







ಪುತ್ತೂರು:ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಭಾಂಗದ ಗದ್ದೆಯಲ್ಲಿ ಜ.9ರಿಂದ ಮೂರು ದಿನ ನಡೆಯುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ,ಸಸ್ಯ ಜಾತ್ರೆಗೆ ಸ್ವಾಗತ ಕೋರಿ ಅಳವಡಿಸಲಾಗಿದ್ದ, ಕೃಷಿಕ ಸಮಾಜದ ಸಂಚಾಲಕರೂ ಆಗಿರುವ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಭಾವಚಿತ್ರವಿರುವ ಫ್ಲೆಕ್ಸ್ನ್ನು ತೆರವುಗೊಳಿಸಿದ ಘಟನೆ ಜ.9ರಂದು ಸಂಜೆ ವೇಳೆ ನಡೆದಿದೆ.ಕಾಂಗ್ರೆಸ್ ಕಾರ್ಯಕರ್ತರ ದೂರಿನ ಮೇರೆಗೆ ಅಧಿಕಾರಿಗಳ ಮೂಲಕ ಫ್ಲೆಕ್ಸ್ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.


ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜ.10ರಿಂದ 12ರ ತನಕ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆ ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ದೇವಸ್ಥಾನದ ರಥ ಬೀದಿಯಲ್ಲಿ ತಾತ್ಕಾಲಿಕ ದ್ವಾರವೊಂದನ್ನು ಅಳವಡಿಸಲಾಗಿತ್ತು.ಈ ದ್ವಾರದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ನಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಭಾವಚಿತ್ರ ಹಾಕಿ ಅದರಲ್ಲಿ, ‘ಮಾಜಿ ಶಾಸಕರು ಪುತ್ತೂರು, ಸಂಚಾಲಕರು ಕೃಷಿ ಮೇಳ ಸಮಿತಿ’ ಎಂದು ಮುದ್ರಿಸಲಾಗಿತ್ತು.



