ಶೇಖಮಲೆ ದಲಿತ ಕಾಲನಿ ರಸ್ತೆಗೆ ಮೋರಿ, ತಡೆಗೋಡೆ ನಿರ್ಮಾಣಕ್ಕೆ 1.25 ಕೋಟಿ ಮಂಜೂರು

0

ದಲಿತ ಕುಟುಂಬಗಳ ಹಲವು ವರ್ಷದ ಬೇಡಿಕೆ ಈಡೇರಿಸಿದ್ದೇನೆ: ಶಾಸಕ ಅಶೋಕ್ ರೈ

ಪುತ್ತೂರು: ಅರಿಯಡ್ಕ ಗ್ರಾಮದ ಶೇಖಮಲೆ ದಲಿತ ಕಾಲನಿಗೆ ತೆರಳುವ ರಸ್ತೆಗೆ ತಡೆಗೋಡೆ ಮತ್ತು ಮೋರಿ ನಿರ್ಮಾಣಕ್ಕೆ ಅನುದಾನವನ್ನು ನೀಡಿದ್ದೇವೆ, ದಲಿತ ಕುಟುಂಬಗಳ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಅರಿಯಡ್ಕ ಗ್ರಾಮದ ಶೇಖಮಲೆ ದಲಿತ ಕಾಲನಿ ರಸ್ತೆಗೆ ಮೋರಿ ಮತ್ತು ತಡೆಗೋಡೆ ಕಾಮಗಾರಿಗೆ ಜ.4ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕಳೆದ ಚುನಾವಣೆಯ ಸಂದರ್ಭದಲ್ಲಿ ಕಾಲನಿಗೆ ಭೇಟಿ ನೀಡಿದಾಗ ಇಲ್ಲಿನ ನಿವಾಸಿಗಳು ನನ್ನಲ್ಲಿ ಈ ಬೇಡಿಕೆಯನ್ನು ಇಟ್ಟಿದ್ದರು. ಶಾಸಕನಾದರೆ ಮಾಡಿಕೊಡುವೆ ಎಂದು ಭರವಸೆಯನ್ನು ನೀಡಿದ್ದೆ ಆ ಭರವಸೆಯನ್ನು ಈಡೇರಿಸಿದ್ದೇನೆ, ಮುಂದೆ ಈ ಕುಟುಂಬಗಳು ನಮ್ಮ ಜೊತೆ ನಿಲ್ಲಲಿದೆ ಎಂಬ ಪೂರ್ಣನಂಬಿಕೆಯೂ ಇದೆ ಎಂದು ಹೇಳಿದರು. ಸಣ್ಣ ಹೊಳೆಯನ್ನು ದಾಟಿ ತಮ್ಮ ಮನೆ ಸೇರಬೇಕಿದ್ದ ಈ ಕುಟುಂಬಗಳಿಗೆ ಸರಿಯಾದ ಸಂಪರ್ಕ ರಸ್ತೆ ಇರಲಿಲ್ಲ. ವಾಹನಗಳೂ ಮನೆ ಕಡೆ ತೆರಳುತ್ತಿರಲಿಲ್ಲ. ಮುಂದಕ್ಕೆ ಮೋರಿ ಮತ್ತು ತಡೆಗೋಡೆ ನಿರ್ಮಾಣವಾದರೆ ಇವರ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ ಎಂದು ಹೇಳಿದರು.


ದಲಿತರ ಅಭಿವೃದ್ದಿಗೆ ಸರಕಾರದ ಪಣ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಪರ ಇರುವ ಮುಖ್ಯಮಂತ್ರಿಯಾಗಿದ್ದಾರೆ. ದಲಿತ ಸಮುದಾಯಕ್ಕೆ ಏನು ಕೇಳಿದರೂ ಇಲ್ಲ ಎಂದು ಹೇಳುವುದೇ ಇಲ್ಲ. ತನ್ನ ಕ್ಷೇತ್ರದಲ್ಲಿ ನೂರಾರು ದಲಿತ ಕಾಲನಿಗಳಿವೆ ಬಹುತೇಕ ಕಡೆಗಳಲ್ಲಿ ಸಮಸ್ಯೆ ಮನೆ ಮಾಡಿಕೊಂಡಿದೆ. ರಸ್ತೆ, ಕುಡಿಯುವ ನೀರಿನ ಸಮಸ್ಯೆಗಳು ಇದೆ ಅವುಗಳೆಲ್ಲವನ್ನೂ ಒಂದೊಂದಾಗಿ ಪರಿಹರಿಸಿಕೊಂಡು ಬರುತ್ತಿದ್ದೇವೆ. ಕ್ಷೇತ್ರಕ್ಕೆ ಅನೇಕ ಅಂಬೇಡ್ಕರ್ ಭವನವನ್ನು ಮಂಜೂರು ಮಾಡಿದ್ದೇವೆ. ದಲಿತ ಕುಟುಂಬಗಳಿಗೆ ನೆರವಾಗಬೇಕೆಂಬುದೇ ರಾಜ್ಯದ ಕಾಂಗ್ರೆಸ್ ಸರಕಾರದ ಉದ್ದೇಶವೂ ಆಗಿದೆ. ಕಾಂಗ್ರೆಸ್‌ನಿಂದ ಮಾತ್ರ ದಲಿತರ ಅಭಿವೃದ್ದಿ ಸಾಧ್ಯ ಎಂಬುದು ಈಗ ಸಾಭೀತಾಗಿದೆ ಎಂದು ಶಾಸಕರು ಹೇಳಿದರು.


