







ಮುಪ್ಪು ಮನಸ್ಸಿಗಲ್ಲ ದೇಹಕ್ಕೆ. ಇದು ಹಿರಿಯರು ಹೇಳುತ್ತಿದ್ದ ಅನುಭವಾಮೃತದ ನುಡಿ. ವಯಸ್ಸಾಗುತ್ತಿದ್ದಂತೆ ಇನ್ನೇನು ಮುಗಿದೇ ಹೋಯಿತು ಎಂಬಂತೆ ಮುದುಡಿ ಕೂರುವ ಅನೇಕರನ್ನು ನಾವು ಕಂಡಿರುವೆವು. ವಯಸ್ಸು ಕೇವಲ ಎಣಿಕೆಗೆ ಮಾತ್ರ ಎಂಬಂತಿದ್ದು, ಮುನ್ನುಗ್ಗಿ ನಡೆಯುವ ಮಂದಿಯನ್ನೂ ನಾವು ಕಂಡಿರುವೆವು. ಬಂದುದನ್ನು ಬಂದಂತೆ ಸ್ವೀಕರಿಸಿ ಮುನ್ನುಗ್ಗುವುದೇ ಜೀವನೋಲ್ಲಾಸ.


ಹೌದು, ಕೆ.ಸೇಸಪ್ಪ ರೈ ಇವರಿಗೆ ವಯಸ್ಸು ಇನ್ನೂ ಕೂಡ ಕೇವಲ 80 ಮಾತ್ರ. ಇಷ್ಟಾದರೂ ಯುವಕರನ್ನು ನಾಚಿಸುವಂತಹ ಜೀವನೋಲ್ಲಾಸ. ದೇಹ ಕೇಳುತ್ತಿದ್ದರೆ ಇನ್ನೂ ಕೂಡ ಬೆಟ್ಟವನ್ನೇ ಏರಬಲ್ಲೆನೆಂಬಷ್ಟು ಮುನ್ನುಗ್ಗುವ ಉಲ್ಲಾಸ ಇವರಲ್ಲಿ ತುಂಬಿಕೊಂಡಿದೆ. ನೇಗಿಲು ಹಿಡಿದು ಹೊಲ ಉಳುಮೆ ನಡೆಸಿದ ಸಂತಸದ ದಿನಗಳ ನೆನಪನ್ನು ಆಪ್ತರಲ್ಲಿ ಹೇಳಿಕೊಳ್ಳುತ್ತಾ ಇಂದಿಗೂ ಸಂಭ್ರಮಿಸುತ್ತಾರೆ. ತನ್ನ ಗುರು ಹರಿಪ್ರಸಾದ ರಾಯರ ಒಡನಾಟ – ಒಲುಮೆಯಿಂದ ದೈಹಿಕ ಶಿಕ್ಷಕನಾಗುವ ಭಾಗ್ಯ ಬಂತೆಂದು ಇನ್ನೂ ನೆನೆನೆನೆದು ನಡೆದು ಬಂದ ಹಾದಿಯ ಸ್ಮರಿಸುತ್ತಾರೆ. ದೈಹಿಕ ಶಿಕ್ಷಕ ವೃತ್ತಿಯಲ್ಲಿ ಕೇವಲ ಲೆಫ್ಟ್ -ರೈಟ್ ಮಾತ್ರ ಕಲಿಸಿಕೊಟ್ಟವರಲ್ಲ. ರಾಷ್ಟ್ರ ಮಟ್ಟದವರೆಗಿನ ಕ್ರೀಡಾಪಟುಗಳನ್ನು ತರಬೇತು ಗೊಳಿಸಿದ ಸಾಹಸಿಗ ಇವರು. ಅಷ್ಟಕ್ಕೂ ಬಿಡದೆ ದೈಹಿಕ ಶಿಕ್ಷಕರ ಸಂಘದ ಮುಂಚೂಣಿ ನಾಯಕನಾಗಿಯೂ ಅನೇಕ ಕ್ರೀಡಾ ಸಂಘಟನೆಗಳ ನಡೆಸಿ ತನ್ನ ಸಾಮರ್ಥ್ಯ ಮೆರೆದವರು.



