ಒಡಿಯೂರು ಸಂಸ್ಥಾನದಲ್ಲಿ ನಾಟಕ ರಚನಾ ಸ್ಪರ್ಧೆ-‘ಕಥೆ ಕೇಳಿ ನಾಟಕ ಬರೆಯಿರಿ’

0

ಸಮಾಜದಲ್ಲಿರುವ ಲೋಪದೋಷಗಳನ್ನು ತಿದ್ದುವ ಮೂಲಕ ಪರಿವರ್ತನೆಗೆ ನಾಟಕಗಳು ಪೂರಕವಾಗಬೇಕು: ಒಡಿಯೂರು ಶ್ರೀ

ವಿಟ್ಲ: ಕಲೆ, ಸಾಹಿತ್ಯ ಮತ್ತು ಸಂಗೀತಗಳು ತ್ರಿವೇಣಿ ಸಂಗಮದಂತೆ ಹರಿದುಬರಬೇಕು. ಸಮಾಜದಲ್ಲಿರುವ ಲೋಪದೋಷಗಳನ್ನು ತಿದ್ದುವ ಮೂಲಕ ಉತ್ತಮ ಪರಿವರ್ತನೆಗೆ ನಾಟಕಗಳು ಪೂರಕವಾಗಬೇಕು. ಕಲೆ ಮತ್ತು ಸಾಹಿತ್ಯಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಾಧ್ಯಮಗಳಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ‌ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.

ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ನಾಟಕ ರಚನಾ ಸ್ಪರ್ಧೆ ‘ಕಥೆ ಕೇಳಿ ನಾಟಕ ಬರೆಯಿರಿ’ ಅಂಗವಾಗಿ ಕಥೆ ಹೇಳುವ ಮುನ್ನ ಆಶೀರ್ವಚನ ನೀಡಿದರು.

ಕಥೆ ಹೇಳುವುದು, ಕೇಳುವುದು ಮತ್ತು ನಾಟಕ ರಚಿಸುವುದರ ಹಿಂದೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಉದ್ದೇಶವಿರಬೇಕು. ಸಂತರು ಮತ್ತು ಸಮಾಜ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜವನ್ನು ಬಿಟ್ಟು ಸಂತರಿಗೆ ಇರಲು ಸಾಧ್ಯವಿಲ್ಲ. ಸಂತರ ಮಾರ್ಗದರ್ಶನವಿಲ್ಲದ ಸಮಾಜವೂ ಅಪೂರ್ಣ. ಇವೆರಡರ ನಡುವೆ ಅವಿನಾಭಾವ ಸಂಬಂಧವಿದೆ. ಅಂತರಂಗ ಮತ್ತು ಬಹಿರಂಗದ ಬದುಕನ್ನು ಸಮತೋಲನದಲ್ಲಿಡುವ ಶಕ್ತಿಯ ಅರಿವು ಅಗತ್ಯವಾಗಿದ್ದು, ಜೀವನವೆಂಬ ನಾಟಕದ ಸೂತ್ರಧಾರ ಭಗವಂತನೇ ಆಗಿದ್ದಾನೆ ಎಂದರು. ನಾಟಕದಲ್ಲಿ ಪಾತ್ರಗಳಿಗೆ ಜೀವಂತಿಕೆ ತುಂಬುವುದರ ಜತೆಗೆ ವಾಚಿಕ ಮತ್ತು ಸಾತ್ವಿಕ ಅಭಿನಯಕ್ಕೆ ಆದ್ಯತೆ ನೀಡಬೇಕು. ಕಥಾಹಂದರದಲ್ಲಿ ಸೂಕ್ತ ತಿರುವುಗಳು ಹಾಗೂ ಪೂರ್ವರಂಗ ಮತ್ತು ಪರರಂಗದ ಅಂಶಗಳನ್ನು ಸಮರ್ಥವಾಗಿ ಅಳವಡಿಸಿಕೊಂಡಾಗ ನಾಟಕ ಪರಿಣಾಮಕಾರಿಯಾಗುತ್ತದೆ ಎಂದು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಿದರು.

ಸಾಧ್ವಿ ಮಾತಾನಂದಮಯಿ ದಿವ್ಯ ಸಾನಿಧ್ಯ ವಹಿಸಿದ್ದರು. ಉದ್ಯಮಿ ಲೋಕನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಟಕ ಸ್ಪರ್ಧೆಯ ಸಂಚಾಲಕ ಕದ್ರಿ ನವನೀತ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಶವಂತ ವಿಟ್ಲ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here