






ಕುಡಾಳ್ ಎಂಬುದು ಬಿಜಾಪುರ ಸುಲ್ತಾನರ ಅಧಿನವಿದ್ದ ಪಶ್ಚಿಮ ಕರಾವಳಿಯ ಒಂದು ರಾಜ್ಯ. ಮರಾಠರಿಂದ ಮತ್ತು ಬಿಜಾಪುರ ಸುಲ್ತಾನರ ಕಡೆಯಿಂದ ಆಗಾಗ ಅಲ್ಲಿಯ ಸಾಮಾಜಿಕ ಜೀವನದಲ್ಲಿ ಮಧ್ಯ ಪ್ರವೇಶವಾಗುತ್ತಿತ್ತು .ಅಲ್ಲಿಯ ನಿವಾಸಿಗಳಾದ ಕುಡಾಲ ದೇಶಸ್ಥ ಗೌಡ ಬ್ರಾಹ್ಮಣರಿಗೂ ಈ ವಲಸೆ ಬರುತ್ತಿರುವವರಿಗೂ ಅಧಿಕಾರಕ್ಕಾಗಿ ಆಗಾಗ ಜಗಳ, ಯುದ್ಧಗಳಾಗುತ್ತಿದ್ದುವು.
ಈ ಮಧ್ಯೆ ಖೇಮ್ ಸಾಮಂತ್ ಎಂಬ ಅಲ್ಲಿಯ ಈ ಸಮಾಜದ ನಾಯಕನೊಬ್ಬನ ಉದಯವಾಯಿತು. ಇಲ್ಲಿ ಸೇನಾ ವಿಜಯಗೈದು ರಾಜ್ಯ ಸ್ಥಾಪನೆ ಮಾಡಿ ಆಳ್ವಿಕೆ ನಡೆಸುವುದು ಆತನ ಯೋಜನೆ. ಅದಕ್ಕಾಗಿ ಆದ್ಯ ಗೌಡ ಬ್ರಾಹ್ಮಣರೆಂಬ ಪಾಟೀಲ್, ಪ್ರಭು , ಶಾನುಭೋಗ್, ಠಾಕೂರ್ , ದೇಸಾಯಿ , ನಾಯಿಕ್ ಎಂಬವರನ್ನು ಸ್ಥಳೀಯ ಆಡಳಿತಕ್ಕಾಗಿ ನೇಮಿಸಿಕೊಂಡ. ಅದೇ ಸಮಾಜದ ಜೋಗಣ ಪ್ರಭು ಮತ್ತು ನಾರಾಯಣ ಪ್ರಭು ಎಂಬವರು ಇವರನ್ನು ಸೇರಿಕೊಂಡರು. ಇವರೆಲ್ಲರ ಆಡಳಿತವು ಸರಿಯಾಗಿ ನಡೆಯದಿದ್ದುದರಿಂದ ಕ್ರಿಸ್ತ ಶಕ 1696 ನೇ ಅಗಸ್ಟ್ ತಿಂಗಳಲ್ಲಿ ಒಂದು ದಿನ ಬಳಿಯ ಕೋಟೆಯೊಳಗಿಂದ ಮೇಲಾಽಕಾರಿ ಅರಸರ ಸೈನ್ಯವು ಈ ರಾಜ್ಯದ ಮೇಲೆ ದಾಳಿ ಮಾಡಿತು. ಘನ ಘೋರ ಯುದ್ಧವು ನಡೆಯಿತು.


ಆ ಸೈನ್ಯವು ಜೋಗಣ ಪ್ರಭುವನ್ನು ಕೊಂದುಹಾಕಿತು. ಆಗ ಆತನ ರಾಣಿಯು ತನಗೆ ರಕ್ಷಣೆ ಕೊಡಿರೆಂದೂ, ಕಾಪಾಡಿ ಎಂದು ತನ್ನ ಸ್ವಜಾತಿಯ ಪ್ರಜೆಗಳಲ್ಲಿ ದೈನ್ಯದಿಂದ ಪ್ರಾರ್ಥಿಸಿ ಕೊಂಡಳು. ಆದರೆ ಯಾರೂ ರಕ್ಷಣೆಗೆ ಮುಂದೆ ಬರಲಿಲ್ಲ. ಇದರಿಂದ ನಿಸ್ಸಾಹಾಯಕಳಾದ ರಾಣಿಯು ಅತಿ ದುಃಖಿತಳಾಗಿ ಹೀಗೆಂದು ಶಾಪ ಕೊಟ್ಟಳು “ನಿಮಗೂ ಇಂತಹ ಸನ್ನಿವೇಶಗಳು ಬರಲಿ, ಆಗ ನಿಮ್ಮ ಸಹಾಯಕ್ಕೆ ಯಾರೂ ಬಾರದಿರಲಿ, ನಿಮ್ಮಲ್ಲಿ ಎಂದೂ ಪರಸ್ಪರ ಒಗ್ಗಟ್ಟು ಬಾರದಿರಲಿ” ಎಂದು ಬೊಬ್ಬಿಡುತ್ತಾ ಶಪಿಸುತ್ತಾ ಅಗ್ನಿಪ್ರವೇಶ ಮಾಡಿದಳು. ಸತಿಯಾದಳು. ಕೋಪಾವಿಷ್ಟರಾಗಿದ್ದ ಅಲ್ಲಿಯ ಇತರ ಪ್ರಜಾಜನರು ತಮ್ಮ ಸಮಾಜದ ರಾಣಿಯನೇ ರಕ್ಷಿಸಲಾರದವರ ವಿರುದ್ಧ ದಂಗೆ ಎದ್ದರು. ಸಂಘರ್ಷಗಳಾದವು. ಇದನ್ನು ಎದುರಿಸಲಾರದೆ, ಅಧಿಕಾರಸ್ಥರಾಗಿದ್ದ ಈ ಸಮಾಜದ ಕೆಲವು ಕುಟುಂಬಗಳು ಕೆಳದಿ ನಾಯಕ ಅರಸರ ಸಮರ್ಥ ಆಡಳಿತದಲ್ಲಿದ್ದ ಬಾರಕೂರು, ಉಡುಪಿಗಳಿಗೆ ಪಲಾಯನಗೈದರು.



