ಅದ್ದೂರಿಯಾಗಿ ನಡೆದ ಅಶೋಕ ಜನಮನ-2025 :ಸಂಪೂರ್ಣ ವರದಿ ಇಲ್ಲಿದೆ…

0

13ನೇ ವರ್ಷದ ಅಶೋಕ ಜನಮನದಲ್ಲಿನ ವಿಶೇಷತೆ
*ಕೊಂಬೆಟ್ಟು ಮೈದಾನದಲ್ಲಿ ವಿಶಾಲವಾದ ಪೆಂಡಾಲ್
*ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿ
*40 ಸಾವಿರ ಮಂದಿಗೆ ಆಸನದ ವ್ಯವಸ್ಥೆ
*ದೀಪಾವಳಿ ಕೊಡುಗೆಗಳ ವಿತರಣೆಗೆ 40 ಕೌಂಟರ್
*1 ಲಕ್ಷಕ್ಕೂ ಮಿಕ್ಕಿ ವಸ್ತ್ರ ವಿತರಣೆ
*ಊಟೋಪಚಾರಕ್ಕೆ 30 ಕೌಂಟರ್‌ಗಳು
*ಬೆಳಿಗ್ಗೆ 6 ಸಾವಿರ ಮಂದಿಗೆ ಉಪಹಾರ
*ಮಧ್ಯಾಹ್ನ ಊಟದ ವ್ಯವಸ್ಥೆ
*ಸಂಜೆ ನಿರಂತರ ಲೈವ್ ದೋಸೆ
*ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ತಾತ್ಕಾಲಿಕ ಶೌಚಾಲಯ ನಿರ್ಮಾಣ
*ವಿಐಪಿಗಳ ಆಗಮನಕ್ಕೆ ಪ್ರತ್ಯೇಕ ದಾರಿ
*ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಭದ್ರತೆ
*ಸಮಾವೇಶದ ಸ್ಥಳಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಉಚಿತ ರಿಕ್ಷಾ ಸೇವೆ
*32 ಉಪ ಸಮಿತಿಯಿಂದ ಕಾರ್ಯಕ್ರಮದ ನಿರ್ವಹಣೆ, 1500 ಕಾರ್ಯಕರ್ತರಿಂದ ನಿರಂತರ ಶ್ರಮ

ಪುತ್ತೂರು: ಪ್ರತಿಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ನಮ್ಮ ಉದ್ದೇಶ.ದಕ್ಷಿಣ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿ ಪ್ರಾರಂಭ ಆಗುತ್ತದೆ.ಅದಕ್ಕೆ ಬೇಕಾದ ಆಸ್ಪತ್ರೆಯನ್ನೂ ಮಾಡುತ್ತೇನೆ.ಎಷ್ಟೇ ಖರ್ಚಾದರೂ ಮಾಡಿಯೇ ಮಾಡುತ್ತೇನೆ.ಯಾರಿಗೂ ಅನುಮಾನ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.


ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ,ಶಾಸಕ ಅಶೋಕ್ ಕುಮಾರ್ ರೈಯವರ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ನಡೆದ 13ನೇ ವರ್ಷದ ವಸ್ತ್ರ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಾಂಕೇತಿಕವಾಗಿ ಐವರಿಗೆ ದೀಪಾವಳಿ ಉಡುಗೊರೆ ವಿತರಿಸಿದರು.ಕೊಂಬೆಟ್ಟು ಕ್ರೀಡಾಂಗಣದಲ್ಲಿ ಬೃಹತ್ ಪೆಂಡಾಲ್‌ನಲ್ಲಿ ಕೀರ್ತಿಶೇಷ ಕೆ.ಪಿ.ಸಂಜೀವ ರೈ ವೇದಿಕೆಯಲ್ಲಿ ತೆಂಗಿನ ಹಿಂಗಾರ ಅರಳಿಸಿ ಕಾರ್ಯಕ್ರಮವನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟಿಸಿದರು.ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಗಿಯೇ ಆಗುತ್ತದೆ.ಈ ಅಶೋಕ್ ರೈ ಇದ್ದಾನಲ್ಲ ಕಳೆದ ವರ್ಷವೇ ನನ್ನನ್ನು ಹಿಡಿದು ಬಿಟ್ಟಿದ್ದ.ನಾನು ಪುತ್ತೂರಿನ ಜನರಿಗೆ ಮೆಡಿಕಲ್ ಕಾಲೇಜು ಕೊಡುತ್ತೇನೆಂದು ಭರವಸೆ ನೀಡಿದ್ದೇನೆ ಎಂದು ಪಟ್ಟು ಹಿಡಿದಿದ್ದರು.ಆ ಸಂದರ್ಭ ನಾನು, ಮುಂದಿನ ವರ್ಷ ಬಜೆಟ್‌ನಲ್ಲಿ ಘೋಷಣೆ ಮಾಡೋಣ ಈ ವರ್ಷ ಬೇಡ ಎಂದಿದ್ದೆ.ಈ ವರ್ಷ ಮತ್ತೆ ಬಜೆಟ್‌ಗಿಂತ ಮುಂಚಿತವಾಗಿ ಬಂದ.ಈ ವರ್ಷ ಮಾಡೇ ಮಾಡುತ್ತೇನೆಂದು ನಾನು ಹೇಳಿದ್ದೆ.ಅದರಂತೆ ಬಜೆಟ್‌ನಲ್ಲಿ ಘೋಷಣೆಯನ್ನೂ ಮಾಡಿದೆ.ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿ ಪ್ರಾರಂಭ ಆಗುತ್ತದೆ.ಅದಕ್ಕೆ ಬೇಕಾದ ಆಸ್ಪತ್ರೆಯನ್ನೂ ಮಾಡುತ್ತೇನೆ.ಇದರ ಬಗ್ಗೆ ಯಾರಿಗೂ ಅನುಮಾನ ಬೇಡ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಮತ್ತು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದು ನಮ್ಮ ಬದ್ಧತೆ. ಇದುವರೆಗೆ 22 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಆಗಿದೆ. ಪುತ್ತೂರಿನಲ್ಲಿ ಪೂರ್ಣಪ್ರಮಾಣದ ಮೆಡಿಕಲ್ ಕಾಲೇಜು ಆಸ್ಪತ್ರೆ ಆಗುತ್ತದೆ ಇದಕ್ಕೆ ಸಂಶಯ ಬೇಡ ಎಂದರು.ನಮ್ಮ ವಿರೋಽಗಳು, ವಿರೋಧ ಪಕ್ಷದವರು ಇದು ಪುಸ್ತಕದಲ್ಲಿ ಮಾತ್ರ ಎಂದು ಸುಳ್ಳು ಹೇಳಿದವರಿದ್ದಾರೆ.ಆದರೆ ನಮ್ಮ ಸರಕಾರ ಏನು ಹೇಳುತ್ತೇವೆಯೋ ಅದನ್ನು ಮಾಡಿಯೇ ತೀರುತ್ತೀವಿ.ನುಡಿದಂತೆ ನಡೆಯುವ ಸರಕಾರ ಯಾವುದಾದರೂ ಇದ್ದರೆ ಅದು ಸಿದ್ದರಾಮಯ್ಯನವರ ಸರಕಾರ,ಕಾಂಗ್ರೆಸ್ ಸರಕಾರ ಎಂದರು.


ದುಡ್ಡಿಲ್ಲದಿದ್ದರೆ ನಿಮಗೆ ಮೆಡಿಕಲ್ ಕಾಲೇಜು ಕೊಡೋಕಾಯ್ತಿತ್ತ:
ಗ್ಯಾರಂಟಿ ಯೋಜನೆ ಮಾಡಿದ ಬಳಿಕ ರಾಜ್ಯ ತಲಾ ಆದಾಯದಲ್ಲಿ ದೇಶದಲ್ಲಿ ನಂಬರ್ ಒನ್ ಆಗಿದೆ.ನಮ್ಮ ಸರ್ಕಾರ 5 ಗ್ಯಾರೆಂಟಿ ಯೋಜನೆ ಜಾರಿಗೆ ಕೊಟ್ಟು ದುಡ್ಡಿಲ್ಲ ಎಂದು ಟೀಕೆ ಮಾಡುವವರಿದ್ದಾರೆ.ಒಂದು ವೇಳೆ ದುಡ್ಡಿಲ್ಲದಿದ್ದರೆ ನಿಮಗೆ ಮೆಡಿಕಲ್ ಕಾಲೇಜು ಕೊಡೋಕಾಗ್ತಿತ್ತ ಎಂದು ಹೇಳಿದ ಸಿದ್ಧರಾಮಯ್ಯ ಅವರು, ಅಶೋಕ್ ರೈ ಅವರು ಎಂ.ಎಲ್‌ಎ ಆದ ಬಳಿಕ 2 ವರ್ಷದಲ್ಲಿ 2 ಸಾವಿರ ಕೋಟಿಗೂ ಮಿಕ್ಕಿ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ.ದುಡ್ಡಿಲ್ಲಾಂದ್ರೆ ಅದನ್ನು ಎಲ್ಲಿಂದ ತಂದ್ರು ಎಂದು ಪ್ರಶ್ನಿಸಿದರಲ್ಲದೆ,ಟೀಕೆ ಮಾಡುವವರು ಸುಮ್ಮನೆ ಟೀಕೆ ಮಾಡುತ್ತಾರೆ ಎಂದರು.


ಸಂವಿಧಾನದ ಆಶಯದಲ್ಲಿ ಸಮಸಮಾಜ ನಿರ್ಮಾಣವಾಗಬೇಕು:
ಸಮಾನತೆಯ ಸಮಾಜ ನಿರ್ಮಾಣ ಆಗಬೇಕಾದರೆ ಉಳ್ಳವರು ಇಲ್ಲದೇ ಇರುವವರಿಗೆ ಸಹಾಯ ಮಾಡುವ ಕೆಲಸ ಆಗಬೇಕು.ಉತ್ಪಾದನೆ ಮಾಡಬೇಕು.ಅದನ್ನು ಎಲ್ಲರಿಗೂ ಹಂಚಬೇಕು.ಇದು ಬಸವಣ್ಣ 12ನೇ ಶತಮಾನದಲ್ಲಿ ಹೇಳಿದ್ದಾರೆ.ಇದನ್ನು ಅಶೋಕ್ ಕುಮಾರ್ ರೈ ಅವರು ತನ್ನ ಉದ್ಯಮದಲ್ಲಿ ಸಂಪಾದನೆಯ ಒಂದು ಭಾಗವನ್ನು ಇನ್ನೊಬ್ಬರಿಗೆ ಕೊಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಾರೆ.ಅವರಿಗೆ ಇದನ್ನು ಮುಂದುವರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ ಸಿಎಂ ಸಿದ್ಧರಾಮಯ್ಯ, ಸಮಸಮಾಜ ನಿರ್ಮಾಣ ಆಗಬೇಕಾದರೆ ಅಸಮಾನತೆಯನ್ನು ಹೋಗಲಾಡಿಬೇಕು.ನಮ್ಮಲ್ಲಿ ಅಸಮಾನತೆ ಇದೆ.ತಾರತಮ್ಯ ಇದೆ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವಾಗ, ಎಲ್ಲಿಯ ತನಕ ಅಸಮಾನತೆ ತೊಡೆದು ಹಾಕಲಾಗುವುದಿಲ್ಲವೋ ಅಲ್ಲಿಯ ತನಕ ಅಸಮಾನತೆಯಿಂದ ಯಾರು ನರಳುತ್ತಿದ್ದಾರೋ ಆ ಜನರೇ ಸ್ವಾತಂತ್ರ್ಯದ ಸೌಧವನ್ನು ನಿರ್ನಾಮ ಮಾಡುತ್ತಾರೆ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು.ಸಂವಿಧಾನ ಅರ್ಥ ಆಗದೆ ಹೋದರೆ ನಾವು ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ.ಸಮಾಜದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಎಲ್ಲ ಧರ್ಮಗಳೂ ಪ್ರೀತಿಸು ಎಂದು ಹೇಳುತ್ತವೆ ಹೊರತು ದ್ವೇಷಿಸು ಎಂದು ಹೇಳುವುದಿಲ್ಲ.ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಮಾಡಬೇಕು. ಕುವೆಂಪು ಅಂದಂತೆ ಸಮಾಜ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದರು.ರಾಜ್ಯದ ಜನರು ಇನ್ನೊಂದು ಮನೆಯಲ್ಲಿ ಅನ್ನಕ್ಕಾಗಿ ಕೈ ಒಡ್ಡಬಾರದು.ರಾಜ್ಯ ಹಸಿವು ಮುಕ್ತವಾಗಬೇಕೆನ್ನುವುದು ಅನ್ನಭಾಗ್ಯದ ಗ್ಯಾರೆಂಟಿಯ ಯೋಜನೆ ಗುರಿ ಎಂದರು.