ಜಾಗ ಬಿಟ್ಟು ಕೊಟ್ಟ ಮುಸ್ಲಿಮರು

ದಲಿತ ಕಾಲನಿಗೆ ರಸ್ತೆ ನಿರ್ಮಾಣ ಮಾಡಿಕೊಡಲು ಜಾಗದ ಕೊರತೆ ಇತ್ತು. ಸ್ಥಳೀಯ ಕೃಷಿಕ ಇಸುಬು ಹಾಜಿ ಬಂಡಸಾಲೆ ಮತ್ತು ಎ. ಆರ್.ಇಬ್ರಾಹಿಂ ರವರು ತಮ್ಮ ವರ್ಗ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಬಿಟ್ಟು ಕೊಟ್ಟಿದ್ದರು. ಇದು ಉತ್ತಮ ಕಾರ್ಯವಾಗಿದೆ. ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಎಲ್ಲರಿಗೂ ಬೇಕಾಗಿದೆ ಅದಕ್ಕೆ ಪೂರಕ ವ್ಯವಸ್ಥೆ ಮಾಡುವವರು ಮಹಾನ್ ತ್ಯಾಗಮಯಿಗಳು ಎಂದು ಹೇಳಿದ ಶಾಸಕರು ದಾನಿಗಳಿಬ್ಬರನ್ನು ವೇದಿಕೆಯಲ್ಲಿ ಸನ್ಮಾನ ಮಾಡಿದರು. ಜಾಗ ಬಿಟ್ಟು ಕೊಡದೇ ಇದ್ದಲ್ಲಿ ರಸ್ತೆ ನಿರ್ಮಾಣ ಸಾಧ್ಯವೇ ಇರಲಿಲ್ಲ. ನಾವೆಲ್ಲರೂ ಪರಸ್ಪರ ಸಹಕಾರ ಮನೋಭಾವದಿಂದ , ಒಗ್ಗಟ್ಟಿನಿಂದ ಇದ್ದಲ್ಲಿ ಊರಿನ ಅಭಿವೃದ್ದಿ ಸಾದ್ಯ ಎಂಬುದಕ್ಕೆ ಶೇಖಮಲೆಯೇ ಸಾಕ್ಷಿ ಎಂದು ಹೇಳಿದರು.


ಹಲವು ವರ್ಷಗಳ ಬೇಡಿಕೆ ಈಡೇರಿದೆ : ಅಶೋಕ್ ಪೂಜಾರಿ ಬೊಳ್ಳಾಡಿ
ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಮಾತನಾಡಿ ಅದೆಷ್ಟೋ ವರ್ಷಗಳ ಬೇಡಿಕೆ ಶಾಸಕ ಅಶೋಕ್ ರೈಯವರ ಮೂಲಕ ಈಡೇರಿದೆ. ಕಾಲಲಿಗೆ ರಸ್ತೆ ಆಗ್ಲಿಕ್ಕಿಲ್ಲ ಎಂದು ಹಲವು ಮಂದಿ ರೇಗಿಸಿದ್ದೂ ಉಂಟು. ಅಭಿವೃದ್ದಿಯ ಇಚ್ಚಾಶಕ್ತಿ ಇದ್ದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಶಾಸಕರೇ ಸಾಕ್ಷಿಯಾಗಿದ್ದಾರೆ. ಅದೆಷ್ಟೋ ರಸ್ತೆ ಸಂಪರ್ಕ ಇಲ್ಲದ ಕಾಲನಿಗಗಳಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ತೆ ಮಾಡಿದ ಪುತ್ತೂರು ಕಂಡ ಏಕೈಕ ಶಾಸಕ ಅಶೋಕ್ ರೈ ಎಂದು ಹೇಳಿದರು. ಇಂದು ಕಾಲನಿಯಲ್ಲಿ ಸಂಭ್ರಮ ಮನೆ ಮಾಡಿದ್ರೆ ಅದಕ್ಕೆ ಶಾಸಕರು, ಸ್ಥಳದಾನಿಗಳು ಕಾರಣಕರ್ತರು ಎಂದು ಹೇಳಿದರು.


