ನ. 8-9: ಬೆಟ್ಟಂಪಾಡಿ ಪ್ರಿಯದರ್ಶಿನಿಯಲ್ಲಿ ಪುತ್ತೂರು ಶೈಕ್ಷಣಿಕ ವಲಯದ ಬಾಲಕ ಬಾಲಕಿಯರ ಕ್ರೀಡಾಕೂಟ – ಕ್ರೀಡಾದರ್ಶಿನಿ -25

0

ಬೆಟ್ಟಂಪಾಡಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆ ಬೆಟ್ಟಂಪಾಡಿ ಇವರ ಆಶ್ರಯದಲ್ಲಿ 2025-26 ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ 14 ಮತ್ತು 17 ರ ವಯೋಮಾನದ ಬಾಲಕ-ಬಾಲಕಿಯವರ ಕ್ರೀಡಾಕೂಟ ʻಕ್ರೀಡಾದರ್ಶಿನಿʼ -25ʼ ನ. 8 ಮತ್ತು 9 ರಂದು ಬೆಟ್ಟಂಪಾಡಿ ಬಿಲ್ವಗಿರಿ ನವೋದಯ ಕ್ರೀಡಾಂಗಣದಲ್ಲಿ ಜರಗಲಿದೆ.


ಬೆಳ್ಳಿಹಬ್ಬ ಸಂಭ್ರಮಕ್ಕೆ ಕ್ರೀಡಾಕೂಟದ ಮೆರುಗು
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯು ಗ್ರಾಮೀಣ ಭಾಗದ ಬೆಟ್ಟಂಪಾಡಿಯ ಆಸುಪಾಸಿನ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಮಾನವೀಯ ಮತ್ತು ನೈತಿಕ ಗುಣ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಗ್ರ ಶಿಕ್ಷಣವನ್ನು ಕಲ್ಪಿಸುತ್ತಿದೆ. ದಿ. ಬೈಲಾಡಿ ಬಾಬು ಗೌಡರವರ ಕನಸಿನ ಕೂಸಾಗಿ 25 ವರ್ಷಗಳ ಹಿಂದೆ ಹುಟ್ಟಿಕೊಂಡ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಅನೇಕ ಸವಾಲುಗಳ ಮಧ್ಯೆಯೂ ಈ ಭಾಗದ ಶಿಕ್ಷಣ ಪ್ರೇಮಿಗಳ ಮನಸ್ಸು ಗೆದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿ ಬೆಳಗುತ್ತಿದೆ. ಸಂಸ್ಥೆಯ 25ನೇ ವರ್ಷಾಚರಣೆ ʻಬೆಳ್ಳಿಹಬ್ಬ ಸಂಭ್ರಮʼ ದ ಸಲುವಾಗಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ವಿಶಾಲ ಬಯಲು ರಂಗಮಂದಿರ, ಇಂಟರ್‌ಲಾಕ್‌ ಅಳವಡಿಕೆ, ಆವರಣ ಗೋಡೆ ಇನ್ನಿತರ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 25 ರ ಸಂಭ್ರಮದ ಇಡೀ ವರ್ಷ ಅನೇಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳ ಪೈಕಿ ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲೂಕು ಮಟ್ಟದ ಕ್ರೀಡಾಕೂಟದ ಆಯೋಜಕತ್ವವನ್ನು ವಹಿಸಿಕೊಂಡು ಕ್ರೀಡಾಕೂಟ ಯಶಸ್ವಿಯಾಗಲು ಸಕಲ ಸಿದ್ದತೆ ನಡೆಸಲಾಗಿದೆ.