ದ.ಕ.ಜಿಲ್ಲೆಗೆ ದಕ್ಷ ಅಧಿಕಾರಿಗಳ ನೇಮಕ:
ಜಾತಿ, ಧರ್ಮದ ಹೆಸರಿನಲ್ಲಿ ಜಗಳವಾಡುವವರು ಯಾರು ಎಂದು ಅರ್ಥಮಾಡಿಕೊಳ್ಳಬೇಕಿದೆ.ಕರಾವಳಿಯಲ್ಲಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದ ಸಿಎಂ, ಅಧಿಕಾರಿಗಳು ಮತ್ತು ಜನಪ್ರತಿನಿಽಗಳು ಪರಸ್ಪರ ಅನ್ಯೋನ್ಯತೆಯಿಂದ ಕೆಲಸ ಮಾಡಿದಾಗ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂದರು.ಜಾತಿ, ಧರ್ಮದ ಹೆಸರಿನಲ್ಲಿ ಜಗಳ ಮಾಡುವುದಲ್ಲಿ ನಿಮ್ಮ ಜಿಲ್ಲೆ ನಂ.1 ಇತ್ತು.ಈಗ ಅದಕ್ಕೆಲ್ಲ ಕಡಿವಾಣ ಹಾಕಿದ್ದೇವೆ.ಹೌದಾ ಅಲ್ವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ,ಮೇಲ್ಜಾತಿಯವರ ಮಕ್ಕಳು,ಶ್ರೀಮಂತರ ಮಕ್ಕಳು ಜೈಲಿಗೆ ಹೋಗುವುದು,ಕೊಲೆಯಾಗುವುದನ್ನು ನೋಡಿದ್ದೀರಾ.ಕೊಲೆ ಯತ್ನ ಆಗಿರುವುದನ್ನು ನೋಡಿದ್ದೀರಾ? ಎಲ್ಲಾ ಅಮಾಯಕ ಜನರು ಸಾಯುತ್ತಾರೆ.ಅದಕ್ಕೆ ಕಡಿವಾಣ ಹಾಕುವುದಕ್ಕಾಗಿ ನಾನು ಯಾರ ಮಾತನ್ನೂ ಕೇಳದೆ ನಾನೇ ತೀರ್ಮಾನ ಮಾಡಿಕೊಂಡು ಅಧಿಕಾರಿಗಳನ್ನು ಚೇಂಜ್ ಮಾಡಿ ದಕ್ಷವಾದ ಅಧಿಕಾರಿಗಳನ್ನು ನೇಮಕ ಮಾಡಿದ್ದೇನೆ.ಪೊಲೀಸ್ ಕಮೀಷನರ್, ಎಸ್ಪಿ ಬಂದ ಬಳಿಕ ಸುಧಾರಣೆ ಆಗಿದೆಯೋ ಇಲ್ವೋ ಎಂದು ಮತ್ತೆ ಜನರನ್ನು ಪ್ರಶ್ನಿಸಿದರು.


ಗ್ಯಾರೆಂಟಿಯ ಕಾಪಿ:
5 ಗ್ಯಾರೆಂಟಿ ಯೋಜನೆ ಮಾಡಲು ಆಗುವುದೇ ಇಲ್ಲ ಎಂದು ನರೇಂದ್ರ ಮೋದಿಯವರೇ ಹೇಳಿದ್ದರು.ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದಿದ್ದರು.ಗ್ಯಾರೆಂಟಿ ಯೋಜನೆಗಾಗಿ ಈಗ ನಾವು 1 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ.ದಿವಾಳಿಯಾಗಿದ್ಯಾ.ದಿವಾಳಿ ಆಗಿಲ್ಲ.ಆಗುವುದೂ ಇಲ್ಲ.ವಿರೋಧ ಮಾಡಿದವರೇ ಈಗ ನಮ್ಮ ಗ್ಯಾರೆಂಟಿ ಯೋಜನೆಯನ್ನು ಕಾಪಿ ಹೊಡೆಯುತ್ತಿದ್ದಾರೆ ಎಂದು ಹೇಳಿದ ಸಿದ್ಧರಾಮಯ್ಯ,ಹಿಂದಿನ ಚುನಾವಣೆಯಲ್ಲಿ ಈಗಾಗಲೇ ಒಬ್ಬ ರೈ ಅವರಿಗೆ ಆಶೀರ್ವಾದ ಮಾಡಿದ್ದೀರಿ.ಮುಂದಿನ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ಕ್ಷೇತ್ರಗಳಿಗೂ ಆಶೀರ್ವಾದ ಮಾಡಬೇಕು ಎಂದು ಕರೆ ನೀಡಿದರು.ಜಿಎಸ್‌ಟಿಯನ್ನು ಜಾರಿಗೆ ತಂದವರು ನರೇಂದ್ರ ಮೋದಿ ಈಗ ಮತ್ತೆ ಪರಿಷ್ಕರಣೆ ಮಾಡಿ ದೀಪಾವಳಿ ಗಿಫ್ಟ್ ಕೊಡುತ್ತಿದ್ದಾರೆ.ಈ ಹಿಂದೆ 8 ವರ್ಷ ವಸೂಲಿ ಮಾಡಿದ ತೆರಿಗೆಯನ್ನು ಕೊಡುತ್ತಾರ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.


ಅಧಿಕಾರ ಅನುಭವಿಸುವುದು ಮಾತ್ರವಲ್ಲ ಋಣ ತೀರಿಸುವ ಕೆಲಸ ಆಗಿದೆ:
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಸುಮಾರು 1 ಲಕ್ಷ ಸೇರಿದ ಈ ಕಾರ್ಯಕ್ರಮ ಆಯೋಜನೆ ಆಗಿರುವುದು ಸಣ್ಣ ವಿಷಯಲ್ಲ.ದೊಡ್ಡ ಕಾರ್ಯಕ್ರಮ ಮಾಡಬೇಕಾದರೆ ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ ಮೂಲಕ ಆಗಬೇಕಾಗುತ್ತದೆ.ಆದರೆ ಪುತ್ತೂರಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅಶೋಕ್ ಕುಮಾರ್ ರೈ ಅವರ ಸ್ವಂತ ಶಕ್ತಿಯಿಂದ.ಇದೊಂದು ಇತಿಹಾಸ ಆಗಿದೆ.ಇದೊಂದು ಜನರ ನಡುವೆ ಪ್ರೀತಿ ವಿಶ್ವಾಸ ಮೂಡಿಸುವ ಕಾರ್ಯಕ್ರಮ ಎಂದರು.ರಾಜಕೀಯದಲ್ಲಿ ಅಧಿಕಾರ ಅನುಭವಿಸುವುದು ಒಂದೇ ಗುರಿಯಲ್ಲ.ಜನರ ಋಣ ತೀರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯ ಮಹತ್ವದ್ದಾಗಿದೆ ಎಂದ ಅವರು,ಇವತ್ತು ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಯ ಮೂಲಕ ಸರಕಾರದ ಸಂಪತ್ತನ್ನು ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದೇವೆ.ನಮ್ಮ ಸರಕಾರದ ಕಾರ್ಯಕ್ರಮವನ್ನು ನೋಡಿ ಟೀಕೆ ಮಾಡುವವರು ಕೂಡಾ ಕಾಪಿ ಮಾಡಿ ತಮ್ಮ ತಮ್ಮ ರಾಜ್ಯದಲ್ಲೂ ಇದನ್ನು ಮಾಡುತ್ತಿದ್ದಾರೆ.ದೇಶದಲ್ಲಿ ಇವತ್ತು ಅತೀ ಹೆಚ್ಚು ಬೆಳವಣಿಗೆ ಆಗುತ್ತಿರುವ ರಾಜ್ಯ ಕರ್ನಾಟಕ. ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುವ ಸರಕಾರ ಕರ್ನಾಟಕ,ವಿದೇಶದಲ್ಲಿ ಬರುವ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಬರುತ್ತಿರುವ ರಾಜ್ಯದಲ್ಲಿ ನಂ 1 ರಾಜ್ಯ ಕರ್ನಾಟಕ.ಜಿಡಿಪಿ ಕ್ಯಾಪಿಟಲ್ ದೇಶದಲ್ಲೇ ಪ್ರಥಮ ನಮ್ಮ ರಾಜ್ಯ.ಇದನ್ನೆಲ್ಲ ನೋಡಿದಾಗ ರಾಜ್ಯ ಎಲ್ಲೂ ದಿವಾಳಿ ಆಗುತ್ತಿಲ್ಲ.ಬದಲಾಗಿ ರಾಜ್ಯದ ಹಣ ಜನರಿಗೆ ತಲುಪಿಸಿದ್ದೇವೆ ಹೊರತು ಬೇರೆಲ್ಲೂ ಕಳಿಸಿಲ್ಲ ಎಂದರು.