ನಿರಪರಾಧಿಗಳಾದ್ದ ಇತರರು ಕ್ರಿಸ್ತ ಶಕ 1715ರ ವರೆಗೆ ಕರಾವಳಿ ಕರ್ನಾಟಕದ ದಕ್ಷಿಣ ಭಾಗ, ಕೇರಳ ,ಗೋವಾ ,ಪೂನಾ , ಮಹಾರಾಷ್ಟ್ರದ ಇತರ ಕರಾವಳಿ ಜಿಲ್ಲೆಗಳಿಗೆ , ಮುಖ್ಯವಾಗಿ ಮುಂಬೈಗೆ ವಲಸೆ ಹೋದರು. ಶ್ರಮದಿಂದ ತಮ್ಮಜೀವನವನ್ನು ರೂಪಿಸಿಕೊಂಡರು. ಅನುಕೂಲಸ್ಥರೂ ಆದರು. ಆದರೆ ಈ ಘೋರ ಘಟನೆ ನಡೆದ ಸ್ಥಳಕ್ಕೆ ಇತ್ತೀಚೆಗೆ ಇತಿಹಾಸ ಸಂಶೋಧಕರಾದ ಡಾ|| ವೈ. ಉಮಾನಾಥ ಶೆಣೈಯವರು ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿ ಕೊಂಡರು.
ಈ ಸ್ಥಳವು ಈಗಿನ ಕೊಂಕಣ ರೈಲ್ವೆ ಮಾರ್ಗದಲ್ಲಿ ಗೋವಾದಿಂದ ಸುಮಾರು ಅರವತ್ತು ಕಿಲೋ ಮೀಟರ್ ಉತ್ತರ ದಿಕ್ಕಿನಲ್ಲಿ ಸಿಗುವ ಕುಡಾಳ್ ಸ್ಟೇಷನ್ ಬಳಿಯ ಪೇಟೆಯ ಒಂದು ಎತ್ತರ ಪ್ರದೇಶದಲ್ಲಿದೆ. ಹಿಂದೆ ಅಲ್ಲಿ ಒಂದು ಕೋಟೆ ಇತ್ತಂತೆ. ಆದರೆ ಈಗ ಅಲ್ಲಿ ಯಾವ ಕುರುಹೂ ಸಿಗುವುದಿಲ್ಲ.
ರಾಣಿ ಅಗ್ನಿಪ್ರವೇಶ ಮಾಡಿ ಸತಿಯಾದ ಸ್ಥಳದಲ್ಲಿ ಒಂದು ಶ್ರೀ ಮಹಾಲಕ್ಷ್ಮಿಯ ದೇವಾಲಯವಿದೆ. ಎದುರಲ್ಲಿ ಒಂದು ತುಳಸಿಕಟ್ಟೆ ಮತ್ತು ಕಪ್ಪುಬಣ್ಣದ ನಿಡಿದಾಗಿ ನಿಂತಿರುವ ಎರಡು ಸ್ತಂಭಗಳಿವೆ. ಅವುಗಳ ಮೇಲ್ತುದಿಯಲ್ಲಿ ಬಟ್ಟೆಗಳನ್ನು ತುಂಬಿಸಿ ಬೆಂಕಿ ಹಚ್ಚುವ ವ್ಯವಸ್ಥೆಯಿದೆ. ಇನ್ನು ಸ್ವಲ್ಪ ಎತ್ತರದ ಸ್ಥಳದಲ್ಲಿ ಮೋಕ್ಷದಾಯಕ ಶ್ರೀಮನ್ನಾರಾಯಣನ ಒಂದು ಚಿಕ್ಕ ಗುಡಿಯಿದೆ. ಅಲ್ಲಿಯವರಲ್ಲಿ ಆ ರಾಣಿಗೆ ಏನಾದರೂ ಭಕ್ತಿ ಸಮರ್ಪಣೆಯೊಂದಿಗೆ ಪ್ರಾರ್ಥನೆ ಮಾಡಲು ಆಕೆಯ ಮೂರ್ತಿ ಅಥವಾ ಸ್ಮಾರಕವೇನಾದರೂ ಇದೆಯೇ ಎಂದು ಕೇಳಿದರೆ ಅಲ್ಲಿಯವರು “ಇಲ್ಲಿರುವ ಮರಗಿಡಗಳೇ ಆಕೆಯ ಸ್ಮಾರಕಗಳು ಅವುಗಳಿಗೆ ಭಕ್ತಿ ಸಮರ್ಪಿಸಬಹುದು. ಹೂಮಾಲೆಯನ್ನು ಹಾಕಿ ನೈವೇದ್ಯ ಸಮರ್ಪಿಸಬಹುದು. ಇಲ್ಲಿಯ ಮಹಾಲಕ್ಷ್ಮಿ ಮಂದಿರದ ಒಳಗಿರುವ ಮೂರ್ತಿಯೇ ಸತಿಹೋದ ರಾಣಿಯ ಪ್ರತಿಕೃತಿ ” ಎನ್ನುತ್ತಾರೆ.

ಮೊ.9901302217










