





ಪುತ್ತೂರು: ಅತ್ಯಂತ ಕಾರಣಿಕತೆಯನ್ನು ಹೊಂದಿರುವ ತುಳುನಾಡಿನ ಹಲವು ಗರಡಿಗಳಲ್ಲಿ ಒಂದಾಗಿರುವ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲುವಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವವು 2026 ಜನವರಿ 3 ರಂದು ನಡೆಯಲಿದ್ದು ಇದರ ಅಂಗವಾಗಿ ಪೂರ್ವಭಾವಿ ಸಭೆಯು ನ.16 ರಂದು ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರ ಅಧ್ಯಕ್ಷತೆಯಲ್ಲಿ ರಾಮಜಾಲು ಗರಡಿ ವಠಾರದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕೆ.ಸಂಜೀವ ಪೂಜಾರಿಯವರು, 18 ನೇ ವರ್ಷದ ಅಷ್ಠದಶ ಸಂಭ್ರಮದ ರಾಮಜಾಲು ಗರಡಿ ವೈಭವದ ಜಾತ್ರೋತ್ಸವವು 2025 ನೇ ಜನವರಿ 3 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.ಬೆಳಿಗ್ಗೆ ಎಂದಿನಂತೆ ಕೋಟಿ ಚೆನ್ನಯರಿಗೆ, ಬ್ರಹ್ಮಬೈದೆರುಗಳಿಗೆ ಪೂಜೆ ಪುನಸ್ಕಾರ, ಪರ್ವಗಳು ನಡೆದು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆದು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆದು ರಾತ್ರಿ ಕೋಟಿ ಚೆನ್ನಯರು ಗರಡಿ ಇಳಿಯುವ ಕಾರ್ಯಕ್ರಮದೊಂದಿಗೆ ನೇಮೋತ್ಸವವು ನಡೆಯಲಿದೆ ಎಂದು ತಿಳಿಸಿದರು.






ಇದೇ ಸಂದರ್ಭದಲ್ಲಿ ಕಳೆದ ವರ್ಷದ ನೇಮೋತ್ಸವದ ಲೆಕ್ಕಚಾರವನ್ನು ಸಭೆಯ ಮುಂದಿಟ್ಟರು. ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವವು ವರ್ಷದಿಂದ ವರ್ಷಕ್ಕೆ ಅತ್ಯಂತ ವಿಜೃಂಭಣೆಯಿಂದ ಜರಗುತ್ತಿದ್ದು ಭಕ್ತರ ಸಹಕಾರವೂ ಅದೇ ರೀತಿಯಲ್ಲಿ ಬರುತ್ತಿದೆ. ಪ್ರತಿಯೊಬ್ಬರ ಸಹಕಾರದಿಂದ ಹಾಗೂ ಶ್ರೀ ಕೋಟಿ ಚೆನ್ನಯರ ಅನುಗ್ರಹದಿಂದ ನೇಮೋತ್ಸವವು ಇಷ್ಟೊಂದು ಅದ್ಧೂರಿಯಾಗಿ ನಡೆಯಲು ಕಾರಣವಾಗಿದೆ ಎಂದು ಕೆ.ಸಂಜೀವ ಪೂಜಾರಿ ಕೂರೇಲು ತಿಳಿಸಿದರು.
ರಾಮಜಾಲು ಗರಡಿ ಗೌರವ ಪ್ರಶಸ್ತಿ ಪ್ರದಾನ
ಪ್ರತಿ ವರ್ಷದಂತೆ ಈ ವರ್ಷ ಕೂಡ ರಾಮಜಾಲು ಗರಡಿ ಗೌರವ ಪ್ರಶಸ್ತಿ ಪ್ರದಾನ ನಡೆಯಲಿದ್ದು ಈ ಹಿಂದೆ ನಮ್ಮ ಹಿರಿಯರಾದ ಕೂರೇಲು ಸುಬ್ಬಪ್ಪ ಪೂಜಾರಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ನಡೆಯುತ್ತಿದ್ದು ಆ ಬಳಿಕ ರಾಮಜಾಲು ಗರಡಿ ಗೌರವ ಪ್ರಶಸ್ತಿ ಪ್ರದಾನ ನಡೆಯುತ್ತಿದೆ ಎಂದ ಕೆ.ಸಂಜೀವ ಪೂಜಾರಿ ಕೂರೇಲುರವರು ಈಗಾಗಲೇ ರಾಜಕೀಯ, ಶೈಕ್ಷಣಿಕ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗರಡಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಈ ಸಲದ ನೇಮೋತ್ಸವದಲ್ಲಿ ವೈದ್ಯಾಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವೈದ್ಯ ದಂಪತಿಗಳಿಗೆ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.