ತೆಂಗಿನ ಕಾಯಿ ಒಡೆಯಲು ಬಿಡಲಿಲ್ಲ: ಇಕ್ಬಾಲ್ ಹುಸೇನ್
ಇಲ್ಲಿನ ಕಾಲನಿಗೆ ರಸ್ತೆ ನಿರ್ಮಾಣ ಮಾಡುವುದಾಗಿ ಅನುದಾನ ಬಿಡುಗಡೆ ಮಾಡದೆ ತೆಂಗಿನ ಕಾಯಿ ಒಡೆಯಲು ಹಲವು ಬಂದಿ ಬಂದಿದ್ದರು ಆದರೆ ಅವರಿಗೆ ನಾವು ಅವಕಾಶ ಕೊಟ್ಟಿರಲಿಲ್ಲ. ಅನುದಾನ ಬಿಡುಗಡೆಯಾಗದೆ ಯಾಕೆ ತೆಂಗಿನ ಕಾಯಿ ಒಡೆದು ದರ್ಮಕ್ಕೆ ಪ್ರಚಾರ ಪಡೆದುಕೊಳ್ಳಬೇಕು. ಇಲ್ಲಿನ ದಲಿತರ ರಸ್ತೆ ಸಮಸ್ಯೆ ಅದೆಷ್ಟೋ ವರ್ಷಗಳಿಂದ ಇತ್ತು, ದಾನಿಗಳು ಉದಾರ ಮನಸ್ಸಿನಿಂದ ಜಾಗ ಬಿಟ್ಟು ಕೊಟ್ಟಿದ್ದರಿಂದ ರಸ್ತೆ ನಿರ್ಮಾಣವಾಯಿತು, ಈಗ ಶಾಸಕರು ಅನುದಾನ ನೀಡುವ ಮೂಲಕ ಮೂಲ ಸಮಸ್ಯೆಯೇ ಪರಿಹಾರವಾಗಿದೆ ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಹೇಳಿದರು.


ದಲಿತರ ಮನೆಯಲ್ಲಿ ಊಟ ಸವಿದ ಶಾಸಕರು
ಕಾರ್ಯಕ್ರಮದ ಬಳಿಕ ಸ್ಥಳೀಯ ದಲಿತ ಮುಖಂಡ ಶಿವಪ್ಪ ಅವರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಸಕರು ಅವರ ಮನೆಯಲ್ಲಿ ನಾಷ್ಟ ಮಾಡಿ, ಕುಟುಂಬದ ಜೊತೆ ಫೊಟೋ ತೆಗೆಸಿಕೊಂಡರು. ನಮ್ಮ ಮನೆಯಲ್ಲಿ ಒಬ್ಬ ಶಾಸಕ ಪ್ರಥಮ ಬಾರಿ ಆಗಮಿಸಿದ್ದಾರೆ, ನಮ್ಮ ಜೊತೆ ಊಟ ಮಾಡಿದ್ದಾರೆ ಎಂದು ಶಿವಪ್ಪ ಸಂತಸ ವ್ಯಕ್ತಪಡಿಸಿದರು. ಬಡ ಕೂಲಿ ಕಾರ್ಮಿಕ ಶಿವಪ್ಪರವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ನೆರವು ನೀಡಿದರು.


ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷ ಸತೀಶ್, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ ಪೂಜಾರಿ ಬೊಳ್ಳಾಡಿ, ಸ್ಥಳೀಯ ಪ್ರಮುಖರಾದ ರಫೀಕ್ ದರ್ಕಾಸ್, ಇಸುಬು ಹಾಜಿ, ಇಬ್ರಾಹಿಂ ಎ ಆರ್, ಬೂತ್ ಅಧ್ಯಕ್ಷ ಬಶೀರ್ ಕೌಡಿಚ್ಚಾರ್, ಶಿವಪ್ಪ, ನಾರಾಯಣ, ಹರೀಶ, ಲೋಕೇಶ್ ಎಸ್, ಮಾಜಿ ಗ್ರಾಪಂ ಸದಸ್ಯ ಸುಂದರ ಎಸ್, ಶಿವಪ್ಪ ಎಸ್ ಸಿ, ಪುನೀತ್, ಸುಂದರಿ ಎಸ್, ಲಕ್ಷ್ಮೀ ಎಂ, ಸಾವಿತ್ರಿ ಎಸ್, ರವಿ ಎಸ್ ವಸಂತ ಕೆ, ಹಮೀದ್ ಎ, ಪಿ ಎಂ ಹನೀಫ್, ಸಂಶುದ್ದೀನ್ ಎ ಆರ್, ಹನಿಪ್ ಪಟ್ಲಕಾನ, ಹಸೈನಾರ್ ಜಾರತ್ತಾರು, ಗೋವಿಂದ ಮಣಿಯಾಣಿ, ಸಾದಾತ್ ಜಾರತ್ತಾರು, ಅಶ್ರಫ್ ಸಂಪ್ಯ, ಹನೀಫ್ ದರ್ಕಾಸ್, ಇಸುಬು ಪಟ್ಲಕಾನ ಉಪಸ್ಥಿತರಿದ್ದರು. ಲೋಕೇಶ್ ಶೇಖಮಲೆ ಕಾರ್ಯಕ್ರಮ ನಿರೂಪಿಸಿದರು. ಬಶೀರ್ ಕೌಡಿಚ್ಚಾರ್ ವಂದಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ಹಲವು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ
ಶೇಖಮಲೆ ಕಾಲನಿಗೆ ರಸ್ತೆ ನಿರ್ಮಾಣಕ್ಕೆ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡೇ ಬಂದಿದ್ದರು. ವಿಶೇಷವಾಗಿ ಕಾವು ಹೇಮನಾಥ ಶೆಟ್ಟಿ, ರಫೀಕ್ ದರ್ಖಾಸು, ಅಶೋಕ್ ಪೂಜಾರಿ ಬೊಳ್ಳಾಡಿ, ಎಂ.ಬಿ.ವಿಶ್ವನಾಥ ರೈ, ಇಕ್ಬಾಲ್ ಹುಸೇನ್ ಕೌಡಿಚ್ಚಾರು ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ರಸ್ತೆ ನಿರ್ಮಾಣದ ಹಿಂದೆ ಅವಿರತ ಶ್ರಮ ವಹಿಸಿದ್ದರು. ಇದೀಗ ಶಾಸಕ ಅಶೋಕ್ ರೈಯವರ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುವುದು ಅತ್ಯಂತ ಖುಷಿ ತಂದಿದೆ. ಅಂದು ಪುರಸಭಾ ಮಾಜಿ ಸದಸ್ಯ ಶಕ್ತಿ ಸಿನ್ಹಾರವರು ತನ್ನ ಸ್ವಂತ ಖರ್ಚಿನಿಂದ 1 ಮೋರಿ ಹಾಕಿದ್ದರು ಅದೇ ರೀತಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರ ನೇತೃತ್ವದಲ್ಲಿ ಎಂ.ಬಿ ವಿಶ್ವನಾಥ ರೈ, ರಫೀಕ್ ದರ್ಖಾಸ್, ಅಶೋಕ್ ಪೂಜಾರಿ ಬೊಳ್ಳಾಡಿಯವರ ಸೇರಿಕೊಂಡು 2 ಮೋರಿ ಹಾಕಿದ್ದರು. ಒಟ್ಟು 3 ಮೋರಿ ಹಾಕಿ ಅದಕ್ಕೆ ಮಣ್ಣು ಹಾಕುವ ಕೆಲಸವನ್ನು ಕಾಲನಿ ನಿವಾಸಿಗಳು ಶ್ರಮದಾನದ ಮೂಲಕ ಮಾಡಿದ್ದರು. ದಾನಿಗಳಿಂದ ತಮ್ಮ ವರ್ಗ ಜಾಗವನ್ನೇ ರಸ್ತೆಗಾಗಿ ಉದಾರವಾಗಿ ಬಿಟ್ಟುಕೊಡುವಲ್ಲಿ ರಫೀಕ್ ದರ್ಖಾಸ್‌ರವರು ದಾನಿಗಳ ಜೊತೆ ಮಾತುಕತೆ ನಡೆಸಿದ್ದರು.

LEAVE A REPLY

Please enter your comment!
Please enter your name here