ಕ್ಷಣ ಕ್ಷಣಕ್ಕೂ ಕುತೂಹಲ…! ನಾಗಾರಾಧನೆಯ ನಿಗೂಢ ಕಥಾ ಹಂದರ

0

ಬನ’ ದಿ ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟ್ರೈನಿಂಗ್ ಸಿನಿಮಾ

@ ಸಿಶೇ ಕಜೆಮಾರ್

ಬಹಳ ದಿನಗಳ ನಂತರ ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಒಂದು ಒಳ್ಳೆಯ ಸಿನಿಮಾವನ್ನು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನೀಡಿದ್ದಾರೆ. ತುಳುನಾಡಿನ ನಾಗಾರಾಧನೆಯ ನಿಗೂಢ ಕಥಾ ಹಂದರವನ್ನು ಹೊಂದಿರುವ ಬನ’ ತುಳು ಸಿನಿಮಾ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹುಟ್ಟಿಸುತ್ತಾ ಸಾಗುತ್ತದೆ. ಸಿನಿಮಾ ಆರಂಭದಿಂದ ಕ್ಲೈಮ್ಯಾಕ್ಸ್ ತನಕವೂ ಹಲವು ಸಸ್ಪೆನ್ಸ್ ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬನ ಗೆದ್ದಿದೆ. ಶಶಿಕುಮಾರ್ ರೈ ಬಾಲ್ಯೊಟ್ಟು ಅರ್ಪಿಸುವ, ಈಶಿ ಪ್ರೋಡಕ್ಷನ್ ಬ್ಯಾನರ್‌ನಲ್ಲಿ ಮನೋಹರ ರೈ ವೈಪಾಲ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಸಿನಿಮಾದ ಕಥೆ ಪ್ರಾರಂಭವಾಗುವ ರೀತಿಯೆ ಪ್ರೇಕ್ಷಕರನ್ನು ಕೊನೆ ತನಕ ಚೆಯರ್ ತುದಿಯಲ್ಲಿ ಕೂತು ಮುಂದೇನಾಗುತ್ತೇ ಎಂದು ಕಾತರಿಸುವಂತೆ ಮಾಡುತ್ತದೆ. ಆ ಅನಾಥ ಮಗು’…ಹೌದು, ಸಿನಿಮಾದ ಕಥೆ ತೆರೆದುಕೊಳ್ಳುವುದೇ ಬೇಟೆಗಾರರಿಗೆ ಮಧ್ಯರಾತ್ರಿ ಕಾಡಿನಲ್ಲಿ ಕೇಳಿಬರುವ ಆಗ ತಾನೆ ಜನಿಸಿದ ಎಳೆ ಕೂಸುವಿನ ಅಳುವಿನಿಂದ, ಕಾಡಿನಲ್ಲಿ ತರಗೆಲೆಗಳ ಮಧ್ಯೆ ರಕ್ತದ ಕಲೆಗಳಿಂದ ಬಿದ್ದುಕೊಂಡಿದ್ದ ಮಗುವನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಸಾಕಲಾಗುತ್ತದೆ. ಆದರೆ ಮುಂದಕ್ಕೆ ನಡೆಯುವುದೆ ಬೇರೆ. ಆ ಹೆಣ್ಣು ಮಗು ಬೆಳೆಯುತ್ತಾ ಹೋದಂತೆ ಆ ಮನೆಯಲ್ಲಿ ಏನೇನೋ ಅನಾಹುತಗಳು ಎದುರಾಗುತ್ತವೆ. ರಾತ್ರಿ ಹೊತ್ತಲ್ಲಿ ಕಾಣಿಸಿಕೊಳ್ಳುವ ನಾಗರಹಾವು, ದೂರದ ಮುಂಬೈಯಿಂದ ಬಂದ ಅತಿಥಿಗಳಿಗೆ ಬರುವ ನಾಗ ಸಂಪಿಗೆಯ ಪರಿಮಳ, ಸದ್ದಿಲ್ಲದೆ ಅತ್ತಿಂದ ಇತ್ತ ಚಲಿಸುವ ಮಕ್ಕಳ ಆಟದ ಸೈಕಲ್, ಮಧ್ಯರಾತ್ರಿ ಆಹಾರ ಕೇಳಿಕೊಂಡು ಬರುವ ಅಜ್ಜಿ, ಮಲಗಿದ್ದಲ್ಲೆ ನೊರೆ ಕಾರಿಕೊಂಡು ಸಾಯುವ ಮುಂಬೈಯಿಂದ ಬಂದ ಅತಿಥಿ ಈ ಎಲ್ಲಾ ಪಾತ್ರಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ.