ಸುಬ್ರಹ್ಮಣ್ಯ ಶ್ರೀಗಳಿಂದ ಆಶೀರ್ವಚನ
ಈ ಸಲದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವೈದ್ಯಾಕೀಯ ಕ್ಷೇತ್ರದ ವೈದ್ಯರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿಚಾರವನ್ನು ಸಂಜೀವ ಪೂಜಾರಿಯವರು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ನಡೆಯುವ ತುಳು ನಾಟಕದ ಬಗ್ಗೆ ಮಾಹಿತಿ ನೀಡಿದ ಇವರು ಈಗಾಗಲೇ ಪೊಲೀಸ್ ಇಲಾಖೆಯಿಂದ ಮೈಕ್, ಡಿಜೆ ನಿಷೇಧ ಕಾಯ್ದೆ ಜಾರಿಯಲ್ಲಿರುವುದರಿಂದ ಈ ಬಗ್ಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಂಡ ಬಳಿಕ ತುಳು ನಾಟಕ ಆಡಿಸುವ ಬಗ್ಗೆ ತೀರ್ಮಾನಿಸುವುದು ಎಂದು ತಿಳಿಸಿದರು. ಉಳಿದಂತೆ ನೇಮೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಅದ್ಧೂರಿಯಾಗಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗರಡಿಯ ಅರ್ಚಕ ಹರೀಶ್ ಶಾಂತಿ ಸೇರಿದಂತೆ ರಾಮಜಾಲು ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು, ಕೂರೇಲು ಶ್ರೀ ಮಲರಾಯ ಸ್ವಯಂ ಸೇವಾ ಸಂಘಟನೆಯ ಪದಾಧಿಕಾರಿಗಳು, ಊರಿನ ಗಣ್ಯರು, ಸ್ಥಳೀಯ ಭಕ್ತಾಧಿಗಳು ಭಾಗವಹಿಸಿದ್ದರು. ನೇಮಾಕ್ಷ ಸುವರ್ಣ ಸ್ವಾಗತಿಸಿದರು. ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ವಂದಿಸಿ ಸರ್ವರು ಸಹಕಾರ ನೀಡುವಂತೆ ವಿನಂತಿಕೊಂಡರು.
ಫೆ.07-08 ರಾಮಜಾಲು ಗರಡಿಯ ಬ್ರಹ್ಮಕಲಶೋತ್ಸವ
ರಾಮ ಲಕ್ಷ್ಮಣರು ಅಡ್ಡಾಡಿದ ಪ್ರದೇಶ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ರಾಮಜಾಲು ಪ್ರದೇಶವು ಕೋಟಿ ಚೆನ್ನಯರು ನಡೆದಾಡಿದ ಪುಣ್ಯ ಭೂಮಿಯಾಗಿದೆ.ಇಂತಹ ಪುಣ್ಯ ನೆಲದಲ್ಲಿ ಕಾರಣಿಕತೆ ಮೆರೆಯುತ್ತಿರುವ ಶ್ರೀ ಕೋಟಿ ಚೆನ್ನಯರ ರಾಮಜಾಲು ಗರಡಿ ಕ್ಷೇತ್ರವು ಹತ್ತೂರಲ್ಲೂ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಈಗಾಗಲೇ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ನಡೆದು 17 ವರ್ಷಗಳು ಕಳೆದಿದ್ದು ಇದೀಗ ಮತ್ತೆ 2026 ಫೆಬ್ರವರಿ 7 ಮತ್ತು 8 ರಂದು ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಬಹಳ ಅದ್ಧೂರಿಯಾಗಿ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಮಾಹಿತಿ ನೀಡಿದರು.