ಸುಮ್ಮನೆ ಕೂರುವ ಜಾಯಮಾನ ಇವರದಲ್ಲ. ಎಲ್ಲ ಸಂಘಟನೆಗಳಲ್ಲೂ ತೊಡಗಿಸಿಕೊಳ್ಳಬಲ್ಲ ಉತ್ಸಾಹ ಇವರದು. ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥರ ಪರಮ ಭಕ್ತರಾದ ಇವರಿಗೆ ತನಗೆ ಅನ್ನ ನೀಡಿದ ಸಂಸ್ಥೆಗೆ ಏನಾದರೂ ಕೊಡಬೇಕೆಂಬ ಹಂಬಲದಿಂದ ರಾಮಕುಂಜದಲ್ಲಿ ವಿದ್ಯಾಸಂಸ್ಥೆ ಗಟ್ಟಿಗೊಳಿಸಲು ಜವಾಬ್ದಾರಿಯ ಹೆಗಲೇರಿಸಿಕೊಂಡರು. ಅದೇನು ಸುಲಭದ ಕೆಲಸವಾಗಿರಲಿಲ್ಲ. ಹೊಸ ಹೊಸ ಚಿಂತನೆಗಳ ಹುಟ್ಟು ಹಾಕಿ ಅನೇಕರ ಬೆಂಬಲ ಪಡೆದು ಕಾರ್ಯಗತಗೊಳಿಸಿದಾಗಲೇ ಜನ ಮೆಚ್ಚಬಲ್ಲರು. ಸೋತು ಹೋದರೆ ಯಾಕೆ ಬೇಕಿತ್ತು ಎಂದು ಹೇಳುವವರೂ ಇಲ್ಲದೇ ಇರಲಿಲ್ಲ. ಇವೆಲ್ಲವನ್ನೂ ಎದುರಿಸಿ ನಿಂತು ರಾಮಕುಂಜದ ಶೈಕ್ಷಣಿಕ ತೇರನ್ನು ಎಳೆಯುವವರಲ್ಲಿ ಇವರೊಬ್ಬರಾದರು. ಅದು ಕೇವಲ ಆರಂಭ ಶೂರತನವಾಗಿರದೆ, ಇನ್ನೂ ಎಳೆಯುತ್ತಲೇ ಇರುವರು…
ಇವರು ಆಂಗ್ಲ ಮಾಧ್ಯಮ ಶಾಲೆಯ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದರೂ ಕನ್ನಡ – ತುಳು ಭಾಷೆಗಳ ದ್ವೇಷಿ ಖಂಡಿತಾ ಇವರಲ್ಲ. ನಮಗೆ ಎಲ್ಲ ಭಾಷೆಗಳು ಬೇಕೆನ್ನುವ ಹಂಬಲ ಇವರದು. ಒಂದು ಭಾಷೆ ಇನ್ನೊಂದು ಭಾಷೆಯ ಶತ್ರುವಲ್ಲ ಎಂಬ ತತ್ವ ಸಿದ್ಧಾಂತ ಇವರದು.
ಕರಾವಳಿಯ ತುಳುನಾಡ ಸಂಸ್ಕೃತಿ ನಮ್ಮ ತುಳು ಭಾಷೆಯಲ್ಲಿ ಹಾಸು ಹೊಕ್ಕಾಗಿದೆ. ಈ ಭಾಷೆ ನಶಿಸಿ ಹೋದರೆ ಅದರ ಜೊತೆಗೆ ನಮ್ಮ ಸಂಸ್ಕೃತಿಯು ನಿರ್ನಾಮವಾದಂತೆಯೇ ಸರಿ. ನಮ್ಮ ಸಂಸ್ಕಾರಗಳು ಮೈಗೂಡುವಲ್ಲಿ ಭಾಷೆಯು ಪ್ರಧಾನ ಪಾತ್ರವಹಿಸುತ್ತದೆ. ಕೆ. ಸೇಸಪ್ಪ ರೈಗಳಿಗೆ ತುಳು ಭಾಷೆ ಎಂದರೆ ಪಂಚಪ್ರಾಣ. ಬಂಟರ ಜಾತಿಗೆ ಸೇರಿದವರು ತುಳುವನ್ನು ಎಂದೆಂದಿಗೂ ಬಿಟ್ಟು ಕೊಡರು. ದೇಶಪರ ದೇಶಗಳಿಗೇ ಹೋದರೂ ತುಳು ಭಾಷೆಯಲ್ಲಿ ಮಾತನಾಡುತ್ತಾ ಹೆಮ್ಮೆ ಪಡಬಲ್ಲರು.
