ಹಲವು ಬೇಡಿಕೆಗಳ ಉದ್ದೇಶವಿಟ್ಟು ನ.29ರಂದು ಉಜಿರೆಯಲ್ಲಿ ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನ

0


ಪುತ್ತೂರು: ರಬ್ಬರ್ ಅನ್ನು ತೋಟಗಾರಿಕಾ ಬೆಳೆಯೆಂದು ಪರಿಗಣಿಸಬೇಕು. ರಬ್ಬರಿನ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಬೇಕು. ರಬ್ಬರ್ ಧಾರಣೆ ಕಿಲೋವೊಂದಕ್ಕೆ ರೂ. 250 ನಿಗದಿಪಡಿಸಬೇಕು ಸಹಿತ ಹಲವು ಬೇಡಿಕೆಗಳನ್ನು ಬೆಳೆಗಾರರ ಪರವಾಗಿ ಸರಕಾರದ ಮುಂದಿಟ್ಟು ಪರಿಹಾರಗಳನ್ನು ಕೊಂಡುಕೊಳ್ಳುವ ವರದಿಯನ್ನು ನ.29ರಂದು ಉಜಿರೆಯಲ್ಲಿ ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನದಲ್ಲಿ ಮಂಡನೆ ಮಾಡಲಾಗುವುದು ಎಂದು ಹಿರಿಯ ಅರ್ಥಶಾಸ್ತ್ರಜ್ಞ ಡಾ. ವಿಘ್ನೇಶ್ವರ ವರ್ಮುಡಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಹಾಗೂ ರಾಜ್ಯದ ರಬ್ಬರ್ ವ್ಯವಹಾರ ಮಾಡುವ ಸಹಕಾರ ಸಂಘಗಳ ಆಶ್ರಯದಲ್ಲಿ ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನ-2025 ನ.29ರಂದು ಬೆಳಗ್ಗೆ 10 ರಿಂದ ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದ್ದು, ಅಲ್ಲಿ ಸಮ್ಮೇಳನದ ಉದ್ದೇಶ ಮತ್ತು ಬೇಡಿಕೆಗಳ ಕುರಿತ ವರದಿಯನ್ನು ಮಂಡನೆ ಮಾಡಲಾಗುವುದು ಎಂದವರು ಹೇಳಿದರು.


ರಾಜ್ಯಮಟ್ಟದ ಸಮ್ಮೇಳನ
ಸಮ್ಮೇಳನವನ್ನು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆ ಸಚಿವರು ಹಾಗು ಜಿಲ್ಲಾ ಉಸ್ತುವಾರಿಯಾಗಿರುವ ದಿನೇಶ್ ಗುಂಡೂರಾವ್ ಅವರು ವರದಿ ಬಿಡುಗಡೆ ಮಾಡಲಿದ್ದಾರೆ. ಕೊಟ್ಟಾಯಂ ರಬ್ಬರ್ ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಸಂತಗೇಸನ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಶಾಸಕರಾದ ಹರೀಶ್ ಪೂಂಜ, ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ ಹಾಗೂ ರಾಜೇಶ್ ನಾೖಕ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ಹಾಗೂ ಮಂಜುನಾಥ ಭಂಡಾರಿ, ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್ ಗುತ್ತಿಗಾರು, ಕರ್ನಾಟಕ ರಾಜ್ಯ ರಬ್ಬರು ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಾಜಿ ಯು.ವಿ., ಎಸ್‌ಕೆಡಿಆರ್‌ಡಿಸಿ ಬಿ.ಸಿ.ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್.ಹಾಗೂ ಮತ್ತಿತರರು ಉಪಸ್ಥಿತರಿರುವರು ಎಂದರು. ಸಮ್ಮೇಳನಕ್ಕೆ 7ಕ್ಕೂ ಹೆಚ್ಚು ಸಂಸ್ಥೆಗಳು ಸಹಕರಿಸುತ್ತಿವೆ. ನಾನಾ ಕ್ರಮ ಹಾಗೂ ಬೇಡಿಕೆಗಳು ಹಾಗೂ ಅಂಶಗಳನ್ನು ಬೆಳೆಗಾರರ ಪರವಾಗಿ ಸರಕಾರಗಳ ಮುಂದಿಟ್ಟು ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಸಮ್ಮೇಳನ ನಡೆಯಲಿದೆ ಎಂದು ಅವರು ತಿಳಿಸಿದರು.


