ʼ3ನೇ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವದ ಯೋಗ ಭಾಗ್ಯ ಕೂಡಿ ಬಂದಿದೆʼ – ಅರುಣ್ ಕುಮಾರ್ ಪುತ್ತಿಲ

0

ನ.29, 30ಕ್ಕೆ ಪುತ್ತೂರಿನಲ್ಲಿ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜ್ಯೋತ್ಸವ

ಪುತ್ತೂರು: ಕಳೆದ ಎರಡು ವರ್ಷಗಳಿಂದ ಭಕ್ತಿ ಮತ್ತು ಶ್ರದ್ಧೆಯಿಂದ ಹಿಂದು ಬಂಧುಗಳ ಸಹಕಾರದಿಂದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಇದೀಗ 3ನೇ ಬಾರಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಮಾಡುವ ಯೋಗಭಾಗ್ಯ ಬಂದಿದೆ. ಈ ಬಾರಿ ಶ್ರೀನಿವಾಸ ಕಲ್ಯಾಣೋತ್ಸವದ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮಶತಾಬ್ದಿಯನ್ನು ಶಾಶ್ವತವಾಗಿ ಉಳಿಯಬೇಕೆಂಬ ಮತ್ತು ಹಿಂದು ಸಮಾಜ ಸಾಮೂಹಿಕ ವಿವಾಹಕ್ಕೆ ಮುಂದಿನ ದಿನ ಒತ್ತು ಕೊಡಬೇಕೆಂಬ ನಿಟ್ಟಿನಲ್ಲಿ ಹಿಂದವಿ ಸಾಮ್ರಾಜ್ಯೋತ್ಸವ ಮತ್ತು ಸಾಮೂಹಿಕ ವಿವಾಹವನ್ನು ಜೋಡಿಸಿದ್ದೇವೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ತಿಳಿಸಿದ್ದಾರೆ.


ಹಿಂದು ಸಮಾಜಕ್ಕೆ ಶಕ್ತಿ ಕೊಡಬೇಕು ಮತ್ತು ಸನಾತನ ಹಿಂದು ಧರ್ಮ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಿಂದು ಸಮಾಜದ ಮುಂದಿರುವ ನೂರಾರು ಸವಾಲುಗಳಿಗೆ ಒಂದಾಗಿ ಒಟ್ಟಾಗಿ ಸಂದೇಶ ಕೊಡುವ ಕಾರ್ಯಕ್ರಮ ಇದಾಗಬೇಕು. ಹಿಂದವಿ ಸ್ರಾಮಾಜ್ಯೋತ್ಸವದ ಮೂಲಕ ಹಿಂದು ಧರ್ಮದ ಮುಂದೆ, ಕಾರ್ಯಕರ್ತರ, ಸಂಘಟನೆ ಮುಂದೆ ಯಾವ ಸವಾಲು ಇದ್ದರೂ ಅದಕ್ಕೆ ಉತ್ತರ ಕೊಡುವ ಶಕ್ತಿ ಸಿಗಲಿದೆ ಎಂದರು.


