ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

0

ಸಂಸ್ಕಾರಯುತ ಶಿಕ್ಷಣ ಸಮಾಜಕ್ಕೆ ಆಸ್ತಿ- ಕ್ಯಾ..ಬ್ರಿಜೇಶ್ ಚೌಟ

ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ಡಿ.20ರಂದು ನಡೆಯಿತು. ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ರೇವತಿ ಅವರು ಶುಭಹಾರೈಸಿದರು.

ಮುಖ್ಯ ಅತಿಥಿ ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ವಿಶೇಷ ಸ್ಥಾನಮಾನ ಇದೆ. ಸಮಾಜದ ಅಡಿಪಾಯ ಶಿಕ್ಷಣದಲ್ಲಿದೆ. ಗುಣಮಟ್ಟದ ಶಿಕ್ಷಣ ಪಡೆಯುವುದು ಇಂದಿನ ಅಗತ್ಯ.ಹಿಂದೆ ಹಿರಿಯರು ಅನೇಕ ಭಾಗದಲ್ಲಿ ಶಾಲೆಗಳನ್ನು ಆರಂಭಿಸಿದ್ದರು.ಈಗ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆಯೂ ಷಣ್ಮುಖದೇವ ಪ್ರೌಢಶಾಲೆ ಉತ್ತಮ ಸಾಧನೆ ಮಾಡಿದೆ‌.ಸಂಚಾಲಕರಾದ ಶಿವರಾಮ ಭಟ್ ಹಾಗೂ ಆಡಳಿತ ಮಂಡಳಿಯು ಉತ್ತಮ ಕೆಲಸ ಮಾಡುತ್ತಿದೆ.ಶಿಕ್ಷಣ ಸಂಸ್ಥೆಗಳನ್ನು ಸಮಾಜದ ಹಿತಚಿಂತನೆಯಿಂದ ನಡೆಸಬೇಕು ಎಂದರು. 

ರಾಜಕೀಯ ಬಿಟ್ಟು ಒಂದಾಗುವ ವಾತಾವರಣ ಕೊಳ್ತಿಗೆಯಲ್ಲಿದೆ– ಹೇಮನಾಥ ಶೆಟ್ಟಿ
ಕೊಳ್ತಿಗೆ ಗ್ರಾಮ ತನ್ನದೇ ಆದ ವಿಶೇಷತೆ ಇದೆ.ರಾಜಕೀಯ ಬಿಟ್ಟು ಒಂದಾಗುವ ವಾತಾವರಣ ಕೊಳ್ತಿಗೆಯಲ್ಲಿದೆ.ಶಾಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಸಹಕಾರ ನೀಡುತ್ತೇನೆ. ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಯಾಗಬೇಕು ಎಂದು ಹೇಮನಾಥ ಶೆಟ್ಟಿ ಹೇಳಿದರು.

ಬಹುಮಾನ ವಿತರಿಸಿ ಮಾತನಾಡಿದ ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಮಾತನಾಡಿ, ಜ್ಞಾನವನ್ನು ಹೆಚ್ಚಿಸಲು ಶಿಕ್ಷಣ ಬೇಕು.ಇನ್ನೊಬ್ಬನಿಗೆ ನೋವಾಗದ ರೀತಿಯಲ್ಲಿ ನಮ್ಮ ನಡವಳಿಕೆ ಇರಬೇಕು.ಸಮಾಜದ ಕಟ್ಟುಪಾಡಿನಲ್ಲಿ ಬದುಕಬೇಕು.ಎಲ್ಲರಿಗೂ ಗೌರವ ನೀಡುವ ಕಾರ್ಯ ಮಾಡಿ.ಉತ್ತಮ ಯೋಚನೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಸಾಧನೆಯನ್ನು ಸಂಭ್ರಮಿಸಬೇಕು.ಒಬ್ಬೊಬ್ಬರಲ್ಲಿ ಬೇರೆ ಬೇರೆ ಪ್ರತಿಭೆ ಇದೆ ಅವುಗಳನ್ನು ಬೆಂಬಲಿಸುವ ವ್ಯಕ್ತಿತ್ವ ಸಮಾಜದಲ್ಲಿರಬೇಕು ಎಂದರು.

ವಿದ್ಯಾರ್ಥಿಗಳೇ ಶಾಲೆಯ ರಾಯಭಾರಿಗಳು.ಡಾ.ಸುಬ್ರಾಯ ಭಟ್ ಅವರ ಅಂಗಳದಲ್ಲಿ ಆರಂಭವಾದ ಶಾಲೆ ಈಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.ಶಿವರಾಮ ಭಟ್ ಅವರ ಹುಮ್ಮಸ್ಸಿಗೆ ಆಡಳಿತ ಮಂಡಳಿಯ ,ಶಿಕ್ಷಕರ ಬೆಂಬಲ ಇದೆ.ಕೊಳ್ತಿಗೆ ಗ್ರಾಮದ ಸಮಗ್ರ ಅಭಿವೃದ್ಧಿ ಯಾಗಬೇಕಾದರೆ ಶಿಕ್ಷಣ ಕ್ಷೇತ್ರವೂ ಬೆಳವಣಿಗೆಯಾಗಬೇಕಿದೆ. ಅವಕಾಶಗಳನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ರಾಷ್ಟ್ರಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.ಸ್ವಚ್ಚತೆಗೆ ಕೈ ಜೋಡಿಸಬೇಕು ಎಂದು ಪ್ರಮೋದ್ ಕೆ.ಎಸ್.ಹೇಳಿದರು.

