಸೇತುವೆ ಮತ್ತು ಬಸ್ನಿಲ್ದಾಣದ ನಡುವೆ ಸಣ್ಣ ತಿರುವಿನಲ್ಲಿ ರಸ್ತೆಯ ಬದಿಯಲ್ಲಿರುವ ಈ ಬೃಹತ್ ಗಾತ್ರದ ಮರವನ್ನು ಗಮನಿಸುವಾಗ ಮೇಲ್ನೋಟಕ್ಕೆ ಯಾವುದೇ ಅಪಾಯವಿಲ್ಲದಂತೆ ಕಂಡುಬಂದರೂ, ಈ ಮರದ ಬುಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನೋಡಿದವರ ಎದೆ ಧಸಕ್ಕೆನ್ನದೇ ಇರದು. ಇದಕ್ಕೆ ಕಾರಣ ಮರದ ಬುಡಭಾಗದಲ್ಲಿ ಮಣ್ಣು ಕುಸಿದು ಟೊಳ್ಳಾಗಿದೆ. ಮರದ ಬುಡಭಾಗದಲ್ಲಿ ಅರ್ಧಭಾಗ ಮಣ್ಣೇ ಇಲ್ಲ.

ಈ ಮರದ ಕೆಳಭಾಗದಲ್ಲಿ ನೀರು ಹರಿಯುವ ಸಣ್ಣ ತೊರೆ(ತೋಡು) ಇದ್ದು, ಇಲ್ಲಿಗೆ ಹಲವು ಕಡೆಗಳಿಂದ ಹರಿದುಬರುವ ನೀರು ಇಲ್ಲಿ ಸೇರಿ ಮುಂದಕ್ಕೆ ದೊಡ್ಡ ಪ್ರಮಾಣದಲ್ಲಿ ಹರಿಯುತ್ತದೆ. ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುತ್ತಿರುವ ರಭಸಕ್ಕೆ ಈ ಮರದ ತಳಭಾಗದಲ್ಲಿದ್ದ ಮಣ್ಣು ಕೊರೆತಗೊಂಡು ಕುಸಿದಿದೆ. ಇನ್ನೂ ಸ್ವಲ್ಪಸ್ವಲ್ಪ ಕುಸಿಯುತ್ತಲೇ ಇದೆ. ಮುಂದಕ್ಕೆ ಇನ್ನಷ್ಟು ಕುಸಿದರೆ ಮರದ ಬುಡದಲ್ಲಿ ಬೇರಿಗೆ ಬಲವಿಲ್ಲದಂತಾಗಿ ಮರ ಧರೆಗುರುಳುವುದರಲ್ಲಿ ಸಂಶಯವಿಲ್ಲ. ಮರ ಬಿದ್ದರೆ ಅರ್ಧ ರಸ್ತೆಯೇ ಜರಿದು ಹೋಗುವ ಅಪಾಯವಿದ್ದು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯೂ ಇದೆ. ವಾಹನ ಸವಾರರಿಗೂ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಸಂಬಂಧಪಟ್ಟವರು ಈ ಅಪಾಯದ ಬಗ್ಗೆ ಗಮನಹರಿಸಬೇಕಿದೆ. ಈ ಮೂಲಕ ಮುಂದಕ್ಕೆ ಎದುರಾಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ ಎಂಬುದ ಸಾರ್ವಜನಿಕರ ಆಗ್ರಹವಾಗಿದೆ.
ಗುಡ್ಡಗಳಿಂದ ಬರುವ ನೀರು ರಭಸದಲ್ಲಿ ಈ ಮರದ ಕೆಳಭಾಗದಲ್ಲಿರುವ ಸಣ್ಣ ತೊರೆಯ ಮೂಲಕ ಹರಿದುಹೋಗುತ್ತದೆ. ಇದರಿಂದಾಗಿ ಮರದ ಬುಡಭಾಗದ ಮಣ್ಣು ಕೊರೆತಗೊಂಡಿದೆ. ಮರ ಕೂಡ ಬಹಳಷ್ಟು ಹಳೆಯದ್ದು. ರಸ್ತೆಯ ಅರ್ಧಭಾಗದವರೆಗೂ ಮರದ ಬೇರು ವ್ಯಾಪಿಸಿದೆ. ಇನ್ನರ್ಧ ಭಾಗದಲ್ಲಿ ಬುಡಕ್ಕೆ ಮಣ್ಣಿನ ಬಲವೇ ಇಲ್ಲ. ಅಕಸ್ಮಾತ್ ಮರ ಧರೆಗುರುಳಿದರೆ ರಸ್ತೆಯೇ ಕುಸಿತವಾಗಬಹುದು. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸದೇ ಇದ್ದರೆ ಭಾರೀ ಅಪಾಯವಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಿದೆ.
– ಆನಂದ ಮಲೆತ್ತಡ್ಕ, ಸ್ಥಳೀಯರು