ಎರಡು ವರ್ಷದಲ್ಲಿ ಪುತ್ತೂರು ಕ್ಷೇತ್ರಕ್ಕೆ 2006 ಕೋಟಿ ರೂ.ಅನುದಾನ:
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷ 6 ಕೋಟಿ ಅನುದಾನವನ್ನು ನನ್ನ ಟ್ರಸ್ಟ್ ಮೂಲಕ ಬಡವರಿಗಾಗಿ ವಿನಿಯೋಗಿಸಲಾಗುತ್ತಿದೆ.ಈ ಸಮಾಜದಲ್ಲಿ ಕಷ್ಟದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಸೇವೆ ಮಾಡುವ ಕೆಲಸ ಮಾಡುತ್ತೇವೆ.1 ರೂಪಾಯಿ ಯಾರಲ್ಲೂ ಡೊನೇಷನ್ ತೆಗೆದುಕೊಂಡು ಮಾಡುವುದಿಲ್ಲ.ಇವತ್ತಿನ ತನಕ ಈ ಕಾರ್ಯಕ್ರಮಕ್ಕೆ 4 ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ.ಯಾವುದೇ ಗುತ್ತಿಗೆದಾರ, ಅಧಿಕಾರಿ, ಸಮಾಜದಿಂದ ಒಂದು ಪೈಸೆಯನ್ನೂ ಕೇಳದೆ ನನ್ನ ಉದ್ಯಮದಿಂದ ಬಂದ ಒಂದಂಶ ಬಡವರಿಗೆ ಹೋಗಬೇಕಂಬ ದೃಷ್ಟಿಯಿಂದ, ನಾನು ಬಂದ ಹಿಂದಿನ ದಾರಿ ನೆನಪಿಸಲು ಈ ಕಾರ್ಯಕ್ರಮ ಮಾಡುತ್ತೇನೆ ಎಂದರು.ನಾನು ಜೀವನದಲ್ಲಿ ಅತ್ಯಂತ ಕಡು ಬಡತನ ಕಂಡುಕೊಂಡು ಇಲ್ಲಿ ನಿಲ್ಲುವ ಭಾಗ್ಯ ಬಡವರ ಆಶೀರ್ವಾದದಿಂದ ಆಗಿದೆ.ಜನರಿಗೆ ನಿವೇಶನ ಕೊಡುವ ಕೆಲಸ, ಐಎಎಸ್ ಕೋಚಿಂಗ್, ಮೆಡಿಕಲ್ ಕ್ಯಾಂಪ್ ಮಾಡುತ್ತಾ ಬಂದಿದ್ದೇವೆ.ಮುಂದೆ 250 ವಿಧವೆಯರಿಗೆ ನಿವೇಶನ ನೀಡಿ ಮನೆ ಕಟ್ಟುವ ಕೆಲಸ ಮಾಡುತ್ತಿದ್ದೇವೆ.ಅದರ ಉದ್ಘಾಟನೆ ಮತ್ತು ಹಂಚಿಕೆಯನ್ನು ಮುಖ್ಯಮಂತ್ರಿಯವರ ಮೂಲಕವೇ ಮಾಡುತ್ತೇನೆ ಎಂದು ಹೇಳಿದ ಅವರು, ಶಾಸಕನಾದ ಬಳಿಕ ಒಂದಷ್ಟು ಬೆಂಚ್ ಮಾರ್ಕ್ ಮಾಡುವ ಕನಸು ಕಂಡಿದ್ದೇನೆ.ಪುತ್ತೂರಿನ ಅಭಿವೃದ್ಧಿಗೆ ವಿಧಾನಸಭಾ ಕ್ಷೇತ್ರಕ್ಕೆ 1006 ಕೋಟಿಯ ಕುಡಿಯುವ ನೀರು, ಅದಕ್ಕೆ ಮುಖ್ಯಮಂತ್ರಿಯವರು ಈಗಾಗಲೇ 600 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.ಬೇರೆ ಬೇರೆ ಅಭಿವೃದ್ಧಿಗೆ ಮಡಿಕಲ್ ಕಾಲೇಜು ಆಗಲಿದೆ.ಇದು ಕಾರ್ಯಗತ ಪುಸ್ತಕದಲ್ಲಿ ಮಾತ್ರ ಎಂದು ಹೇಳಿದವರಿದ್ದಾರೆ.ಆದರೆ ಸ್ವಿಚ್ ಒತ್ತಿದ ಕೂಡಲೇ ಉರಿಯುವುದು ಲೈಟ್ ಮಾತ್ರ ಎಂದು ಟೇಕೆ ಮಾಡುವವರಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಮೆಡಿಕಲ್ ಕಾಲೇಜು ಕೊಟ್ಟ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಆಸ್ಪತ್ರೆಗಳಿವೆ.ಆದರೆ ಸರಿಯಾದ ವ್ಯವಸ್ಥೆ ಇಲ್ಲ.ಇದಕ್ಕಾಗಿ ಮೆಡಿಕಲ್ ಕಾಲೇಜು ಅಗತ್ಯ ಎಂದರು.ಪುತ್ತೂರಿಗೆ ಆರ್‌ಟಿಒ ಟ್ರ್ಯಾಕ್, ಮುಂಡೂರಿನಲ್ಲಿ 15 ಎಕ್ರೆ ಜಾಗದಲ್ಲಿ 9.5 ಕೋಟಿ ರೂ.ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ, ಈ ಶೈಕ್ಷಣಿಕ ವರ್ಷದಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭಗೊಳ್ಳಲಿದೆ. ತುಳು ಭಾಷೆ ರಾಜ್ಯದ ಹೆಚ್ಚುವರಿ ಭಾಷೆ ಆಗಬೇಕಂಬ ಕನಸು ಇದೆ.ಒಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಎರಡು ವರ್ಷದಲ್ಲಿ 2006 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.ತನ್ನ ಭಾಷಣದ ಕೊನೆಯಲ್ಲಿ, ಇವತ್ತು ಪೊಲೀಸ್ ಅಧಿಕಾರಿಗಳ ಕೆಲವೊಂದು ಕಾನೂನಿನ ಚೌಕಟ್ಟಿನಿಂದಾಗಿ ಸಭೆಯಲ್ಲಿ ಸರಿಯಾಗಿ ಕುಡಿಯುವ ನೀರು ಒದಗಿಸಲೂ ಸಾಧ್ಯವಾಗಿಲ್ಲ.ಎಲ್ಲರೂ ಸಮಾಧಾನಿಸಿಕೊಳ್ಳಿ ಎಂದು ವಿನಂತಿಸಿದರು.


ಕ್ರಿಯಾಶೀಲತೆಗೆ ಇನ್ನೊಂದು ಹೆಸರು ಅಶೋಕ್ ಕುಮಾರ್ ರೈ:
ಒಡಿಯೂರು ಶ್ರೀ ಕ್ಷೇತ್ರದ ಗುರುದೇವಾನಂದ ಸ್ವಾಮೀಜಿಯವರು ಮಾತನಾಡಿ, ಎಲ್ಲಾ ವಿಚಾರದಲ್ಲೂ ಅರ್ಹವಾದ ಸಾಮರ್ಥ್ಯವನ್ನು ಹೊಂದಿದವರು ಅಶೋಕ್ ಕುಮಾರ್ ರೈ.ಅವರಿಗೆ ಕೊಟ್ಟ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.ಭಾರತೀಯ ಪರಂಪರೆಯಲ್ಲಿ ಮಾತೃದೇವೋಭವಕ್ಕೆ ಪ್ರಾಮುಖ್ಯತೆಯಿದೆ.ಮಾತ-ಪಿತೃಗಳಿಗೆ ಕೊಡುವ ಗೌರವ ಅಶೋಕ್ ರೈ ಅವರ ಮೂಲಕ ನೋಡಲು ಸಾಧ್ಯ.ಇದರ ಜೊತೆಗೆ ಅವರ ಶ್ರೇಯಸ್ಸಿನ ಹಿಂದೆ ಅವರ ಧರ್ಮ ಪತ್ನಿಯ ಸಹಕಾರವೂ ಇದೆ.ಅಶೋಕ್ ಕುಮಾರ್ ರೈ ಅವರಲ್ಲಿ ಧರ್ಮ ಶ್ರದ್ದೆ ಇದೆ.ಧರ್ಮ ಶ್ರದ್ದೆಯೊಂದಿಗೆ ತನ್ನನ್ನು ತಾನು ರಾಜಕೀಯಕ್ಕೆ ತೊಡಗಿಸಿಕೊಂಡಿದ್ದಾರೆ.ಪುತ್ತೂರಿಗೆ ಮೆಡಿಕಲ್ ಕಾಲೇಜು ಮೂಲಕ ಅವರ ಪರಿಶ್ರಮ ಸಾಕಾರವಾಗಿದೆ.ಅವರು ಕ್ರಿಯಾಶೀಲತೆಗೆ ಇನ್ನೊಂದು ಹೆಸರು.ಜನಪ್ರಿಯವಾದ ಕಂಬಳವನ್ನು ಬೆಂಗಳೂರಿಗೆ ಪರಿಚಯಿಸಿದ ಕೀರ್ತಿ ಅಶೋಕ್ ಕುಮಾರ್ ರೈ ಅವರದ್ದು.ಇವತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ತುಳು ಭಾಷೆ ರಾಜ್ಯದ 2ನೇ ಭಾಷೆಯಾಗಿ ಘೋಷಣೆಯಾಗಬೇಕು.ಅದಕ್ಕೆ ಅವರು ಪ್ರಯತ್ನ ಮಾಡುತ್ತಾರೆ ಎಂಬುದು ಸಂತಸ.ವಿಧಾನಸೌಧದಲ್ಲಿಯೂ ಯುಟಿ ಖಾದರ್ ಅವರ ಜೊತೆ ತುಳು ಮಾತನಾಡುವುದನ್ನು ನೆನಪಿಸಬೇಕು. ದೇಶದ ಒಳಿತಿಗಾಗಿ ಸಂಘಟಿತವಾಗಬೇಕಾದ ಅಗತ್ಯವಿದೆ.ಎಲ್ಲರೂ ಭಾರತಿಯ ಧರ್ಮ ಅನ್ನುವಂಥದ್ದನ್ನು ಧಾರಣೆಗೆ ಅನುಷ್ಠಾನ ಮಾಡಬೇಕು.ವ್ಯಕ್ತಿ ವಿಕಾಸಕ್ಕೆ ಪೂರಕವಾಗಿರುವ ಜನಮನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದ ಶ್ರೀಗಳು, ಅಶೋಕ್ ಕುಮಾರ್ ರೈ ಅವರಿಗೆ ಶಾಲು ಹಾಕಿ ಗೌರವಿಸಿದರು.


ಸಂಕಷ್ಟದಲ್ಲಿರುವವರ ಕುರಿತು ತಕ್ಷಣ ಸ್ಪಂದಿಸುವ ಕೆಲಸ:
ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಅಶೀರ್ವಚನ ನೀಡಿ,ಸಮಾಜದಲ್ಲಿ ಸೇವೆ, ತ್ಯಾಗ ಸಮರ್ಪಣಾ ಭಾವ ಇದ್ದಾಗ ಎಲ್ಲವೂ ಯಶಸ್ವಿಯಾಗಿ ನಡೆಯುತ್ತದೆ. ಸಂಕಷ್ಟದಲ್ಲಿರುವ ಕುರಿತು ಕರೆ ಮಾಡಿದಾಗ ತಕ್ಷಣ ಸ್ಪಂದಿಸುವುದು ಶಾಸಕರ ಮಹತ್ವದ ಕೆಲಸವಾಗಿದೆ.ವಿಶ್ವಶಾಂತಿಯನ್ನು ಭಯಸಿದ ದೇಶವಿದು.ಅಶೋಕಣ್ಣ ಅವರು ರಾಜಕೀಯದ ಮೊದಲೇ ಅವರ ಮೂಲಕ ಎಷ್ಟೋ ಕಾರ್ಯ ಮಾಡಿದ್ದೇವೆ.ಎಷ್ಟೋ ದೇವಸ್ಥಾನದ ಪುನರುತ್ಥಾನದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.


ನಂಬಿದವರನ್ನು ಕೈ ಬಿಟ್ಟ ವ್ಯಕ್ತಿಯಲ್ಲ:
ಮಾಡನ್ನೂರು ಮಸೀದಿಯ ಧರ್ಮಗುರು ಎಸ್.ಬಿ.ದಾರಿಮಿ ಅವರು ಮಾತನಾಡಿ ಪುತ್ತೂರಿನ ಸಾಂಸ್ಕೃತಿಕ ಹಬ್ಬ ಅಶೋಕ ಜನಮನವಾಗಿ ಕಾಣುತ್ತಿದೆ.ಜನರಿಗೆ ಉಪಕಾರ ಮಾಡಿದರೂ ಅಪಾರ್ಥ ಮಾಡುವ ಸಂದರ್ಭವಿದೆ.ಈ ನಿಟ್ಟಿನಲ್ಲಿ ಅಶೋಕ್ ಕುಮಾರ್ ರೈ ಬಹಳಷ್ಟು ಕಷ್ಟಪಟ್ಟು ಉತ್ತಮ ಕೆಲಸ ಮಾಡುತ್ತಿದ್ದಾರೆ.ಇವರು ನಂಬಿದವರನ್ನು ಕೈ ಬಿಟ್ಟ ವ್ಯಕ್ತಿಯಲ್ಲ.ಅವರು ಮುಂದೆಯೂ ನಮ್ಮ ಕ್ಷೇತ್ರಕ್ಕೆ ಶಾಸಕರಾಗಿ ಬರಬೇಕು ಎಂದರು.


