






ಯೋಜನೆಗಳಿಂದ ಅಶಕ್ತರ, ಶೋಷಿತರ ಬಾಳಿಗೆ ಬೆಳಕು-ಅರುಣ್ ಪುತ್ತಿಲ


*ಒಕ್ಕೂಟದ ಮೂಲಕ ಸಂಘಟನೆ ಬಲವರ್ಧನೆಯಾಗಲಿ-ಬಾಬು ನಾಯ್ಕ್
*ಸೂರ್ಯ ಚಂದ್ರ ಇರುವವರೆಗೆ ಯೋಜನೆಗಳು ಮುಂದುವರೆಯುವುದು-ಶಶಿಧರ್ ಎಂ
*ಒಕ್ಕೂಟಗಳಿಂದ ವರ್ಷಕ್ಕೆ ಓರ್ವ ನಾಯಕನನ್ನು ಸೃಷ್ಟಿ ಮಾಡುತ್ತದೆ-ಮೋಹನ್ ಕೆ
*ಅಪಪ್ರಚಾರಕ್ಕೆ ಕಿವಿಗೊಡದೆ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಿ-ಸುಂದರ ಬಲ್ಯಾಯ
*ಸದಸ್ಯರ ಸಮಗ್ರ ಕೂಡುವಿಕೆಯಿಂದ ಸಂಘಟನೆಯ ಅಭಿವೃದ್ಧಿ-ಚೇತನ್ ಕುಮಾರ್



ಪುತ್ತೂರು: ಲಕ್ಷಾಂತರ ಅಶಕ್ತರ, ಶೋಷಿತರ ಬಾಳಿಗೆ ಭರವಸೆಯ ಬೆಳಕನ್ನು ಚೆಲ್ಲಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು. ಸರಕಾರ ಮಾಡಬೇಕಾದ ಕಾರ್ಯವನ್ನು ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಸಾಮಾಜಿಕ ಬದ್ಧತೆ, ಪ್ರೀತಿ-ವಿಶ್ವಾಸ, ಸೌಹಾರ್ದತೆ, ಸಾಮರಸ್ಯದಿಂದ ಜೊತೆ ಜೊತೆಯಾಗಿ ಹೆಜ್ಜೆಯಿಟ್ಟು ದೇಶದ ಅಭಿವೃದ್ಧಿಗೆ ಕೈಂಕರ್ಯ ಮಾಡೋಣ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಇದರ ಸಂಚಾಲಕರೂ, ಕೆಮ್ಮಿಂಜೆ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲರವರು ಹೇಳಿದರು.
ಜ.4 ರಂದು ಮುಕ್ರಂಪಾಡಿ ಸುಭದ್ರ ಸಭಾಂಗಣದಲ್ಲಿ ಪುತ್ತೂರು ತಾಲೂಕಿನ ಕೆಮ್ಮಿಂಜೆ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇದರ ಆಶ್ರಯದಲ್ಲಿ ಪರಮಪೂಜ್ಯ ಖಾವಂದರ ಹಾಗೂ ಮಾತೃಶ್ರೀ ಅಮ್ಮನವರ ಆಶೀರ್ವಾದದೊಂದಿಗೆ ಭೂಮಿಕಾ ಒಕ್ಕೂಟ ಕೆಮ್ಮಿಂಜೆ ಇದರ ವಾರ್ಷಿಕೋತ್ಸವದಲ್ಲಿ ಅವರು ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿ ಮೇಳ ಆಯೋಜಿಸುವಿಕೆ, ಧರ್ಮ ಶಿಕ್ಷಣದ ಮೂಲಕ ಧರ್ಮ ಜಾಗೃತಿ, ಸ್ವಚ್ಛಭಾರತ ಕಲ್ಪನೆ, ಸ್ವ-ಉದ್ಯೋಗಕ್ಕೆ ನೆರವು, ಮದ್ಯವರ್ಜನ ಶಿಬಿರಗಳು ನಡೆಸುವಿಕೆ ಮುಂತಾದ ಅನೇಕ ಸಮಾಜಮುಖಿ ಕಾರ್ಯಗಳು ಆಗುತ್ತಿವೆ. ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವುದು ಈ ಗ್ರಾಮಾಭಿವೃದ್ಧಿ ಯೋಜನೆಗಳಿಂದ ಆಗುತ್ತಿರುವುದು ಶ್ಲಾಘನೀಯ ಎಂದರು.
