





ಪುತ್ತೂರು: ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡ ಶಿಕ್ಷಕ, ಖ್ಯಾತ ನಿರೂಪಕರು ಮತ್ತು ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ಅವರನ್ನು ನ.18ರಂದು ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.


ಬಾಲಕೃಷ್ಣ ರೈಯವರಂತ ಶಿಕ್ಷಕರು ದೊರೆತಿರುವುದು ನಮಗೆ ಹೆಮ್ಮೆ- ಭಗಿನಿ.ಡಾ.ಲಿಲ್ಲಿ ಪಿರೇರಾ
ಅಧ್ಯಕ್ಷತೆ ವಹಿಸಿ, ಬಾಲಕೃಷ್ಣ ರೈಯವರನ್ನು ಅಭಿನಂದಿಸಿದ ಬೆಥನಿ ಶಿಕ್ಷಣ ಸಂಸ್ಥೆಗಳು ಮಂಗಳೂರು ಇದರ ಪ್ರಾಂತ್ಯಾಧಿಕಾರಿನಿ ಡಾ.ಲಿಲ್ಲಿ ಪಿರೇರಾ ಬಿ.ಎಸ್ ಮಾತನಾಡಿ, ಬೆಥನಿ ಶಿಕ್ಷಣ ಮಂಡಳಿ ಮೇಲಿನ ಪ್ರೀತಿಯಿಂದ ಕಳೆದ ಹದಿನೇಳು ವರ್ಷದಿಂದ ಬಾಲಕೃಷ್ಣ ರೈ ಲಿಟ್ಲ್ ಫ್ಲವರ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಮಾಣಿಕತೆ, ಶ್ರದ್ಧೆ ಹಾಗೂ ನಿಷ್ಟೆಯಿಂದ ಸೇವೆ ಮಾಡುವ ಅವರ ಕೈಗೆ ಯಾವುದೇ ಜವಾಬ್ದಾರಿ ನೀಡಿದರೂ ಶೇ.100ರಷ್ಟು ಯಶಸ್ವಿಯಾಗುತ್ತಿದ್ದು ನಾವು ಹಲವು ರೀತಿಯಲ್ಲಿ ಗಮನಿಸಿದ್ದೇವೆ. ಅವರಿಗೆ ಸಂಸ್ಥಾಪಕರ ಮೇಲಿನ ಭಕ್ತಿ ಗೌರವ ನಮಗೇ ಆಶ್ಚರ್ಯ ಉಂಟು ಮಾಡಿದೆ. ಸಹ ಶಿಕ್ಷಕರಾಗಿ ಪಾಠಕ್ಕೆ ಸೀಮಿತವಾಗಿತರದೆ ಕಬಡ್ಡಿಯಲ್ಲಿ ನಮ್ಮ ಸಂಸ್ಥೆಯನ್ನು ಮೂರು ಭಾರಿ ರಾಷ್ಟ್ರ ಮಟ್ಟಕ್ಕೆ ಕೊಂಡೋಯ್ಯುವಲ್ಲಿ ಪ್ರಮುಖವಾಗಿದ್ದಾರೆ. ಬೆಥನಿ ಶಿಕ್ಷಣ ಮಂಡಳಿಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಬಾಲಕೃಷ್ಣ ರೈಯವರು ಅದ್ವಿತೀಯ ಸಾಧನೆ ಮಾಡಿದ್ದಾರೆ. ಇಂತಹ ಶಿಕ್ಷಕರಿರುವುದು ನಮಗೂ ಹೆಮ್ಮೆ ಎಂದರು.





ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಲಭಿಸಲಿ-ದಯಾನಂದ ರೈ ಕೋಮಂಡ:
ಅಭಿನಂದನಾ ಭಾಷಣ ಮಾಡಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ ದೈಹಿಕ ಶಿಕ್ಷಕ ದಯಾನಂದ ರೈ ಕೋರ್ಮಂಡ ಮಾತನಾಡಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಬಾಲಕೃಷ್ಣ ಅವರು ನನ್ನ ನೆಚ್ಚಿನ ಶಿಷ್ಯ. ಇವರು ಸಾಮಾನ್ಯ ವ್ಯಕ್ತಿಯಲ್ಲ. ಒಂದು ಶಕ್ತಿಯಾಗಿದ್ದಾರೆ. ಉತ್ತಮ ತಂಡ ರಚನೆ ಮಾಡಬೇಕು ಎಂಬ ತುಡಿತ ಶಿಕ್ಷಕರಲ್ಲಿದ್ದರೆ ವಿದ್ಯಾರ್ಥಿಗಳನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಬಹುದು ಎಂಬುದಕ್ಕೆ ಬಾಲಕೃಷ್ಣ ಅವರೇ ನಿದರ್ಶನ. ಬಾಲಕೃಷ್ಣ ಮತ್ತು ನಾನು ಹಲವಾರು ನಾಟಕಗಳಲ್ಲಿ ನಟಿಸಿದ್ದೇವೆ. ಅವರಿಂದ ತರಬೇತಿ ಪಡೆದ ಬೆಥನಿ ಸಂಸ್ಥೆಯ ಕಬಡ್ಡಿ ತಂಡವು ಸತತ ಮೂರು ಬಾರಿ ರಾಷ್ಟ್ರ ಮಟ್ಟದ ಸಾಧನೆ ಮಾಡಿರುವುದು ರಾಜ್ಯದಲ್ಲಿ ಪ್ರಥಮವಾಗಿದೆ. ಸಹ ಶಿಕ್ಷಕರಾಗಿ,ಕಬಡ್ಡಿ ತರಬೇತಿ, ನಿರೂಪಕರು, ಯಶಸ್ವೀ ಸಂಘಟಕರು ಸೇರಿದಂತೆ ಬಹುಮುಖ ಪ್ರತಿಭೆಯಾಗಿಯಾಗಿರುವ ಬಾಲಕೃಷ್ಣ ರೈಯವರಿಗೆ ಪ್ರಶಸ್ತಿ ಅರ್ಹವಾದ ವ್ಯಕ್ತಿಯೇ ಆಗಿದ್ದಾರೆ. ಇವರ ಸಾಧನೆ ನಿರಂತರವಗಿರಲಿ. ಮುಂದೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದರು.
ಬಾಲಕೃಷ್ಣರವರಿಗೆ ದೊರೆತ ಪ್ರಶಸ್ತಿ ನಮಗೆ ದೊರೆತಷ್ಟು ಸಂತಸ ತಂದಿದೆ-ರಾಮಚಂದ್ರ ಭಟ್
ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಉಪಾಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ, ನಾನು ಶಿಕ್ಷಕ ರಕ್ಷಕ ಸಂಘ, ಸುರಕ್ಷಾ ಸಮಿತಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಬಾಲಕೃಷ್ಣ ರೈಯವರು ನೀಡಿದ ಸಹಕಾರ ಯಾವತ್ತೂ ಮರೆಯುವಂತಿಲ್ಲ. ಎಲ್ಲರೊಂದಿಗೆ ನಯ ವಿನಯದಿಂದ ಇದ್ದ ಅವರು ಪೋಷಕರು, ಶಿಕ್ಷಕರ ಹಾಗೂ ಶಾಲೆಯ ಮಧ್ಯೆ ಅವಿನಾಭಾವ ಸಂಬಂಧ ಸೃಷ್ಠಿಸುವಲ್ಲಿ ಸಂಪರ್ಕದ ಕೊಂಡಿಯಾಗಿದ್ದರು. ಶಾಲೆಯಲ್ಲಿ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಾವು ಅವರಿಗೆ ಬೆನ್ನೆಲುಬಾಗಿ ನಿಂತಿದ್ದೇವೆ. ಎಲ್ಲರೊಂದಿಗೆ ಚರ್ಚಿಸಿ ಸಂಘಟಿಸುವ ವಿಶೇಷ ಚಾಕ ಚಕ್ಯತೆ ಅವರಲ್ಲಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅವರ ಶ್ರಮಕ್ಕೆ ಸಂದ ಗೌರವವಾಗಿದೆ. ಅವರಿಗೆ ದೊರೆತ ಪ್ರಶಸ್ತಿ ನಮಗೆ ದೊರೆತಷ್ಟು ಸಂತಸ ತಂದಿದೆ ಎಂದರು.
