ಹಲವರ ಪಾಲಿನ ಆಪತ್ಭಾಂಧವ ಸೂರಪ್ಪ ಪೂಜಾರಿ

0

ವಿಷದ ಹಾವು ಕಡಿತ, ಇತರ ರೋಗಗಳಿಗೆ ನಾಟಿ ಚಿಕಿತ್ಸೆ
ಸಾವಿನ ದವಡೆಯಲ್ಲಿದ್ದವರನ್ನೂ ಪಾರು ಮಾಡಿದ ನಾಟಿ ವೈದ್ಯ

ಉಪ್ಪಿನಂಗಡಿ: ಹಾವು ಕಡಿತ ಸೇರಿದಂತೆ ಹಲವು ರೋಗಗಳಿಗೆ ಪರಂಪರಾಗತವಾಗಿ ಬಂದ ನಾಟಿ ಔಷಧಿಯನ್ನು ನೀಡುವ ಮೂಲಕ ಸಾವಿನ ದವಡೆಯಲ್ಲಿದ್ದವರನ್ನು ಪಾರು ಮಾಡಿದ ಕೀರ್ತಿ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ಸೂರಪ್ಪ ಪೂಜಾರಿಯವರಿಗೆ ಸಲ್ಲುತ್ತದೆ. 40 ವರ್ಷದಿಂದ ತನ್ನ ತಂದೆ- ತಾಯಿಯಿಂದ ಬಳುವಳಿಯಾಗಿ ಬಂದ ಈ ನಾಟಿ ಔಷಧಿಯನ್ನು ತನ್ನ 77ರ ಹರೆಯದಲ್ಲೂ ಅವರು ನೀಡುತ್ತಿದ್ದು, ಎರಡು ದಿನಗಳ ಹಿಂದೆ ಕನ್ನಡಿ ಹಾವು ಕಚ್ಚಿ ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಬದುಕಿಸುವ ಮೂಲಕ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.


ಹಾವು ಸೇರಿದಂತೆ ವಿಷ ಜಂತುಗಳ ಕಡಿತ, ಸರ್ಪ ಸುತ್ತು, ಕೆಂಪು, ಉಗುರು ಸುತ್ತು, ಪಿಲಿ ಬಾವು, ಮಂಡೆ ಬಾವು, ಪಿಂಗಾರ ಬಾವು, ಸೋಂಕು ಸೇರಿದಂತೆ ಹತ್ತು ಹಲವು ರೋಗಗಳಿಗೆ ಇವರು ನೀಡುವ ನಾಟಿ ಔಷಧಿ ರಾಮಬಾಣವಾಗಿದೆ. ಸ್ತನ ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯೋರ್ವರ ಸ್ತನವನ್ನೇ ತುಂಡರಿಸಬೇಕೆಂದು ವೈದ್ಯರು ಹೇಳಿದಾಗ ಆ ಮಹಿಳೆಯ ರೋಗವನ್ನು ನಾಟಿ ಔಷಧಿಯ ಮೂಲಕ ಗುಣಪಡಿಸಿರುವ ಬಗ್ಗೆ ಹಾಗೂ ಗರ್ಭಪಾತವಾಗಿ ರಕ್ತಸ್ರಾವ ನಿಲ್ಲದೆ ಆಸ್ಪತ್ರೆಯವರೇ ಕೈಚೆಲ್ಲಿದಾಗ ಆ ಮಹಿಳೆಯನ್ನು ತನ್ನ ನಾಟಿ ಔಷಧಿಯ ಮೂಲಕ ಗುಣಪಡಿಸಿರುವ ಬಗ್ಗೆ ಸೇರಿದಂತೆ ಹತ್ತು ಹಲವು ಘಟನೆಗಳನ್ನು ಸೂರಪ್ಪ ಪೂಜಾರಿಯವರು ನೆನಪಿಸಿಕೊಳ್ಳುತ್ತಾರೆ. ನಮ್ಮಿಂದಾಗಲ್ಲ ಎಂದು ಆಸ್ಪತ್ರೆಯವರೇ ಕೈಬಿಟ್ಟ ಪ್ರಕರಣಗಳಲ್ಲಿ ಇವರ ಬಳಿ ಬಂದು ಇವರ ನಾಟಿ ಔಷಧಿ ಸೇವಿಸಿದ ಬಳಿಕ ಗುಣವಾದ ಅದೆಷ್ಟೋ ಉದಾಹರಣೆಗಳಿವೆ.


