ವಿನಾಯಕನಗರ ಭಜನಾ ಮಂದಿರದ ಕಚೇರಿ, ಪಾಕಶಾಲೆ, ರಂಗಮಂದಿರಕ್ಕೆ ಶಿಲಾನ್ಯಾಸ

0

ದೇವ ಕಾರ್ಯಕ್ಕೆ ಯೋಗ್ಯ ವ್ಯಕ್ತಿ, ಕಾಲವನ್ನು ದೇವರೇ ನಿರ್ಣಯಿಸುತ್ತಾರೆ – ರವೀಂದ್ರ ಶೆಟ್ಟಿ ನುಳಿಯಾಲು

ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರವು ಬೆಳ್ಳಿಹಬ್ಬ ಸಂಭ್ರಮಾಚರಿಸಿದ್ದು, ಮಂದಿರದ ಅಭಿವೃದ್ಧಿ ಕಾರ್ಯಗಳ ಅಂಗವಾಗಿ ಕಚೇರಿ, ಪಾಕಶಾಲೆ ಮತ್ತು ರಂಗಮಂದಿರಕ್ಕೆ ಶಿಲಾನ್ಯಾಸ ಹಾಗೂ ಉಚಿತ ಆಯುಷ್ಮಾನ್‌ ಕಾರ್ಡ್‌ ನೋಂದಣಿ ಶಿಬಿರ ನ.27ರಂದು ನಡೆಯಿತು. ಶಿಲಾನ್ಯಾಸದ ವೈದಿಕ ಕಾರ್ಯಕ್ರಮಗಳನ್ನು ವೇ.ಮೂ. ದಿನೇಶ್‌ ಮರಡಿತ್ತಾಯರು ನೆರವೇರಿಸಿದರು.


ಶಿಲಾನ್ಯಾಸ ನೆರವೇರಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಗೌರವಾಧ್ಯಕ್ಷ  ಎನ್. ರವೀಂದ್ರ ಶೆಟ್ಟಿ ನುಳಿಯಾಲು ರವರು ಮಾತನಾಡಿ ‘ಕಕ್ಕೂರು ಪರಿಸರದವರಿಗೆ ವಿದ್ಯಾರ್ಜನೆಗಾಗಿ ಕಕ್ಕೂರು ಸರಕಾರಿ ಶಾಲೆಯನ್ನು ಸ್ಥಾಪಿಸಿದೆವು. ೨೫ ವರ್ಷಗಳ ಹಿಂದೆ ವಿನಾಯಕನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಆರಂಭವಾಗುವಲ್ಲಿಯೂ ಊರಿನ ಹಲವು ಹಿರಿಯರ ಜೊತೆ ನಾನು ಕೂಡಾ ಸಹಕಾರ ನೀಡಿ ಗುದ್ದಲಿ ಪೂಜೆ ನೆರವೇರಿಸಿದ್ದೇವೆ. ಯಾವುದೇ ಒಂದು ದೇವರ ಕಾರ್ಯವಾಗಬೇಕಾದರೆ ಅದಕ್ಕೆ ಯೋಗ್ಯ ವ್ಯಕ್ತಿ ಮತ್ತು ಕಾಲವನ್ನು ದೇವರೇ ನಿರ್ಮಿಸುತ್ತಾರೆ. ಇಲ್ಲಿಯೂ ಜಯಪ್ರಕಾಶ್ ರೈಯವರ ಮುಂದಾಳತ್ವದಲ್ಲಿ ಮಂದಿರ ಪುನರ್ ನಿರ್ಮಾಣ ಕಾರ್ಯ ಬಹಳ ಅಚ್ಚುಕಟ್ಟಾಗಿ ನೆರವೇರಿದೆ. ಸುಂದರವಾದ ಮಂದಿರ ನಿರ್ಮಾಣಗೊಂಡಿದೆ. ದೇವರ ದಯೆಯಿಂದ ಮುಂದಿನ ಅಭಿವೃದ್ಧಿ ಕಾಮಗಾರಿಗಳು ಸುಸೂತ್ರವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.


ʻಈ ಕ್ಷೇತ್ರದಲ್ಲಿ ಒಂದು ಚೈತನ್ಯವಿದೆ – ಡಾ. ಪೊಡಿಯ
ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರವನ್ನು ಉದ್ಘಾಟಿಸಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ‌ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪೊಡಿಯ ‘ಇಲ್ಲಿ ಒಂದು ದೇವರ ಚೈತನ್ಯವಿದೆ. ಭಕ್ತರನ್ನು ಸೆಳೆಯುವ ವಿಶೇಷ ಶಕ್ತಿಯನ್ನು ನಾನು ಗಮನಿಸಿದ್ದೇನೆ. ಇಲ್ಲಿಗೆ ಬಂದಿರುವ ಅವಕಾಶವನ್ನು ದೇವರ ಕರುಣೆ ಎಂದೇ ಭಾವಿಸಿದ್ದೇನೆ’ ಎಂದರು.