ಒಕ್ಕೂಟದ ಮೂಲಕ ಸಂಘಟನೆ ಬಲವರ್ಧನೆಯಾಗಲಿ-ಬಾಬು ನಾಯ್ಕ್:
ಮುಖ್ಯ ಅತಿಥಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ್ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಸರ್ವ ಧರ್ಮ ಸಮ್ಮಿಲನದ ಕ್ಷೇತ್ರ. ಇಲ್ಲಿ ಎಲ್ಲಾ ಧರ್ಮದವರು ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಕ್ಷೇತ್ರ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಗಳನ್ನು ಮೂಲೆ ಮೂಲೆಗೂ ತಲುಪಿಸಬೇಕು, ಆ ನಿಟ್ಟಿನಲ್ಲಿ ವ್ಯಕ್ತಿ ಶಕ್ತಿಯಾಗಿ ಬೆಳೆಯಬೇಕು, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವುದೇ ಯೋಜನೆಗಳ ಉದ್ಧೇಶವಾಗಿದೆ, ಒಕ್ಕೂಟದ ಮೂಲಕ ಸಂಘಟನೆ ಬಲವರ್ಧನೆಯಾಗಬೇಕು ಎಂದರು.

ಸೂರ್ಯ ಚಂದ್ರ ಇರುವವರೆಗೆ ಯೋಜನೆಗಳು ಮುಂದುವರೆಯುವುದು-ಶಶಿಧರ್ ಎಂ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ಶಶಿಧರ್ ಎಂ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಗಳ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಅಪಪ್ರಚಾರ ಮಾಡಿದರೂ ಒಕ್ಕೂಟಗಳು ಮಾತ್ರ ಅಭಿವೃದ್ಧಿ ಆಗುತ್ತಾ ಇದೆ. ಆದರೆ ಭೂಮಿಕಾ ಒಕ್ಕೂಟದ ಸದಸ್ಯರು ಮಾತ್ರ ಕಿವಿಗೆ ಹಾಕಿಕೊಳ್ಳಲಿಲ್ಲ. ಖಾವಂದರು ತಾಯಿ ಮತ್ತು ಮಗನ ಪ್ರೀತಿ ಕೊಟ್ಟು ದಾರಿ ತಪ್ಪೋದಿಲ್ಲ ಎಂಬ ನಂಬಿಕೆ ಆದರೆ ಇದೀಗ ತಾಯಿ, ಮಗನ ಪ್ರೀತಿಯ ಜೊತೆಗೆ ಜವಾಬ್ದಾರಿ ಎಂಬ ತಂದೆಯ ಪ್ರೀತಿಯನ್ನು ಜೊತೆಗೂಡಿಸಿದ್ದಾರೆ. ಸೂರ್ಯ ಚಂದ್ರ ಇರುವವರೆಗೆ ಯೋಜನೆಗಳು ಮುಂದುವರೆಯುವುದು ಎಂದರು.
ಒಕ್ಕೂಟಗಳಿಂದ ವರ್ಷಕ್ಕೆ ಓರ್ವ ನಾಯಕನನ್ನು ಸೃಷ್ಟಿ ಮಾಡುತ್ತದೆ-ಮೋಹನ್ ಕೆ:
ಮೊಟ್ಟೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹನ್ ಕೆ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘದಿಂದ ಸುಲಭವಾಗಿ ಯಾವಾಗ ಸಾಲ ಸಿಗಲು ಆರಂಭವಾಯಿತೋ ಅಲ್ಲಿಂದ ಚಕ್ರಬಡ್ಡಿ ಮಾಫಿಯಾಗೆ ಬ್ರೇಕ್ ಬಿತ್ತು. ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿದರೆ ಆರ್ಥಿಕ ಶಕ್ತಿ ಕುಂಟಿತವಾಗುತ್ತದೆ ಎಂದಾಗ ಅದೇ ಖಾಸಗಿ ಶಾಲೆಯಲ್ಲಿ ದಾಖಲಿಸಿದರೆ ಆರ್ಥಿಕ ಶಕ್ತಿ ಹೆಚ್ಚಾಗುವುದು ಅಲ್ವ. ಒಕ್ಕೂಟಗಳಿಂದ ವರ್ಷಕ್ಕೆ ಓರ್ವ ನಾಯಕನನ್ನು ಸೃಷ್ಟಿ ಮಾಡುತ್ತದೆ ಮಾತ್ರವಲ್ಲ ಒಕ್ಕೂಟಗಳ ಸದಸ್ಯರಲ್ಲಿ ಶಿಸ್ತು ಹಾಗೂ ಶಿಷ್ಟಾಚಾರ ಇದೆ ಎಂದರು.