ನಾವೆಲ್ಲ ದೇವರು ಕೊಟ್ಟ ಬೆಳಕಿನ ದಾರಿಯಲ್ಲಿ ನಡೆಯೋಣ:
ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮ ಗುರು ರೆ.ಫಾ.ಲಾರೆನ್ಸ್ ಮಸ್ಕರೇನ್ಹಸ್ ಅವರು ಮಾತನಾಡಿ ದೇವರು ಬೆಳಕು ಕೊಟ್ಟಿದ್ದಾರೆ ನಾವೆಲ್ಲ ಬೆಳಕಿನ ಮಕ್ಕಳಾಗಿದ್ದೇವೆ.ದೇವರ ಇಚ್ಚೆಯಂತೆ ಸತ್ಯ, ನ್ಯಾಯ ನೀತಿಯನ್ನು ಆರಿಸಿಕೊಳ್ಳಬೇಕು.ನಾವೆಲ್ಲ ಬೆಳಕಿನ ದಾರಿಯಲ್ಲಿ ನಡೆಯೋಣ. ದೇವರ ಮಕ್ಕಳಾಗಿ ಬೆಳೆಯೋಣ. ನಮ್ಮ ಶಾಸಕರು ಜನರ ಒಳಿತಿಗಾಗಿ ದುಡಿಯುತ್ತಿದ್ದಾರೆ ಎಂದರು.


ಮುಖ್ಯಮಂತ್ರಿ, ಸಚಿವರಿಗೆ ಸನ್ಮಾನ:
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡುರಾವ್ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸನ್ಮಾನ ಮಾಡಿದರು.ಮುಖ್ಯಮಂತ್ರಿಯವರಿಗೆ ಬೆಳ್ಳಿಯ ನೊಗ, ಕಂಬಳದ ಸಾಂಕೇತಿಕ ಬೆತ್ತ, ಬಾನೆತ್ತರದ ಸನ್ಮಾನ ಪತ್ರ, ಪೇಟ, ಶಲ್ಯವನ್ನು ಹಾಕಿ ಗೌರವಿಸಲಾಯಿತು.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪೇಟವನ್ನು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತೊಡಿಸಿದರು.ಬಂಟರ ಸಂಘಕ್ಕೆ ಸರಕಾರದಿಂದ ಜಾಗ ಕೊಡಿಸಿದ್ದಕ್ಕಾಗಿ ಸಿಎಂ ಸಿದ್ಧರಾಮಯ್ಯ ಅವರಿಗೆ ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಜಿ.ಪಂ.ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಶಾಲು ಹೊದಿಸಿ ಗೌರವಿಸಿದರು.


ಬಡ ಸಾಧಕರಿಗೆ ಸನ್ಮಾನ:
ಎಲೆಮರೆ ಕಾಯಿಯಂತೆ ಅಳಿಲು ಸೇವೆ ಮಾಡುತ್ತಿರುವ ಬಡ ಸಾಧಕರಾದ ವಿಕಲ ಚೇತನ ನೇಹಾ ರೈ ನೆಲ್ಲಿಕಟ್ಟೆ, ಶಾಲಿನಿ ಕುತ್ಯಾಳ, ಇನಾಸ್ ವೇಗಸ್ ಬನ್ನೂರು, ಜಗತ್ಯಾಂಪಾಲ ಭಂಡಾರಿ, ಮಹಾಬಲ ಭಟ್ ಮುರ್ವ ನಡುಮನೆ, ಕೆ.ಪಿ ಮಹಮ್ಮದ್ ನಿನ್ನಿಕಲ್ಲು, ಸುಧಾಕರ ಪೂಜಾರಿ ಬಡಕ್ಕೋಡಿ, ದಾಮೋದರ್ ಎನ್ ಮಾಲಡ್ಕ, ಅರುಣ್ ಬಿ, ಎಂ ವಾಸುದೇವ ಆಚಾರ್ಯ, ಸುರೇಶ್ ಭಟ್ ಬಲ್ನಾಡು, ಮಹಮ್ಮದ್ ಬೊಳ್ಳಾಡಿ, ಲಕ್ಷ್ಮೀರಾಜೇಶ್, ಚಂದ್ರ ನಲಿಕೆ ಇದ್ಪಾಡಿ, ಗುರಿಕಾರ ಎಂ.ಕೆ.ಕುಕ್ಕಾಜೆ, ಸುಂದರ, ನಾರಾಯಣ ಆಚಾರ್, ಹೇಮಲತಾ, ಎಮ್ ನಾರ್ಣಪ್ಪ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.


ಗೂಡುದೀಪ ಸ್ಪರ್ಧೆಯ ಬಹುಮಾನ:
ಗೂಡುದೀಪ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಭಾ ಕಾರ್ಯಕ್ರಮದ ಬಳಿಕ ಬಹುಮಾನ ವಿತರಿಸಲಾಯಿತು.ಸೀನಿಯರ್ ವಿಭಾಗದಲ್ಲಿ ರಕ್ಷಿತ್ ಕುಮಾರ್ (ಪ್ರ), ಅಂಕಿತ್ ಮತ್ತು ಅಭಿಜಿತ್ ಶೆಟ್ಟಿ(ದ್ವಿ), ಉಮೇಶ್ ಮತ್ತು ಜಗದೀಶ್ ಅಮೀನ್ (ತೃ), ಜ್ಯೂನಿಯರ್ ವಿಭಾಗದಲ್ಲಿ ಶ್ರಾವಣಿ ನಿಡ್ಪಳ್ಳಿ(ಪ್ರ), ಯಕ್ಷಿತ್(ದ್ವಿ), ಪ್ರಶಾಂತ್ ಬೀರಮಲೆ(ತೃ) ಆಲಂಕಾರಿಕ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕ ದಯಾನಂದ ರೈ ಕೋರ್ಮಂಡ, ಗೂಡುದೀಪ ಸ್ಪರ್ಧೆಯ ಸಂಚಾಲಕ ಜಯಪ್ರಕಾಶ್ ಬದಿನಾರು ವಿಜೇತರಿಗೆ ನಗದು ಬಹುಮಾನ ವಿತರಿಸಿದರು. ಚಿತ್ರಕಲಾ ಶಿಕ್ಷಕರಾದ ಪ್ರಸಾದ್ ಕೊಯಿಲ, ಪ್ರಕಾಶ್ ವಿಟ್ಲ, ಸುಂದರ್ ಬೆಳ್ಳಿಪ್ಪಾಡಿ ತೀರ್ಪುಗಾರರಾಗಿದ್ದರು. ಗೂಡುದೀಪ ಸ್ಪರ್ಧೆಯನ್ನು ರಶ್ಮಿನಿರಂಜನ್ ರೈ, ಜಯಪ್ರಕಾಶ್ ಬದಿನಾರು ನಿರ್ವಹಿಸಿದರು.


ರೀಲ್ಸ್ ಮಾಡಿ ಪ್ರಚಾರ ಮಾಡಿದ ತಂಡಕ್ಕೆ ಸನ್ಮಾನ:
ಅಶೋಕ್ ಜನಮನದ ರೀಲ್ಸ್ ಮಾಡಿ ಪ್ರಚಾರ ಮಾಡಿದ ಕೌಡಿಚ್ಚಾರ್ ನಿಶು ಸ್ಟುಡಿಯೋ ಮಾಲಕ ನವೀನ್ ಪಕ್ಕಳ ನೇತೃತ್ವದ ತಂಡಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಸನ್ಮಾನಿಸಿದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ನಿರಂಜನ್ ರೈ ಮಠಂತಬೆಟ್ಟು ವೇದಿಕೆ ಕಾರ್ಯಕ್ರಮ ನಿರೂಪಿಸಿದರು.ಮನ್ಮಥ ಶೆಟ್ಟಿ ವೇದಿಕೆಯ ಕೆಳಗಡೆ ಕಾರ್ಯಕ್ರಮ ನಿರ್ವಹಿಸಿದರು.ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ,ಐವನ್ ಡಿ’ಸೋಜ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ,ರಮಾನಾಥ ರೈ,ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಆರ್ ಪೂಜಾರಿ, ಮಿಥುನ್ ರೈ, ರಕ್ಷಿತ್ ಶಿವರಾಮ್, ಇನಾಯತ್ ಆಲಿ, ಎಂ.ಎಸ್ ಮಹಮ್ಮದ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಧಾರ್ಮಿಕ ಪರಿಸತ್‌ನ ಸದಸ್ಯೆ ಮಲ್ಲಿಕಾ ಪಕಳ, ಪ್ರಮುಖರಾದ ಅಬ್ದುಲ್ ಗ-ರ್, ಸದಾಶಿವ ಉಲ್ಲಾಳ್, ಶಾಲೆಟ್ ಪಿಂಟೋ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಸಂಯೋಜಕ,ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯ ನಿಹಾಲ್ ಪಿ ಶೆಟ್ಟಿ, ದಿವಾಕರ ದಾಸ್, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಗ್ಯಾರೆಂಟಿ ಯೋಜನೆ ತಾಲೂಕು ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ., ಮುರಳೀಧರ ರೈ ಮಠಂತಬೆಟ್ಟು, ಪ್ರವೀಣ್‌ಚಂದ್ರ ಆಳ್ವ, ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಉಷಾ ಅಂಚನ್, ಟಿ.ಎಮ್.ಶಹೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಆರ್ ಶೆಟ್ಟಿ ಸ್ವಾಗತಿಸಿದರು.ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ ವಂದಿಸಿದರು.ಕವಿತಾ ದಿನಕರ್ ಮತ್ತು ಪವಿತ್ರ ರೂಪೇಶ್ ಬಳಗ ಪ್ರಾರ್ಥಿಸಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.ಸಭೆಯ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಸಭೆಗೆ ಆಗಮಿಸಿದ ಗಣ್ಯರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಗುಲಾಬಿ ಹೂವನ್ನು ನೀಡಿ ಕಾರ್ಯಕ್ರಮಕ್ಕೆ ಬರ ಮಾಡಿಕೊಂಡರು.


ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ:
ಅಶೋಕ್ ಕುಮಾರ್ ರೈ ಅವರ ತಾಯಿ ಗಿರಿಜಾ ಎಸ್ ರೈ ಅವರು ಸಾಂಸ್ಕೃತಿಕ ವೇದಿಕೆಯನ್ನು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭ ಅಶೋಕ್ ಕುಮಾರ್ ರೈ ಅವರು ತಾಯಿಯ ಪಾದಕ್ಕೆ ಎರಗಿ ಕಾರ್ಯಕ್ರಮದ ಯಶಸ್ವಿಗೆ ಆಶೀರ್ವಾದ ಪಡೆದು,ಅವರಿಗೆ ಶಲ್ಯ ಹೊದೆಸಿ ಗೌರವಿಸಿದರು.ಶಾಸಕ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ ಅಶೋಕ್ ಕುಮಾರ್ ರೈ, ಮಕ್ಕಳಾದ ರಿಽ ರೈ, ಶೃತಿ ರೈ, ಸಹೋದರ ಸುಬ್ರಹ್ಮಣ್ಯ ರೈ, ರಾಜ್‌ಕುಮಾರ್ ರೈ, ವಿಶಾಲಕ್ಷಿ ಪಿ ರೈ, ನಳಿನಿ ಪಿ ಶೆಟ್ಟಿ,ನಮೃತ ಪ್ರೀತಂ ಶೆಟ್ಟಿ, ನಿಹಾಲ್ ಪಿ ಶೆಟ್ಟಿ, ರೈ ಎಸ್ಟೇಟ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಳಿಕ ವೇದಿಕೆಯಲ್ಲಿ ಪುನೀತ್ ಆರ್ಕೇಸ್ಟ್ರ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.ಚಂದ್ರಶೇಖರ್ ಹೆಗ್ಡೆ ಮತ್ತು ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿನೋದ್ ಆಚಾರ್ಯ, ಶಿವಪ್ರಿಯ, ರಶ್ಮಿತಾ ಕಲಾವಿದರು ಹಾಡನ್ನು ಹಾಡಿದರು.ಮಧ್ಯಾಹ್ನದ ಬಳಿಕದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಳೆಯ ಕಾರಣಕ್ಕಾಗಿ ರದ್ದುಪಡಿಸಲಾಯಿತು.‌


ಬೆಳಿಗ್ಗೆ ಗಣಪತಿ ಹೋಮ:
ಬೆಳಿಗ್ಗೆ ಅಶೋಕ್ ರೈ ಜನ-ಮನ ವೇದಿಕೆಯಲ್ಲಿ ಅರ್ಚಕ ಹರಿಪ್ರಸಾದ್ ಬನಾರಿ ಅವರ ನೇತೃತ್ವದಲ್ಲಿ ಗಣಪತಿ ಹೋಮ ನಡೆಯಿತು.ಅಶೋಕ ಜನಮನ ಕಾರ್ಯಕ್ರಮ ಸಮಿತಿ ಪ್ರಮುಖರಾದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ಈಶ್ವರ ಭಟ್ ಪಂಜಿಗುಡ್ಡೆ ಸಂಕಲ್ಪ ಕಾರ್ಯದಲ್ಲಿ ಭಾಗವಹಿಸಿದ್ದು,ಕೊನೆಯಲ್ಲಿ ಪೂರ್ಣಾಹುತಿಯ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ, ಅವರ ತಾಯಿ ಗಿರಿಜಾ ಎಸ್ ರೈ,ಪತ್ನಿ ಸುಮಾ ಅಶೋಕ್ ರೈ, ಮಕ್ಕಳು ಪಾಲ್ಗೊಂಡರು.

ಸುದ್ದಿಯಲ್ಲಿ ನಿರಂತರ ನೇರಪ್ರಸಾರ ಲೈವ್ ಚಾನೆಲ್‌ನಲ್ಲಿ
ಅಶೋಕ ಜನಮನ ಕಾರ್ಯಕ್ರಮದ ವಿವಿಧ ಆಯಾಮಗಳ ಸಮಗ್ರ ನೇರ ಪ್ರಸಾರವು ಸುದ್ದಿ ಲೈವ್ ಯುಟ್ಯೂಬ್ ಚಾನೆಲ್ ಮತ್ತು 92 ಕೇಬಲ್ ಚಾನೆಲ್‌ನಲ್ಲಿ ಪ್ರಸಾರಗೊಂಡಿತು.. ಬೆಳಿಗ್ಗೆ ಗಣಹೋಮದಿಂದ ಆರಂಭಗೊಂಡು, ಸಾಂಸ್ಕೃತಿಕ, ಉದ್ಘಾಟನೆ, ಸಿಎಂ ಆಗಮನ, ಸಭಾ ಕಾರ್ಯಕ್ರಮ, ವಸ್ತ್ರ ವಿತರಣೆ, ಊಟದ ಕೌಂಟರ್ ಸೇರಿದಂತೆ ಕಾರ್ಯಕ್ರಮದ ಬಗ್ಗೆ ಸೇರಿದ ಜನಸ್ತೋಮದ ಅಭಿಪ್ರಾಯಗಳನ್ನು ನೇರ ಪ್ರಸಾರದ ಮೂಲಕ ನೀಡಲಾಯಿತು. ಅಲ್ಲದೇ ಕ್ರೀಡಾಂಗಣ ಮತ್ತು ಜನರು ಆಗಮಿಸುವ ಡ್ರೋನ್ ದೃಶ್ಯಾವಳಿಗಳನ್ನು ನೇರ ಪ್ರಸಾರದಲ್ಲಿ ನೀಡಲಾಯಿತು. ಬೆಳಿಗ್ಗಿನಿಂದಲೇ ನೇರ ಪ್ರಸಾರವನ್ನು ವ್ಯಾಪಕ ಸಂಖ್ಯೆಯಲ್ಲಿ ವೀಕ್ಷಿಸಿದ ಜನತೆ ಸಿಎಂ ಆಗಮನದ ಬಳಿಕವಂತೂ ಸಾವಿರಾರು ಮಂದಿ ನೇರ ಪ್ರಸಾರ ವೀಕ್ಷಿಸಿದರು. ಇಡೀ 8.43 ಗಂಟೆಗಳ ಒಟ್ಟು ಕಾರ್ಯಕ್ರಮವನ್ನು ಸುದ್ದಿ ಲೈವ್ ಯುಟ್ಯೂಬ್ ಚಾನೆಲ್‌ನಲ್ಲಿ 1 ಲಕ್ಷದ 10 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದರು.


ಸುದ್ದಿ ನ್ಯೂಸ್ ಚಾನೆಲ್‌ನಲ್ಲಿ (suddi news puttur)ವಿವಿಧ ಸ್ಟೋರಿಗಳು
ಕಾರ್ಯಕ್ರಮದ ಬಗೆಗಿನ ವಿವಿಧ ವಿಡಿಯೋ ಸ್ಟೋರಿಗಳು ಕ್ಷಣ ಕ್ಷಣದಲ್ಲಿ ಸುದ್ದಿ ನ್ಯೂಸ್ ಪುತ್ತೂರು (suddi news puttur) ಚಾನೆಲ್‌ನಲ್ಲಿ ಪ್ರಸಾರಗೊಂಡವು. ಮೊದಲ ಸ್ಟೋರಿಯಾಗಿ 75 ಸಾವಿರ ದೋಸೆ, ಊಟದ ವ್ಯವಸ್ಥೆ ಬಗ್ಗೆ ಗ್ರೌಂಡ್ ರಿಪೋರ್ಟ್, ಜನರ ನೋಂದಣಿ ಪ್ರಕ್ರಿಯೆ, ಉಚಿತ ಅಟೋ ರಿಕ್ಷಾ ಸೇವೆ, ಒಡಿಯೂರು ಶ್ರೀಗಳ ಭಾಷಣ, ಸಿಎಂ ಗೆ ಸಾಂಪ್ರದಾಯಿಕ ಸ್ವಾಗತ, ಸುದ್ದಿ ಬಿಡುಗಡೆ ಪತ್ರಿಕೆ ಓದಿದ ಸಿಎಂ, ಅಶೋಕ್ ರೈಯವರ ಭಾಷಣ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಷಣ, ಸಿಎಂ ಕೈ ಸೇರಿದ ಬೆಳ್ಳಿಯ ಬೆತ್ತ, ಬೆಳ್ಳಿ ನೊಗ, ಸಿಎಂ ಸಿದ್ದರಾಮಯ್ಯನವರ ಭಾಷಣ, ಗೂಡುದೀಪ ಸ್ಪರ್ಧೆ, ಹಸುಳೆಯನ್ನು ಹೆತ್ತವರಿಗೆ ಒಪ್ಪಿಸಿದ ಸಂಘಟಕರು, ಕ್ರೈಸ್ತ ಧರ್ಮಗುರು ಫಾ. ಲಾರೆನ್ಸ್ ಮಸ್ಕರೇನ್ಹಸ್, ಮುಸ್ಲಿಂ ಧರ್ಮಗುರು ಎಸ್.ಬಿ. ದಾರಿಮಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿಯವರ ಆಶೀರ್ವಚನ – ಸ್ಟೋರಿಗಳು ಅತ್ಯಧಿಕ ಸಂಖ್ಯೆಯ ವೀಕ್ಷಣೆಯೊಂದಿಗೆ ಪ್ರಸಾರಗೊಂಡವು.
ಎಲ್‌ಇಡಿ ಪರದೆ ಮೂಲಕ ವೀಕ್ಷಣೆ: ಜರ್ಮನ್ ಟೆಂಟ್ ಸಭಾಂಗಣದ ನಂತರ ಪೆಂಡಾಲ್ ಹಾಕಲಾಗಿದ್ದು, ಪೆಂಡಾಲ್ ಅಡಿಯಲ್ಲಿ ಕುಳಿತು ಸಭಾ ವೇದಿಕೆಯ ಕಾರ್ಯಕ್ರಮವನ್ನು ಎಲ್‌ಇಡಿ ಸ್ಕ್ರೀನ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು

ಸಾಂಪ್ರದಾಯಿಕ ತೆಂಗಿನಗರಿಯಿಂದ ವೇದಿಕೆ ಸಜ್ಜು
ತೆಂಗಿನ ಗರಿಯಿಂದ ವೇದಿಕೆಯನ್ನು ಅಲಂಕೃತಗೊಳಿಸಲಾಗಿತ್ತು.ತೆಂಗಿನ ಗರಿಯಿಂದ ವೇದಿಕೆಯ ಕೆಳಗೆ ಗಣಪತಿ ಮೂರ್ತಿ, ಹಂಸ, ದೀಪ ಸೇರಿದಂತೆ ವಿವಿಧ ಆಕೃತಿಗಳನ್ನು ಮಾಡಿ ಅಲಂಕೃತಗೊಳಿಸಲಾಗಿತ್ತು.ಒಟ್ಟು ವೇದಿಕೆಯನ್ನು ಸಾಂಪ್ರದಾಯಿಕವಾಗಿ ಸುಂದರವಾಗಿ ಸಜ್ಜುಗೊಳಿಸಲಾಗಿತ್ತು.


35 ಬಾಣಸಿಗರಿಂದ ಲೈವ್ ದೋಸೆ
ಈ ಬಾರಿ ಆಗಮಿಸಿದ ಎಲ್ಲರಿಗೂ ಮಧ್ಯಾಹ್ನದ ಊಟದ ಜೊತೆಗೆ ವಿಶೇಷವಾಗಿ ಸಂಜೆ ಲೈವ್ ದೋಸೆ ರುಚಿ ನೀಡಲಾಗಿತ್ತು.ಬೆಳ್ತಂಗಡಿ ಜೈನ್ ರೆಸ್ಟೋರೆಂಟ್‌ನ ಸಂತೋಷ್ ಕುಮಾರ್ ನೇತೃತ್ವದ ಸುಮಾರು 35 ಬಾಣಸಿಗರಿಂದ 75 ಸಾವಿರ ದೋಸೆ ತಯಾರಿ ನಡೆಯಿತು.ಆಗಮಿಸಿದ ಎಲ್ಲರಿಗೂ ಉಚಿತವಾಗಿ ಲೈವ್ ದೋಸೆ, ಚಟ್ನಿ, ಕೂರ್ಮ ನೀಡಲಾಗಿತ್ತು.ದೋಸೆ ತಯಾರಿಯ ನೇತೃತ್ವ ವಹಿಸಿದ್ದ ಬೆಳ್ತಂಗಡಿ ಜೈನ್ ರೆಸ್ಟೋರೆಂಟ್‌ನ ಸಂತೋಷ್ ಕುಮಾರ್‌ರವರು ‘ಸುದ್ದಿ’ಯೊಂದಿಗೆ ಮಾತನಾಡಿ, ‘7 ಕ್ವಿಂಟಾಲ್ ಅಕ್ಕಿ ಹಾಗೂ ಮೂರು ಕ್ವಿಂಟಾಲ್ ಉದ್ದಿನ ಬೇಳೆಯಿಂದ ದೋಸೆ ತಯಾರಿ ಮಾಡಲಾಗಿದೆ.15 ಹಂಚಿನಿಂದ 35 ಬಾಣಸಿಗರು ದೋಸೆ ತಯಾರಿಯ ತಂಡದಲ್ಲಿದ್ದಾರೆ.ಏಕಕಾಲಕ್ಕೆ ಒಂದು ಹಂಚಿನಲ್ಲಿ 50 ದೋಸೆ ತಯಾರಿ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.


