





ಆಂಟನಿ ಪತ್ರಾವೋ ಸ್ಥಾಪಿತ ಸಂಸ್ಥೆಗಳು ಸರ್ವಧರ್ಮಗಳ ತೊಟ್ಟಿಲು-ವಂ|ಲಾರೆನ್ಸ್ ಮಸ್ಕರೇನಸ್


ಪುತ್ತೂರು: ಯೇಸುಕ್ರಿಸ್ತ ತೋರಿಸಿದ ದಾರಿ, ಮೌಲ್ಯಗಳು ಮನುಕುಲಕ್ಕೆ ಕೊಟ್ಟ ಕೊಡುಗೆಯಾಗಿದೆ. ಇವುಗಳನ್ನು ಮಕ್ಕಳಿಗೆ ನೀಡಿದಾಗ ಅವರು ದೇಶದ ಉತ್ತಮ ನಾಗರಿಕರಾಗುತ್ತಾರೆ. ನಮ್ಮ ಸಂಸ್ಥೆ ಎಲ್ಲಾ ಜಾತಿ, ಧರ್ಮ ಮೀರಿದ ಸಂಸ್ಥೆಯಾಗಿದೆ. ಎಲ್ಲಾ ಧರ್ಮದವರನ್ನು ಗೌರವಿಸಿ ಸಮಾನತೆಯನ್ನು ಸಾರಲಾಗುತ್ತದೆ. ಈ ಸಂಸ್ಥೆ ಸರ್ವಧರ್ಮಗಳ ತೊಟ್ಟಿಲು. ಬಂಧುತ್ವದ ಮನೆಯಾಗಿದೆ ಎಂದು ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನಸ್ ಹೇಳಿದರು.