ಜೋಡಿಗೆ 75ಸಾವಿರದ ಸಾಹಿತ್ಯ:
ಸಾಮೂಹಿಕ ವಿವಾಹದ ಕುರಿತು ಘೋಷಣೆ ಮಾಡಿದ ಆರಂಭದಲ್ಲಿ 243 ಜೋಡಿಗಳು ನೋಂದಾಯಿಸಿಕೊಂಡಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಅವರು ಮುಂದೆ ಬರಲಿಲ್ಲ. ಜೊತೆಗೆ ನಾವು ಕೂಡಾ ಪೂರ್ಣಪ್ರಮಾಣದ ಜೋಡಿಗಳಿಗೆ ಮಾತ್ರ ವಿವಾಹಕ್ಕೆ ಅವಕಾಶ ನೀಡಿದ್ದೇವೆ. ಸುಮಾರು 75ಸಾವಿರ ರೂಪಾಯಿಯಷ್ಟು ಒಂದು ಜೋಡಿಯ ಸಾಹಿತ್ಯಕ್ಕೆ ಖರ್ಚು ತಗಲುತ್ತದೆ. ಸುಮಾರು ರೂ. 50ಸಾವಿರ ಚಿನ್ನದ ತಾಳಿ, ಕರಿಮಣಿಗೆ ವ್ಯಹಿಸಲಾಗುವುದು. ಉಳಿದಂತೆ ಬಟ್ಟೆಗಳಿಗೆ ಸಹಿತ ಖರ್ಚು ಇದೆ. ಒಟ್ಟಿನಲ್ಲಿ ನಮ್ಮ ಮದುವೆಯಲ್ಲಿ ಯಾವ ಕಾರ್ಯ ಮಾಡಿದ್ದೆವೋ. ಅದೆಲ್ಲವನ್ನು ಸಾಮೂಹಿಕ ವಿವಾಹದ ಜೋಡಿಗಳಿಗೆ ಮಾಡಲಿದ್ದೇವೆ. ಈಗಾಗಲೇ 16 ಜೋಡಿಗಳಿಗೆ ಸಾಹಿತ್ಯ ವಿತರಿಸಲಾಗಿದೆ. ದಿಬ್ಬಣವು ಬೆಳಿಗ್ಗೆ ಗಂಟೆ 8.30ಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ಹೊರಡಲಿದೆ. ವೇದಿಕೆಯಲ್ಲೂ ಜೋಡಿಗಳ ಕುಟುಂಬಗಳು ಜೊತೆಯಲ್ಲಿ ಇರುತ್ತಾರೆ. ಪ್ರತಿ ಜೋಡಿಗೂ ಶೃಂಗಾರ ಮಂಟಪದ ವ್ಯವಸ್ಥೆ ಮಾಡಲಾಗಿದೆ. ವಿವಾಹ ಕಾರ್ಯಕ್ರಮದಲ್ಲೂ ಪ್ರತಿ ಜೋಡಿಗೆ ಒಬ್ಬೊಬ್ಬ ವೈದಿಕರಿರುತ್ತಾರೆ. ಪ್ರಧಾನ ವೈದಿಕರ ಮಾರ್ಗದರ್ಶನದಂತೆ ಆಯಾಯ ವೈದಿಕರು ವಿವಾಹ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.


ನ.28ಕ್ಕೆ ಹೊರೆಕಾಣಿಕೆ, 29ಕ್ಕೆ ಹಿಂದವಿ ಸಾಮ್ರಾಜ್ಯೋತ್ಸವ, 30ಕ್ಕೆ ಸಾಮೂಹಿಕ ವಿವಾಹ, ಶ್ರೀನಿವಾಸ ಕಲ್ಯಾಣೋತ್ಸವ:
ನ.28ಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಹೊರೆಕಾಣಿಕೆ ಮೆರವಣಿಗೆ ದರ್ಬೆಯಿಂದ ಸಂಜೆ ಗಂಟೆ 4ಕ್ಕೆ ಹೊರಡಲಿದೆ. ಪ್ರತಿ ಗ್ರಾಮದಿಂದಲೂ ಬಂದ ಹಸಿರುಹೊರೆಕಾಣಿಕೆ ದರ್ಬೆಯಿಂದ ಮೆರವಣಿಗೆ ಮೂಲಕ ದೇವಸ್ಥಾನ ಸಭಾಭವನದಲ್ಲಿರುವ ಉಗ್ರಾಣದಲ್ಲಿ ಜೋಡಿಸಲಾಗುವುದು. ನ.29ಕ್ಕೆ ಬೆಳಿಗ್ಗೆ ಗಣಪತಿ ಹೋಮದಿಂದ ಆರಂಭಗೊಂಡು ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 4 ರಿಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ವೈಭವದ ಶೋಭಯಾತ್ರೆ ಬೊಳುವಾರಿನಿಂದ ಆರಂಭಗೊಳ್ಳಲಿದೆ. ಸಂಜೆ ಗಂಟೆ 7.30ರಿಂದ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಹಿಂದವಿ ಸ್ರಾಮಾಜ್ಯೋತ್ಸವ ನಡೆಯಲಿದೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗೋರ್ಕಣ ಮಂಡಲಾಧೀಶ್ವರ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಚಿತ್ತಾಪುರ ಮಠದ ವಿದ್ಯೇಂದ್ರ ತೀರ್ಥ ಶ್ರೀಪಾದರು, ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಒಡಿಯೂರು ಗುರುದೇವದತ್ತ ಸಂಸ್ಥಾನಂನ ಗುರುದೇವಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಕನ್ಯಾನ ಶ್ರೀ ಕ್ಷೇತ್ರ ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿ, ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾತ್ರಿ ಮಂಗಳರಾತಿ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಲಾವೈಭವ ಪ್ರದರ್ಶನಗೊಳ್ಳಲಿದೆ. ನ.30ಕ್ಕೆ ಬೆಳಿಗ್ಗೆ ಗಂಟೆ 5.30 ರಿಂದ ಸುಪ್ರಭಾತ ಪೂಜಾ ಸೇವೆ, ಬೆಳಿಗ್ಗೆ ಗಂಟೆ 10.30ರ ಮಕರ ಲಗ್ನದಲ್ಲಿ ಸಾಮೂಹಿಕ ವಿವಾಹ, ಮದ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭ ಭಜನೋತ್ಸವ ನಡೆಯಲಿದೆ. ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.