ಪೂರ್ವಭಾವಿ ಸಭೆ
ಕ್ರೀಡಾಕೂಟದ ಆಯೋಜನೆಗಾಗಿ ಈ ಹಿಂದೆ ಹಲವು ಬಾರಿ ಪೂರ್ವಭಾವಿ ಸಭೆಗಳನ್ನು ನಡೆಸಿ ವಿವಿಧ ಉಪಸಮಿತಿಗಳನ್ನು ರಚಿಸಿ ಪೋಷಕರು ಮತ್ತು ವಿದ್ಯಾಭಿಮಾನಿಗಳನ್ನು ಸಮಿತಿಗೆ ಆಯ್ಕೆ ಮಾಡಿ ಕಾರ್ಯಾನುಷ್ಠಾನ ಮಾಡಲಾಗಿದೆ. ನ.6ರಂದು ಶಾಲೆಯಲ್ಲಿ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ಮತ್ತು ಕ್ರೀಡಾಕೂಟ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕರವರ ಅಧ್ಯಕ್ಷತೆಯಲ್ಲಿ ಅಂತಿಮ ಹಂತದ ತಯಾರಿಯ ಬಗ್ಗೆ ಸಮಾಲೋಚನಾ ಸಭೆ ನಡೆಯಿತು.  ಈ ವೇಳೆ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್‌ ರೈ ಬೈಲಾಡಿ, ಆಡಳಿತ ಸಮಿತಿಯ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ, ದೈಹಿಕ ಶಿಕ್ಷಣ ಶಿಕ್ಷಕರಾದ ಸೀತಾರಾಮ ಗೌಡ ಮಿತ್ತಡ್ಕ, ಸುಧಾಕರ ರೈ ಗಿಳಿಯಾಲು, ಸುಧೀರ್‌ ರೈ ಪಾಣಾಜೆ, ಚಂದ್ರಕಲಾ, ದಾಮೋದರ ಕಜೆ ಹಾಗು ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಗುರು ರಾಜೇಶ್‌ ಎನ್‌. ಸ್ವಾಗತಿಸಿದರು.


ನ. 8 ರಂದು ಬೆಳಿಗ್ಗೆ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಧ್ವಜಾರೋಹಣ ಗೈಯಲಿದ್ದಾರೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್‌ ಕುಮಾರ್‌ ರೈ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಸದರು, ವಿಧಾನಪರಿಷತ್‌ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಸಮಾಜ ವಿವಿಧ ಕ್ಷೇತ್ರಗಳ ಸಾಧಕರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನ. 9 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. 

5 ವಲಯದ 1300 ವಿದ್ಯಾರ್ಥಿಗಳು
ಪುತ್ತೂರು ಮತ್ತು ಕಡಬ ತಾಲೂಕುಗಳನ್ನೊಳಗೊಂಡ ಪುತ್ತೂರು ಶೈಕ್ಷಣಿಕ ವಲಯದ 5 ವಲಯಗಳ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಸುಮಾರು 1300 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. 150 ರಷ್ಟು ಕ್ರೀಡಾ ತೀರ್ಪುಗಾರಿಕೆ ಮತ್ತು ನಿರ್ವಹಣಾ ಅಧಿಕಾರಿಗಳು ಇರಲಿದ್ದಾರೆ. ಎರಡು ದಿನಗಳಲ್ಲಿ  58 ಕ್ರೀಡಾ ಸ್ಪರ್ಧೆಗಳು 14 ಮತ್ತು 17 ರ ವಯೋಮಾನ ಬಾಲಕ-ಬಾಲಕಿಯರಿಗೆ ನಡೆಯಲಿದೆ. ಗ್ರಾಮಾಂತರ ಭಾಗದಲ್ಲಿ ತಾಲೂಕು ಕ್ರೀಡಾಕೂಟ ಆಯೋಜನೆಯಾಗಿದ್ದು, ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಎರಡು ದಿನಗಳೂ ಪ್ರೇಕ್ಷಕರಿಗೂ ಊಟೋಪಚಾರದ ವ್ಯವಸ್ಥೆ ಇರಲಿದೆ. ಸರಕಾರಿ ಪ್ರೌಢಶಾಲೆಯಲ್ಲಿ ಕ್ರೀಡಾಪಟುಗಳಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ.

ಮುಂದೂಡಿಕೆಯಾಗಿದ್ದ ಕ್ರೀಡಾಕೂಟ
ಈದೇ ಕ್ರೀಡಾಕೂಟವು ಈ ಹಿಂದೆ ಸೆ. 28 ಮತ್ತು 29 ರಂದು ನಡೆಸಲು ಸರ್ವ ಸಿದ್ದತೆ ನಡೆಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಕೊನೇ ಕ್ಷಣದಲ್ಲಿ ಬದಲಾವಣೆ ಮಾಡಿ ಕ್ರೀಡಾಕೂಟವನ್ನು ಮುಂದೂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದರು. ಇದೀಗ ಕ್ರೀಡಾಂಗಣವನ್ನು ಆಕರ್ಷಕವಾಗಿ ಸಿದ್ದಗೊಳಿಸಿ 1500 ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕ್ರೀಡಾಕೂಟಕ್ಕೆ ಅಂತಿಮ ಹಂತದ ಸಿದ್ದತೆ ನಡೆದಿದೆ.

