





ಮಾಹಿತಿಗಳಿದ್ದರೆ ಸಾಲದು, ಪ್ರಾಯೋಗಿಕ ಜ್ಞಾನವೂ ತಿಳಿದಿರಬೇಕು : ಸತ್ಯಪ್ರಸಾದ್ ಕೋಟೆ


ಪುತ್ತೂರು: ಪಠ್ಯದ ಮೂಲಕ ತರಗತಿಯಲ್ಲಿ ನಡೆಸುವ ಅಧ್ಯಯನಗಳು ವಿಷಯದ ಬಗೆಗೆ ನಮಗೆ ಮಾಹಿತಿ ನೀಡುತ್ತವೆ. ಆದರೆ ಆ ಮಾಹಿತಿಗಳ ಪ್ರಾಯೋಗಿಕ ಉಪಯೋಗದ ಬಗೆಗೆ ಜ್ಞಾನ ಇರದೇ ಹೋದರೆ ಅದು ನಿಷ್ಪ್ರಯೋಜಕ ಎನಿಸುತ್ತದೆ. ಆದ್ದರಿಂದ ನಮಗೆ ತಿಳಿದಿರುವ ಪ್ರತಿ ವಿಚಾರಗಳ ಕುರಿತಾದ ಪ್ರಾಯೋಗಿನ ಅನುಭವವನ್ನು ಗಳಿಸಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸತ್ಯಪ್ರಸಾದ್ ಕೋಟೆ ಹೇಳಿದರು.





ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ವ್ಯವಸ್ಥೆಯ 25ನೆಯ ವರ್ಷಾಚರಣೆ ಪ್ರಯುಕ್ತ ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್ನ ಶ್ರೀ ಶಂಕರ ಸಭಾಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ’ಅರೇಮ್ಯ 2025’ ಸ್ಪರ್ಧೆಗಳನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಸಂವಹನ ವಿಷಯದಲ್ಲಿ ಅಧ್ಯಯನ ನಡೆಸಿ, ಅತ್ಯುತ್ತಮ ಅಂಕ ಗಳಿಸಿದರೂ ಒಳ್ಳೆಯ ರೀತಿಯಲ್ಲಿ ಸಂವಹನ ನಡೆಸಲು ಸಾಧ್ಯವಾಗದಿದ್ದರೆ ಅದು ವ್ಯಕ್ತಿಯ ಸೋಲೆನಿಸುತ್ತದೆ. ಹಾಗಾಗಿ ನಮ್ಮ ಅನುಭವ ಆಧಾರಿತ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಿರಬೇಕಾದ ಅಗತ್ಯವಿದೆ. ಆಧುನಿಕ ದಿನಮಾನಗಳಲ್ಲಿ ಕೌಶಲ್ಯಗಳಿಗೆ ಅತೀವ ಮಹತ್ವವಿದೆ. ಆ ನೆಲೆಯಲ್ಲಿ ನಮ್ಮ ಕುಶಲತೆಗಳನ್ನು ವಿಸ್ತರಿಸಿಕೊಂಡು, ಸಾಮರ್ಥ್ಯಗಳನ್ನು ವೃದ್ಧಿಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂದು ನಮ್ಮ ದೇಶ ಹಿಂದೆಂದಿಗಿಂತಲೂ ಅಧಿಕ ಸಾಧನೆ ಮೆರೆಯುತ್ತಿದೆ. ಪ್ರಪಂಚದಲ್ಲಿ ಅತೀ ಬಲಿಷ್ಟ ವ್ಯವಸ್ಥೆಯಾಗಿ ರೂಪುಗೊಳ್ಳುತ್ತಿದೆ. ನಾವು ಭಾರತೀಯರು ಎನ್ನುವುದಕ್ಕೆ ಹೆಮ್ಮೆ ಪಡುವ ಸಂದರ್ಭದಲ್ಲಿ ನಾವಿದ್ದೇವೆ. ಹೀಗಿರುವಾಗ ರಾಷ್ಟ್ರೀಯ ಚಿಂತನೆಗಳನ್ನು ಒಡಮೂಡಿಸಿಕೊಂಡು, ನಮ್ಮ ಕೌಶಲ್ಯಗಳಿಂದ ದೇಶವನ್ನು ಮತ್ತಷ್ಟು ಎತ್ತರಕ್ಕೇರಿಸುವ ಪ್ರಯತ್ನ ನಡೆಸಬೇಕು. ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲದೆ ಸಮಷ್ಟಿಯಾಗಿಯೂ ಗೆಲ್ಲಬಲ್ಲ ಹೊಂದಾಣಿಕೆಯ ಸ್ವಭಾವವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಕಾರ್ಯಗಳಾಗಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಪ್ರೇರಣೆ ಸಿಕ್ಕಾಗ ಅದ್ವಿತೀಯ ಸಾಧನೆ ಸಾಕಾರಗೊಳ್ಳುತ್ತದೆ. ನಾಳಿನ ಭಾರತವನ್ನು ಕಟ್ಟುವ ವಿದ್ಯಾರ್ಥಿಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ., ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ ಪ್ರಸಾದ್ ಡಿ.ಎಸ್. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂರ್ವಿ ಮತ್ತು ಬಳಗ ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ. ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಕೆ.ವಿ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.







