ದ್ವೇಷ ಭಾಷಣ, ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ಬಿಜೆಪಿ ಪ್ರತಿಭಟನೆ

0

ತುರ್ತು ಪರಿಸ್ಥಿತಿ ಮಾದರಿಯಲ್ಲಿ ರಾಜ್ಯ ಸರಕಾರದ ಆಡಳಿತ-ದಯಾನಂದ ಶೆಟ್ಟಿ ಉಜಿರೆಮಾರು

ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರ ಅನುಷ್ಠಾನಕ್ಕೆ ತರುತ್ತಿರುವ ’ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ – 2025’ ಮಸೂದೆ ವಿರೋಧಿಸಿ ಪುತ್ತೂರು ಬಿಜೆಪಿ ವತಿಯಿಂದ ಡಿ.24ರಂದು ತಾಲೂಕು ಆಡಳಿತ ಸೌಧದ ಬಳಿ ಪ್ರತಿಭಟನೆ ನಡೆಯಿತು. ವಿಧೇಯಕವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ರಾಜ್ಯಪಾಲರಿಗೆ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮೂಲಕ ಮನವಿ ಮಾಡಲಾಯಿತು.


ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ರಾಜ್ಯ ಸರಕಾರ ಅನುಷ್ಠಾನಕ್ಕೆ ತರುತ್ತಿರುವ ಮಸೂದೆ ಸಂವಿಧಾನ ವಿರೋಧಿ, ಜನವಿರೋಧಿ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅಪಾಯಕಾರಿಯಾದ ಮಸೂದೆಯಾಗಿದೆ. ಈ ಹಿಂದೆ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಯಾವ ರೀತಿಯ
ಅಘೋಷಿತವಾದ ಜನಜೀವನ ಇತ್ತು ಎಂಬುದನ್ನು ಇವತ್ತು ಜನರು ಮಾತನಾಡುವುದನ್ನು ನಾವು ಕೇಳುತ್ತಿದ್ದೇವೆ. ಇದೀಗ ರಾಜ್ಯ ಸರಕಾರ ಮತ್ತೊಮ್ಮೆ ಅದೇ ತುರ್ತು ಪರಿಸ್ಥಿತಿ ಮಾದರಿಯಲ್ಲಿ ’ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ – 2025’ ಮಸೂದೆ ಅನುಷ್ಠಾನಗೊಳಿಸಲು ಹೊರಟಿದೆ. ಈ ಮಸೂದೆಗೆ ನಮ್ಮ ತೀವ್ರ ಆಕ್ಷೇಪಣೆ ಮತ್ತು ವಿರೋಧವಿದೆ. ಈ ವಿಧೇಯಕವನ್ನು ಆಡಳಿತಾರೂಢಕಾಂಗ್ರೆಸ್ ಪಕ್ಷವು ತನ್ನ ವಿರುದ್ಧ ಮಾತನಾಡುವ ವಿರೋಧ ಪಕ್ಷದ ನಾಯಕರು, ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳು, ರೈತರು, ಯುವಕರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರ ಧ್ವನಿಯನ್ನು ‘ದ್ವೇಷ ಭಾಷಣ’ ಎಂಬ ನೆಪದಲ್ಲಿ ಮೌನಗೊಳಿಸಲು ಬಳಸುವ ಸಾಧ್ಯತೆ ಸ್ಪಷ್ಟವಾಗಿದೆ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.


ಭಾರತೀಯ ದಂಡ ಸಂಹಿತೆ ಹಾಗೂ ಇತರೇ ಪ್ರಚಲಿತ ಕಾನೂನುಗಳಲ್ಲಿ ದ್ವೇಷ ಭಾಷಣ, ಶಾಂತಿ ಭಂಗ, ಸಾಮಾಜಿಕ ಅಶಾಂತಿ ಉಂಟು ಮಾಡುವ ಕೃತ್ಯಗಳನ್ನು ತಡೆಯಲು ಸಮರ್ಪಕ ಕಾನೂನು ವ್ಯವಸ್ಥೆಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಇವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದೆ, ಹೊಸ ಮಸೂದೆ ತರಲು ಮುಂದಾಗಿರುವುದು ಸರಕಾರದ ದುರುದ್ದೇಶ ಮತ್ತು ರಾಜಕೀಯ ಪ್ರತೀಕಾರದ ಮನೋಭಾವವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದ ದಯಾನಂದ ಶೆಟ್ಟಿಯವರು, ಈ ವಿಧೇಯಕವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಅಥವಾ ಗಂಭೀರ ಸಂವಿಧಾನಾತ್ಮಕ ಪರಿಶೀಲನೆಗಾಗಿ ಪುನರ್‌ಪರಿಶೀಲನೆಗೆ ಮರಳಿಸಬೇಕು ಎಂದು ಆಗ್ರಹಿಸಿದರು.