ಈ ಕ್ರೀಡಾಕೂಟವನ್ನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆ ಮಾಡಿದ್ದೇವೆ. ಊಟೋಪಚಾರದ ವ್ಯವಸ್ಥೆಗಳನ್ನು ಜೋಡಿಸಿಕೊಳ್ಳಲಾಗಿದೆ. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮವನ್ನು ಅಭಿವೃದ್ಧಿ ಯೋಜನೆಗಳ ಜೊತೆಗೆ ಇಡೀ ತಾಲೂಕಿನ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಬಾರಿಯ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ಮಾಡಲು ಸಿದ್ದರಾಗಿದ್ದೇವೆ.
– ಶಶಿಕುಮಾರ್‌ ರೈ ಬಾಲ್ಯೊಟ್ಟು ಅಧ್ಯಕ್ಷರು, ಬೆಳ್ಳಿಹಬ್ಬ ಸಮಿತಿ

ಬಿಲ್ವಗಿರಿ ಕ್ರೀಡಾಂಗಣ ಇಂದು ಸೌಂದರ್ಯದಿಂದ ಕಂಗೊಳಿಸುತ್ತಿದೆ. ಪ್ರಿಯದರ್ಶಿನಿಯ ಬೆಳ್ಳಿಹಬ್ಬದ ಸೌಂದರ್ಯವನ್ನು ಇದು ಹೆಚ್ಚಿಸಿದೆ. ಈ ಕ್ರೀಡಾಕೂಟದ ಯಶಸ್ಸಿನನಲ್ಲಿ ಗ್ರಾಮೀಣ ಭಾಗದ ವಿದ್ಯಾಭಿಮಾನಿಗಳ ಸಹಕಾರವನ್ನು ಯಾಚಿಸುತ್ತೇವೆ.
– ಮನಮೋಹನ ರೈ ಚೆಲ್ಯಡ್ಕ ಅಧ್ಯಕ್ಷರು, ಕ್ರೀಡಾಕೂಟ ಸಮಿತಿ

ಶಿಕ್ಷಣ ಇಲಾಖೆಯ ಕ್ರೀಡಾಕೂಟ ಇದಾಗಿದ್ದರೂ, ಇದರ ಆಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರಿಯದರ್ಶಿನಿ ಆಡಳಿತ ಮಂಡಳಿ ಮತ್ತು ಬೆಳ್ಳಿಹಬ್ಬ ಸಮಿತಿ ಹಾಗೂ ಕ್ರೀಡಾಕೂಟ ಸಮಿತಿ ಉತ್ತಮ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
– ಸೀತಾರಾಮ ಗೌಡ ಮಿತ್ತಡ್ಕ ದೈಹಿಕ ಶಿಕ್ಷಣ ಶಿಕ್ಷಕರು

ನಮ್ಮ ವಿದ್ಯಾಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಇಂದು ಕ್ರೀಡಾ ಕ್ಷೇತ್ರದ ವಿವಿಧ ಸ್ತರಗಳಲ್ಲಿ ಸಾಧನೆಗೈದು ಮಿಂಚಿದವರಿದ್ದಾರೆ. ಈ ನಿಟ್ಟಿನಲ್ಲಿ ಅವರೆಲ್ಲರ ಸಾಧನೆಯ ಪ್ರತೀಕವಾಗಿ ಈ ಬಾರಿಯ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶಕ್ಕೆ ತುಂಬಾ ಸಂತೋಷಪಟ್ಟಿದ್ದೇವೆ.
– ರಾಜೇಶ್‌ ಎನ್‌. ಮುಖ್ಯಗುರುಗಳು

LEAVE A REPLY

Please enter your comment!
Please enter your name here