





ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಇಂದಿಗೂ ಪ್ರಸ್ತುತ-ಅಮಳ ರಾಮಚಂದ್ರ


ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆಯ ಅಂಗವಾಗಿ ಪುತ್ತೂರು ಮಾನವ ಬಂಧುತ್ವ ವೇದಿಕೆ ಪುತ್ತೂರು ತಾಲೂಕು ಮಟ್ಟದ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ “ಬ್ರಹ್ಮಶ್ರೀ.ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಸ್ತುತತೆ ” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ದೆಯನ್ನು ಏರ್ಪಡಿಸಿತ್ತು. ಈ ಸ್ಪರ್ದೆಯ ಬಹುಮಾನ ವಿತರಣಾ ಕಾರ್ಯಕ್ರಮ ಎ.ಪಿ.ಎಂ.ಸಿ ರಸ್ತೆಯ ಕ್ರಿಸ್ಟೋಫರ್ ಸಭಾಂಗಣದಲ್ಲಿ ನಡೆಯಿತು.






ಸ್ಪರ್ಧೆಯಲ್ಲಿ ಪಿಯುಸಿ ವಿಭಾಗದಲ್ಲಿ 56 ವಿದ್ಯಾರ್ಥಿಗಳು ಭಾಗವಹಿಸಿದ್ದು ಪದವಿ ವಿಭಾಗದಲ್ಲಿ 10 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪದವಿ ವಿಭಾಗದಲ್ಲಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಲಿಖಿತಾ ಪೂಜಾರಿ ಪ್ರಥಮ ಸ್ಥಾನ ಪಡೆದರು. ಇದೇ ಕಾಲೇಜಿನ ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಗಾಯತ್ರಿ ದ್ವಿತೀಯ ಮತ್ತು ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಕೆ ತೃತೀಯ ಸ್ಥಾನ ಪಡೆದರು. ಪಿಯುಸಿ ವಿಭಾಗದಲ್ಲಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಶ್ರೇಯಾ ಪ್ರಥಮ ಸ್ಥಾನ ಪಡೆದುಕೊಂಡರು. ಉಪ್ಪಿನಂಗಡಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಸುರಭಿ ದ್ವಿತೀಯ ಸ್ಥಾನ ಪಡೆದುಕೊಂಡರೆ ತೃತೀಯ ಸ್ಥಾನವನ್ನು ಮುಕ್ರಂಪಾಡಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಫಾತಿಮತ್ ಮಾಸಿತ ಮತ್ತು ಕೆಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಮರಿಯಮತ್ ನಾಫಿಯಾ ರವರು ಪಡೆದುಕೊಂಡರು.
ವಿಜೇತರಿಗೆ ತಲಾ ರೂ.2೦೦೦ ಪ್ರಥಮ, ರೂ.15೦೦ ದ್ವಿತೀಯ ಮತ್ತು ರೂ.1೦೦೦ ತೃತೀಯ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ಸಮಾಜ ಇತಿಹಾಸದಲ್ಲಿ ಆಗಿಹೋದ ಅನೇಕ ದಾರ್ಶನಿಕರ ವ್ಯಕ್ತಿ ಪೂಜೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದರೂ ಅವರು ಬೋಧಿಸಿದ ತತ್ವ ಆದರ್ಶಗಳನ್ನು ನಿರ್ಲಕ್ಷಿಸುತ್ತಿದೆ. ವ್ಯಕ್ತಿ ಪೂಜೆಗಿಂತ ತತ್ವ ಪೂಜೆಯೇ ಶ್ರೇಷ್ಠವಾಗಿದ್ದು ಅವರು ತೋರಿದ ದಾರಿಯಲ್ಲಿ ಸಾಗುವ ಕಾರ್ಯವೇ ನಿಜವಾದ ಪೂಜೆಯಾಗಿದೆ, ಈ ಅರಿವನ್ನು ಮೂಡಿಸುವ ಸಲುವಾಗಿ ಪ್ರಬಂಧ ಸ್ಪರ್ದೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ದೇಶಕ್ಕೆ ಸ್ವತಂತ್ರ್ಯ ಬಂದು 78 ವರ್ಷಗಳು ಕಳೆದು ಹೋದರೂ ಕೋಮು ದ್ವೇಷ, ಹಿಂಸಾಚಾರ, ಶೋಷಣೆ, ಅಸ್ಪೃಷ್ಯತೆ ಇನ್ನೂ ಸಮಾಜವನ್ನು ಬಾಧಿಸುತ್ತಿದೆ. ಇಂತಹಾ ಈ ಸಂದರ್ಭದಲ್ಲಿ ಒಂದೇ ಜಾತಿ, ಒಂದೇ ಧರ್ಮ , ಒಬ್ಬನೇ ದೇವರು ಎಂದು ಪ್ರತಿಪಾದಿಸಿ ಅಂದಿನ ಸಮಾಜದಲ್ಲಿ ತುಳಿತಕ್ಕೊಳಗಾದ ಜನರಲ್ಲಿ ಜಾಗೃತಿಯನ್ನು ಮೂಡಿಸಿ, ಧರ್ಮ ಸುದಾರಣೆಯನ್ನು ಮಾಡಿದ ನಾರಾಯಣ ಗುರುಗಳ ತತ್ವಾದರ್ಶಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ನಾರಾಯಣ ಗುರುಗಳು ತೋರಿದ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಪೂಜೆಯಾಗಿದೆ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವೇದಿಕೆಯ ಗೌರವ ಸಲಹೆಗಾರ ಮಹಮ್ಮದ್ ಬಡಗನ್ನೂರು ಮಾತನಾಡಿ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಸಮಾಜದ ಆವಶ್ಯಕತೆಯಾಗಿದ್ದು ಗುರುಗಳ ಚಿಂತನೆ ಇಂದು ನಮ್ಮ ಸಮಾಜದಲ್ಲಿರುವ ಅಶಾಂತಿ, ಗೊಂದಲ, ಶೋಷಣೆ ಮತ್ತು ಕೋಮು ಹಿಂಸಾಚಾರಗಳೆಂಗ ರೋಗಕ್ಕೆ ಸೂಕ್ತ ಔಷದವಾಗಿದೆ. ಕಾಲೇಜು ವಿದ್ಯಾರ್ಥಿಗಳು ನಾರಾಯಣ ಗುರುಗಳ ತತ್ವಗಳ ಅಧ್ಯಯನ ನಡೆಸಿ ಪ್ರಬಂಧ ಬರೆದಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರಧಾನ ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕಿ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೇಣುಕಾ ಕಣಿಯೂರು ಶೋಷಣೆಯ ವಿರುದ್ಧ ನಾರಾಯಣ ಗುರುಗಳು ತಮ್ಮ ನಡೆಸಿದ ಸಾತ್ವಿಕ ಸಂಘರ್ಷ ನಮಗೆಲ್ಲರಿಗೂ ಅನುಕರಣೀಯವಾಗಿದ್ದು ಇಂದಿಗೂ ಪ್ರಸ್ತುತರಾಗಿದ್ದಾರೆ. ನಮ್ಮ ಜಿಲ್ಲೆಯ ಶಾಂತಿಯನ್ನು ಕದಡುತ್ತಿರುವ ಕೋಮು ಹಿಂಸಾಚಾರ ನಾಶವಾಗಿ ಸರ್ವ ಜನಾಂಗದ ಶಾಂತಿಯ ತೋಟವಾಗಿ ಜಿಲ್ಲೆ ಅಭಿವೃದ್ಧಿಯನ್ನು ಕಾಣಬೇಕಿದ್ದರೆ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬ ತಾತ್ವಿಕ ಚಿಂತನೆಯನ್ನು ಅರ್ಥೈಸಿಕೊಂಡು ನಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇಂದಿನ ವಿದ್ಯಾರ್ಥಿಗಳೇ ಇಂದಿನ ಜನಾಂಗವಾಗಿದ್ದು ವೈಚಾರಿಕತೆಯನ್ನು ಬೆಳೆಸಿಕೊಂಡು ಸುಂದರ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗುವಂತೆ ಕರೆ ನೀಡಿದರು.
ವೇದಿಕೆಯ ಕರಾವಳಿ ವಿಭಾಗೀಯ ಸಂಚಾಲಕ ಸತೀಶ್ಕುಮಾರ್ ಕೆ.ಎಸ್, ಜಿಲ್ಲಾ ಸಂಚಾಲಕ ಜಯರಾಮ ಪೂಜಾರಿ ಬಾಳಿಲ ಹಾಗೂ ಪ್ರಬಂಧ ಮೌಲ್ಯಮಾಪಕರಾದ ಐವನ್ ಲೋಬೋ ವೇದಿಕೆಯಲ್ಲಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ವೇದಿಕೆಯ ಗೌರವ ಸಲಹೆಗಾರರಾದ ಎಂ.ಬಿ ವಿಶ್ವನಾಥ ರೈ, ಅಬ್ದುಲ್ ರಹಿಮಾನ್ ಯೂನಿಕ್, ಶಕೂರ್ ಹಾಜಿ, ಮನೋಹರ ರೈ ಎಂಡೆಸಾಗು, ಕೆ.ಎ ಆಲಿ, ರಘು ಹಾಲ್ಕೆರೆ, ಅಶೋಕ್ ಪೂಜಾರಿ, ಹರೀಶ್ ಕೋಟ್ಯಾನ್, ಮಹಾಲಿಂಗ ನಾಯ್ಕ ಪುಣಚ, ಚಂದ್ರಹಾಸ ರೈ, ರಾಮ ಮೇನಾಲ, ಮಹಾಲಿಂಗ ನಾಯ್ಕ, ಕಲಾವಿದ ಕೃಷ್ಣಪ್ಪ, ಜಾನ್ ಕೆನ್ಯೂಟ್, ಆದಂ ಕುಂಞಿ ಕಲ್ಲರ್ಪೆ, ಆಲಿ ಕುಂಞಿ ಕೊರಿಂಗಿಲ, ಮಹೇಶ್ ಕೆ, ಜಯಂತಿ, ರೂಪರಾಜ್ ಮೊಗಪ್ಪೆ, ಸದಾನಂದ ಭರಣ್ಯ, ಸತ್ತಾರ್ ಅಮಳ ಹಾಗೂ 50ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಶಿಕಿರಣ್ ರೈ ನೂಜಿಬೈಲು ಸ್ವಾಗತಿಸಿದರು. ರವೀಂದ್ರ ರೈ ನೆಕ್ಕಿಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