ರಾಜಕೀಯ ರಹಿತವಾಗಿ ನಡೆಯುವ ಕಾರ್ಯಕ್ರಮ:
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನರಸಿಂಹಪ್ರಸಾದ್ ಅವರು ಮಾತನಾಡಿ, ಇದೊಂದು ರಾಜಕೀಯ ರಹಿತವಾಗಿ ನಡೆಯುವ ಕಾರ್ಯಕ್ರಮ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.


ಟ್ರಸ್ಟ್‌ನಿಂದ ಇನ್ನಷ್ಟು ಜನಪರ ಕಾರ್ಯಕ್ರಮ:
ಕಳೆದ ಎರಡೂವರೆ ವರ್ಷದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯಕ್ಕೆ ಸಂಬಂಧಿಸಿ ನೂರಾರು ಸಮಾಜ ಸೇವೆ ಮಾಡುತ್ತಾ ಬಂದಿದೆ. ಮುಂದಿನ ದಿವಸ ಕೂಡಾ ಅತ್ಯಂತ ಹೆಚ್ಚಿನ ಜನಪರ ಕಾರ್ಯಕ್ರಮ ಟ್ರಸ್ಟ್ ಮೂಲಕ ನಡೆಯಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೇಮ್‌ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಸಂಚಾಲಕರದ ಉಮೇಶ್ ಕೋಡಿಬೈಲ್ ಮತ್ತು ರವಿ ಕುಮಾರ್ ರೈ ಕೆದಂಬಾಡಿಮಠ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕಳೆದ ಸಲಕ್ಕಿಂತಲೂ ದೊಡ್ಡದಾದ ಸಭಾಂಗಣ:
ಕಳೆದ ಬಾರಿ 280 ಚದರ ಅಡಿ ಉದ್ದದ ಸಭಾಂಗಣವಿತ್ತು. ಈ ಬಾರಿ 400 ಚದರ ಅಡಿ ಉದ್ದ ಮತ್ತು 140 ಚದರ ಅಡಿ ಅಗಲದ ಸಭಾಂಗಣ ನಿರ್ಮಾಣ ಆಗಲಿದ್ದು, ಸಭಾಂಗಣ ಮತ್ತು ವೇದಿಕೆ ಸೇರಿ ಒಟ್ಟು 60ಸಾವಿರ ಚದರ ಅಡಿ ಆಗಲಿದ್ದು, ಅನ್ನಛತ್ರವು ಪ್ರತ್ಯೇಕವಾಗಿದ್ದು, ಸುಮಾರು 25ಸಾವಿರ ಚದರ ಅಡಿಯ ಅನ್ನಛತ್ರ ನಿರ್ಮಾಣದ ಸಿದ್ದತೆ ಕಾರ್ಯ ನಡೆಯುತ್ತಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಎಲ್ಲರಿಗೂ ಆಮಂತ್ರಣ ನೀಡಲಾಗಿದೆ
ಇದು ಹಿಂದು ಸಮಾಜದ ಕಾರ್ಯಕ್ರಮ ಹಾಗಾಗಿ ರಾಷ್ಟ್ರೀಯ ಸ್ವಯಂಸೇವಕ ಮತ್ತು ಸಂಘ ಪರಿವಾರದ ಎಲ್ಲರಿಗೂ ಕಾರ್ಯಕ್ರಮದ ಆಮಂತ್ರಣ ನೀಡುವ ವ್ಯವಸ್ಥೆ ಕಾರ್ಯಕರ್ತರಿಂದ ಆಗಿದೆ. ಸಂಘದ ಜವಾಬ್ದಾರಿಯುತ ಸ್ಥಾನದಲ್ಲಿದ್ದವರಿಗೆಲ್ಲರಿಗೂ ನಮ್ಮ ಕಾರ್ಯಕರ್ತರು ಆಮಂತ್ರಣ ನೀಡಿದ್ದಾರೆ. ಅವರೆಲ್ಲರೂ ಭಾಗವಹಿಸುವ ವಿಶ್ವಾಸ ನಮಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

LEAVE A REPLY

Please enter your comment!
Please enter your name here