




ಪುತ್ತೂರು: ವಿಶೇಷ ಚೇತನ ವ್ಯಕ್ತಿಯೋರ್ವರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಅರಿಯಡ್ಕ ಗ್ರಾಮದ ಮಜ್ಜಾರಡ್ಕದ ಶ್ರೀ ವಿಷ್ಣು ಯುವಶಕ್ತಿ ಬಳಗ ಎಂಬ ಸಂಘಟನೆಯು ಮಾನವೀಯ ಕಾರ್ಯವೊಂದನ್ನು ಮಾಡಿದೆ.









ಶ್ರ್ರಮ, ಸೇವೆ, ಸಹಾಯ ಎಂಬ ದ್ಯೇಯದೊಂದಿಗೆ ಕಳೆದ 8 ವರುಷದ ಹಿಂದೆ ಹುಟ್ಟಿಕೊಂಡ ಈ ಸಂಘಟನೆಯು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲೆಡೆ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಈ ವರ್ಷ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದೆ. ಕಳೆದ ವರ್ಷ ಮಕ್ಕಳಿಲ್ಲದ ದಂಪತಿಗಳಿಗೆ ಮನೆ ಕಟ್ಟಿಕೊಡುವ ಮೂಲಕ ಸುದ್ದಿಯಾಗಿದ್ದ ಸಂಘಟನೆ ಈ ವರ್ಷ ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ನಿವಾಸಿ ವಿಶೇಷಚೇತನ ಮೋಹನ್ ದರ್ಬೆತಡ್ಕ ಇವರಿಗೆ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡುವ ಮೂಲಕ ಮತ್ತೊಂದು ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಗಿದೆ.
ಡಿ.7 ರಂದು ನಡೆದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ, ದೇವರು ಮೆಚ್ಚುವಂತಹ ಕೆಲಸ ಮಾಡಿದ ಸಂಘಟನೆಯ ಸದಸ್ಯರು ಸಮಾಜ ಒಳ್ಳೆಯ ಸಂದೇಶವನ್ನು ರವಾನೆ ಮಾಡಿದ್ದಾರೆ. ತಾಲೂಕಿಗೆ ಮಾದರಿಯಾದ ಕೆಲಸ ಇದಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಬೆಳಿಗ್ಗೆ ಗಣಹೋಮ ನಡೆಯಿತು. ಕುಣಿತ ಭಜನೆಯನ್ನು ಕರಿಯ ಕುಂಟಾಪು, ಶೇಷಗಿರಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಧಾರ್ಮಿಕ ಮುಂದಾಳು ಕಿರಣ್ ಚಂದ್ರ ಪುಷ್ಪಗಿರಿ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಿದರು. ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಒಲೆಮುಂಡೋವು ಮೋಹನ್ ರೈ ಮತ್ತು ಸಂಘಟನೆಯ ಗೌರವ ಅಧ್ಯಕ್ಷ ಶರತ್ ರೈ ಬೆಂಗಳೂರು ಶುಭಹಾರೈಸಿದರು.
ವೇದಿಕೆಯಲ್ಲಿ ನಿವೃತ್ತ ಮುಖ್ಯಗುರು ವಾಸು ಮಣಿಯಾಣಿ ಕುರಿಂಜ, ಯುವಶಕ್ತಿ ಸಂಘಟನೆಯ ಅಧ್ಯಕ್ಷ ಲೋಕೇಶ್ ಸ್ವಾಮಿನಗರ, ಅರಿಯಡ್ಕ ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ ಪಾಮಜಲು , ದರ್ಬೆತ್ತಡ್ಕ ಶ್ರೀ ವಿಷ್ಣು ಸೇವಾ ಸಮಿತಿ ಗೌರವ ಅಧ್ಯಕ್ಷ ರವೀಂದ್ರ ಮಣಿಯಾಣಿ, ಅಧ್ಯಕ್ಷ ಪ್ರಶಾಂತ್ ಕೆ, ಬಿ, ದರ್ಬೆತ್ತಡ್ಕ ಶ್ರೀ ವಿಷ್ಣು ಮಹಿಳಾ ಸೇವಾ ಬಳಗದ ಅಧ್ಯಕ್ಷೆ ಪ್ರಮೋದಿನಿ ನವೀನ್ ರೈ, ಸಂಘಟನೆಯ ಪೋಷಕರಾದ ಅಜಿತ್ ರೈ ದೇರ್ಲ, ಪೆರ್ಲಂಪಾಡಿ ಕೊಳ್ತಿಗೆ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ರಮೇಶ್ ಸುವರ್ಣ ದರ್ಬೆತ್ತಡ್ಕ ಹಾಗೂ ಫಲಾನುಭವಿ ವಿಶೇಷಚೇತನ ಮೋಹನ್ ದರ್ಬೆತ್ತಡ್ಕ ಉಪಸ್ಥಿತರಿದ್ದರು. ಶ್ರೀ ವಿಷ್ಣು ಯುವಶಕ್ತಿ ಮಕ್ಕಳ ಕುಣಿತ ಭಜನಾ ತಂಡ ಮಜ್ಜಾರಡ್ಕ, ಶ್ರೀ ಮಣಿಕಂಠ ಕುಣಿತ ಭಜನಾ ತಂಡ ದರ್ಬೆತ್ತಡ್ಕ, ಸ್ವಾಮಿ ಕೊರಗಜ್ಜ ಕುಣಿತ ಭಜನಾ ತಂಡ ಪಾಪಮಜಲು, ಶ್ರೀ ಸದಾಶಿವ ಭಜನಾ ಮಂಡಳಿ ಆಲಡ್ಕ, ಮುಂಡೂರು ತಂಡದಿಂದ ಕುಣಿತ ಭಜನಾ ಸೇವೆ ನಡೆಯಿತು.