ತುಳು ಭಾಷೆಯ ಬೆಳೆಸುವುದೆಂದರೆ ತುಳುನಾಡಿನ ಹಬ್ಬ ಹರಿ ದಿನಗಳ ಆಚರಿಸಿ ಯುವ ಜನತೆಗೆ ಪರಿಚಯಿಸುವುದು ಮೊದಲ ಹೆಜ್ಜೆ……ಅಪ್ಪಟ ತುಳು ಪದಗಳ ಕಿವಿಗೆ ತುಂಬಿಸುವುದು……. ನಮ್ಮ ದಿನ ಬಳಕೆಯ ಪರಿಕರಗಳ ಜನತೆಗೆ ಪರಿಚಯಿಸುವುದು……. ಇವೆಲ್ಲ ತುಳು ಭಾಷೆ – ತುಳು ಸಂಸ್ಕೃತಿಯ ಗಟ್ಟಿತನಕ್ಕೆ ನೀಡುವ ಒಂದಷ್ಟು ಪ್ರಯತ್ನ. ಭಾಷಾ ಗಟ್ಟಿತನಕ್ಕೆ ಅದೆಷ್ಟೋ ಹಿರಿಯರು ಬೇರೆ ಬೇರೆ ಭಾಷೆಗಾಗಿ ದುಡಿದವರು ನಮ್ಮ ಕಣ್ಣಮುಂದಿರುವರು. ತುಳುವಿಗಾಗಿ ಹಲವು ವರ್ಷಗಳಿಂದ ಹಂಬಲಿಸಿ, ಹಲವು ಕಮ್ಮಟಗಳನ್ನು ನಡೆಸಿದ ಸಾಹಸಿಗರಲ್ಲಿ ಇವರೂ ಸೇರಿ ಹೋಗಿರುವರು. ಭಾಷೆಗಳು ನಶಿಸಿ ಹೋಗದಂತೆ ಆಯಾಯ ಕಾಲಕ್ಕೆ ಶ್ರಮಿಸಿದ ಫಲವಾಗಿ ಇಂದಿಗೂ ಭಾಷೆಗಳು ಜೀವಂತವಾಗಿವೆ. ತನ್ನ ಹುಟ್ಟು ಭಾಷೆ ತುಳುವನ್ನು ಉಳಿಸಲು ಕೆ ಸೇಸಪ್ಪ ರೈಗಳು ಟೊಂಕಕಟ್ಟಿ ನಿಂತವರಲ್ಲಿ ತುಳುನಾಡಿನ ಅಗ್ರಗಣ್ಯರು. ಅದರ ಫಲವಾಗಿಯೇ ಕಡಬ ತಾಲೂಕಿನ ಮೊತ್ತ ಮೊದಲ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ತಾನಾಗಿ ಒಲಿದು ಬಂದಿತು. ಇದು ಅವರ ಭಾಷಾ ಕೈಂಕರ್ಯಕ್ಕೆ ಸಿಕ್ಕಿದ ಅತಿ ದೊಡ್ಡ ಗೌರವ.
ಬಿರುಗಾಳಿ ಬೀಸಿ ಬೀಸಿ ಬಂದಾಗ ಕೈ ಎತ್ತಿ ತಡೆದು ನಿಲ್ಲಿಸಬಲ್ಲೆನೆಂದು ಎದೆ ಕೊಟ್ಟು ನಿಂತರೂ ತಡೆದು ನಿಲ್ಲಿಸಲಾಗದು….ಹಾಗೆಂದು ಹೋರಾಟ ತಪ್ಪಲ್ಲ. ಹೋರಾಡದಿರುವುದು ತಪ್ಪು…ಅನ್ಯ ಭಾಷೆಗಳು ಮುನ್ನುಗ್ಗುವ ರಭಸಕ್ಕೆ ನಮ್ಮ ಸ್ಥಳೀಯ ಭಾಷೆಗಳು ಕೊಚ್ಚಿ ಹೋಗುತ್ತಿರುವ ಈ ಸಮಯದಲ್ಲಿ ತುಳುವಿಗಾಗಿ ಪರಿಶ್ರಮಿಸುತ್ತಿರುವ ಸೇಸಪ್ಪ ರೈಗಳ ಸಾಧನೆ ಸ್ಮರಣೀಯ. ಅದರ ಉಳಿವಿಗಾಗಿ ಹಮ್ಮಿಕೊಂಡಿರುವ ತುಳು ಸಾಹಿತ್ಯ ಸಮ್ಮೇಳನ ರಮಣೀಯ. ಇಂತಹ ಪ್ರಯತ್ನಗಳು ನಡೆದಾಗಲೇ ಭಾಷೆಗಳು ಜೀವಂತವಿರಲು ಸಾಧ್ಯ.
ಟಿ.ನಾರಾಯಣ ಭಟ್ ರಾಮಕುಂಜ
ಪತ್ರಿಕಾ ಅಂಕಣಕಾರರು ಹಾಗೂ ಲೇಖಕರು