ಅಪಪ್ರಚಾರಕ್ಕೆ ಕಿವಿಗೊಡದೆ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಿ-ಸುಂದರ ಬಲ್ಯಾಯ:
ಕೆಮ್ಮಿಂಜೆ ವಲಯಾಧ್ಯಕ್ಷ ಸುಂದರ ಕೆ.ಬಲ್ಯಾಯ ಮಾತನಾಡಿ, ಧರ್ಮಸ್ಥಳ ಯೋಜನೆಗಳ ಮೂಲಕ ಅನೇಕರನ್ನು ಸಮಾಜದ ಮುಖ್ಯವಾಹಿನಿಗೆ ಗುರುತಿಸುವಂತೆ ಆಗಿದ್ದು ಉನ್ನತ ಸ್ಥಾನಕ್ಕೆ ತರುವಲ್ಲಿ ಯೋಜನೆಗಳು ಯಶಸ್ವಿ ಆಗಿದೆ. ಯಾರೂ ಅಪಪ್ರಚಾರಕ್ಕೆ ಕಿವಿಗೊಡದೆ ಒಕ್ಕೂಟದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ಸದಸ್ಯರ ಸಮಗ್ರ ಕೂಡುವಿಕೆಯಿಂದ ಸಂಘಟನೆಯ ಅಭಿವೃದ್ಧಿ-ಚೇತನ್ ಕುಮಾರ್:
ಅಧ್ಯಕ್ಷತೆಯನ್ನು ವಹಿಸಿದ ಕೆಮ್ಮಿಂಜೆ ಭೂಮಿಕಾ ಒಕ್ಕೂಟದ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಕಳೆದ 23 ವರ್ಷಗಳಿಂದ ನಮ್ಮ ಈ ಭೂಮಿಕಾ ಒಕ್ಕೂಟ ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ಅಭಿವೃದ್ಧಿ ಒಬ್ಬರಿಂದ ಸಾಧ್ಯವಿಲ್ಲ ಅದು ಸಂಘಟನೆಯ ಸದಸ್ಯರ ಸಮಗ್ರ ಕೂಡುವಿಕೆಯಿಂದ ಸಾಧ್ಯವಾಗುತ್ತದೆ ಎಂದರು.
ಮಾಜಿ ಅಧ್ಯಕ್ಷರುಗಳಿಗೆ ಅಭಿನಂದನೆ:
ಕಳೆದ 23 ವರ್ಷಗಳಿಂದ ಭೂಮಿಕಾ ಒಕ್ಕೂಟದ ಅಧ್ಯಕ್ಷರಾಗಿ ಒಕ್ಕೂಟವನ್ನು ಮುನ್ನೆಡೆಸಿದ ಮಾಜಿ ಅಧ್ಯಕ್ಷರುಗಳಾದ ಸುಂದರ್, ಉಮೇಶ್ ರಾವ್, ದಿಲೀಪ್ ಕುಮಾರ್, ಬಾಲಕೃಷ್ಣ ರೈ, ಗಣೇಶ್ ಆಚಾರ್ಯರವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.