ಪುತ್ತೂರು ರಬ್ಬರ್ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು ಮಾತನಾಡಿ ಕಳೆದ 20 ವರ್ಷಗಳಿಂದ ಪುತ್ತೂರಿನಲ್ಲಿ ರಬ್ಬರ್ ಬೆಳಗಾರರ ಸಹಕಾರ ಸಂಘ ಕಾರ್ಯನಿರ್ವಹಿಸುತ್ತಿದೆ. ನಾವು ಅಧಿಕಾರ ವಹಿಸಿಕೊಂಡಾಗ ನೆಲ್ಯಾಡಿಯಲ್ಲಿ ಒಂದಿದ್ದ ಕೇಂದ್ರವನ್ನು 7 ಕಡೆಯಲ್ಲಿ ಮಾಡಿದ್ದೇವೆ. ಬೆಳೆಗಾರರಿಗೆ ಸಂಘದ ಮೂಲಕ ಒಬ್ಬ ಕೃಷಿಕನಿಗೆ ರೂ. 37ಸಾವಿರ ಬೋನಸ್ ಕೊಟ್ಟಿದ್ದೇವೆ ಎಂದ ಅವರು ಬೆಳೆಗಾರರ ಏಳ್ಗೆಗಾಗಿ ಇದೀಗ ಸಮ್ಮೇಳನವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ರಬ್ಬರ್ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕ ಕೇಶವ ಭಂಡಾರಿ ಕೈಪ ಉಪಸ್ಥಿತರಿದ್ದರು.


ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಕೋರಿಕೆ ಮೇರೆಗೆ ಅರ್ಥಶಾಸ್ತ್ರಜ್ಞ ಡಾ. ವಿಶ್ವೇಶ್ವರ ವರ್ಮುಡಿ ತಯಾರಿಸಿದ `ನ್ಯಾಚುರಲ್ ರಬ್ಬರ್ ಎಕಾನಮಿ ಇನ್ ಕರ್ನಾಟಕ. ಎಟ್ ಕ್ರಾಸ್ ರೋಡ್’ ಕುರಿತು ವರದಿ ಮಂಡನೆಯಾಗಲಿದೆ. ಪ್ರಕೃತ ರಬ್ಬರಿನ ಧಾರಣೆಯು ಕುಸಿಯುತ್ತಿದ್ದ ಪರಿಣಾಮ ರಾಜ್ಯಾದ್ಯಂತ ರಬ್ಬರ್ ಬೆಳೆಗಾರರು ರಬ್ಬರ್ ಮರಗಳನ್ನು ಕಡೆಯುತ್ತಿದ್ದಾರೆ. ಟ್ಯಾಪರ್‌ಗಳ ಸಮಸ್ಯೆ ಇದೆ. ಉತ್ಪಾದನಾ ವೆಚ್ಚ ಹೆಚ್ಚಾಗಿ ನಿರ್ವಹಣೆ ಮಾಡುವುದು ಕಷ್ಟ. ಬೆಳೆಯನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಸೇರಿಸಿಲ್ಲವಾದ್ದರಿಂದ ರಬ್ಬರ್ ಬೆಳೆಗಾರರಿಗೆ ಸರಕಾದ ಸವಲತ್ತು ಸಿಗುತ್ತಿಲ್ಲ. ರಬ್ಬರ್ ಆಮದಿನಿಂದಾಗಿ ಧಾರಣೆ ಕುಸಿತ. ರಬ್ಬರ್ ಒಂದು ಕೃಷಿ ಎಂದು ಕೇರಳದ ಹೈಕೋರ್ಟ್ ಮತ್ತು ರಬ್ಬರಿನ ಟಾಸ್ಕ್ ಪೋರ್ಸ್ ಹೆಸರಿಸಿದ್ದರೂ ಸರಕಾರಗಳು ಇನ್ನೂ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಧಾರಣೆ ಕುಸಿಯುತ್ತಿದ್ದರೂ ಕರ್ನಾಟಕದಲ್ಲಿ ಸರಕಾರ ಮಾರುಕಟ್ಟೆ ಮಧ್ಯೆ ಪ್ರವೇಶ ಮಾಡಲು ಮುಂದಾಗಿಲ್ಲ ಹಾಗಾಗಿ ಮುಂದೆ ರಬ್ಬರ್ ಒಂದು ತೋಟಗಾರಿಕಾ ಬೆಳೆ ಎಂದು ಪರಿಗಣಿಸಬೇಕು. ರಬ್ಬರಿನ ಆಮದು ಮೇಲಿನ ಸುಂಕವನ್ನು ಹೆಚ್ಚಿಸಬೇಕು. ರಬ್ಬರ್ ಕಿಲೋ ಒಂದರ ರೂಪಾಯಿ 250 ನಿಗದಿಪಡಿಸಬೇಕು. ಆಮದಿನ ಪ್ರಮಾಣವನ್ನು ಕಡಿತಗೊಳಿಸಬೇಕು. ಆಂತರಿಕವಾಗಿ ರಬ್ಬರ್ ಬೆಳೆಯಲು ಬೆಳೆಗಾರರಿಗೆ ಸವಲತ್ತು ನೀಡಬೇಕು. ಏಷ್ಯನ್ ರಾಷ್ಟ್ರಗಳಿಂದ ಶೇ. ಸೊನ್ನೆ ಆಮದು ಸುಂಕದ ಆಧಾರದಲ್ಲಿ ಆಮದಾಗುತ್ತಿರುವ ರಬ್ಬರ್‌ಗೆ ಆಮದು ಸುಂಕ ಹೇರಬೇಕು.
ಡಾ. ವಿಘ್ನೇಶ್ವರ ವರ್ಮುಡಿ

LEAVE A REPLY

Please enter your comment!
Please enter your name here