ಅಧಿಕಾರಿಗಳಿಗೆ ಕಾಂಗ್ರೆಸ್ ದೂರು:
ಹಾಲಿ ಶಾಸಕರು ಇರುವಾಗ ಅವರ ಫೋಟೋ ಹಾಕದೇ ಮಾಜಿ ಶಾಸಕರ ಫೋಟೋ ಅಳವಡಿಸುವ ಮೂಲಕ ರಾಜಕೀಯ ಮಾಡಲಾಗಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್, ಅಧಿಕಾರಿಗಳ ಗಮನಕ್ಕೆ ತಂದು ಆ ಫ್ಲೆಕ್ಸ್ ನ್ನು ತೆರವುಗೊಳಿಸುವಂತೆ ಆಗ್ರಹಿಸಿತ್ತು.ಇದರ ಪರಿಣಾಮವಾಗಿ ಫ್ಲೆಕ್ಸ್ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಸರಕಾರದ ಅಧೀನದಲ್ಲಿರುವ ಸಂಸ್ಥೆ. ಶಾಸಕರ ಮೂಲಕ ಪುತ್ತೂರಿನಲ್ಲಿ ಕೃಷಿ ಮೇಳ ಆಯೋಜನೆಯಾಗುತ್ತಿದೆ. ಇದಕ್ಕೆ ಶಾಸಕರ ಪ್ರಯತ್ನದ ಮೂಲಕ ಅನುದಾನ ಬಂದಿದ್ದು, ಅದರಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಇಲ್ಲಿ ರಾಜಕೀಯ ಮಾಡಿ ಮುಖ್ಯ ದ್ವಾರದಲ್ಲಿ ‘ಸಂಜೀವ ಮಠಂದೂರು ದ್ವಾರ’ ಎಂದು ಅವರ ಫೋಟೋ ಹಾಕಿದ್ದಾರೆ. ಈ ಕುರಿತು ಕಾರ್ಯಕರ್ತರು ದೂರು ನೀಡಿದ್ದರು. ಕೃಷಿಕ ಸಮಾಜಕ್ಕೆ ಸಹಕಾರ, ಪ್ರೋತ್ಸಾಹ ಇದೆ ಎಂದು ಶಾಸಕರು ತಿಳಿಸಿದ್ದಾರೆ. ಆದರೆ ಕೊನೇ ಘಳಿಗೆಯಲ್ಲಿ ಮಾಜಿ ಶಾಸಕರ ಫೋಟೋ ಹಾಕಿ, ಹಾಲಿ ಶಾಸಕರ ಫೋಟೋ ಹಾಕದೇ ಇರುವುದು ತಪ್ಪು. ರಾಜಕೀಯ ಮಾಡಬಾರದು ಎನ್ನುವುದು ನಮ್ಮ ಉದ್ದೇಶ. ಕೃಷಿಕ ಸಮಾಜದ ಜೊತೆ ನಾವಿದ್ದೇವೆ. ರೈತ ಧ್ವನಿ ಒಕ್ಕೂಟವಿದ್ದು ಅದರಲ್ಲಿ 500 ಸದಸ್ಯರಿದ್ದಾರೆ. ಬೆಳೆವಿಮೆ ಏರಿಕೆ ಮಾಡುವಂತೆ ಸಚಿವರಿಗೆ ಮನವಿ ನೀಡಲಾಗಿದೆ. ಆದರೆ ನಮಗೆ ಆಮಂತ್ರಣವಿಲ್ಲ. ಆದರೂ ಶಾಸಕರ ಜೊತೆಗೆ ನಾವು ಹೋಗುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ತಿಳಿಸಿದ್ದಾರೆ.
ಕಾರ್ಯಕರ್ತರಿಂದ ದೂರು ಬಂದಿತ್ತು,ದ್ವಾರದಲ್ಲಿ ಹಾಲಿ ಶಾಸಕರ ಭಾವಚಿತ್ರವಿಲ್ಲ
ಮಾಜಿ ಶಾಸಕರ ಭಾವಚಿತ್ರ ಹಾಕಿದ್ದಾರೆ ಎಂದು ಕಾರ್ಯಕರ್ತರಿಂದ ದೂರು ಬಂದಿತ್ತು. ಹೀಗಾಗಿ ನಾವು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಕಾರ್ಯಕ್ರಮದ ದ್ವಾರದಲ್ಲಿ ಹಾಲಿ ಶಾಸಕರ ಫೋಟೋ ಇಲ್ಲ. ಈ ರೀತಿ ರಾಜಕೀಯ ಮಾಡಲು ಅವಕಾಶ ನೀಡಬಾರದು ಎಂದು ತಿಳಿಸಿದ್ದೆವು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದ್ದಾರೆ-
ಕೃಷ್ಣಪ್ರಸಾದ್ ಆಳ್ವ, ಅಧ್ಯಕ್ಷರು,ಪುತ್ತೂರು ಬ್ಲಾಕ್ ಕಾಂಗ್ರೆಸ್
ಕೃಷಿಕ ಸಮಾಜ ಸ್ವಾಗತ ಮಾಡದೆ ಬೇರೆ ಯಾರು ಮಾಡೋದು
ಕೃಷಿಕ ಸಮಾಜದ ನೇತೃತ್ವದಲ್ಲಿ ಕಾರ್ಯಕ್ರಮ ಮಾಡುವುದು. ಆಗ ಅಲ್ಲಿ ಕೃಷಿಕ ಸಮಾಜದವರು ಸ್ವಾಗತ ಮಾಡದೆ ಬೇರೆ ಯಾರು ಮಾಡುವುದು.ನಾನು ಕೃಷಿಕ ಸಮಾಜದ ಸಂಚಾಲಕ.ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ.ಹೇಳುವುದೊಂದು ಮಾಡುವುದೊಂದು ಆಗುತ್ತಿದೆ.
-ಸಂಜೀವ ಮಠಂದೂರು, ಮಾಜಿ ಶಾಸಕರು ಪುತ್ತೂರು










