





ಆದಿ ಸುಬ್ರಹ್ಮಣ್ಯನಂತೆ ಹುತ್ತಕ್ಕೆ ಪೂಜೆ ಸಲ್ಲುವ ಪುತ್ತೂರು ತಾಲೂಕಿನ ಏಕೈಕ ಕ್ಷೇತ್ರ


ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.25-26ರಂದು ನಡೆಯಲಿರುವ ಪಂಚಮಿ,ಚಂಪಾ ಷಷ್ಠಿ ಮಹೋತ್ಸವ ,ಜಾತ್ರೋತ್ಸವ ನಡೆಯಲಿದೆ.






ಕ್ಷೇತ್ರ ವಿಶೇಷತೆ
ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲುವುದು ಎಲ್ಲರಿಗೂ ತಿಳಿದ ಸಂಗತಿ. ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಆದಿ ಕುಕ್ಕೆಯ ಮಾದರಿಯಲ್ಲಿ ಆರಾಧನೆ ನಡೆಯುತ್ತದೆ. ಹಾಗಾಗಿ ಭಕ್ತರ ಪಾಲಿಗೆ ಇದು ಎರಡನೆಯ ಸುಬ್ರಹ್ಮಣ್ಯ. ಕೊಳ್ತಿಗೆ ಗ್ರಾಮದ ನೆಟ್ಟಾರಿನಿಂದ ಬಾಯಂಬಾಡಿ ಪಾಲ್ತಾಡಿ ತನಕ ಹಬ್ಬಿರುವ ಪರ್ವತ ಪಂಕ್ತಿಯ ಮಧ್ಯ ಭಾಗ ನಳೀಲು. ನಾಲ್-ಇಲ್ ಸೇರಿ ನಳೀಲು ಆಗಿದೆ.
ತುಳುವಿನಲ್ಲಿ ನಾಲ್ ಎಂದರೆ ನಾಲ್ಕು, ಇಲ್ಲ್ ಎಂದರೆ ಮನೆ ಎಂದರ್ಥ. ಪಾಕೃತಿಕ ಸೊಬಗಿನ ಊರಿದು. ಇಲ್ಲಿ ನಾಗರೂಪೀ ಸುಬ್ರಹ್ಮಣ್ಯ ಹತ್ತೂರಿನ ಭಕ್ತರ ಆರಾಧ್ಯ ದೇವರು. ಇತಿಹಾಸದ ಪ್ರಕಾರ ನಳೀಲಿನ ಸುಬ್ರಹ್ಮಣ್ಯ ಗುಡಿ ಮೂಲತಃ ಜೈನರಸರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರಬೇಕು. ಒಂದು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇದೆ. ಗುಡಿಯು ಪಾಳು ಬಿದ್ದಾಗ ಮೂರ್ತಿಯ ಸುತ್ತ ಹುತ್ತ ಬೆಳೆದು, ಬಳಿಕ ಅದಕ್ಕೆ ಆರಾಧನೆ ಸಲ್ಲುತ್ತದೆ ಎಂಬ ಐತಿಹ್ಯ ಇದೆ.
ಹುತ್ತದ ರೂಪದಲ್ಲಿ ನೆಲೆ ನಿಂತ ಸುಬ್ರಹ್ಮಣ್ಯನಿಗೆ ಬಗೆ-ಬಗೆಯ ಸೇವೆಗಳು ಅರ್ಪಣೆಯಾಗುತ್ತಿದೆ. ದಿನನಿತ್ಯ ಅರ್ಚಕರು ನಾಗನಿಗೆ ಪೂಜೆ ಸಲ್ಲಿಸುತ್ತಾರೆ. ಹುತ್ತರೂಪದ ಗುಡಿಗೆ ಆರಾಧನೆ ನಡೆಯುತ್ತದೆ. ಪೂಜೆಯ ಬಳಿಕ ಬಟ್ಟಲಲ್ಲಿ ಹಾಲು-ನೀರಿಟ್ಟು ಬರುತ್ತಾರೆ. ಈ ಹಾಲನ್ನು ನಾಗ ಕುಡಿಯುತ್ತಾನೆ ಎಂಬ ನಂಬಿಕೆ ಇದರ ಹಿಂದಿದೆ. ಅದಕ್ಕೆ ಪುಷ್ಟಿ ನೀಡುವಂತೆ ಆಗಾಗ ನಾಗ ಪ್ರತ್ಯಕ್ಷನಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾನೆ. ಆಳೆತ್ತರಕ್ಕೆ ನಿಂತ ವಲ್ಮೀಕ ಕೆಲವೊಮ್ಮೆ ಪವಾಡದಂತೆ ಕುಬ್ಬಗೊಳ್ಳುವುದು ಇದೆ.
ಇಲ್ಲಿ ಆಶ್ಲೇಷ ಬಲಿ, ಸರ್ಪ ಸೇವೆ ನಡೆಯುತ್ತದೆ. ಅದರ ಜತೆಗೆ ರಂಗಪೂಜೆ, ಹೂವಿನಪೂಜೆ, ನಾಗತಂಬಿಲ ಮೊದಲಾದ ಸೇವೆಗಳಿವೆ. ಈ ಬಾರಿ ಎರಡು ದಿನಗಳ ಕಾಲ ಚಂಪಾ ಷಷ್ಟಿ ಮಹೋತ್ಸವದ ಜತೆಗೆ ವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಬ್ರಹ್ಮಕಲಶೋತ್ಸವದ ಬಳಿಕ ದೇವಸ್ಥಾನವು ವೇಗದಲ್ಲಿ ಅಭಿವೃದ್ಧಿಯನ್ನು ಕಂಡಿದೆ.ದೇವಸ್ಥಾನದಲ್ಲಿ ಅತಿಥಿ ಗೃಹ,ಅರ್ಚಕರ ಮನೆ,ದೇವಸ್ಥಾನದ ಸುತ್ತ ಇಂಟರ್ಲಾಕ್ ಅಳವಡಿಕೆ,ದೇವಸ್ಥಾನದ ಸುತ್ತ ಶೀಟ್ ಅಳವಡಿಕೆ ,ವಿಶಾಲ ಪಾರ್ಕಿಂಗ್ ವ್ಯವಸ್ಥೆ, ವಿವಾಹ ಸೇರಿದಂತೆ ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಸ್ಥಳವಕಾಶ ಮೊದಲಾದ ಕಾರ್ಯಗಳು ನಡೆದಿವೆ.

