ಆಲಂಕಾರಿನಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿದೆ ಮಲ ತ್ಯಾಜ್ಯ ಸಂಸ್ಕರಣಾ ಘಟಕ| ಶೀಘ್ರದಲ್ಲೇ ಲೋಕಾರ್ಪಣೆ

0

ಕಡಬ; ಆಲಂಕಾರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಡಬ ತಾಲೂಕಿನ ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಯಾಗಿ ಲೋಕಾರ್ಪಣೆಗೆ ಸಿದ್ದಗೊಂಡಿದೆ. ಇದು ಅಭಿವೃದ್ಧಿ, ಸ್ವಚ್ಚತೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಆಲಂಕಾರು ಗ್ರಾಮ ಪಂಚಾಯತ್‌ನ ಸಾಧನೆಗೆ ಮತ್ತೊಂದು ಗರಿ ಮೂಡಿಸಿದೆ.


ದಕ್ಷಿಣ ಕನ್ನಡ ಜಿಲ್ಲೆಯ ನೆಕ್ಕಿಲಾಡಿ, ಪಂಜ, ಕೊಳ್ತಿಗೆ, ಕೊಳ್ನಾಡು, ಚಾರ್ಮಡಿ, ಆಲಂಕಾರು ಗ್ರಾಮ ಪಂಚಾಯತ್‌ಗಳಿಗೆ ಈ ಯೋಜನೆ ಮಂಜೂರಾಗಿದ್ದು ಕಡಬ ತಾಲೂಕಿನಲ್ಲಿ ಪ್ರಥಮವಾಗಿ ಆಲಂಕಾರಿನಲ್ಲಿ ಆರಂಭಗೊಳ್ಳಲಿದೆ. ಕೇಂದ್ರ ಸಚಿವಾಲಯವು ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆಗೆ ಹಾಗೂ ಘನ ಮತ್ತು ದ್ರವ ಹಾಗೂ ಮಲ ತ್ಯಾಜ್ಯ ನಿರ್ವಹಣೆಯನ್ನು ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ-2 ಯೋಜನೆಯಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಈ ಯೋಜನೆಯು ಕೇಂದ್ರ ಸರಕಾರದ ಶೇ.60 ಹಾಗೂ ರಾಜ್ಯ ಸರಕಾರ ಶೇ.40 ಅನುದಾನದಲ್ಲಿ ಸುಮಾರು 1 ಕೋಟಿ ರೂ.ವೆಚ್ಚದಲ್ಲಿ ಘಟಕ ನಿರ್ಮಾಣವಾಗಿದೆ.


ಗ್ರಾಮ ಪಂಚಾಯತ್ ಒಡೆತನದ ನೆಕ್ಕಿಲಾಡಿ ಪಟ್ಟೆಯಲ್ಲಿರುವ ಮೂರು ಎಕರೆ ಜಾಗದಲ್ಲಿ ಈಗಾಗಲೇ ಪಂಚಾಯತ್ 2.5 ಎಕ್ರೆ ಪ್ರದೇಶದಲ್ಲಿ ಘನ ತ್ಯಾಜ್ಯ ಘಟಕ ಹಾಗೂ ತೆಂಗಿನ ತೋಟ ನಿರ್ಮಾಣ ಮಾಡಿ ಮಾದರಿಯಾಗಿದ್ದು, ಉಳಿದ ಅರ್ಧ ಎಕರೆ ಪ್ರದೇಶದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಎರಡು ಸಂಸ್ಕರಣಾ ಘಟಕದ ಕಟ್ಟಡಗಳು, ಸಿಬ್ಬಂದಿ ಕೊಠಡಿ ನಿರ್ಮಾಣವಾಗಿದ್ದು, ಸದೃಢ ರಸ್ತೆ, ಆವರಣ ನಿರ್ಮಾಣ ಮಾಡಲಾಗಿದೆ. ಎರಡೂ ಘಟಕಗಳನ್ನು ತಲಾ ಆರು ತಿಂಗಳಂತೆ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಸ್ಕ್ರೀನಿಂಗ್ ಚೇಂಬರ್, ಪ್ಲಾಂಟೆಡ್ ಡ್ರೈಯಿಂಗ್ ಬೆಡ್ಸ್, ಇಂಟರ್‌ಗ್ರೇಟೆಡ್ ಸೆಟ್ಲರ್ ಮತ್ತು ಅನರೇಬಿಕ್ ಫಿಲ್ಟರ್, ಪ್ಲಾಂಟೆಡ್ ಗ್ರಾವೆಲ್ ಫಿಲ್ಟರ್ , ಕಲೆಕ್ಷನ್ ಟ್ಯಾಂಕ್‌ಗಳನ್ನು ಒಳಗೊಂಡಿದೆ.