ಮಾಯ್ ದೆ ದೇವುಸ್ ಚರ್ಚ್ ಹಾಲ್‌ನಲ್ಲಿ ನಡೆದ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊ|ಆಂಟನಿ ಪತ್ರಾವೋರವರು 1939ರಿಂದ 1975ರ ತನಕ 36 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಸಲ್ಲಿಸಿದ್ದಾರೆ. ಅವರು ದೈವಾಧೀನರಾಗಿ ಇಂದಿಗೆ 50 ವರ್ಷಗಳು ಸಂದವು. ಅವರು ಇಲ್ಲಿ ಸೇವೆ ಸಲ್ಲಿಸುವಾಗ ಈ ಪ್ರದೇಶದ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡುವ ಕನಸನ್ನು ಕಂಡರು. ಇಲ್ಲಿಗೆ ಧರ್ಮಗುರುಗಳಾಗಿ ಬಂದ ಮೂರು ವರ್ಷಗಳಲ್ಲೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಆರಂಭ ಮಾಡಿದ್ದರು. 1942ರಿಂದ 1970 ರ ನಡುವೆ ಶಿಕ್ಷಣ ಸಂಸ್ಥೆಗಳ ಜೊತೆಗೆ ಆಸ್ಪತ್ರೆ ಕೂಡ ಸ್ಥಾಪನೆ ಮಾಡಿದ್ದಾರೆ. ಇಂದು ನಮ್ಮ ಸಂಸ್ಥೆಗಳ ಸ್ಥಾಪಕರನ್ನು ಸ್ಮರಿಸುವ ದಿನ. ಅಲ್ಲದೆ ಅವರಿಗೆ ಪ್ರೀತಿಯಿಂದ ಗೌರವ ಕೃತಜ್ಞತೆ ಸಲ್ಲಿಸುವ ದಿನವೂ ಆಗಿದೆ. ನಾವೆಲ್ಲರೂ ಒಂದೇ ಮರದ ಕೊಂಬೆಗಳು. ಆದುದರಿಂದ ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದರು. ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳು ಮಂಗಳೂರು ಧರ್ಮಪ್ರಾಂತ್ಯದ ಅಧೀನದಲ್ಲಿ ಬರುತ್ತದೆ. ನಮ್ಮ ಸಂಸ್ಥೆಗಳಿಗೆ ಧ್ಯೇಯ, ಉದ್ಧೇಶ ಇದೆ. ಮೌಲ್ಯಾಧಾರಿತ ವಿದ್ಯಾಭ್ಯಾಸ ನೀಡಿ ಉತ್ತಮ ಜೀವನವನ್ನು ಮಾಡಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕೆಂಬುದು ಉದ್ದೇಶವಾಗಿದೆ. ಇಲ್ಲಿ ಕೆಲಸ ಮಾಡುವ ಎಲ್ಲರೂ ತಮ್ಮ ಸಂಸ್ಥೆಗಳನ್ನು ಪ್ರೀತಿಸಬೇಕು. ನಾವು ಸಂಸ್ಥೆಯ ಭಾಗವಾಗಿದ್ದೇವೆ ಎಂದು ತಿಳಿದುಕೊಂಡು ಪ್ರಿತಿಯಿಂದ ಸೇವೆ ಮಾಡಬೇಕು. ಸಂಸ್ಥೆಯ ಮೇಲೆ ತಮಗೆ ಅಭಿಮಾನ ಇರಬೇಕು ಎಂದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಉಷಾರವರು ಮೊ|ಆಂಟನಿ ಪತ್ರಾವೋರವರಿಗೆ ನುಡಿನಮನ ಸಲ್ಲಿಸಿ ಪತ್ರಾವೋರವರು ಪುತ್ತೂರಿಗೆ ೧೯೩೯ರಲ್ಲಿ ಧರ್ಮಗುರುಗಳಾಗಿ ಮಾಯ್ ದೆ ದೇವುಸ್ ಚರ್ಚ್‌ಗೆ ಬಂದರು. ಸತ್ಯ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣದ ಜೊತೆಗೆ ಆರೋಗ್ಯ ಸೇವೆಯ ಕೊಡುಗೆಯನ್ನು ನೀಡಿದ್ದಾರೆ. ಅವರು ಪುತ್ತೂರಿನ ಬೆಳಕಾಗಿದ್ದರು ಎಂದರು.
ಮಾಯ್ ದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ| ಮರ್ವಿನ್ ಪ್ರವೀಣ್ ಲೋಬೋ, ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಸಂತ ಫಿಲೋಮಿನಾ ಪದವಿ(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ವಂ|ಮ್ಯಾಕ್ಸಿಮ್ ಡಿಸೋಜ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ ಪಾಯಸ್, ಸಂತ ವಿಕ್ಟರನ ಬಾಲಿಕ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರೊಸಲಿನ್ ಲೋಬೊ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಹ್ಯಾರಿ ಡಿಸೋಜ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಾನೆಟ್ ಡಿಸೋಜ, ಸಂತ ಫಿಲೋಮಿನಾ ಮಹಿಳೆಯರ ಹಾಸ್ಟೆಲ್ ವಾರ್ಡನ್ ಸಿಸ್ಟರ್ ಲೂರ್ದು ಮೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧರ್ಮಭಗಿನಿಯರು, ಶಿಕ್ಷಣ ಸಂಸ್ಥೆಗಳ ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಶಿಕ್ಷಕ, ಶಿಕ್ಷಕೇತರ ವೃಂದ, ಪೋಷಕರು ಉಪಸ್ಥಿತರಿದ್ದರು. ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲಾ ಶಿಕ್ಷಕಿಯರು ಪ್ರಾರ್ಥಿಸಿದರು. ಶಿಕ್ಷಕಿ ಲೀನಾ ಪಾಯಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮ ಬಳಿಕ ಉಪಾಹಾರ ಕೂಟ ನಡೆಯಿತು.

ಪ್ರಾರ್ಥನೆ, ದಿವ್ಯ ಬಲಿಪೂಜೆ
ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ದಿವ್ಯ ಬಲಿಪೂಜೆ ನಡೆಯಿತು. ನಿಡ್ಪಳ್ಳಿ ಚರ್ಚ್‌ನ ಧರ್ಮಗುರು ವಂ|ಸಂತೋಷ್ ಮಿನೇಜಸ್ ಪ್ರಾರ್ಥನೆ, ಬಲಿಪೂಜೆ ನೆರವೇರಿಸಿದರು. ಮಾಯ್ ದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್, ಮರೀಲ್ ಚರ್ಚ್‌ನ ಧರ್ಮಗುರು ಜಾನ್ ಬ್ಯಾಪಿಸ್ಟ್ ಮೊರಾಸ್ ಹಾಗೂ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ, ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ಮ್ಯಾಕ್ಸಿಮ್ ಡಿಸೋಜ ಉಪಸ್ಥಿತರಿದ್ದರು.