ವೃದ್ಧರಿಗೆ, ಅಂಗವಿಕಲರಿಗೆ, ಹಿರಿಯರಿಗೆ ಉಚಿತ ಅಟೋ ಸೇವೆ
ಅಶೋಕ ಜನಮನ ಕಾರ್ಯಕ್ರಮಕ್ಕೆ ಆಗಮಿಸುವ ವೃದ್ಧರಿಗೆ, ಅಂಗವಿಕಲರಿಗೆ, ಹಿರಿಯರಿಗೆ ಸ್ನೇಹಸಂಗಮ ಅಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರುರವರ ನೇತೃತ್ವದಲ್ಲಿ ಸುಮಾರು 12 ಅಟೋರಿಕ್ಷಾ ಚಾಲಕರು ಉಚಿತ ಅಟೋ ಸೇವೆ ನೀಡಿದರು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಬೊಳುವಾರಿನ ಮೂರು ಸ್ಥಳದಲ್ಲಿ 12 ಅಟೋರಿಕ್ಷಾ ಚಾಲಕರು ವಯೋವೃದ್ಧರು, ಅಂಗವಿಕಲರು, ಹಿರಿಯರು ಹಾಗೂ ನಡೆಯಲು ಕಷ್ಟವಾಗುವವರನ್ನು ಕೊಂಬೆಟ್ಟು ಕ್ರೀಡಾಂಗಣಕ್ಕೆ ಉಚಿತವಾಗಿ ಕರೆದೊಯ್ಯುವ ಕೆಲಸ ಮಾಡಿದ್ದಾರೆ.


ಬಟ್ಟಲು ಲೋಟದ ಕಟ್ಟು ಹೊತ್ತು ಪಿಕಪ್‌ಗೆ ಲೋಡ್ ಮಾಡಿದ ಅಶೋಕ್ ರೈ
ಅಶೋಕ ಜನಮನ ಕಾರ್ಯಕ್ರಮದಲ್ಲಿ ಬಟ್ಟಲು ಲೋಟ ವಿತರಣೆ ತುಸು ವಿಳಂಬವಾಗಿ ಆರಂಭಗೊಂಡ ಕಾರಣದಿಂದ ಜನಸಂದಣಿಯಿಂದ ಒಮ್ಮೆಲೇ ನೂಕುನುಗ್ಗಲು ಆರಂಭವಾಯಿತು.ವಿತರಣಾ ಕೌಂಟರ್‌ಗಳಲ್ಲಿ ತಂದುಹಾಕಲಾಗಿದ್ದ ರಾಶಿರಾಶಿ ಬಟ್ಟಲು ಲೋಟದ ಕಟ್ಟು ಮುಗಿಯುತ್ತಿದ್ದಂತೆ ನೂಕುನುಗ್ಗಲು ಮತ್ತಷ್ಟು ಹೆಚ್ಚಾಯಿತು.ಈ ಸಂದರ್ಭದಲ್ಲಿ ಗೋದಾಮಿನಿಂದ ಬಟ್ಟಲು ಲೋಟಗಳ ಉಡುಗೊರೆ ಕಟ್ಟುಗಳನ್ನು ಪಿಕಪ್‌ನಲ್ಲಿ ಲೋಡ್ ಮಾಡಿ ಕೌಂಟರ್‌ಗೆ ತರಲಾಗಿತ್ತು. ಈ ವೇಳೆ ಖುದ್ದು ಅಶೋಕ್ ಕುಮಾರ್ ರೈರವರೇ ಬಟ್ಟಲು ಲೋಟಗಳನ್ನು ಪ್ಯಾಕ್ ಮಾಡಿ ತುಂಬಿಸಿಟ್ಟಿದ್ದ ಗೋಣಿಯ ಕಟ್ಟನ್ನು ಹೊತ್ತುಕೊಂಡು ಪಿಕಪ್‌ಗೆ ಹಾಕಿ ವಿತರಣಾ ಕೌಂಟರ್‌ಗೆ ಸಾಗಿಸಿದರು.ಈ ಸಂದರ್ಭದಲ್ಲಿ ಮಳೆಯೂ ಬರುತ್ತಿದ್ದುದರಿಂದ ಶಾಸಕರು ಮಳೆಯಲ್ಲಿ ಒದ್ದೆಯಾಗಿಕೊಂಡೇ ಗೋಣಿಕಟ್ಟು ಹೊತ್ತೊಯ್ದರು.


ತುಳಸಿ ಕ್ಯಾಟರರ‍್ಸ್‌ನಿಂದ ಉಪಾಹಾರ, ಭೋಜನ ತಯಾರಿ
ಈ ಬಾರಿ ಮುಖ್ಯಮಂತ್ರಿ ಆಗಮಿಸಿರುವ ಕಾರಣ ಸುಮಾರು 1 ಲಕ್ಷ ಮಂದಿಯ ನಿರೀಕ್ಷೆ ಇರುವುದಿರಂದ ಸುಮಾರು 70 ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ತುಳಸಿ ಕ್ಯಾಟರರ‍್ಸ್‌ನ ಕೇಪುಳು ಹರೀಶ್ ಭಟ್‌ರವರ ನೇತೃತ್ವದಲ್ಲಿ 40 ಮಂದಿ ಬಾಣಸಿಗರಿಂದ ಉಪಾಹಾರ, ಭೋಜನ ತಯಾರಿ ನಡೆದಿದೆ. ಭೋಜನದಲ್ಲಿ ಉಪ್ಪಿನಕಾಯಿ, ಪಲ್ಯ, ಕುಚ್ಚಲನ್ನ, ಬೆಳ್ತಿಗೆ ಅನ್ನ, ಸಾರು, ಸಾಂಬಾರು, ಕಡ್ಲಬೇಳೆ ಪಾಯಸ ನೀಡಲಾಗಿದೆ.


ಹಿರಿಯರ, ಕಿರಿಯರ ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ
ಪ್ರತೀ ವರ್ಷದಂತೆ ಈ ವರ್ಷವೂ ಗೂಡುದೀಪ ಸ್ಪರ್ಧೆ ಆಯೋಜಿಸಲಾಗಿತ್ತು.ಹಿರಿಯರ ವಿಭಾಗ ಹಾಗೂ ಕಿರಿಯರ ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆದಿತ್ತು.ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಿತ್ ಕುಮಾರ್‌ರವರಿಗೆ ರೂ.7500 ನಗದು ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಸ್ಥಾನ ಪಡೆದ ಅಂಕಿತ್ ಮತ್ತು ಅನ್ಮಿತ್ ಶೆಟ್ಟಿರವರಿಗೆ ಪ್ರಶಸ್ತಿ ಪತ್ರ ಮತ್ತು ರೂ.2500 ನಗದು ಬಹುಮಾನ ಹಾಗೂ ತೃತೀಯ ಸ್ಥಾನ ಪಡೆದ ಉಮೇಶ್ ಮತ್ತು ಜಗದೀಶ್ ಅಮೀನ್‌ರವರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಲಾಯಿತು. ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರಾವಣಿ ನಿಡ್ಪಳ್ಳಿರವರಿಗೆ ರೂ.5000 ನಗದು ಮತ್ತು ಪ್ರಶಸ್ತಿಪತ್ರ, ದ್ವಿತೀಯ ಸ್ಥಾನ ಪಡೆದ ಯಕ್ಷಿತ್‌ರವರಿಗೆ ರೂ.2500 ನಗದು ಮತ್ತು ಪ್ರಶಸ್ತಿಪತ್ರ ಹಾಗೂ ತೃತೀಯ ಸ್ಥಾನ ಪಡೆದ ಪ್ರಶಾಂತ್ ಬೀರಮಲೆರವರಿಗೆ ಪ್ರಶಸ್ತಿಪತ್ರ ಮತ್ತು ನಗದು ಬಹುಮಾನ ನೀಡಲಾಯಿತು.ಚಿತ್ರಕಲಾ ಶಿಕ್ಷಕರುಗಳಾದ ಪ್ರಸಾದ್ ಕೊಯಿಲ, ಪ್ರಕಾಶ್ ವಿಟ್ಲ, ಸುಂದರ ಬೆಳ್ಳಿಪ್ಪಾಡಿರವರು ತೀರ್ಪುಗಾರರಾಗಿ ಸಹಕರಿಸಿದ್ದರು.


ನೂಕುನುಗ್ಗಲಿನಿಂದ ಮಹಿಳೆಯರು, ಮಕ್ಕಳು ಸೇರಿ 13 ಮಂದಿ ಅಸ್ವಸ್ಥ-ಚೇತರಿಕೆ
ಅಶೋಕ ಜನಮನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು.ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮನ ವಿಳಂಬವಾದ ಕಾರಣ ಮಧ್ಯಾಹ್ನ ಊಟ ಹಾಗೂ ಬಟ್ಟಲು ವಿತರಣೆ ತಡವಾಗಿ ಆರಂಭವಾಯಿತು.ಸಂಜೆ ವೇಳೆ ದಿಢೀರ್ ಗುಡುಗು ಮಳೆ ಸುರಿದ ಕಾರಣ ಉಡುಗೊರೆ ಪಡೆಯುವ ಸಂದರ್ಭದಲ್ಲಿ ಒಂದು ಹಂತದಲ್ಲಿ ಜನರ ನೂಕುನುಗ್ಗಲು ಉಂಟಾಯಿತು.ಈ ವೇಳೆ ಅಸ್ವಸ್ಥಗೊಂಡ ಎಲ್ಲರೂ ಇದೀಗ ಚೇತರಿಸಿಕೊಂಡಿದ್ದಾರೆ.
ಜನರು ಬೆಳಿಗ್ಗೆಯಿಂದಲೇ ಬಂದು ಕಾಯುತ್ತಿದ್ದರು.ಅಲ್ಲದೆ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ವಿಪರೀತ ಭದ್ರತೆಯಿದ್ದ ಕಾರಣದಿಂದ ಕುಡಿಯಲು ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಪೊಲೀಸರು ಅನುವು ಮಾಡಲಿಲ್ಲ.ಕಾರ್ಯಕ್ರಮ ಆಯೋಜಕರಿಗೂ ಈ ಕುರಿತು ಪೊಲೀಸರು ನಿರ್ದೇಶನ ನೀಡಿದ್ದರು.12.10 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಂದಾಗ 1 ಮುಕ್ಕಾಲು ಗಂಟೆ ಕಳೆದಿತ್ತು.ಹಲವು ಮಹಿಳೆಯರು ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ಬಂದಿದ್ದರು.ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿಯಲಾರಂಭಿಸಿದಾಗ ಜನರು ಮನೆಗೆ ಹೋಗುವ ಧಾವಂತದಲ್ಲಿ ಬಟ್ಟಲು,ಗ್ಲಾಸ್ ಪಡೆದುಕೊಳ್ಳಲು ಹೋದಾಗ ಒಮ್ಮೆಲೇ ರಶ್ ಆಗಿ ನೂಕುನುಗ್ಗಲು ಆರಂಭವಾಯಿತು.ಈವೇಳೆ ಜನದಟ್ಟಣೆಯ ಕಾರಣಕ್ಕಾಗಿ ಆಮ್ಲಜನಕದ ಕೊರತೆಯಿಂದ ಕೆಲ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉಸಿರಾಟದ ಸಮಸ್ಯೆಯುಂಟಾಯಿತು.ನೀರು,ಆಹಾರವಿಲ್ಲದೆ ಸುಸ್ತಾಗಿದ್ದ ಕೆಲವರು ತಲೆಸುತ್ತು ಬಂದು ಬಿದ್ದರು.ಕಾರ್ಯಕ್ರಮ ಆಯೋಜಕರು ತಕ್ಷಣವೇ ಸ್ಪಂದಿಸಿ ಅಸ್ವಸ್ಥರಾದವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಕೂಡಲೇ ಆಂಬುಲೆನ್ಸ್‌ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.ಕಾರ್ಯಕ್ರಮದ ಬಂಬೋಬಸ್ತ್‌ಗಾಗಿ ಬಂದಿದ್ದ ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಕೂಡಾ ತಲೆ ತಿರುಗಿ ಬಿದ್ದಿದ್ದರು.