ಬಾಲಕೃಷ್ಣ ಅವರಿಂದಾಗಿ ನಮ್ಮ ಸಂಸ್ಥೆಯು ಸಾಧನೆಯ ಶಿಖರಕ್ಕೇರಿದೆ-ಭಗಿನಿ ಪ್ರಶಾಂತಿ ಬಿ.ಎಸ್:
ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್.ಮಾತನಾಡಿ, 2009ರಲ್ಲಿ ಶಾಲೆಗೆ ಸೇರಿದ್ದ ಬಾಲಕೃಷ್ಣ ಅವರ ಕಾರ್ಯಶೈಲಿಯೇ ನಮಗೆ ಬಹಳಷ್ಟು ತೃಪ್ತಿ ನೀಡಿತ್ತು. ಇಂತಹ ಓರ್ವ ಶಿಕ್ಷಕ ನಮ್ಮ ಶಾಲೆಯಲ್ಲಿ ಇರಬೇಕು ಎಂಬ ತೀರ್ಮಾನವಾಗಿತ್ತು. ನಮ್ಮ ಸಂಸ್ಥೆಯನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ದೈಹಿಕ ಶಿಕ್ಷಕರಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಿ ಸಾಧನೆಯ ಶಿಖರಕ್ಕೇರಿಸಿದ್ದಾರೆ. ಸಂಸ್ಥೆಯ ಕಬಡ್ಡಿ ತಂಡವು ಸತತ ಮೂರು ಬಾರಿ ರಾಷ್ಟ್ರ ಮಟ್ಟದಲ್ಲಿ ಮಾಡಿದ ಸಾಧನೆಯ ಹಿಂದೆ ಬಾಲಕೃಷ್ಣ ಅವರ ಶ್ರಮ ಅಡಗಿದೆ. ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ ಎಂದರು.
ನನ್ನ ಕ್ಲಸ್ಟರ್ನ ಸಾಧನೆ ನನಗೂ ಹೆಮ್ಮೆ ತಂದಿದೆ-ಶಶಿಕಲಾ:
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕಲಾ ಮಾತನಾಡಿ, ಬಾಲಕೃಷ್ಣ ಅವರು ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠವನ್ನೂ ಮಾಡುತ್ತಾರೆ. ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ನನ್ನ ಕ್ಲಸ್ಟರ್ ವಿಭಾಗಕ್ಕೆ ತಾಲೂಕು ಮಟ್ಟ ಹಾಗೂ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬಂದಿರುವುದು ಸಂತಸ ತಂದಿದೆ ಎಂದರು.