ಪೆರ್ಲಂಪಾಡಿ ಷಣ್ಮುಖದೇವ ಭಜನಾ ಮಂಡಳಿಯ ಕಾರ್ಯದರ್ಶಿ ಸತ್ಯಪ್ರಕಾಶ್ ಕುಂಟಿಕಾನ ಮಾತನಾಡಿ, ಶ್ರದ್ಧೆಯಿಂದ ಗುರಿಯನ್ನು ಮುಟ್ಟಲು ಸಾಧ್ಯ.ಯಾವುದೇ ಚಟುವಟಿಕೆಯಲ್ಲೂ ಪಾಲ್ಗೊಳ್ಳಬೇಕು.ಪ್ರಯತ್ನ ಪಡೆಯಬೇಕು.ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಅಧ್ಯಕ್ಷತೆಯನ್ನು  ವಹಿಸಿದ್ದ ಷಣ್ಮುಖದೇವ ಪ್ರೌಢಶಾಲೆಯ ಅಧ್ಯಕ್ಷ ತೀರ್ಥಾನಂದ ದುಗ್ಗಳ ಮಾತನಾಡಿ, ಪ್ರೌಢಶಿಕ್ಷಣವೇ ಸಾಧನೆಗೆ ಮೂಲ.ಶಿಕ್ಷಣವೇ ಬದುಕಿನ ಜೀವಾಳ.ವಿದ್ಯಾರ್ಥಿಗಳು ಊರಿಗೆ ಹೆಸರು ತರುವ ಕೆಲಸವಾಗಬೇಕು ಎಂದರು.

ಆಡಳಿತ ಸಮಿತಿ ಕಾರ್ಯದರ್ಶಿ ದಿವಾಕರ ರೈ ಕೆರೆಮೂಲೆ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಸತ್ಯಾನಂದ ಬರಡಿಮಜಲು, ಆಡಳಿತ ಮಂಡಳಿಯ ಉಪಾಧ್ಯಕ್ಷ ಗಣಪತಿ ಭಟ್ ಎಕ್ಕಡ್ಕ ,ಜತೆ ಕಾರ್ಯದರ್ಶಿ ಶ್ವೇತಾ ಕುಂಟಿಕಾನ,ಸದಸ್ಯರಾದ ಎಸ್.ಪಿ.ಮುರಳೀಧರ ಕೆಮ್ಮಾರ, ವೆಂಕಪ್ಪ ನಾಯ್ಕ ಕೆ.,,ಗಿರೀಶ್ ಪಾದೆಕಲ್ಲು,ಗೌರವ ಸದಸ್ಯರಾದ ಎಂ.ಗಣೇಶ್ ಭಟ್ ,ವಿದ್ಯಾರ್ಥಿ ನಾಯಕಿ ಯಶ್ಮಿತಾ,ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ ಜಯರಾಮ ಗೌಡ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಸದಸ್ಯರಾದ ಸೀತಾರಾಮ ಅಮಳ ಸ್ವಾಗತಿಸಿದರು.ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯಗುರು ಕೃಷ್ಣವೇಣಿ ಎಸ್ ವಂದಿಸಿದರು.ಶಿಕ್ಷಕಿ ಭವ್ಯ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಅಸ್ಮಿತಾ  ಕಾರ್ಯಕ್ರಮ ನಿರೂಪಿಸಿದರು.

ಸಂಸ್ಕಾರಯುತ ಶಿಕ್ಷಣ ಸಮಾಜಕ್ಕೆ ಆಸ್ತಿ- ಕ್ಯಾ.ಬ್ರಿಜೇಶ್ ಚೌಟ

ಸಂಸದ ಕ್ಯಾ..ಬ್ರಿಜೇಶ್ ಚೌಟ ಅವರು ಭೇಟಿ ನೀಡಿ ಮಾತನಾಡಿ, ಸಂಸ್ಕಾರಯುತ ಶಿಕ್ಷಣ ಪಡೆದುಕೊಂಡ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗುತ್ತಾರೆ. ಗ್ರಾಮೀಣ ಭಾಗದಲ್ಲಿರುವ ಷಣ್ಮುಖದೇವ ಪ್ರೌಢಶಾಲೆಯು ಅಂತಹ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ಬಳಿಕ ಸಂಸದರು ವಿದ್ಯಾರ್ಥಿಗಳೊಡನೆ, ಶಿಕ್ಷಕರೊಂದಿಗೆ,ಆಡಳಿತ ಮಂಡಳಿಯವರೊಂದಿಗೆ ಕುಶಲೋಪರಿ ನಡೆಸಿದರು.

LEAVE A REPLY

Please enter your comment!
Please enter your name here