ಎಲ್ಲರೂ ಚೇತರಿಸಿಕೊಂಡಿದ್ದಾರೆ-ಎಸ್ಪಿ:
ಅ.20ರಂದು ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ಸೇರಿದ್ದ ಜನರಿಗೆ ದೇಹ ನಿರ್ಜಲೀಕರಣಗೊಂಡ ಕಾರಣ ಕೆಲವು ಜನರು ಅಸ್ವಸ್ಥಗೊಂಡಿದ್ದು ಅವರನ್ನು ಅದೇ ಸ್ಥಳದಲ್ಲಿ ಚಿಕಿತ್ಸೆಗೆ ಒಳಪಡಿಸಿದ ನಂತರ ಗುಣಮುಖರಾಗಿ ಮನೆಗೆ ತೆರಳಿರುತ್ತಾರೆ.ಆಸ್ಪತ್ರೆಯಲ್ಲಿ 13 ಜನ ಹೊರರೋಗಿಗಳಾಗಿ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ.ಪ್ರಸ್ತುತ ಎಲ್ಲರೂ ಚೇತರಿಸಿಕೊಂಡಿರುತ್ತಾರೆ,ಯಾರಿಗೂ ಯಾವುದೇ ರೀತಿಯ ತೀವ್ರತರ ತೊಂದರೆಗಳು ಉಂಟಾಗಿರುವುದಿಲ್ಲ.ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಂದ ವೀಡಿಯೊ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರು ತಿಳಿಸಿದ್ದಾರೆ. ಯೋಗೀತ(20), ಸಭಾ ಮಾಡಾವು(20), ಆಮೀನಾ ಪಾಟ್ರಕೋಡಿ(56), ನೇತ್ರಾವತಿ ಇರ್ದೆ(37), ಲೀಲಾವತಿ ಕಡಬ((50), ವಸಂತಿ ಬಲ್ನಾಡ್ (53), ಕುಸುಮ( 62), ರತ್ನವತಿ ಪೆರಿಗೇರಿ (67), ಅಫೀಲಾ ಪಾಟ್ರಕೋಡಿ (20), ಸ್ನೇಹಪ್ರಭಾ (41) ಹಾಗೂ ಜಸೀಲಾ(30) ಎಂಬವರು ನೂಕುನುಗ್ಗಲಾದ ಮೇಲೆ ಆಮ್ಲಜನಕದ ಕೊರತೆಯುಂಟಾಗಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

ವ್ಯತ್ಯಾಸ ಆಗಿದೆ..ಮನಸ್ಸಿಗೆ ನೋವಾಗಿದ್ದರೆ ಬೇಸರವಾಗಿದ್ದರೆ ಕ್ಷಮಿಸಿ-ಅಶೋಕ್ ರೈ
ಅಶೋಕ ಜನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಜನರು ಬಂದಿದ್ದಾರೆ.ಈ ಸಂದರ್ಭ ಗಾಳಿ ಮಳೆಯೂ ಬಂದಿದೆ.ಆ ಸಂದರ್ಭದಲ್ಲಿ ಕೆಲವೊಂದು ವ್ಯತ್ಯಾಸ ಆಗಿದೆ.ಮನಸ್ಸಿಗೆ ನೋವಾಗಿದ್ದರೆ,ಬೇಸರ ಆಗಿದ್ದರೆ ಕ್ಷಮಿಸಿ,ಅದೇ ರೀತಿ ನೂಕುನುಗ್ಗಲಿನಿಂದ ತೊಂದರೆಗೊಳಗಾದವರು,ಅಶಕ್ತರು, ಹಿರಿಯರಿಗೆ ತೊಂದರೆ ಆಗಿದ್ದರೆ ಕ್ಷಮಿಸಿ, ನನಗೆ ನೋವಿದೆ.ಕೆಲವೊಂದು ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಬಂದೋಬಸ್ತ್‌ನಲ್ಲಿ ನಾವು ಅವರಿಗೆ ಸಹಕಾರ ಕೊಡಬೇಕಾಗಿದೆ.ವಸಗಳನ್ನು ವಿತರಿಸಲು ನಾವು ಮೊದಲು ಮಾಡಿಟ್ಟಿದ್ದ ಕೌಂಟರ್ ಅನ್ನು ಪೊಲೀಸರು ಬಂದು ಬೇರೆ ಕಡೆ ಸ್ಥಳಾಂತರಿಸಿದ್ದರಿಂದ ಅಲ್ಲಿ ತೊಂದರೆ ಆಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ಅಪಪ್ರಚಾರ, ಸುಳ್ಳು ಹೇಳುವವರ ಮೇಲೆ ಕಾನೂನು ಕ್ರಮ ಜಾರಿಗೆ
ಕೋಮು ಸೌಹಾರ್ದತೆ ಇಲ್ಲದಿದ್ದರೆ ಯಾವುದೇ ರಾಜ್ಯ, ಜಿಲ್ಲೆ ಬೆಳವಣಿಗೆ ಆಗಲು ಸಾಧ್ಯವಿಲ್ಲ.ಕೋಮು ಸೌಹಾರ್ದತೆಯನ್ನು ಕಾಪಾಡಬೇಕು.ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದಲ್ಲಿ ಇದೆ ಇದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಗಮನಿಸುವಂತೆ ನನ್ನ ಪ್ರಾರ್ಥನೆ.ಸುಳ್ಳು ಹೇಳುವವರ ಮತ್ತು ಅಪಪ್ರಚಾರ ಮಾಡುವವರ ಮೇಲೆ ಕಾನೂನು ಕ್ರಮ ಜಾರಿಗೆ ಬರಲಿದೆ. ಈಗಾಗಲೇ ಈ ಕುರಿತು ಹೆಚ್.ಕೆ.ಪಾಟೀಲ್ ಮತ್ತು ಪ್ರಿಯಾಂಕ ಖರ್ಗೆಯವರು ಇದರ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು.


ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಿ
2013ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿರುವಾಗ, ಯಾವುದೇ ಸಂಘಟನೆ ಸಾರ್ವಜನಿಕ ಅಥವಾ ಸರಕಾರಿ ಜಾಗದಲ್ಲಿ ಚಟುವಟಿಕೆ ಮಾಡಿದರೆ ಅದನ್ನು ನಿಷೇಽಸಬೇಕು ಎಂದು ಕಾನೂನು ಸುತ್ತೋಲೆ ಹೊರಡಿಸಿದ್ದಾರೆ.ನಾವು ಅದನ್ನೇ ಮಾಡಿದ್ದೇವೆ.ಯಾವುದೇ ಸಂಘಟನೆ ಸಾರ್ವಜನಿಕ ಸ್ಥಳದಲ್ಲಿ ಚಟುವಟಿಕೆ ಮಾಡಬಾರದು.ಅದನ್ನು ಮಾಡಿದರೆ ನಮಗೆ ಆರ್‌ಎಸ್‌ಎಸ್‌ನ್ನು ಮಟ್ಟ ಹಾಕಲು ಹೊರಟಿದ್ದಾರೆ ಎಂಬ ಅಪವಾದ ಮಾಡುತ್ತಿದ್ದಾರೆ.ನಾವು ಮಾಡಿದರೆ ಅದಕ್ಕೆ ಧರ್ಮದ ಬಣ್ಣ ಕಟ್ಟುವ ಕೆಲಸ ಮಾಡುತ್ತಾರೆ.ಇದನ್ನು ಜನರು ಅರ್ಥ ಮಾಡಬೇಕು. ನಾವು ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಇಂತಹ ಸೂಕ್ಷ್ಮಗಳನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಅಂತಹ ಭಾವನೆ ನನ್ನದು ಎಂದು ಸಿಎಂ ಹೇಳಿದರು.


ಇತರರಿಗೂ ಮಾದರಿಯಾಗಲಿ
ಅಶೋಕ್ ಕುಮಾರ್ ರೈ ಅವರ ದೀಪಾವಳಿ ಹಬ್ಬದ ವಸ ವಿತರಣೆಯನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದು ಘೋಷಣೆ ಮಾಡುತ್ತಿದ್ದೇನೆ.ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಬಹಳ ಉತ್ತಮ ರೀತಿಯಾಗಿ ಕೆಲಸ ಮಾಡುತ್ತಿದ್ದಾರೆ.ಅವರ ಟ್ರಸ್ಟ್ ವತಿಯಿಂದ ದೀಪಾವಳಿ ಸಂದರ್ಭ ವಸಗಳನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ.ಅವರ ಈ ಕೆಲಸ ಸಮಾಜದಲ್ಲಿ ಬೇರೆ ಶ್ರೀಮಂತ ವರ್ಗದ ಜನರಿಗೆ ಮಾರ್ಗದರ್ಶನ ಆಗಲಿ.ಮಾದರಿಯಾಗಲಿ
-ಸಿದ್ದರಾಮಯ್ಯ ಮುಖ್ಯಮಂತ್ರಿ


ಏಯ್..!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಶೋಕ್ ಕುಮಾರ್ ರೈ ಅವರು ಮತ್ತು ಕುಟುಂಬದವರು ಎಂದು ಮುಂದೆ ಮಾತನಾಡುವ ಸಂದರ್ಭ ಊಟದ ವ್ಯವಸ್ಥೆಯ ಭಾಗದಲ್ಲಿ ಅನೌನ್ಸ್‌ಮೆಂಟ್ ಮಾಡುವುದು ಅವರ ಕಿವಿಗೆ ಬಿತ್ತು.ತಕ್ಷಣ ಅವರು, ಯಾರೋ ಸಭೆಯಲ್ಲಿ ಮಾತನಾಡಿದ್ದೆಂದು ‘ಏಯ್’ ಎಂದು ಹೇಳಿದಾಗ ಎಲ್ಲರೂ ನಿಶಬ್ದರಾದರು.ಮತ್ತೆ ವಸ ವಿತರಣಾ ಸಮಾರಂಭದ ಕುರಿತು ಸಿಎಂ ಮಾತು ಮುಂದುವರಿಸಿದರು.


