ಬೆಳೆವಿಮೆಯಲ್ಲಿನ ಲೋಪ: ಸದನದಲ್ಲಿ ಸರಕಾರದ ಗಮನ ಸೆಳೆದ ಶಾಸಕ ರೈ

0

ಸ್ಪೀಕರ್ ನೇತೃತ್ವದಲ್ಲಿ ವಿಮಾ ಕಂಪೆನಿ ಜೊತೆ ಸಚಿವರು, ಜಿಲ್ಲೆಯ ಶಾಸಕರ ಸಭೆಗೆ ಆಗ್ರಹ


ಪುತ್ತೂರು: 2024ರಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಬೆಳೆಗಳಿಗೆ ಪಾವತಿಸಿದ ಪರಿಹಾರ ಮೊತ್ತ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ತಡವಾಗಿರುವ ಮತ್ತು ದೊರೆತ ಪರಿಹಾರ ಮೊತ್ತ ತೀರಾ ಕಡಿಮೆಯಾಗಿರುವ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈಯವರು ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ,ಇದೊಂದು ಸೀರಿಯಸ್ ಸಮಸ್ಯೆಯಾಗಿದ್ದು ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದರು.ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ನೇತೃತ್ವದಲ್ಲಿ ತೋಟಗಾರಿಕಾ ಸಚಿವರು, ವಿಮಾ ಕಂಪೆನಿ ಮತ್ತು ಅವಿಭಜಿತ ದಕ ಜಿಲ್ಲೆಯ ಶಾಸಕರ ಸಭೆಯನ್ನು ನಡೆಸಲು ತೀರ್ಮಾನಿಸಿದೆ.


