





ಪುತ್ತೂರು: ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ನಿಂದ ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕ ಇದರ ವತಿಯಿಂದ 350 ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ಸಾಂಸ್ಕ್ರತಿಕ ವೈಭವ ನ.19ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸಿ.ಎಚ್ ಕೋಚಣ್ಣ ರೈ ಪ್ರಾಂಗಣ ಮತ್ತು ಜಿ.ಎಲ್.ಆಚಾರ್ಯ ವೇದಿಕೆಯಲ್ಲಿ ನಡೆಯಲಿದೆ ಎಂದು ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ಕಾರ್ಯಾಧ್ಯಕ್ಷ ಬಿ.ಪುರಂದರ ಭಟ್ ಅವರು ಹೇಳಿದ್ದಾರೆ.


ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮೋಹನ್ ಆಳ್ವರಿಗೂ ನನಗೂ ಸುಮಾರು 40 ವರ್ಷದ ಹಿಂದಿನ ಸಂಬಂಧ. ಅವರು ದೀಪಸ್ತಂಭ, ಸರ್ಚ್ಲೈಟ್ನಂತೆ ಕಂಗೊಳಿಸುತ್ತಾರೆ. ಎಳೆಯರ ವ್ಯಕ್ತಿತ್ವಕ್ಕೆ ಸೃಜನಾತ್ಮಕವಾದ ಹೊಸ ಆಯಾಮವೊಂದನ್ನು ಸೃಷ್ಟಿಸಿ ಕೊಡುವುದು ಕಲಿಕೆಯ ಪ್ರಥಮ ಅವಶ್ಯಕತೆ ಎಂಬಂತೆ ಮೋಹನ್ ಆಳ್ವ ಅವರು ಇದೊಂದು ಮನೋರಂಜನೆಯ ವಿಷಯವಲ್ಲ. ಸಂದೇಶ ಕೊಡುವ ವಿಚಾರ ಎಂದರು. ಹಾಗಾಗಿ ಅವರ ಸಂಸ್ಥೆ ಹಿಂದುಸ್ಥಾನದಲ್ಲಿ ನೆನಪಿನಲ್ಲಿಡುವ ಸಂಸ್ಥೆಯಾಗಿದೆ ಎಂದ ಅವರು ಸುಮಾರು 12 ಪ್ರಕಾರಗಳ ವಿಷಯಗಳನ್ನು ಒಳಗೊಂಡು ಕಾರ್ಯಕ್ರಮದಲ್ಲಿ ನೃತ್ಯ ಸಾಂಸ್ಕೃತಿಕ ಪ್ರದರ್ಶನಗೊಳ್ಳಲಿದೆ. ಅದರಲ್ಲಿ ಪಾರಮಾರ್ಥಿಕ, ಲೌಕಿಕ, ತಾತ್ವಿಕತೆಯನ್ನು ಗುರುತಿಕೊಳ್ಳಬಹುದಾಗಿದೆ ಎಂದರು.





ಸಮಿತಿ ಕೋಶಾಧಿಕಾರಿ ಬಿ.ಐತ್ತಪ್ಪ ನಾಯ್ಕ್ ಅವರು ಮಾತನಾಡಿ, ಆರಂಭದಲ್ಲಿ ಪುತ್ತೂರಿನ ಸುದಾನ ದೇವಾಲಯದ ಮೈದಾನದಲ್ಲಿ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಬಳಿಕ ವಿಶ್ವ ನುಡಿಸಿರಿ, ವಿರಾಸತ್ ಆಯಿತು. 2016ರಲ್ಲಿ ಇನ್ನೊಂದು ಕಾರ್ಯಕ್ರಮ ಅಲ್ಲೇ ನಡೆಯಿತು. ಬಳಿಕ ಕಳೆದ 10 ವರ್ಷ ನಡುವೆ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಇದೀಗ 3ನೇ ಕಾರ್ಯಕ್ರಮ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿದೆ. ಎಲ್ಲರು ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಆಸನದ ವ್ಯವಸ್ಥೆ, ಪಾರ್ಕಿಂಗ್ ಎಲ್ಲವನ್ನೂ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೊ. ಅನೋಲ, ಉಷಾ ಬಿ. ಶೆಟ್ಟಿ ಉಪಸ್ಥಿತರಿದ್ದರು.