ಸಿನಿಮಾದ ಇಂಟರ್‌ವಲ್ ತನಕವೂ ಬಹಳಷ್ಟು ಕುತೂಹಲವನ್ನು ತೆರೆದಿಡುವ ಸಿನಿಮಾ ತನ್ನ ಅಸಲಿ ಕಥೆಯನ್ನು ಬಿಟ್ಟು ಕೊಡುವುದಿಲ್ಲ ಚಿತ್ರದ ಅಸಲಿ ಕಥೆ ಎಂತದು, ಇದರಲ್ಲಿ ಯಾರು ವಿಲನ್, ಇಷ್ಟಕ್ಕೂ ಆ ಕಾಡಿನಲ್ಲಿ ದೊರೆತ ಎಳೆ ಕಂದಮ್ಮ ಯಾರದ್ದು? ಈ ಕಂದಮ್ಮನಿಂದಾಗಿ ಆ ಮನೆಯಲ್ಲಿ ಅಷ್ಟೆಲ್ಲಾ ದುರಂತಗಳ ನಡೆಯಲು ಕಾರಣಗಳೇನು? ಕೊನೆಯಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಬೇಕಾದರೆ ಬನ ಸಿನಿಮಾವನ್ನು ನೀವು ವೀಕ್ಷಿಸಲೇಬೇಕು. ಚಿತ್ರದ ಕಥೆ ಹೇಳಿರುವ ರೀತಿಯೇ ಅದ್ಭುತವಾಗಿದ್ದು ತುಳುನಾಡಿನ ನಾಗಾರಾಧನೆಯನ್ನು ಯಾವುದೇ ಗ್ರಾಫಿಕ್ಸ್ ಬಳಸದೆ ಒಂದು ಮಗುವಿನ ಮೂಲಕ ಹೇಳ ಹೊರಟಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಮಣ್ಣ್ ದ ಕಥೆ’ ಎಂಬ ಟ್ಯಾಗ್‌ಲೈನ್ ಅನ್ನು ಹೊಂದಿರುವ ಬನ ಸಿನಿಮಾದಲ್ಲಿ ನಾಗಾರಾಧನೆಯ ಕಥೆಯೊಂದಿಗೆ ನವಿರಾದ ಪ್ರೇಮಕಥೆಯು ಇದೆ. ಕಬ್ಬಿನ ಜ್ಯೂಸ್ ಅಂಗಡಿಯ ಧಾರಾವಾಡದ ಹುಡುಗಿ(ಸಿನಿಮಾದ ನಾಯಕಿ ಕೃತಿ ಪೂಜಾರಿ ) ಜೊತೆ ಸಿನಿಮಾ ನಾಯಕನ ಸೊಗಸಾದ ಲವ್‌ಸ್ಟೋರಿ ಮನಸ್ಸಿಗೆ ಖುಷಿ ನೀಡುತ್ತದೆ. ಸಿನಿಮಾ ಮುಗಿಸಿ ಬಂದ ಮೇಲೂ ಧಾರಾವಾಡ ಹುಡುಗಿಯ ಮುಗ್ದ ನಗು, ತುಂಟ ಕಣ್ಣುಗಳು ನಮ್ಮ ಕಣ್ಣ ಮುಂದೆ ಕಾಣಿಸಿಕೊಳ್ಳುತ್ತದೆ. ಕಲ್ಲು ಕೋರೆಯ ವಿಷಯದಲ್ಲಿ ಪರಿಸರವಾದಿಗಳ ಪ್ರತಿಭಟನೆ, ಅಲ್ಲಿ ನಡೆಯುವ ಸಣ್ಣಪುಟ್ಟ ಗಲಾಟೆ, ಯುವಕರ ಮನಸೆಳೆಯುವ ಬೈಕ್ ರೇಸ್ ಇವೆಲ್ಲವೂ ಚಿತ್ರಕ್ಕೆ ಮತ್ತಷ್ಟು ಗಂಭೀರತೆ ಹುಟ್ಟಿಸುತ್ತವೆ. ಚಿತ್ರದ ನಡುನಡುವೆ ಬರುವ ನವಿರಾದ ಹಾಸ್ಯ ಪ್ರೇಕ್ಷಕರನ್ನು ಕೂತಲ್ಲೇ ಸಣ್ಣಗೆ ನಕ್ಕು ಬಿಡಿಸುತ್ತದೆ. ನಮೊ ಬೆನೊಡು, ನಮೊ ಉನೊಡು’ ಎನ್ನುವ ಹಾಸ್ಯದ ಮಾತು, ಲಾಟರಿ ಬದಲಾಯಿಸಿಕೊಟ್ಟರೂ ಲಕ್ಷಗಟ್ಟಲೆ ಬಹುಮಾನ ದೊರೆಯುವುದು ಇಂತಹ ಚಿಕ್ಕಪುಟ್ಟ ಹಾಸ್ಯಗಳು ಖುಷಿ ಕೊಡುತ್ತವೆ.

ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಮಿಸ್ ಮಾಡಲೇ ಬಾರದು ಏಕೆಂದರೆ ಇಡೀ ಚಿತ್ರದ ಸಾರ ಇರುವುದೇ ಕ್ಲೈಮ್ಯಾಕ್ಸ್ ನಲ್ಲಿ ಅಷ್ಟೊಂದು ಅದ್ಭುತವಾಗಿ ಮೂಡಿಬಂದಿದೆ. ಇಡೀ ಪ್ರೇಕ್ಷಕ ವರ್ಗವೇ ನಿಬ್ಬೆರಗಾಗುವಂತೆ ಮಾಡಿದೆ. ಇಡೀ ಚಿತ್ರದಲ್ಲಿ ಬಹುತೇಕ ಹೊಸಬರೆ ನಟನೆ ಮಾಡಿದ್ದಾರೆ. ಇಲ್ಲಿ ಸಾಂದೀಪನಿ ಶಾಲೆಯ ಅಮೃತಾಳ ಬಗ್ಗೆ ಒಂದು ಮಾತು ಹೇಳಲೇಬೇಕು ಏಕೆಂದರೆ ಇಡೀ ಚಿತ್ರದ ಪ್ಲಸ್ ಪಾಯಿಂಟ್ ಈ ಹುಡುಗಿ. ಚಿಕ್ಕ ಪ್ರಾಯಕ್ಕೆ ತನ್ನ ಅದ್ಭುತ ನಟನೆಯೊಂದಿಗೆ ಗಮನ ಸೆಳೆಯುತ್ತಾಳೆ. ಆಗಾಗ ನಾಗ ಶಕ್ತಿಯಾಗಿ ಬದಲಾಗುವ ಇವಳ ಹಾವಭಾವ ನಿಜಕ್ಕೂ ಸೂಪರ್. ಚಿತ್ರದಲ್ಲಿ ವಿಶೇಷವಾಗಿ ವಿಲನ್ ಆಗಿ ಸುವರ್ಣ ವಾಹಿನಿಯ ಆ್ಯಂಕರ್ ಆಗಿದ್ದ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಉಪ್ಪಳ, ಪುತ್ತೂರು ಬಳ್ಳಮಜಲಿನ ವಿಜಯಹರಿ ರೈ, ಶರತ್ ಆಳ್ವ ಕೂರೇಲು ಗಮನ ಸೆಳೆಯುತ್ತಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ರೂಪಶ್ರೀ ವರ್ಕಾಡಿಯವರ ನಟನೆ ಇಡೀ ಚಿತ್ರಕ್ಕೆ ಜೀವ ತುಂಬುತ್ತದೆ. ಇನ್ನುಳಿದಂತೆ ಚಿತ್ರದ ನಾಯಕಿಯಾಗಿ ಕೃತಿ ಶ್ರೀನಿವಾಸ ಪೂಜಾರಿ ಭರವಸೆಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ನಾಯಕನಾಗಿ ನಿಹಾಲ್ ರೈ( ಮಲ್ಲಿಕಾ ಪಕ್ಕಳರವರ ಪುತ್ರ) ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದಲ್ಲದೆ ಭವ್ಯ ಪೂಜಾರಿ, ಚಂದ್ರಹಾಸ ಶೆಟ್ಟಿ ಮಾಣಿ, ಪ್ರಿಯ ಶೆಟ್ಟಿ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತ ಅಂಚನ್, ಸುಚಿತ್ರ ಶಕ್ತಿನಗರ, ಪ್ರವೀಣ್ ಕೊಡಕ್ಕಲ್, ಮನೀಷ್ ಸಿದ್ದಕಟ್ಟೆ, ಸೌಪರ್ಣಿಕ ಗುರುರಾಜ್ ರೈ, ಸುಪ್ರೀತಾ ಸುಳ್ಯ, ಶಶಿರಾಜ್ ಉಡುಪಿ, ನಂದನ್ ಸರ್ವೆ ಮತ್ತಿತರರು ನಟಿಸಿದ್ದಾರೆ.