ತಾಲೂಕು ವ್ಯಾಪ್ತಿಯಲ್ಲಿರುವ ಶೌಚಾಲಯಗಳಲ್ಲಿ ಶೇಖರಣೆಯಾಗುವ ಮಲತ್ಯಾಜ್ಯವನ್ನು ಸಕ್ಕಿಂಗ್ ಮಾಡಿ ಸಂಗ್ರಹ ಮಾಡಿ ಘಟಕಕ್ಕೆ ತರಲಾಗುತ್ತದೆ. ಖಾಸಗಿ ವ್ಯಕ್ತಿಗಳು ತಮ್ಮ ಮನೆಯ ಶೌಚ ಗುಂಡಿ ತುಂಬಿದಾಗ ತಾಲೂಕು ಪಂಚಾಯಿತಿ ನಿಗದಿಪಡಿಸಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಪಂಚಾಯಿತಿ ಮಲತ್ಯಾಜ್ಯ ಸಾಗಾಟಕ್ಕೆ ವ್ಯವಸ್ಥೆ ಮಾಡುತ್ತದೆ. ಇದಕ್ಕೆ ಇಂತಿಷ್ಟು ಎಂದು ಶುಲ್ಕ ವಿಽಸಲಾಗುತ್ತದೆ. ಸಂಗ್ರಹಿಸಲಾದ ಮಲತ್ಯಾಜ್ಯವನ್ನು ಘಟಕದಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಇದು ದುರ್ವಾಸನೆ ಬಾರದಂತೆ ಬೇಕಾದ ವ್ಯವಸ್ಥೆ ಮಾಡಲಾಗುತ್ತದೆ. ಸಂಸ್ಕರಣೆಯಾದ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದನ್ನು ಬೇಕಾದವರು ಪಂಚಾಯಿತಿ ನಿಗದಿಪಡಿಸಿದ ದರದಲ್ಲಿ ಖರೀದಿ ಮಾಡಿ ಕೃಷಿಗೆ ಬಳಕೆ ಮಾಡಬಹುದಾಗಿದೆ.ಇದರ ನಿರ್ವಹಣೆಯ ಹೊಣೆ ಗ್ರಾಮ ಪಂಚಾಯಿತಿ ಮೇಲಿದೆ.

ಗ್ರಾ.ಪಂ.ಗೆ ಹಲವು ಪ್ರಶಸ್ತಿ
ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿರುವುದಕ್ಕೆ ಆಲಂಕಾರು ಗ್ರಾಮ ಪಂಚಾಯತ್ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 2023-24ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ, ನರೇಗಾ ರಾಜ್ಯ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಹೊಂಬೆಳಕು-ನರೇಗಾ ಪ್ರಶಸ್ತಿ, 2024-25ನೇ ಸಾಲಿನ ತಾಲೂಕು ಮಟ್ಟದ ನರೇಗಾ ಪ್ರಶಸ್ತಿ-ಗುರಿ ಮೀರಿದ ಸಾಧನೆಗೆ ಪ್ರಶಸ್ತಿ, ತೆರಿಗೆ ವಸೂಲಾತಿಯಲ್ಲಿ ತಾಲೂಕು ಮಟ್ಟದ ಪ್ರಶಸ್ತಿ ಆಲಂಕಾರು ಗ್ರಾ.ಪಂ.ಗೆ ಲಭಿಸಿದೆ. ಇದೀಗ ಮಲತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಾಗಿರುವುದು ಗ್ರಾಮ ಪಂಚಾಯತ್‌ನ ಸಾಧನೆಗೆ ಮತ್ತೊಂದು ಗರಿ ಮೂಡಿದೆ.


ಗ್ರಾಮಕ್ಕೆ ಹೆಮ್ಮೆಯ ವಿಷಯ
ನಮ್ಮ ಆಡಳಿತಾವಧಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ತುಂಬಾ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎನ್ನುವುದಕ್ಕೆ ಪಂಚಾಯಿತಿಗೆ ಸಂದಿರುವ ಪ್ರಶಸ್ತಿಗಳೇ ಸಾಕ್ಷಿಯಾಗಿವೆ. ಇದೀಗ ಕಡಬ ತಾಲೂಕಿನ ಮಲ ತ್ಯಾಜ್ಯ ನಿರ್ವಹಣಾ ಘಟಕ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನವಾಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅಧಿಕಾರಿಗಳು, ಪಂಚಾಯಿತಿ ಸದಸ್ಯರು, ಕ್ಷೇತ್ರದ ಶಾಸಕರು, ಸಂಸದರು ಮುಂತಾದವರ ಸಂಪೂರ್ಣ ಸಹಕಾರದಿಂದ ಇದೆಲ್ಲಾ ಸಾಧ್ಯವಾಗಿದೆ.
ಸುಶೀಲ ಕೊಂಡಾಡಿ, ಅಧ್ಯಕ್ಷರು
ಗ್ರಾಮ ಪಂಚಾಯಿತಿ ಆಲಂಕಾರು

21 ಗ್ರಾ.ಪಂ.ಗಳೊಂದಿಗೆ ಒಡಂಬಡಿಕೆ
ಆಲಂಕಾರಿನಲ್ಲಿ ನಿರ್ಮಾಣವಾದ ಬಹು ಗ್ರಾಮ ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾರ್ಯಾಚರಣೆಗಾಗಿ ತಾಲೂಕಿನ 21 ಗ್ರಾಮ ಪಂಚಾಯಿತಿಗಳೊಂದಿಗೆ ಒಡಂಬಡಿಕೆ ಮಾಡಲಾಗುವುದು. ಸರಕಾರಿ ಸಕ್ಕಿಂಗ್ ವಾಹನಗಳ ಬಳಕೆಯ ಜೊತೆ ಖಾಸಗಿ ಸಕ್ಕಿಂಗ್ ವಾಹನ ನಿರ್ವಾಹಕರೊಂದಿಗೂ ಕರಾರು ಒಪ್ಪಂದ ಮಾಡಿಕೊಂಡು ಕನಿಷ್ಟ ದರದಲ್ಲಿ ಮಲ ತ್ಯಾಜ್ಯವನ್ನು ಸಂಗ್ರಹಿಸಿ, ವೈಜ್ಞಾನಿಕ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಅಲ್ಲದೆ ಸಾರ್ವಜನಿಕರಿಗೆ ಅನುಕೂಲವಾಗಲು ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗುವುದು.
ನವೀನ್ ಭಂಡಾರಿ. ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ.ಕಡಬ

LEAVE A REPLY

Please enter your comment!
Please enter your name here