ಭಜನಾ ಮಂದಿರದ ಅಧ್ಯಕ್ಷ ಶ್ರೀಕುಮಾರ್ ಅಡ್ಯೆತ್ತಿಮಾರು ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಶೀನಪ್ಪ  ಪೂಜಾರಿ ನಾಕಪ್ಪಾಡಿಯವರು ಮಾತನಾಡಿ ‘ನಾವೆಲ್ಲಾ ಸಮುದ್ರದ ಬಿಂದುಗಳಂತೆ. ಅಭಿವೃದ್ದಿ ಕಾರ್ಯಗಳಲ್ಲಿ ನಮ್ಮಿಂದಾದ ಸಹಾಯ ಸಹಕಾರವನ್ನು ನೀಡಲು ಬದ್ದರಾಗಿದ್ದೇವೆ’ ಎಂದರು.


ಮುಖ್ಯ ಅತಿಥಿ ಪುಣಚ ಮಹಿಷಮರ್ದಿನಿ ದೇವಸ್ಥಾನದ ಕಾರ್ಯದರ್ಶಿ ಉದಯ ಕುಮಾರ್ ದಂಬೆ ಮಾತನಾಡಿ ‘ಉಸಿರಿನೊಂದಿಗೆ ವ್ಯಕ್ತಿ ಜನನ. ಹೆಸರಿನೊಂದಿಗೆ ಮರಣ.  ಉಸಿರು ನಿಂತರೂ ಹೆಸರು ಉಳಿಸಿ ಹೋಗುವವರು ನಮಗೆಲ್ಲಾ ಆದರ್ಶ. ಅಂತಹ ವ್ಯಕ್ತಿಗಳಿಂದಾಗಿ ಇಂತಹ ಹಿಂದು ಮಂದಿರಗಳು ಸ್ಥಾಪನೆಗೊಂಡು ಜೀರ್ಣೋದ್ಧಾರಗೊಳ್ಳುತ್ತಿವೆ. ಆ ಮನೋಭಾವವನ್ನು ನಾವು ಕೂಡಾ ಬೆಳೆಸಿಕೊಳ್ಳೋಣʻ ಎಂದರು.


ಮುಖ್ಯ ಅತಿಥಿಗಳಾಗಿ ಸುಳ್ಯಪದವು ಶ್ರೀ ಮಂಜುನಾಥ ರೋಡ್‌ಲೈನ್ಸ್‌ನ ಮ್ಹಾಲಕ  ಪ್ರಶಾಂತ್ ಎನ್. ಆರ್. ಕುಳ, ಬೆಂಗಳೂರಿನಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿರುವ ಕಿಶನ್‌ ರವರ ತಂದೆ ಕೇಶವ ಮೂರ್ತಿ ಪಾಲ್ಗೊಂಡರು.
ಬೆಟ್ಟಂಪಾಡಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಯಶೋಧಾ ರವರು ಆಯುಷ್ಮಾನ್ ಕಾರ್ಡ್ ನೋಂದಣಿ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಬೆಟ್ಟಂಪಾಡಿ ಸಮುದಾಯ ಆರೋಗ್ಯ ಅಧಿಕಾರಿ ರಾಜೇಶ್ವರಿ, ಸಿಎಸ್‌ಸಿ ಸೇವಾದಾರೆ ಕುಸುಮ ಮಿತ್ತಡ್ಕ, ಮಂದಿರದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಕಕ್ಕೂರು, ಮಂದಿರದ ಕಾರ್ಯದರ್ಶಿ ಗಣೇಶ್ ಪಂಬೆಜಾಲು, ಕೋಶಾಧಿಕಾರಿ ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ ಉಪಸ್ಥಿತರಿದ್ದರು.


ಸಾಂತಪ್ಪ ಗೌಡ ಪಂಬೆಜಾಲು, ಚಂದ್ರನ್ ತಲೆಪ್ಪಾಡಿ, ಕೃಷ್ಣಪ್ಪ ಕುಲಾಲ್ ಉಡ್ಡಂಗಳ, ಶಂಕರ ಪಾಟಾಳಿ ಕಕ್ಕೂರು, ರಾಮಚಂದ್ರ ಕಟ್ಟಕೋಡಿ, ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ, ಪ್ರೇಮಲತಾ ಜೆ. ರೈ, ಪಾರ್ವತಿ ಲಿಂಗಪ್ಪ ಗೌಡ, ಶ್ರೀದೇವಿ ಜಯಪ್ರಕಾಶ್ ರೈ, ಕಿಶೋರ್ ಶೆಟ್ಟಿ ಕೋರ್ಮಂಡ, ಲಿಂಗಪ್ಪ ಗೌಡ ಕಕ್ಕೂರು, ಜಯರಾಮ ಗಾಂಭೀರ ಮಡ್ಯಂಪಾಡಿ, ದಯಾನಂದ ವಿನಾಯಕನಗರ ರವರು ಅತಿಥಿಗಳನ್ನು ಗೌರವಿಸಿದರು‌.


ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ ರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಬೆಳ್ಳಿಹಬ್ಬ ದೇವರ ಕೃಪೆ, ಭಕ್ತರ ನಿಷ್ಕಲ್ಮಶ ತ್ಯಾಗ ಮನೋಭಾವದಿಂದ ಯಶಸ್ವಿಯಾಗಿ ನಡೆದಿದೆ’ ಎಂದು ಹೇಳಿದರು. ಐತ್ತಪ್ಪ ವಿನಾಯಕನರ ಪ್ರಾರ್ಥಿಸಿದರು‌. ರಾಧಾಕೃಷ್ಣ ಆರ್. ಕೋಡಿ ವಂದಿಸಿದರು. ಯತೀಶ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು. ಭಕ್ತಾಭಿಮಾನಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here