ಡಿ.8ರಂದು ಮನೆಯ ಗೃಹಪ್ರವೇಶ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಮನೆ ನಿರ್ಮಾಣಕ್ಕೆ ಹಾಗೂ ಗೃಹಪ್ರವೇಶ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ಮನೆ ನಿರ್ಮಾಣದ ಜವಾಬ್ದಾರಿ ವಹಿಸಿದ ಮಜ್ಜಾರಡ್ಕ ವಿಷ್ಣು ಯುವಶಕ್ತಿ ಬಳಗದ ಸಂಘಟಕರು, ರಾಜ್ಯ ಸಂಗೊಳ್ಳಿ ರಾಯಣ್ಣ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ ಅವರಿಗೆ ವಿಶೇಷ ಗೌರವ ಸ್ಮರಣಿಕೆ ಮತ್ತು ರಾಜೇಶ್ ಮಯೂರ ಅವರ ಪೆನ್ಸಿಲ್ ರೇಖಾ ಚಿತ್ರ ಬಿಡಿಸಿದ ಬಾಲ ಕಲಾವಿದ ರತನ್ ಕುಂಟಾಪು ವಿಶೇಷ ನೆನಪಿನ ಕಾಣಿಕೆ ನೀಡಿದರು. ರಾಜೇಶ್ವರಿ ಕುಂಟಾಪು ಸ್ವಾಗತಿಸಿದರು. ಶ್ರೀನಿಧಿ ಬಿಸಿರೋಡ್ ಕಾರ್ಯಕ್ರಮ ನಿರೂಪಿಸಿದರು. ಮನೆಯ ಸಂಪೂರ್ಣ ಜವಾಬ್ದಾರಿವಹಿಸಿಕೊಂಡ ಸಂಘಟನೆಯ ಸಂಘಟಕ ರಾಜೇಶ್ ಕೆ ಮಯೂರ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
`ನನ್ನ ಒಂದು ಪುಟ್ಟ ಮನವಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಹಕಾರ ಸಿಗುತ್ತದೆ ಎಂದು ನಾನು ನೆನೆಸಿರಲಿಲ್ಲ, ಮನೆ ನಿರ್ಮಿಸಿ ಕೊಡುವಲ್ಲಿಂದ ಹಿಡಿದು ಸಂಘಟನೆ ಪ್ರತಿಯೊಂದು ವಿಷಯದಲ್ಲೂ ತನಗೆ ಬೆನ್ನೆಲುಬಾಗಿ ನಿಂತಿರುವುದು ತನಗೆ ಇನ್ನಷ್ಟು ಬಲ ತಂದು ಕೊಟ್ಟಿದೆ. ಸಂಘಟನೆಯ ಸರ್ವ ಸದಸ್ಯರಿಗೂ ನಾನು ಚಿರಋಣಿಯಾಗಿದ್ದೇನೆ.’
ಮೋಹನ್ ದರ್ಬೆತ್ತಡ್ಕ, ವಿಶೇಷ ಚೇತನರು
‘ಸಂಘಟನೆ ಹಾಗೂ ಸಮಾಜದ ದಾನಿಗಳ ಸಹಕಾರ ಪಡೆದುಕೊಂಡು ನಮ್ಮ ಆತ್ಮೀಯರಾದ ವಿಶೇಷ ಚೇತನರಾದ ಮೋಹನ್ರವರಿಗೆ ಮನೆ ನಿರ್ಮಾಣ ಮಾಡಿಕೊಡುವ ಸಮಾಜಕ್ಕೆ ಒಂದು ಒಳ್ಳೆಯ ಕೆಲಸದ ಸಂದೇಶವನ್ನು ರವಾನೆ ಮಾಡಿದ ತೃಪ್ತಿ ಸಂಘಟನೆಗೆ ಇದೆ. ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ’.
ರಾಜೇಶ್ ಕೆ ಮಯೂರ, ಸಂಘಟಕರು, ಮನೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡವರು








