ಪುತ್ತೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಮತ್ತೆ ಆರೋಪಿ ಚಿನ್ನಯ್ಯನ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಿದ್ದಾರೆ.
ಧರ್ಮಸ್ಥಳ ಮತ್ತು ಆಸುಪಾಸಿನ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ನೂರಾರು ಮೃತದೇಹಗಳನ್ನು ತನಗೆ ಬೆದರಿಕೆ ಹಾಕಿ ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ ಎಂದು ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಿದ ಬಳಿಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿ 17 ಸ್ಥಳಗಳಲ್ಲಿ ಎಸ್‌ಐಟಿಯಿಂದ ಉತ್ಖನನ ನಡೆಸಲು ಕಾರಣಕರ್ತರಾಗಿರುವ ಮಂಡ್ಯ ಮೂಲದ ಚಿನ್ನಯ್ಯನನ್ನು ಈಗಾಗಲೇ 15 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ, ಉಜಿರೆ ಗ್ರಾಮ ಪಂಚಾಯತ್ ಶೌಚಾಲಯ ಸಿಬ್ಬಂದಿಯಾಗಿ, ತಮಿಳುನಾಡು ಸೇರಿದಂತೆ ವಿವಿಧೆಡೆ ಕೂಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸಿ ಇತ್ತೀಚೆಗೆ ದಿಢೀರ್ ಆಗಿ ಪ್ರತ್ಯಕ್ಷಗೊಂಡು ಕೊಲೆಯಾದ ಹಾಗೂ ಅತ್ಯಾಚಾರಕ್ಕೀಡಾಗಿ ಕೊಲೆಯಾದವರ ಮೃತದೇಹಗಳನ್ನು ಹೂತು ಹಾಕಿಸಿದ್ದಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ದಾಖಲಿಸಿದ್ದ ಚಿನ್ನಯ್ಯನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ವಿಚಾರಣೆ ನಡೆಸಿ ಹೇಳಿಕೆ ಪಡೆಯಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪ್ರಕರಣದ ತನಿಖಾಧಿಕಾರಿಯಾಗಿರುವ ಎಸ್‌ಐಟಿಯ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರಕಾರದಿಂದ ನೇಮಿಸಲ್ಪಟ್ಟಿರುವ ಚಿನ್ನಯ್ಯನ ಪರ ಪ್ಯಾನಲ್ ವಕೀಲರು ಆಕ್ಷೇಪ ಸೂಚಿಸಿದ್ದರು. ಚಿನ್ನಯ್ಯನನ್ನು ಯಾವ ಕಾರಣಕ್ಕೆ ವಿಚಾರಣೆ ನಡೆಸಬೇಕು ಮತ್ತು ಯಾಕಾಗಿ ಹೇಳಿಕೆ ಪಡೆಯಬೇಕು ಎಂಬುದನ್ನು ಎಸ್‌ಐಟಿ ಪರ ವಕೀಲರಾಗಿರುವ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ನ್ಯಾಯಾಧೀಶ ಟಿ.ಹೆಚ್. ವಿಜಯೇಂದ್ರರವರ ಮುಂದೆ ವಾದ ಮಂಡಿಸಿದ್ದರು. ದಿವ್ಯರಾಜ್ ಹೆಗ್ಡೆ ಅವರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಚಿನ್ನಯ್ಯನನ್ನು ಎರಡು ದಿನ ವಿಚಾರಣೆ ನಡೆಸಲು ಅನುಮತಿ ನೀಡಿದ್ದಾರೆ. ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿಯೇ ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.