ಪುತ್ತೂರು ಜನತೆಯ ಧನ್ಯತಾ ಭಾವ ಸಾಕು
ಈ ಕಾರ್ಯಕ್ರಮದ ಮೂಲಕ ನನಗೆ ಏನೂ ಸಿಗುವುದಿಲ್ಲ.ನಿಮ್ಮ ಪ್ರೀತಿ ವಿಶ್ವಾಸದ ಧನ್ಯತಾ ಭಾವ ಸಾಕು.ಕಾರ್ಯಕ್ರಮಕ್ಕೆ ಬರುವವರಿಗೆ ಬಸ್‌ನ ವ್ಯವಸ್ಥೆ ಮಾಡಿಲ್ಲ.ಜಾಹೀರಾತು ಹಾಕಿಲ್ಲ.ದುಡ್ಡು ಕೊಟ್ಟು ಕರೆದುಕೊಂಡು ಬಂದಿಲ್ಲ.ಯಾರಿಗೂ ಒಂದು ರೂಪಾಯಿ ನೀಡಿಲ್ಲ ಎಂದು ಸಿದ್ಧರಾಮಯ್ಯ ಅವರಿಗೆ ತಿಳಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.ಜನರು ಆಶೀರ್ವಾದ ಮಾಡಿದರೆ ಸಾಕು.ಒಳ್ಳೆಯ ಕೆಲಸ ಮಾಡಿದರೆ ಆಶೀರ್ವಾದ ಮಾಡಲಿ.ಕೆಟ್ಟ ಕೆಲಸ ಮಾಡಿದರೆ ಮಾಡುವುದು ಬೇಡ.ಒಟ್ಟಿನಲ್ಲಿ ಪುತ್ತೂರಿನ ಅಭಿವೃದ್ಧಿ ಆಗಬೇಕು.ಪುತ್ತೂರಿನ ಪ್ರವಾಸೋದ್ಯಮ ಹಾಗೂ ಕ್ಷೇತ್ರದ ಅಭಿವೃದ್ಧಿ ಆಗಬೇಕು,ನಮ್ಮವರಿಗೆ ಉದ್ಯೋಗ ದೊರೆಯಬೇಕು.ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಶೋಕ್ ಕುಮಾರ್ ರೈ ಭರವಸೆ ನೀಡಿದರು.


1ಲಕ್ಷಕ್ಕೂ ಮಿಕ್ಕಿ ವಸ್ತ್ರ ವಿತರಣೆ
ಸುಮಾರು 1 ಲಕ್ಷಕ್ಕೂ ಮಿಕ್ಕಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕ್ರೀಡಾಂಗಣ ಮತ್ತು ಕೊಂಬೆಟ್ಟು ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ ಜನರಿಂದ ತುಂಬಿ ತುಳುಕಿತ್ತು.ಪುತ್ತೂರು ಪೇಟೆಯಲ್ಲಿ ಎಲ್ಲಿ ನೋಡಿದರೂ ಜಾತ್ರೆಯ ರೀತಿಯಲ್ಲಿ ಜನಸಂದಣಿಯಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.1 ಲಕ್ಷ ಮಂದಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ರಾತ್ರಿ ಗಂಟೆ 9.30ರ ತನಕವೂ ನಡೆಯಿತು.ಸುಮಾರು 1 ಲಕ್ಷಕ್ಕೂ ಮಿಕ್ಕಿ ವಸ ವಿತರಣೆ ನಡೆದಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.


ಹೆಜ್ಜೇನು ದಾಳಿಯಿಂದ ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ-ಸಿಎಂ
ಕೆಲ ದಿನಗಳ ಹಿಂದೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಹೆಜ್ಜೇನು ದಾಳಿಗೆ ಬಲಿಯಾಗಿದ್ದ ಬಾಲಕಿ ಇಶಾ ಅವರ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ.ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಕೊಂಬೆಟ್ಟು ಮೈದಾನದಲ್ಲಿ ನಡೆದ 13ನೇ ವರ್ಷದ ಅಶೋಕ ಜನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದ ವೇಳೆ ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿಯಂತೆ 5 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದರು.ಮುಖ್ಯಮಂತ್ರಿ ಪರಿಹಾರ ನಿಽಯಿಂದ 5 ಲಕ್ಷ ರೂ.ಪರಿಹಾರ ನೀಡಲು ಆದೇಶವನ್ನೂ ಮಾಡಿದ್ದೇನೆ.ಹದಿನೈದು ದಿನಗಳೊಳಗೆ ಹಣ ಬರಲಿದೆ ಎಂದು ಸಿದ್ಧರಾಮಯ್ಯ ಹೇಳಿದರು.
ಕೆಲ ದಿನಗಳ ಹಿಂದೆ ಸೇಡಿಯಾಪು ಸಮೀಪದ ಕೂಟೇಲು ಎಂಬಲ್ಲಿ ಹೆಜ್ಜೇನುಗಳು ದಾಳಿ ನಡೆಸಿದ ಪರಿಣಾಮ ಪಡ್ನೂರು ಗ್ರಾಮದ ಕೂಟೇಲು ಕಿರಣ್ ಎಂಬವರ ಪುತ್ರಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಇಶಾ ಅವರು ಸಾವಿಗೀಡಾಗಿದ್ದರು.ಹೆಜ್ಜೇನು ದಾಳಿಯಿಂದ ತೀವ್ರ ಅಸ್ವಸ್ಥಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ,ಕೂಟೇಲು ಕಿಶೋರ್ ಎಂಬವರ ಪುತ್ರ,ವಿವೇಕಾನಂದ ಕ.ಮಾ.ಶಾಲೆಯ 5ನೇ ತರಗತಿ ವಿದ್ಯಾರ್ಥಿ ಪ್ರತ್ಯೂಶ್ ಅವರಿಗೆ ಮಂಗಳೂರು ಡಾ|ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರು ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ಬಾಲಕ ಇದೀಗ ಚೇತರಿಸಿಕೊಂಡಿದ್ದಾರೆ.ಮಕ್ಕಳನ್ನು ರಕ್ಷಣೆ ಮಾಡಲು ಹೋಗಿದ್ದ ನಾರಾಯಣ ಗೌಡರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಅ.10ರಂದು ಸಂಜೆ ಹೆಜ್ಜೇನು ದಾಳಿ ನಡೆದಿದೆ.

4 ತಿಂಗಳ ಹೆಣ್ಣು ಮಗುವನ್ನು ಸಂಘಟಕರ ಕೈಗೆ ನೀಡಿ ನಾಪತ್ತೆಯಾಗಿದ್ದ ಮಹಿಳೆ ಮೂರೂವರೆ ಗಂಟೆ ಬಳಿಕ ವಾಪಸ್
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮರಿಯಮ್ಮ ಎಂಬ ಮಹಿಳೆಯೋರ್ವರು ತನ್ನ ನಾಲ್ಕು ತಿಂಗಳ ಹೆಣ್ಣು ಹಸುಳೆಯನ್ನು ಸಂಘಟಕರ ಕೈಗೆ ನೀಡಿ ಹೋಗಿದ್ದರು.ಸಂಘಟಕರು ಮಗುವನ್ನು ಹಿಡಿದುಕೊಂಡು ಕಾದರೂ ಮಗುವಿನ ತಾಯಿ ಆಗಮಿಸಿರಲಿಲ್ಲ.ಬಳಿಕ ಅಲ್ಲಿನ ಪೊಲೀಸ್ ಸಿಬ್ಬಂದಿ ಮಗುವನ್ನು ಬದ್ರುನ್ನಿಸಾ ಎಂಬವರ ಕೈಗೆ ನೀಡಿದ್ದರು.ಬದ್ರುನ್ನೀಸಾರವರು 4 ತಿಂಗಳ ಮಗುವನ್ನು ಹಿಡಿದುಕೊಂಡು ಕಾದರೂ ಮಗುವಿನ ತಾಯಿ ಬರಲೇ ಇಲ್ಲ.ಇನ್ನೋರ್ವ ಮಹಿಳೆ ಶುಭ ರೈ ಕೂಡ ಬದ್ರುನ್ನಿಸಾರವರೊಂದಿಗೆ ಮಗುವನ್ನು ನೋಡಿಕೊಂಡಿದ್ದರು.ಅವರು ಮಗುವನ್ನು ಹಿಡಿದುಕೊಂಡು ಊಟ ಕೂಡ ಮಾಡದೆ ಸಂಜೆ ತನಕ ಕಾಯುತ್ತಿದ್ದರು.ತಾಯಿ ನಾಪತ್ತೆಯಾದ ಬಗ್ಗೆ ವೆಬ್‌ಸೈಟ್, ಚಾನೆಲ್‌ಗಳಲ್ಲಿ ವರದಿ ಪ್ರಸಾರವಾಗಿತ್ತು.ಕೊನೆಗೂ ಮೂರೂವರೆ ಗಂಟೆ ಕಳೆದ ಬಳಿಕ ಮಗುವಿನ ತಾಯಿ ಆಗಮಿಸಿ ಮಗುವನ್ನು ಪಡೆದುಕೊಂಡಿದ್ದಾರೆ.ಮಗುವನ್ನು ತಾಯಿಯ ಕೈಗೆ ನೀಡಿದ ಬದ್ರುನ್ನಿಸಾ ಮತ್ತು ಶುಭ ರೈರವರು ಆ ತಾಯಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.


ಮಗುವಿನ ಅಮ್ಮ ಬರದಿದ್ದರೆ ನಾನೇ ಮಗುವನ್ನು ತೆಗೆದುಕೊಂಡು ಹೋಗುತ್ತಿದ್ದೆ:
ಮಗುವನ್ನು ಜೋಪಾನವಾಗಿ ಹಿಡಿದುಕೊಂಡು ಕಾದುಕೊಂಡಿದ್ದ ಬದ್ರುನ್ನಿಸಾರವರು ‘ಸುದ್ದಿ’ ಜೊತೆ ಮಾತನಾಡಿ, ‘ತನಗೆ ಇಬ್ಬರು ಗಂಡುಮಕ್ಕಳೆ ಇದ್ದದ್ದು ಮಗುವಿನ ತಾಯಿ ಬರದಿದ್ದರೆ ತಾನೇ ಮಗುವನ್ನು ತೆಗೆದುಕೊಂಡು ಹೋಗಿ ಸಾಕುತ್ತಿದ್ದೆ’ ಎಂದು ಪ್ರತಿಕ್ರಿಯಿಸಿದ್ದಾರೆ.


ತಪ್ಪಿಸಿಕೊಂಡಿದ್ದ ಮಕ್ಕಳು,ಮಹಿಳೆಯರು:
ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉಡುಗೊರೆ ನೀಡಲಾಗುವುದು.ಒಂದು ಮನೆಯಿಂದ ಬಂದ ಎಲ್ಲರಿಗೂ ದೀಪಾವಳಿ ಉಡುಗೊರೆ ನೀಡಲಾಗುವುದು ಎಂದು ಸಂಘಟಕರು ಘೋಷಿಸಿದ್ದರು.ಅದರಂತೆ ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಆಗಮಿಸಿ ಜಾತ್ರೆಯಂತಾಗಿತ್ತು.ಸಂಜೆ ವೇಳೆಗೆ ಮಳೆ ಸುರಿಯಲಾರಂಭಿಸಿದಾಗ ನೂಕುನುಗ್ಗಲು ಉಂಟಾದ ಪರಿಣಾಮ ಹಲವು ಮಕ್ಕಳು,ಮಹಿಳೆಯರು ತಪ್ಪಿಸಿಕೊಂಡಿದ್ದರು.ಕಾರ್ಯಕ್ರಮದ ಸಂಘಟಕರು ಈ ಕುರಿತು ಧ್ವನಿವರ್ಧಕದಲ್ಲಿ ಪದೇ ಪದೇ ಉದ್ಘೋಷಣೆ ಮಾಡುತ್ತಿದ್ದರು.ತಪ್ಪಿಸಿಕೊಂಡಿದ್ದ ಎಲ್ಲರೂ ಜೊತೆಯಾಗುವ ಮೂಲಕ ಗೊಂದಲ ಸುಖಾಂತ್ಯವಾಯಿತು.


ಸಾಂಸ್ಕೃತಿಕ ಕಾರ್ಯಕ್ರಮ ರದ್ದು:
ಮಧ್ಯಾಹ್ನದ ಬಳಿಕ ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಳೆಯ ಕಾರಣಕ್ಕಾಗಿ ರದ್ದುಪಡಿಸಲಾಗಿತ್ತು.

LEAVE A REPLY

Please enter your comment!
Please enter your name here