ಕನ್ನಡಿ ಹಾವು ಕಡಿತಕ್ಕೆ ಚಿಕಿತ್ಸೆ
ತಣ್ಣೀರುಪಂತ ಸಮೀಪದ ಕುದ್ರಡ್ಕ ಎಂಬಲ್ಲಿ ಮನೆಯೊಂದರ ಒಂದೇ ಕೋಣೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ನ.1ರಂದು ರಾತ್ರಿ ವಿಷ ಪೂರಿತ ಕನ್ನಡಿ ಹಾವು ಕಚ್ಚಿ ಪ್ರಾಣಾಪಾಯದ ಭೀತಿ ಮೂಡಿಸಿತ್ತು. ಇವರಲ್ಲಿ ಓರ್ವ ಬಾಲಕನ ಎರಡೂ ಕೈಗೂ ಹಾವು ಕಚ್ಚಿತ್ತು. ಮನೆಯವರಿಗೆ ಮಕ್ಕಳನ್ನು ಚಿಕಿತ್ಸೆಗೆ ಒಂದೋ ಬೆಳ್ತಂಗಡಿ ಅಥವಾ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ. ಆದರೆ ಆ ರಾತ್ರಿ ಒಂದು ಕಡೆ ಹೊಂಡ ಗುಂಡಿಗಳಿಂದಾಗಿ ಸಂಚಾರಕ್ಕೆ ಅಯೋಗ್ಯವೆನಿಸಿದ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯಲ್ಲಿ ತಕ್ಷಣಕ್ಕೆ ಸಾಗುವುದು ಹೇಗೆ ಎಂಬ ಪ್ರಶ್ನೆ ಮೂಡಿದರೆ, ಇನ್ನೊಂದು ಕಡೆ ಈ ತಡರಾತ್ರಿ ವೈದ್ಯರು ಸಿಗಬಹುದೇ ಎಂಬ ಪ್ರಶ್ನೆ ಅವರಲ್ಲಿ ಮೂಡಿತ್ತು. ಆಗ ಅವರಿಗೆ ತಕ್ಷಣ ನೆನಪಾಗಿದ್ದು ನಾಟಿ ವೈದ್ಯರಾದ ಸೂರಪ್ಪ ಪೂಜಾರಿಯವರದ್ದು. ಆ ಮನೆಯ ಯಜಮಾನನಿಗೆ ಹಿಂದೊಮ್ಮೆ ಹಾವು ಕಡಿತಕ್ಕೆ ಇವರೇ ಔಷಧಿ ನೀಡಿ ಗುಣಪಡಿಸಿದ್ದರು. ತಕ್ಷಣವೇ ಅವರು ಈ ಮೂವರು ಮಕ್ಕಳನ್ನು ಸೂರಪ್ಪ ಪೂಜಾರಿಯವರ ಮನೆಗೆ ಕರೆತಂದಿದ್ದು. ಆಗ ರಾತ್ರಿ ಒಂದು ಗಂಟೆಯ ಸಮಯ. ಆದರೂ ತನ್ನ ವಯಸ್ಸನ್ನು ಲೆಕ್ಕಿಸದ ಸೂರಪ್ಪ ಪೂಜಾರಿಯವರು ಎದ್ದು ಔಷಧಿ ಗಿಡದ ಬೇರುಗಳನ್ನು ಅರೆದು ಗಾಯಕ್ಕೆ ಲೇಪ, ಕುಡಿಯಲು ಔಷಧಿ ನೀಡಿದರು. ರಾತ್ರಿ ಮೂರುವರೆ ಗಂಟೆಯಾಗುತ್ತಲೇ ಈ ಮಕ್ಕಳು ಚೇತರಿಸಿಕೊಂಡಿದ್ದು, ಇವರ ದೇಹದಲ್ಲಿದ್ದ ವಿಷದ ಪ್ರಮಾಣ ಇಳಿಕೆಯಾಗತೊಡಗಿತು.