2024-25ನೇ ಸಾಲಿನ ಪ್ರಾಕೃತಿಕ ವಿಕೋಪದಿಂದ ಬೆಳೆಗಳಿಗೆ ಪಾವತಿಸಲಾದ ಪರಿಹಾರ ಮೊತ್ತ, ಹವಾಮಾನ ಆಧಾರಿತ ಬೆಳೆ ವಿಮೆ ವಿಳಂಬ ಹಾಗೂ ಪರಿಹಾರ ಮೊತ್ತ ಕಡಿಮೆ ನೀಡುತ್ತಿರುವ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈಯವರು ತೋಟಗಾರಿಕೆ ಸಚಿವರಿಗೆ ಪ್ರಶ್ನೆ ಮಾಡಿದ್ದರು.ಅವರ ಅನುಪಸ್ಥಿತಿಯಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ಉತ್ತರಿಸಿ,ಈಗಾಗಲೇ ತೋಟಗಾರಿಕಾ ಸಚಿವರು ಉತ್ತರ ನೀಡಿದ್ದಾರೆ.ಬೆಳೆ ವಿಮೆಯಡಿ 166 ಕೋಟಿ ರೂ.ಪರಿಹಾರ ವಿತರಣೆ ಮಾಡಲಾಗಿದೆ.ಕೆಲವು ಖಾತೆಗಳ ಸಮಸ್ಯೆಗಳಿರುವುದರಿಂದ ಅವುಗಳನ್ನು ಸರಿಪಡಿಸಿದ ನಂತರ ವಿಮೆ ಕಂಪನಿಯಿಂದ ಬರುವ ಪರಿಹಾರದ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ ಎಂದರು.ಸಚಿವರ ಉತ್ತರಕ್ಕೆ ತೃಪ್ತರಾಗದ ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಟೆಲಿ ಮೆಟ್ರಿಕ್ ಮಾಪನವನ್ನು ನೀಡಿದ್ದು, ಇವುಗಳನ್ನು ಎಲ್ಲಾ ಪಂಚಾಯತ್‌ಗಳಲ್ಲಿ ಅಳವಡಿಸಲಾಗಿದೆ.ಇದರ ಆಧಾರದ ಮೇಲೆ ವಿಮೆ ನೀಡಲಾಗುತ್ತದೆ.ಈ ಬಾರಿ ಪರಿಹಾರ ನೀಡುವಾಗ ಎರಡು ತಿಂಗಳು ತಡವಾಗಿದೆ.ವಿಳಂಬವಾದರೂ ಸಮಸ್ಯೆಯಿಲ್ಲ.ಆದರೆ ಪರಿಹಾರವನ್ನು ಯಾವುದರ ಮುಖಾಂತರ ನೀಡಲಾಗುತ್ತದೆ ಎಂಬುದನ್ನು ತಿಳಿಸಿಲ್ಲ ಎಂದರು.ಅಂಕಿ, ಅಂಶಗಳನ್ನು ನೀಡಿದ ಅಶೋಕ್ ಕುಮಾರ್ ರೈ, 2023ರಲ್ಲಿ 3284 ಮಿಮೀ ಮಳೆಯಾಗಿದ್ದು, 1 ಎಕರೆ, ಎರಡೂವರೆ ಎಕರೆ ಜಮೀನು ಇದ್ದವರು 6400 ರೂ. ಪ್ರೀಮಿಯಮ್ ಪೇಮೆಂಟ್ ಮಾಡಿದ್ದು 68400 ರೂ. ಬೆಳೆ ವಿಮೆ ಸಿಕ್ಕಿದೆ.2024ರಲ್ಲಿ 6800 ರೂ. ಪ್ರೀಮಿಯಂ ಕಟ್ಟಿದ ರೈತರಿಗೆ 4500 ರೂ. ಬೆಳೆ ವಿಮೆ ಸಿಕ್ಕಿದೆ.ಅಂದರೆ ಪ್ರೀಮಿಯಮ್ ಕಟ್ಟಿದ್ದಕ್ಕಿಂತಲೂ ಕಡಿಮೆ ಸಿಕ್ಕಿದೆ.ಈ ರೀತಿಯ ವ್ಯತ್ಯಾಸಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.ಮಳೆಯ ಪ್ರಮಾಣದ ಮೇಲೆ ಬೆಳೆ ವಿಮೆ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ 2023ರಲ್ಲಿ 3284 ಮಿಮೀ ಮಳೆಯಾಗಿದೆ.2024ರಲ್ಲಿ 4665 ಮಿಮೀ. ಅಂದರೆ 1341 ಮಿಮೀ. ಮಳೆ ಹೆಚ್ಚಳವಾಗಿದೆ.ಆದರೆ 2024ರಲ್ಲಿ ನೀಡಿದಕ್ಕಿಂತ ಕಡಿಮೆ ಬೆಳೆ ವಿಮೆಯನ್ನು ನೀಡಲಾಗಿದೆ.ಇದೊಂದು ಅತ್ಯಂತ ಗಂಭೀರವಾದ ವಿಷಯವಾಗಿದೆ ಎಂದ ಶಾಸಕರು, ಈ ಬಾರಿ ಪಾವತಿಯಾಗಿರುವ ವಿಮಾ ಪರಿಹಾರ ಮೊತ್ತ ಎಷ್ಟು ಕಡಿಮೆಯಾಗಿದೆಯೆಂದರೆ ಕೆಲವು ರೈತರಿಗೆ ಕಟ್ಟಿದ ಪ್ರೀಮಿಯಂಗಿಂತಲೂ ಕಡಿಮೆ ಹಣ ದೊರೆತಿದೆ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ.ಇಷ್ಟೊಂದು ಕಡಿಮೆ ಮೊತ್ತವನ್ನು ವಿಮಾ ಕಂಪೆನಿ ಪಾವತಿ ಮಾಡಿರುವುದು ದುರದೃಷ್ಟಕರವಾಗಿದೆ.ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಸರಿಯಾಗಿ ಪಾವತಿ ಮಾಡಲು ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದರು.