ರಾಜ್ಯಪಾಲರಿಗೆ ಮನವಿ:
ರಾಜ್ಯಪಾಲರು ಸಂವಿಧಾನದ ಜನತಾಂತ್ರಿಕ ಮೌಲ್ಯಗಳ ರಕ್ಷಕರಾಗಿದ್ದು ಈ ವಿಧೇಯಕವು ಸಂವಿಧಾನದ ಮೂಲ ಆತ್ಮಕ್ಕೆ ವಿರುದ್ಧವಾಗಿರುವುದರಿಂದ ಇದಕ್ಕೆ ನಿಮ್ಮ ಮಾನ್ಯತೆಯನ್ನು ನೀಡುವುದು ರಾಜ್ಯದ ಭವಿಷ್ಯಕ್ಕೆ ಅಪಾಯಕಾರಿ ಆಗಲಿದೆ ಎಂಬುದು ನಮ್ಮ ದೃಢ ಅಭಿಪ್ರಾಯ. ಮೇಲ್ಕಂಡ ವಿಧೇಯಕವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಅಥವಾ ಗಂಭೀರ ಸಂವಿಧಾನಾತ್ಮಕ ಪರಿಶೀಲನೆಗಾಗಿ ಪುನರ್‌ಪರಿಶೀಲನೆಗೆ ಮರಳಿಸಬೇಕು, ಜನವಿರೋಽ ಮತ್ತು ದಮನಾತ್ಮಕ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಕಠಿಣ ಸಂದೇಶ ನೀಡಬೇಕು ಎಂದು ಗೌರವಪೂರ್ವಕವಾಗಿ ಆಗ್ರಹಿಸುತ್ತೇವೆ. ಈ ಮನವಿಯನ್ನು ಕರ್ನಾಟಕದ ಪ್ರಜಾಪ್ರಭುತ್ವ, ನಾಗರಿಕ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸುವಂತೆ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಯೋಜನಾ ಪ್ರಾಽಕಾರದ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಕುಮಾರ್ ಶೆಣೈ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ನಗರಸಭೆ ನಿಕಟಪೂರ್ವ ಸದಸ್ಯರಾದ ಇಂದಿರಾ ಪುರುಷೋತ್ತಮ ಆಚಾರ್ಯ, ಪ್ರೇಮಾಲತಾ ಟಿ ನಂದಿಲ, ಪೂರ್ಣಿಮಾ, ಬಿಜೆಪಿ ಕಾರ್ಯದರ್ಶಿಗಳಾದ ಜಯಲಕ್ಷ್ಮಿ, ವಿರೂಪಾಕ್ಷ ಮಚ್ಚಿಮಲೆ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಹರಿಪ್ರಸಾದ್ ಯಾದವ್, ಸುನಿಲ್ ದಡ್ಡು, ಯು.ಲೋಕೇಶ್ ಹೆಗ್ಡೆ, ರಾಮಣ್ಣ ಗೌಡ ಗುಂಡೋಳೆ, ಸುರೇಶ್ ಆಳ್ವ, ಸುರೇಶ್ಚಂದ್ರ ಶೆಟ್ಟಿ, ವಿದ್ಯಾಧರ್ ಜೈನ್, ಜಯರಾಮ ಪೂಜಾರಿ, ನಾಗೇಶ್ ಟಿ.ಎಸ್, ವಿಶ್ವನಾಥ ಕುಲಾಲ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here