ಕಾಡಲ್ಲಿಲ್ಲ ಗಿಡಮೂಲಿಕೆ!
ಮೊದಲೆಲ್ಲಾ ಗುಡ್ಡ, ಕಾಡುಗಳಲ್ಲಿ ಗಿಡಮೂಲಿಕೆಗಳು ಇತ್ತು. ಆದರೆ ಈಗ ಗುಡ್ಡ, ಕಾಡುಗಳೇ ಇಲ್ಲವಾಗಿವೆ. ಆದ್ದರಿಂದ ಗಿಡ ಮೂಲಿಕೆಗಳು ಸಿಗುತ್ತಿಲ್ಲ. ಕೆಲವೊಂದು ಅಂಗಡಿಗಳಲ್ಲಿ ಇದು ಸಿಗುತ್ತದೆ. ಅದನ್ನು ನಾನು ತಂದು ಶೇಖರಿಸಿಟ್ಟಿರುತ್ತೇನೆ. ಒಂದೊಂದು ಬೇರಿಗೂ ಕೆ.ಜಿ.ಗೆ ಎರಡು ಸಾವಿರದಷ್ಟು ಬೆಲೆ ಇದೆ. ಆದರೂ ನಾನು ನನ್ನಲ್ಲಿ ಔಷಧಿಗೆ ಬರುವವರಿಗೆ ಇಂತಿಷ್ಟೇ ಹಣ ಕೊಡಿ ಎಂದು ಕೇಳುವುದಿಲ್ಲ. ಹಾಗೆ ಕೇಳಲೂ ಬಾರದು. ಅಂತಹ ಹಣ ನನಗೆ ಬೇಡ ಕೂಡಾ. ಅವರು ಕೊಟ್ಟದ್ದನ್ನು ತೆಗೆದುಕೊಳ್ಳುತ್ತೇನೆ. ಮೊದಲೆಲ್ಲಾ ನಾನು ಹಣವನ್ನೇ ಪಡೆಯುತ್ತಿರಲಿಲ್ಲ. ನಾನು ಶ್ರೀ ಗುಳಿಗ ದೈವವನ್ನು ನಂಬಿ ಔಷಧಿ ನೀಡುವುದು. ಆಗ ಅದಕ್ಕೊಂದು ಅಗೇಲು ಸೇವೆಗೆ ಅದಕ್ಕೊಂದು ಕೋಳಿಯನ್ನು ನೀಡಿ ಎಂದು ಹೇಳುತ್ತಿದ್ದೆ. ಆದರೆ ಈಗ ಕೋಳಿಯನ್ನು ನೀಡುವ ಬದಲು ಹಣವನ್ನು ಕೊಡುತ್ತಿದ್ದಾರೆ. ಅದನ್ನು ಒಟ್ಟು ಸೇರಿಸಿ ವರ್ಷಕ್ಕೊಮ್ಮೆ ನಾನು ಆರಾಧಿಸಿಕೊಂಡು ಬರುವ ಶ್ರೀ ಗುಳಿಗ ದೈವಕ್ಕೆ ಅಗೇಲು ಸೇವೆ ನೀಡುತ್ತೇನೆ. ಅದಕ್ಕೆ ಔಷಧಿ ಪಡೆದುಕೊಂಡವರನ್ನು, ಊರವರನ್ನು ಕರೆಯುತ್ತೇನೆ. ಅಗೇಲು ಸೇವೆಯಾದ ಬಳಿಕ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎನ್ನುತ್ತಾರೆ ಸೂರಪ್ಪ ಪೂಜಾರಿಯವರು.


ಮಗನ ಸಹಾಯ
ಈಗ ನನಗೆ ಪ್ರಾಯವಾಯಿತು. ಹಾಗಾಗಿ ಈಗ ಔಷಧಿ ನೀಡುವಾಗ ನನ್ನ ಮಗನಾದ ಯೋಗೀಶ್ ಅಳಕೆಯ ಸಹಾಯ ಪಡೆಯುತ್ತೇನೆ. ಆತನೂ ನನಗೆ ಸಹಕರಿಸುತ್ತಿದ್ದಾನೆ. ಆದರೆ ಈಗ ಆತ ಸ್ವಯಂ ಆಗಿ ಔಷಧಿ ನೀಡುವುದಿಲ್ಲ. ಮುಂದಕ್ಕೆ ನನ್ನ ಹಿರಿಯರು ನನಗೆ ಆರ್ಶೀವದಿಸಿದ ರೀತಿಯಲ್ಲೇ ಆರ್ಶೀವದಿಸಿ ಅವನಿಗೆ ಈ ವಿದ್ಯೆಯನ್ನು ಹಸ್ತಾಂತರಿಸುತ್ತೇನೆ. ಔಷಧಿಗೆ ಬರುವವರಿಗೆ ಮೊದಲಿಗೆ ಶ್ರೀ ಗುಳಿಗ ದೈವವನ್ನು ನೆನೆಸಿ ನೂಲು ಮಂತ್ರಿಸಿ ಕಟ್ಟುತ್ತೇನೆ. ಬಳಿಕ ಔಷಧಿ ಕೊಡಲು ಆರಂಭಿಸುತ್ತೇನೆ. ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಗುಣಪಡಿಸಲಾಗದ ಕಾಯಿಲೆಯವರನ್ನು ಗುಣಪಡಿಸಿದ್ದೇನೆ ಎನ್ನುತ್ತಾರೆ ಸೂರಪ್ಪ ಪೂಜಾರಿಯವರು.