ಬೆಥನಿ ಸಂಸ್ಥೆಯು ಝೀರೋದಲ್ಲಿದ್ದ ನನ್ನನ್ನು ಹೀರೋ ಮಾಡಿದೆ-ಬಾಲಕೃಷ್ಣ ರೈ ಪೊರ್ದಾಲ್:
ಅಭಿನಂದನೆ ಸ್ವೀಕರಿಸಿದ ಬಾಲಕೃಷ್ಣ ರೈ ಪೊರ್ದಾಲ್ ಮಾತನಾಡಿ, 2009ರಲ್ಲಿ ಶಿಕ್ಷಕ ವೃತ್ತಿಗೆ ನಾನು ಲಿಟ್ಲ ಫ್ಲವರ್ ಶಾಲೆ ಆಯ್ಕೆ ಮಾಡಿದ್ದೇನೆ. 17 ವರ್ಷದ ನನ್ನ ವೃತ್ತಿ ಜೀವನದಲ್ಲಿ ಪ್ರಚಾರದಲ್ಲಿ ಝೀರೋದಲ್ಲಿದ್ದ ನನ್ನನ್ನು ಹೀರೋ ತನಕ ಮಾಡಿರುವುದು ಲಿಟ್ಲ್ ಫ್ಲವರ್ ಶಾಲೆ. ನನ್ನ ಸಾಧನೆಯ ಹಿಂದೆ ಬೆಥನಿ ಸಂಸ್ಥೆ ಹಾಗೂ ನನ್ನ ಶಾಲೆಯ ಸಹಕಾರವಿದೆ. ತನ್ನ ಉಸಿರು ಇರುವ ತನಕ ಸದಾ ಸಂಸ್ಥೆಯ ಜೊತೆಗಿದ್ದೇನೆ. ಕ್ರೀಡಾ ಕ್ಷೇತ್ರದ ಸಾಧನೆ ಹಾಗೂ ನಿರೂಪಣೆಯ ಹಿಂದೆ ನನ್ನ ಗುರು ದಯಾನಂದ ರೈಯವರ ಸ್ಪೂರ್ತಿ, ಸಲಹೆ, ಮಾರ್ಗದರ್ಶನವಿದೆ. ಸುಧಾಕರ ರೈಯವರ ಪ್ರೋತ್ಸಾಹವಿದೆ. ಕಬಡ್ಡಿಯಲ್ಲಿ ಸಾಧನೆ ಮಾಡುವಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ರಕ್ಷಕ-ಶಿಕ್ಷಕ ಸಂಘದವರ ಉತ್ತಮ ಸಹಕಾರದಿಂದ ಸಾಧನೆ ಸಾಧ್ಯವಾಗಿದೆ. ಸಾಧನೆಯ ಹಿಂದ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರನ್ನು ನಾನು ಸದಾ ಚಿರೃಣಿಯಾಗಿದ್ದೇನೆ. ನನ್ನ ಮೇಲಿನ ಅಭಿಮಾನದಿಂದ ಸನ್ಮಾನ ಆಯೋಜಿಸಿದವರಿಗೂ ಕೃತಜ್ಞತೆ ಸಲ್ಲಿಸಿದರು.
ಅಭಿನಂದನೆ:
ಬಾಲಕೃಷ್ಣ ರೈಯವರನ್ನು ಬೆಥನಿ ಶಿಕ್ಷಣ ಸಂಸ್ಥೆ ಹಾಗೂ ಲಿಟ್ಲ್ ಫ್ಲವರ್ ಶಾಲಾ ಆಡಳಿತ ಮಂಡಳಿಯವರು ಶಾಲು ಹೊದಿಸಿ, ಫಲ, ಪುಷ್ಪ ನೀಡಿ ಅಭಿನಂದಿಸಿದರು. ಶಾಲೆಯ ರಕ್ಷಕ-ಶಿಕ್ಷಕ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಬಾಲಕೃಷ್ಣ ರೈಯವರು ವೃತ್ತಿಗೆ ಸೇರ್ಪಡೆಗೊಂಡ ಬಳಿಕ ಅಲ್ಲಿ ನಿವೃತ್ತರಾದ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲಕೃಷ್ಣ ರೈಯವರನ್ನು ಅಭಿನಂದಿಸಿ, ಗೌರವಿಸಿರುವುದು ವಿಶೇಷವಾಗಿತ್ತು. ಬಾಲಕೃಷ್ಣ ರೈಯವರ ತನ್ನ ಭಾಷಣದಲ್ಲಿ ತನ್ನ ವೃತ್ತಿ ಜೀವನ ಸಾಧನೆ ಅದರ ಹಿಂದಿನ ಶ್ರಮ, ಸಹಕರಿಸಿದವರನ್ನು ಸ್ಮರಿಸಿಕೊಂಡಾಗ ಸಭೆಯಲ್ಲಿದ್ದವರನ್ನು ಬಾವುಕರನ್ನಾಗಿಸಿತ್ತು. ಮುಖ್ಯ ಶಿಕ್ಷಕರಾದ ಐರಿನ್ ವೇಗಸ್, ವೆನಿಶಾ ಬಿ.