




ಪುತ್ತೂರು: ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ ಕಾಫಿ ಬೀಜಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳು ತುಂಬಿದ್ದ ಗೋಣಿಗಳು ಕಳವಾಗಿರುವ ಘಟನೆ ಕಬಕ ಗ್ರಾಮದ ನೆಹರುನಗರ ಸಮೀಪ ನಡೆದ ಬಗ್ಗೆ ವರದಿಯಾಗಿದೆ.



ನೆಹರುನಗರ ಶೇವಿರೆ ನಿವಾಸಿ ತೃತೇಶ್ ಎಂಬವರು ಮಂಗಳೂರು ಪಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಏಜೆನ್ಸಿ ಮೂಲಕ ಪಿರಿಯಾಪಟ್ಟಣದಿಂದ ಮಂಗಳೂರಿನ ಬಂದರಿಗೆ ಕಾಫಿ ಬೀಜಗಳನ್ನು ಟ್ರಾನ್ಸ್ಪೋರ್ಟ್ ಮಾಡಲು ಬುಕ್ಕಿಂಗ್ ಪಡೆದುಕೊಂಡು ತನ್ನ ಲಾರಿಯಲ್ಲಿ ಪಿರಿಯಾಪಟ್ಟಣದ ಹೈರೇಂಜ್ ಕಾಫಿ ಕ್ಯೂರಿಂಗ್ ಹೌಸ್ ಕಂಪೆನಿಯಿಂದ ಡಿ.3ರಂದು 320 ಗೋಣಿ ಕಾಫಿ ಬೀಜಗಳನ್ನು ಲೋಡ್ ಮಾಡಿಕೊಂಡು ಮಂಗಳೂರು ಬಂದರಿಗೆ ಹೊರಟು ದಾರಿ ಮಧ್ಯೆ ರಾತ್ರಿ ನೆಹರುನಗರ ಬಳಿ ಲಾರಿಯನ್ನು ನಿಲ್ಲಿಸಿ ಮನೆಗೆ ಹೋಗಿ ಡಿ.4ರಂದು ಬೆಳಗ್ಗೆ ಬಂದು ಮಂಗಳೂರಿಗೆ ಹೋಗಿದ್ದರು.ಮಂಗಳೂರಿನ ಬಂದರಿನಲ್ಲಿ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಿದಾಗ ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡುಬಂದಿದ್ದು, ಬಳಿಕ ಕಂಪೆನಿಯ ಮೇಲ್ವಿಚಾರಕರು ಲಾರಿಯ ಹಿಂಬದಿಯ ಬಾಗಿಲು ತೆರೆದು ನೋಡಿದಾಗ ಸ್ವಲ್ಪ ಭಾಗ ಗೋಣಿ ಚೀಲಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.ಬಳಿಕ ಪರಿಶೀಲಿಸಿ ನೋಡಿದಾಗ ಲಾರಿಯಲ್ಲಿದ್ದ 320 ಗೋಣಿ ಕಾಫಿ ಬೀಜಗಳ ಪೈಕಿ 80 ಗೋಣಿ ಕಾಫಿ ಬೀಜ ಕಳವಾಗಿರುವುದು ಕಂಡುಬಂದಿತ್ತು.ಕಳವಾಗಿರುವ ಕಾಫಿ ಬೀಜಗಳ ಅಂದಾಜು ಮೌಲ್ಯ ರೂ.21,44,೦೦೦ ಆಗಬಹುದು ಎಂದು ತೃತೇಶ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