ಅಭಿನಂದನಾ ಪತ್ರ ವಿತರಣೆ:
ಈ ಸಂದರ್ಭದಲ್ಲಿ ಸ್ವ-ಸಹಾಯ ಸಂಘದದಲ್ಲಿ ಒಂದೇ ಸಂಘದಲ್ಲಿ 23 ವರ್ಷಗಳಿಂದ ಸೇವೆ ನೀಡುತ್ತಿರುವವರ ಬಗ್ಗೆ ಹಾಗೂ ಕಳೆದ 23 ವರ್ಷಗಳಿಂದ ಇಲ್ಲಿಯವರೆಗೆ ಒಂದೇ ಸಂಘದಲ್ಲಿದ್ದ ಸದಸ್ಯರ ಸಂಘಕ್ಕೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
ಮೊಟ್ಟೆತ್ತಡ್ಕ ಅಗ್ನಿಶಾಮಕ ಠಾಣಾಧಿಕಾರಿ ಶಂಕರ್, ಪುತ್ತೂರು ನಗರಸಭೆ ಸದಸ್ಯೆ ಶ್ರೀಮತಿ ಶೈಲಾ ಪೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವರ್ಣಲತಾ, ಲಹರಿ ಆಚಾರ್ಯ, ವಿಮಲ ಶೇಖರರವರು ಪ್ರಾರ್ಥಿಸಿದರು. ಭೂಮಿಕಾ ಒಕ್ಕೂಟದ ಮೇಲ್ವಿಚಾರಕಿ ಪುಷ್ಪಲತಾ ಸ್ವಾಗತಿಸಿ, ಮಾಜಿ ಅಧ್ಯಕ್ಷ ದಿಲೀಪ್ ಕುಮಾರ್ ವಂದಿಸಿದರು. ಸದಸ್ಯರಾದ ಗೋವಿಂದ, ನವೀನ್ಚಂದ್ರ, ಶೇಖರ್ ಮೊಟ್ಟೆತ್ತಡ್ಕ, ಶಮೀನಾ, ರಾಘವೇಂದ್ರ, ಮೋಹನ್ ಕುಮಾರ್, ಸುರೇಶ್, ರಾಮ ಶೆಟ್ಟಿ, ಸುಜಾತಾ, ಶೋಭಾ, ಜಯಪ್ರಕಾಶ್, ಸುಂದರ್ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಒಕ್ಕೂಟದ ವರದಿಯನ್ನು ಜೊತೆ ಕಾರ್ಯದರ್ಶಿ ಶ್ರೀಮತಿ ಕವಿತಾರವರು ವಾಚಿಸಿದರು. ಶ್ರೀಮತಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಿಗೆ ಏರ್ಪಡಿಸಿದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಭೂಮಿಕಾ ಒಕ್ಕೂಟ ಹಾಗೂ ಸ್ವ-ಸಹಾಯ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಹಿಂದಿನ ಸಾಲಿನಲ್ಲಿ ಇದ್ದವ ನಾನು…
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಅಮೃತಾ ಸ್ವ-ಸಹಾಯ ಸಂಘವನ್ನು ಸ್ಥಾಪಿಸಿ ಇಂದು ನಮ್ಮ ಸಂಘದಲ್ಲಿದ್ದ ಸದಸ್ಯರು ಮಳಿಗೆಯನ್ನು ಕಂಡುಕೊಂಡು ಸಮಾಜದಲ್ಲಿ ಗುರುತಿಸುವಂತಾಗಿದ್ದಾರೆ. ಪೂಜ್ಯ ಖಾವಂದರು ನಮ್ಮ ಬದುಕು ಉಜ್ವಲವಾಗಿಸಲು ನಮಗೊಂದು ಅವಕಾಶವಿತ್ತಿದ್ದಾರೆ. ಈ ಅವಕಾಶವನ್ನು ನಾವು ಬೆಳೆಸಿಕೊಂಡು ಹೋದಾಗ ನಮ್ಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸಭೆಯಲ್ಲಿ ಹಿಂದಿನ ಸಾಲಿನಲ್ಲಿ ಇದ್ದಂತಹ ತಾನು ಇಂದು ವೇದಿಕೆ ಅಲಂಕರಿಸುವಂತೆ ಮಾಡಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಗಳು ಆಗಿದೆ.
-ಉಮೇಶ್ ರಾವ್, ಮಾಜಿ ಅಧ್ಯಕ್ಷರು, ಭೂಮಿಕಾ ಒಕ್ಕೂಟ, ಕೆಮ್ಮಿಂಜೆ
ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರಿಗೆ ಸನ್ಮಾನ…
ಈ ಸಂದರ್ಭದಲ್ಲಿ ಕೆಮ್ಮಿಂಜೆ ಭೂಮಿಕಾ ಒಕ್ಕೂಟದ ವತಿಯಿಂದ ಪತ್ರಕರ್ತ, ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರರಾದ ಸಂತೋಷ್ ಮೊರಾಸ್ ಮೊಟ್ಟೆತ್ತಡ್ಕರವರಿಗೆ ಶಾಲು ಹೊದಿಸಿ, ಫಲ ಪುಷ್ಪ, ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು.