ಎಸ್ ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡೀಸ್ ಹಾಗೂ ಎಲ್ಲಾ ಶಿಕ್ಷಕರು ಸೇರಿ ಬಾಲಕೃಷ್ಣ ರೈಯವರ ಸಾಧನೆಯ ಬಗ್ಗೆ ರಚಿಸಿದ ಶುಭಾಶಯ ಹಾಡಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಮಾಜಿ ಉಪಾಧ್ಯಕ್ಷ ರಘುನಾಥ ರೈ, ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನೆರವೇರಿತು. ಶಾಲಾ ಮುಖ್ಯ ಶಿಕ್ಷಕಿ ಐರಿನ್ ವೇಗಸ್ ಸ್ವಾಗತಿಸಿದರು. ಲವೀನಾ ಪಸನ್ನ ವಂದಿಸಿದರು. ವಿಲ್ಮಾ ಫರ್ನಾಂಡೀಸ್ ಸನ್ಮಾನ ಪತ್ರ ವಾಚಿಸಿದರು. ಪ್ರಿಫಿಲ್ಡಾ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.
ಸರ್ವೆ ಎಸ್.ಜಿ.ಎಂ ಪ್ರೌಢಶಾಲಾ ನಿವೃತ್ತ ಮುಖ್ಯ ಗುರು ಶ್ರೀನಿವಾಸ್, ನಿವೃತ್ತ ಶಿಕ್ಷಕರಾದ ಕೆ.ಪಿ ಜೋಸೆಫ್, ಮೇರಿ ಡಿಸಿಲ್ವಾ, ರೋಸ್ ಲಿನ್ ಡಿಸಿಲ್ವಾ, ಡೋರತಿ ಮೇರಿ ಡಿ ಸೋಜ, ಲೀಡಿಯಾ ರಸ್ಕಿನಾ, ಮೆಸ್ಕಾನ ನಿವೃತ್ತ ಅಡಿಟರ್ ಫ್ರಾಂಕಿ ಲೋಬೋ, ಶಾಲಾ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನನ್ನ ಬೆಳವಣಿಗೆಯಲ್ಲಿ ‘ಸುದ್ದಿ’ಯ ಸಹಕಾರವಿದೆ:
ಬಾಲಕೃಷ್ಣ ರೈ ಆಗಿ ನಾನು ಸಮಾಜದಲ್ಲಿ ಎಲ್ಲಾ ಕಡೆಗಳಲ್ಲಿ ಗುರುತಿಸಿಕೊಳ್ಳಬೇಕಾದರೆ ಸುದ್ದಿ ಬಿಡುಗಡೆ ಪತ್ರಿಕೆಯ ಸಹಕಾರ ಬಹಳಷ್ಟಿದೆ. ನನ್ನ ವೃತ್ತಿ ಕ್ಷೇತ್ರದ ಆರಂಭದಿಂದ ಶಾಲೆ ಹಾಗೂ ವೈಯಕ್ತಿಕ ವಿಚಾರದಲ್ಲಿಯೂ ಸುದ್ದಿ ಬಿಡುಗಡೆ ಪತ್ರಿಕೆಯು ಬಹಳಷ್ಟು ನನ್ನನ್ನು ಬೆಳೆಸಿದೆ. ನನ್ನ ಬೆಳವಣಿಗೆಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಅಭಿನಂದನೆ ಸ್ವೀಕರಿಸಿದ ಬಾಲಕೃಷ್ಣ ರೈಯವರು ಸುದ್ದಿ ಪತ್ರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.









