






ಪುತ್ತೂರು: ಇಲ್ಲನ ಮುಕ್ರಂಪಾಡಿಯಲ್ಲಿರುವ ದ್ವಾರಕ ಪ್ರತಿಷ್ಠಾನದ ವಿಶೇಷ ಕಾರ್ಯಕ್ರಮ ದ್ವಾರಕೋತ್ಸವ 2026ರ ಆಮಂತ್ರಣ ಪತ್ರವನ್ನು ಜ.1 ರಂದು ಪ್ರತಿಷ್ಠಾನದ ನಂದಗೋಕುಲ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು.



ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ನ್ಯಾಯವಾದಿ ಮೋಹನ್ ಭಟ್, ಆಮಂತ್ರಣ ಪತ್ರವನ್ನು ಗ್ರಾಹಕ ದೇವರ ಮುಂದೆಯೇ ಬಿಡುಗಡೆಗೊಳಿಸಿದ್ದಾರೆ. ಗೋಪಾಲಕೃಷ್ಣ ಅವರ ಪ್ರಾಮಾಣಿಕ ಕೆಲಸದಿಂದಾಗಿ ಸಂತೃಪ್ತ ಗ್ರಾಹಕರ ಬಳಗ ಹೆಚ್ಚುತ್ತಾ ಹೋಗುತ್ತಿದೆ. ಮಕ್ಕಳಿಗೆ ಸಂಸ್ಕೃತ ಪಾಠ ಕಲಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಇಂತಹ ಕಾರ್ಯದ ಮೂಲಕ ಉತ್ತಮ ಸಮಾಜೋದ್ಧಾರಕ ಕೆಲಸಗಳನ್ನು ಮಾಡುತ್ತಿದ್ದಾರೆ. ಸಾಧಕರನ್ನು ಗುರುತಿಸಿ ಸನ್ಮಾನಗಳನ್ನೂ ಮಾಡುತ್ತಿದ್ದಾರೆ. ಅಲ್ಲದೆ, ತನ್ನ ಆದಾಯದಲ್ಲಿ ಒಂದಿಷ್ಟು ಪ್ರಮಾಣವನ್ನು ಸಮಾಜಕ್ಕಾಗಿ ಮೀಸಲಿಡುವುದು ಉತ್ತಮ ಕಾರ್ಯವಾಗಿದೆ. ಇವರ ಉದ್ಯಮವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ದ್ವಾರಕೋತ್ಸವವು ಅದ್ದೂರಿಯಾಗಿ ನೆರವೇರಲಿ ಎಂದು ಶುಭಹಾರೈಸಿದರು.



ದ್ವಾರಕ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಮಾತನಾಡಿ, ಕಾರ್ಯಕಮದ ಆಯೋಜನೆ ಮಾಡುವ ರೀತಿಯಲ್ಲಿ ಕಾರ್ಯಕ್ರಮದ ಯಶಸ್ಸು ಅಡಗಿರುತ್ತದೆ. ನಮ್ನ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡುವ ಮೂಲಕ ಪ್ರತಿ ವರ್ಷ ದ್ವಾರಕೋತ್ಸವ ಯಶಸ್ವಿಯಾಗಿ ನಡೆದುಕೊಂಡು ಬರಯತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಳೆ ಮಾತನಾಡಿ, ಫೆ.2 ರಂದು ಆಯೋಜನೆಗೊಂಡಿರುವ ದ್ವಾರಕೋತ್ಸವ 2026 ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಹೇಶ್ ಕಜೆ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ಸ್ವಾವಲಂಬನೆಗಾಗಿ ಆರ್ಥಿಕ ಹೂಡಿಕೆ ಕುರಿತ ವಿಚಾರಗೋಷ್ಠಿ ನೇಯಲಿದೆ. ಭೋಜನದ ಬಳಿಕ ಲಯವಾದ್ಯ ರಂಜನಿ ಎಂಬ ಯಕ್ಷಗಾನ ಹಿಮ್ನೇಳದ ಅಬ್ಬರತಾಳ ಮತ್ತು ಕೀಬೋರ್ಡ್ ವಾದನ, ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಲಾರಾಧನೆ, ಅಖಿಲಾ ಪಜಿಮಣ್ಣು ಅವರಿಂದ ಗಾನ ರಸಧಾರೆ, ಶಂಭೋ ಸ್ವಯಂಭೋ ಭರತನಾಟ್ಯ, ಭೂಮಿಪುತ್ರ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮೃತಕೃಷ್ಣ ವಂದಿಸಿದರು. ಯುವ ಬರಹಗಾರ ನವೀನ್ ಕೃಷ್ಣ, ದ್ವಾರಕ ಸಮೂಹ ಸಂಸ್ಥೆಯ ಅವನೀಶ ಕೃಷ್ಣ ಪ್ರಾರ್ಥಿಸಿದರು. ದ್ವಾರಕ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಅಶ್ವಿನಿ ಗೋಪಾಲಕೃಷ್ಣ ಉಪಸ್ಥಿತರಿದ್ದರು. ದ್ವಾರಕ ಪ್ರತಿಷ್ಠಾನದ ಸಹಸಂಸ್ಥೆಗಳ ಪದಾಧಿಕಾರಿಗಳು, ಸಿಬ್ವಂದಿ ವರ್ಗದವರು ಸಹಕರಿಸಿದರು.