ಕಚ್ಚಿದ ಹಾವನ್ನು ಕೊಲ್ಲಬಾರದು
ಯಾವುದೇ ಕಾರಣಕ್ಕೂ ಹಾವು ಕಚ್ಚಿದಾಗ ಕಚ್ಚಿದ ಹಾವನ್ನು ಕೊಲ್ಲಬಾರದು. ಹಾವನ್ನು ಕೊಂದರೆ ಗಾಯ ಇನ್ನಷ್ಟು ಉಲ್ಭಣವಾಗುತ್ತದೆ ಎಂಬ ನಂಬಿಕೆ ನಾವು ನೀಡುವ ವೈದ್ಯ ಪದ್ಧತಿಯ ಪ್ರಕಾರ ಇದೆ. ಮತ್ತೆ ಔಷಧಿ ಪಡೆದ ಬಳಿಕ ಸುಮಾರು ಮೂರು ಗಂಟೆಯಷ್ಟು ಕಾಲ ಹಾವು ಕಚ್ಚಿಸಿಕೊಂಡವರನ್ನು ಮಲಗಲು ಬಿಡಬಾರದು. ಅವರು ಎಚ್ಚರದಿಂದಲೇ ಇರುವಂತೆ ನೋಡಿಕೊಳ್ಳಬೇಕು. ಹಾಗೆ ಮಲಗಿದರೆ ಹಾನಿ ಉಂಟಾಗುವ ಸಂಭವವಿರುತ್ತದೆ. ಮತ್ತೆ ನಾನು ನೀಡುವ ಮದ್ದು ಸೇವಿಸುವಾಗ ಯಾವುದೇ ಕಾರಣಕ್ಕೂ ನಂಜು ಇರುವ ಪದಾರ್ಥಗಳನ್ನು ಸೇವಿಸಬಾರದು. ಸ್ವಲ್ಪ ದಿನಕ್ಕೆ ಉಪ್ಪಿನಕಾಯಿ ಮತ್ತು ಗಂಜಿ ಸೇವಿಸಿದರೆ ಉತ್ತಮ. ಹಾವು ಕಚ್ಚಿದಕ್ಕೆ ಮದ್ದು ನೀಡುವಾಗ ವಿಷ ಇಳಿಕೆಯಾದ ಪ್ರಮಾಣವನ್ನು ನೋಡಿಕೊಂಡು ಮದ್ದು ನೀಡುತ್ತೇನೆ. ಮೂರು ದಿನಗಳ ಮದ್ದಿನಲ್ಲಿ ಊತ, ನೋವು, ನಂಜು ಎಲ್ಲಾ ಸಂಪೂರ್ಣ ಕಡಿಮೆಯಾಗುತ್ತದೆ. ನಾನು ಎಲ್ಲಾ ವಿಷದ ಹಾವುಗಳು ಕಚ್ಚಿದಾಗ ಔಷಧಿ ನೀಡಿದ್ದೇನೆ. ಆದರೆ ಹಿರಿಯರು ಅನುಸರಿಸಿಕೊಂಡು ಬಂದ ನಂಬಿಕೆಯ ಪ್ರಕಾರ ನಾನು ನಾಗರಹಾವು ಕಚ್ಚಿದ್ದಕ್ಕೆ ಔಷಧಿ ನೀಡುವುದಿಲ್ಲ. ಆದರೆ ಅಂದೊಬ್ಬರು ಬೇರೆ ವಿಷದ ಹಾವು ಕಚ್ಚಿದ್ದೆಂದು ಬಂದಿದ್ದರು. ಅದಕ್ಕೆ ಮದ್ದು ಕೊಟ್ಟಿದ್ದೆ. ಅವರು ಗುಣಮುಖರಾದರು. ಆದರೆ ಬಳಿಕ ಅವರು ಹೇಳಿದರು ನನಗೆ ಬನದ ಬಳಿ ನಾಗರಹಾವು ಕಚ್ಚಿದ್ದೆಂದು. ನೀವು ಮದ್ದು ಕೊಡಲಿಕ್ಕೆ ಇಲ್ಲ ಎಂದು ಸುಳ್ಳು ಹೇಳಿದೆ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಾರೆ ಸೂರಪ್ಪ ಪೂಜಾರಿಯವರು.