ಅಡಿಕೆ ಕೃಷಿಕರು ಸಂಕಷ್ಟದಲ್ಲಿದ್ದಾರೆ:
ಉಭಯ ಜಿಲ್ಲೆಗಳ ಕೃಷಿಕರು ಸಂಕಷ್ಟದಲ್ಲಿದ್ದಾರೆ.ಒಂದು ಕಡೆ ವಿಪರೀತ ಮಳೆ ಇನ್ನೊಂದೆಡೆ ಹಳದಿ ರೋಗ, ಎಲೆ ಚುಕ್ಕಿ ರೋಗದಿಂದ ಬೆಳೆದ ಅಡಿಕೆ ಸಂಪೂರ್ಣ ನಾಶವಾಗಿದೆ.ಬೆಳೆ ವಿಮೆಯಾದರೂ ಸಿಗುತ್ತದಲ್ಲ ಎಂಬ ಧೈರ್ಯದಿಂದ ಇದ್ದ ಕೃಷಿಕರು ಈಗ ಚಿಂತಾಕ್ರಾಂತರಾಗಿದ್ದಾರೆ.ಬೆಳೆ ವಿಮೆ ಸಿಗುತ್ತದೆ ಎಂದು ಸಾಲ ಮಾಡಿ ತಮ್ಮ ಕೃಷಿಯನ್ನು ಉಳಿಸುವ ಕೆಲಸವನ್ನು ಮಾಡಿದ್ದಾರೆ.ಇತ್ತ ಬೆಳೆದ ಅಡಿಕೆಯೂ ಇಲ್ಲ, ಬೆಳೆ ವಿಮೆಯೂ ಇಲ್ಲ ಎಂಬಂತಾಗಿದೆ.ಕೃಷಿಕರಿಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿದೆ ಎಂದು ಶಾಸಕರು ಹೇಳಿದರು.


ತಾರತಮ್ಯ ಮಾಡಲಾಗಿದೆ:
2023ರಲ್ಲಿ 3284 ಮಿ.ಮೀ ಮಳೆ ಬಿದ್ದಿದೆ.ಆ ವರ್ಷದಲ್ಲಿ 2.5 ಎಕ್ರೆ ಜಾಗವಿದ್ದವರು 6400 ಪ್ರೀಮಿಯಂ ಪಾವತಿಸಿದ್ದು ಅವರಿಗೆ ಆ ವೇಳೆ 65400 ವಿಮೆ ಸಿಕ್ಕಿದೆ.ಆದರೆ,2024ರಲ್ಲಿ ಮಳೆ ಜಾಸ್ತಿ ಸುರಿದಿದೆ.6800 ಪ್ರೀಮಿಯಂ ಪಾವತಿ ಮಾಡಿರುವ ರೈತರಿಗೆ 4500 ರೂ.ವಿಮೆ ಸಿಕ್ಕಿದೆ.1 ಎಕ್ರೆಗೆ 3500 ರೂ.ಪ್ರೀಮಿಯಂ ಪಾವತಿ ಮಾಡಿದ್ದಾರೆ.ಅವರಿಗೆ 24೦೦೦ ರೂ.ವಿಮೆ ಸಿಕ್ಕಿದೆ.ಈ ಬಾರಿ ಇದರಲ್ಲಿ ತಾರತಮ್ಯ ಮಾಡಿದ್ದಾರೆ.ಯಾಕೆ ಈರೀತಿ ಮಾಡಿದ್ದಾರೆ. ಪ್ರೀಮಿಯಂ ಕಟ್ಟಿದಕ್ಕಿಂತ ಕಡಿಮೆ ವಿಮಾ ಮೊತ್ತ ಕೆಲವರಿಗೆ ಬಂದಿದೆ.ಇದು ವಿಮಾ ಕಂಪೆನಿ ಟಾಟಾ ಎಎಜಿ ಕಂಪನಿಯವರು ಮಾಡಿರುವ ತಾರತಮ್ಯ ಎಂದು ಶಾಸಕರು ಅಧಿವೇಶನದಲ್ಲಿ ಪ್ರಶ್ನಿಸಿದರು.


ಸಭಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು:
ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ.ಸರಕಾರ ಈ ನಿಟ್ಟಿನಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ.ಈಗ ಸದನದಲ್ಲಿ ತೋಟಗಾರಿಕಾ ಸಚಿವರೂ ಇಲ್ಲ. ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ತೋಟಗಾರಿಕಾ ಸಚಿವರು, ದ.ಕ ಹಾಗೂ ಉಡುಪಿ ಜಿಲ್ಲೆಯ ಶಾಸಕರು ಹಾಗೂ ವಿಮಾ ಕಂಪೆನಿ ಪ್ರಮುಖರನ್ನು ಕರೆಸಿ ಸಭೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.ಇಲ್ಲವಾದಲ್ಲಿ ದ.ಕ.,ಉಡುಪಿ ಜಿಲ್ಲೆಯ ರೈತರಿಗೆ ತೊಂದರೆಯಾಗಲಿದೆ.ಯಾವ ಆಧಾರದಲ್ಲಿ ವಿಮಾ ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂಬುದನ್ನು ಪರಿಶೀಲನೆ ಮಾಡಬೇಕು,ತಾರತಮ್ಯ ನಡೆದಿರುವ ಬಗ್ಗೆ ವರದಿ ಕೇಳಬೇಕು.ಉಭಯ ಜಿಲ್ಲೆಯ ಕೃಷಿಕರಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಶಾಸಕರು ಸಭೆಯಲ್ಲಿ ಆಗ್ರಹಿಸಿದರು.ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿಯಂತೆ,ವಿಧಾನ ಸಭಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದು ಎಂದು ಸರಕಾರ ತೀರ್ಮಾನ ಕೈಗೊಂಡಿತು.ತೋಟಗಾರಿಕಾ ಸಚಿವರ ಅನುಪಸ್ಥಿತಿಯಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಶಾಸಕರ ಪ್ರಶ್ನೆಗೆ ಉತ್ತರ ನೀಡಿದರು.ಅಶೋಕ್ ಕುಮಾರ್ ರೈಯವರು ಬೆಳೆ ವಿಮೆ ಮೊತ್ತ ಪರಿಹಾರ ಕಡಿಮೆಯಾಗಿರುವ ವಿಚಾರವನ್ನು ಅಂಕಿ ಅಂಶಗಳೊಂದಿಗೆ ಪ್ರಸ್ತಾಪಿಸುತ್ತಿದ್ದ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರೂ ಧ್ವನಿಗೂಡಿಸಿದರು.

ಅಧಿವೇಶನ ಮುಗಿದು ನಮಗೆ ಊರಿಗೆ ಹೋಗಬೇಕಲ್ಲ
ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಕಡಿಮೆಯಾಗಿರುವ ವಿಚಾರದಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಸದನದಲ್ಲಿ ಗಟ್ಟಿಧ್ವನಿಯಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿದೆ.ಕೃಷಿಕರು ಈ ವಿಚಾರದಲ್ಲಿ ಆತಂಕದಲ್ಲಿದ್ದಾರೆ.ಸರಕಾರ ಇದಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಬೇಕು.ಯಾವ ಆಧಾರದಲ್ಲಿ ಈ ರೀತಿ ಪರಿಹಾರ ವಿಮಾ ಮೊತ್ತವನ್ನು ಪಾವತಿ ಮಾಡಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಬೇಕು.ದ.ಕ ಮತ್ತು ಉಡುಪಿ ಜಿಲ್ಲೆಯ ಜನ ಅಡಿಕೆ, ಕಾಳುಮೆಣಸು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.ಈ ಬಾರಿಯ ಮಳೆಗೆ ಎಲ್ಲವೂ ನಾಶವಾಗಿದೆ ಎಂದಾಗ ಆಯ್ತು ಎಂದು ಸ್ಪೀಕರ್ ಹೇಳಿದರು.ವಿಮಾ ಮೊತ್ತವೂ ಸರಿಯಾಗಿ ಪಾವತಿಯಾಗದೇ ಇದ್ದಲ್ಲಿ ಅಽವೇಶನ ಮುಗಿದು ನಾವು ಹೇಗೆ ಊರಿಗೆ ಹೋಗುವುದು? ಜನ ನಮ್ಮನ್ನು ಪ್ರಶ್ನಿಸುತ್ತಾರೆ?ಜನರ ಪ್ರಶ್ನೆಗೆ ಹೇಗೆ ಉತ್ತರ ಕೊಡಲಿ ಎಂದು ಶಾಸಕರು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here