ಬಹುತೇಕ ಹೊಸಬರನ್ನೇ ಹಾಕಿಕೊಂಡು ಒಂದು ಒಳ್ಳೆಯ ಚಿತ್ರ ನಿರ್ದೇಶನ ಮಾಡಿದ ಹೆಗ್ಗಳಿಕೆ ನಿತಿನ್ ರೈ ಕುಕ್ಕುವಳ್ಳಿಯವರಿಗೆ ಸಲ್ಲುತ್ತದೆ. ಬನ ಸಿನಿಮಾ ಬಹುತೇಕ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಶೂಟಿಂಗ್ ಆಗಿದ್ದು ತಿಂಗಳಾಡಿ ಕನ್ನಡಮೂಲೆ, ಮಾಡಾವು, ಬೆಳ್ಳಾರೆ, ಮಂಗಳೂರು, ಚಿಕ್ಕಮಗಳೂರು ಇತ್ಯಾದಿ ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಇನ್ನು ಚಿತ್ರದ ಚಿತ್ರಕಥೆ, ಸಂಭಾಷಣೆ ಹಾಗೇ ಛಾಯಾಗ್ರಹಣದ ಬಗ್ಗೆ ಹೇಳಲೇಬೇಕಾಗಿದೆ. ಬಹಳಷ್ಟು ಚಿತ್ರಗಳಿಗೆ ಸಂಭಾಷಣೆ, ಸಾಹಿತ್ಯ ಬರೆದ ರಝಾಕ್ ಪುತ್ತೂರು ಬನ ಚಿತ್ರಕ್ಕೂ ಒಳ್ಳೆಯ ಸಂಭಾಷಣೆ ಬರೆದಿದ್ದಾರೆ. ಒಂದಿಷ್ಟು ಮುಜುಗರ ತರದ ಪ್ರತಿಯೊಬ್ಬರು ಕೇಳಬಹುದಾದ ಒಳ್ಳೆಯ ಸಂಭಾಷಣೆ ಚಿತ್ರದಲ್ಲಿದೆ. ಇನ್ನು ಹಾಡುಗಳು ಕೂಡ ಮನಸ್ಸಿಗೆ ಮುದ ಕೊಡುತ್ತದೆ. ಇನ್ನೊಂದು ಚಿತ್ರದ ಹೈಲೈಟ್ ಎಂದರೆ ಛಾಯಾಗ್ರಹಣ. ಬಹಳಷ್ಟು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವ ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡಿದ್ದು ಅದ್ಭುತ ಪ್ರಕೃತಿ ಸೌಂದರ್ಯವನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ದೃಶ್ಯವೂ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ಕ್ಯಾಮರ ವರ್ಕ್ಸ್ ಗೆ ಫುಲ್ ಮಾರ್ಕ್ಸ್ ನೀಡಬಹುದು. ಇನ್ನು ಜಯಕಾರ್ತಿಯವರ ಸಂಗೀತ, ನವೀನ್ ಪಿ.ಎಂ ಕುಂಬ್ಳೆಯವರ ಸಂಕಲನ ಸೂಪರ್ ಆಗಿದೆ. ಕೆಲವೊಂದು ಸಣ್ಣ ಪುಟ್ಟ ತಪ್ಪುಗಳನ್ನು ಹೊರತುಪಡಿಸಿದರೆ ಹೊಸಬರನ್ನೇ ಹಾಕಿಕೊಂಡು ವಿಭಿನ್ನ ರೀತಿಯಲ್ಲಿ ಕಥೆ ಹೇಳ ಹೊರಟಿರುವ ಬನ ಚಿತ್ರಕ್ಕೆ 100ರಲ್ಲಿ 90 ಮಾರ್ಕ್ಸ್ ನೀಡಬಹುದು.

ಧರ್ಮದೈವ, ಧರ್ಮಚಾವಡಿಗಿಂತ ಭಿನ್ನಬನ’
ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿಯವರ ಈ ಹಿಂದಿನ ಎರಡು ಸೂಪರ್ ಹಿಟ್ ಸಿನಿಮಾಗಳಾದ ಧರ್ಮದೈವ, ಧರ್ಮಚಾವಡಿಗಿಂತ `ಬನ’ ಈ ಮಣ್ಣ್ದ ಕಥೆ ಬಹಳಷ್ಟು ವಿಭಿನ್ನವಾಗಿದೆ. ಆ ಎರಡೂ ಸಿನಿಮಾಗಳಲ್ಲೂ ದೈವವನ್ನು ತೆರೆಯ ಮೇಲೆ ತರದೇ ಸಿನಿಮಾ ಮಾಡಿ ಗೆದ್ದಿದ್ದಾರೆ. ಬನದಲ್ಲೂ ನಾಗನ ಮೇಲಿನ ಭಕ್ತಿ ಹಾಗೂ ನಾಗನ ಶಾಪವನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ಮೂಡಿಸಿದ್ದಾರೆ. ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಸಿನಿಮಾ ಇದಾಗಿದೆ.


ಹೊಸಬರೇ ನಟಿಸಿದ ಸಿನಿಮಾ
ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಲು ಒಂದು ರೀತಿಯ ಧಮ್ ಬೇಕು. ಬನ ಸಿನಿಮಾದಲ್ಲಿ ಆ ಧೈರ್ಯವನ್ನು ನಿರ್ಮಾಪಕರು, ನಿರ್ದೇಶಕರು ಮಾಡಿ ತೋರಿಸಿದ್ದಾರೆ. ಖಡಕ್ ವಿಲನ್ ಕ್ಯಾರೆಕ್ಟರ್ ಮಾಡಿದ ಶರತ್ ಆಳ್ವ ಕೂರೇಲು, ನಿಹಾಲ್ ರೈ, ಕೃತಿ ಪೂಜಾರಿ, ಜಯಪ್ರಕಾಶ್ ಶೆಟ್ಟಿ ಇವರೆಲ್ಲರೂ ಭರವಸೆಯ ಕಲಾವಿದರಾಗಿ ಮೂಡಿಬಂದಿದ್ದಾರೆ. ಈ ನಿಟ್ಟಿನಲ್ಲಿ ನಿರ್ದೇಶಕ ನಿತಿನ್ ರೈಗೆ ಹ್ಯಾಟ್ಸ್ಅಫ್ ಹೇಳಲೇಬೇಕಾಗಿದೆ.


ಇಂದಿನಿಂದ ಭಾರತ್ ಸಿನಿಮಾಸ್‌ನಲ್ಲಿ..
ಪುತ್ತೂರು ಜಿಎಲ್ 1 ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಬನ ಚಿತ್ರವು ಅ.23 ರಿಂದ ಪ್ರದರ್ಶನ ಕಾಣುತ್ತಿದೆ. ಕುಟುಂಬ ಸಮೇತರಾಗಿ ನೋಡಬಹುದಾದ ಒಂದು ಒಳ್ಳೆಯ ತುಳು ಸಿನಿಮಾವನ್ನು ಮಿಸ್ ಮಾಡಿಕೊಳ್ಳಬೇಡಿ. ಇಂದೇ ವೀಕ್ಷಿಸಿ.

LEAVE A REPLY

Please enter your comment!
Please enter your name here