ಸಂತೋಷ್ ಕುಮಾರ್ ರೈ ನಳೀಲು ಅವರು 20 ವರ್ಷಗಳಿಂದ ದೇವಸ್ಥಾನ ಆಡಳಿತ ಮೊಕ್ತೇಸರರಾಗಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಸುಬ್ರಹ್ಮಣ್ಯ ನಂಬಿದವರನ್ನು ಕೈ ಬಿಡಲ್ಲ ಎನ್ನುವ ಸಂತೋಷ್ ಕುಮಾರ್ ರೈ ಅವರು ದೇವಸ್ಥಾನಕ್ಕೆ ತನ್ನದೇ ವಿಶೇಷ ಕಾರಣಿಕತೆ ಇದೆ. ಸಂತಾನ ಭಾಗ್ಯವಿಲ್ಲದವರಿಗೆ ಸಂತಾನ ಭಾಗ್ಯ, ವಿವಾಹವಾಗದವರಿಗೆ ಕಂಕಣ ಭಾಗ್ಯ, ಶನಿ ದೋಷ ನಿವಾರಣೆಗೆ, ಸರ್ಪದೋಷ ನಿವಾರಣೆಗಾಗಿ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಪ್ರಾರ್ಥಿಸಿ ಪೂಜೆ ಮಾಡಿಸಿಕೊಂಡು ದೇವರ ಅನುಗ್ರಹ ಪಡೆದವರು ಹಲವರು ಇದ್ದಾರೆ ಎನ್ನುತ್ತಾರೆ.
ನ.25-26: ಪಂಚಮಿ, ಚಂಪಾ ಷಷ್ಠೀ ಮಹೋತ್ಸವ, ಜಾತ್ರೋತ್ಸವ
ಉತ್ಸವದ ಅಂಗವಾಗಿ ನ.24ರಂದು ಸಂಜೆ ಊರವರಿಂದ ಹಸಿರು ಹೊರೆಕಾಣಿಕೆ,ಭಜನಾ ಕಾರ್ಯಕ್ರಮ ನಡೆಯಲಿದೆ. ನ.25ರಂದು ಬೆಳಿಗ್ಗೆ 9 ರಿಂದ ಭಜನಾ ಕಾರ್ಯಕ್ರಮ,ಬೆಳಿಗ್ಗೆ 9.30ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ,ನವಕ ಕಲಶಪೂಜೆ,ಆಶ್ಲೇಷ ಬಲಿ,ಶ್ರೀ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ,ಪಂಚ ಗವ್ಯಾಭಿಷೇಕ,ನವಕ ಕಲಶಾಭಿಷೇಕ,ದೈವಗಳಿಗೆ ತಂಬಿಲ,ನಾಗದೇವರಿಗೆ ಪಂಚಾಮೃತ ಅಭಿಷೇಕ,ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5 ರಿಂದ ಅಭಿನವ ಯಕ್ಷಕಲಾ ಕೇಂದ್ರ ಮಾಡಾವು ಇದರ ವಿದ್ಯಾರ್ಥಿಗಳಿಂದ ವಾಸುದೇವ ರೈ ಬೆಳ್ಳಾರೆ ಇವರ ನೇತೃತ್ವದಲ್ಲಿ ವೀರ ಅಭಿಮನ್ಯು ಯಕ್ಷಗಾನ ನಡೆಯಲಿದೆ. ಬಳಿಕ ದೈವಗಳ ಭಂಡಾರ ತೆಗೆದು ಶ್ರೀ ದೇವರಿಗೆ ರಂಗಪೂಜೆ,ಶ್ರೀ ದೇವರ ಬಲಿಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ನಡೆಯಲಿದೆ.
ರಾತ್ರಿ ಅಮ್ಮ ಕಲಾವಿದರು ಕುಡ್ಲ ಇವರಿಂದ ಆನ್ ಮಗೆ ತುಳು ನಾಟಕ ಪ್ರದರ್ಶನ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ನ.26ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ, ಬೆಳಿಗ್ಗೆ9 ರಿಂದ ದೇವರ ಬಲಿ ಹೊರಟು ಚಂಪಾ ಷಷ್ಠೀ ಮಹೋತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ವ್ಯಾಘ್ರ ಚಾಮುಂಡಿ ನೇಮೋತ್ಸವ ,ರುದ್ರ ಚಾಮುಂಡಿ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು ಮತ್ತು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