ಅಂದಿನ ಕಾಲದಲ್ಲಿ ಆರನೇ ತರಗತಿ ಶಿಕ್ಷಣವನ್ನು ಪಡೆದಿರುವ ಸೂರಪ್ಪ ಪೂಜಾರಿಯವರು ಬೀಡಿ ಗುತ್ತಿಗೆದಾರನಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಇವರನ್ನು ಈಗಾಗಲೇ ಹಲವು ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ. ಪತ್ನಿ ದೇವಕಿ ಪುತ್ರರಾದ ಯೊಗೀಶ್ ಅಳಕೆ, ವಿಜಯ ಅಳಕೆ ಹಾಗೂ ಪುತ್ರಿಯರಾದ ಶೋಭಾ, ಹೇಮಾವತಿ ಅವರನ್ನೊಳಗೊಂಡ ಸಂತೃಪ್ತಿಯ ಕುಟುಂಬ ಇವರದ್ದಾಗಿದ್ದು, ಮಕ್ಕಳಿಗೆಲ್ಲಾ ಮದುವೆಯೂ ಆಗಿದೆ. ಈಗ ಪುತ್ರರೊಂದಿಗೆ ಸುಖೀ ಸಂಸಾರ ನಡೆಸುತ್ತಿರುವ ಸೂರಪ್ಪ ಪೂಜಾರಿಯವರು ಇನ್ನಷ್ಟು ನಾಟಿ ಚಿಕಿತ್ಸೆ ನೀಡಲಿ. ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಅರಸಿ ಬರಲಿಯೆನ್ನುವುದೇ ಆಶಯ.


ಸಾವಿರಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ
ನನ್ನ ಈ 40 ವರ್ಷದ ಅನುಭವದಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದೇನೆ. ಈಗಲೂ ಬಂದವರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಹಾವು ಕಡಿತಕ್ಕೊಳಗಾಗಿ ಚಿಕಿತ್ಸೆಗೆ ಹಲವರು ಬಂದು ನಾನು ನೀಡಿದ ಔಷಧಿಯಿಂದ ಗುಣಮುಖರಾಗಿದ್ದಾರೆ. ಹಾವು ಕಚ್ಚಿದ ಕೂಡಲೇ ವಿಷ ಏರದಂತೆ ಕಡಿತದ ಗಾಯದ ಮೇಲೆ ಗಟ್ಟಿ ಹಗ್ಗದಿಂದ ಕಟ್ಟಬೇಕು. ಆ ಬಳಿಕ ಚಿಕಿತ್ಸೆಗೆ ಬರಬೇಕು ಎಂದು ಸಲಹೆ ನೀಡುತ್ತಾರೆ ನಾಟಿ ವೈದ್ಯ ಸೂರಪ್ಪ ಪೂಜಾರಿಯವರು.



ಮೊದಲು ಗುರುತಿಸಿದ್ದೇ `ಸುದ್ದಿ ಬಿಡುಗಡೆ’
ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯು ನನ್ನ ತಂದೆಯವರನ್ನು ಮೊದಲು ಗುರುತಿಸಿದ್ದು. ಸುಮಾರು 15 ವರ್ಷಗಳ ಹಿಂದೆ ಪತ್ರಿಕೆಯ 25ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನನ್ನ ತಂದೆಯವರಿಗೆ ಸುದ್ದಿ ಬಿಡುಗಡೆ ಪತ್ರಿಕೆಯು ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಆ ಬಳಿಕ ಇನ್ನಷ್ಟು ಪ್ರಶಸ್ತಿ ಪುರಸ್ಕಾರ ತಂದೆಯವರಿಗೆ ಒಲಿದು ಬಂದವು.
ಯೋಗೀಶ್ ಅಳಕೆ, ಸೂರಪ್ಪ ಪೂಜಾರಿಯವರ ಪುತ್ರ

LEAVE A REPLY

Please enter your comment!
Please enter your name here