






ಪುತ್ತೂರು: ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯ ಸಂಭ್ರಮ ಜ.10ರಿಂದ 12ರ ತನಕ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ನಡೆಯಲಿದ್ದು, ಜ.10ರಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಕೃಷಿಮೇಳ ಮತ್ತು ಸಸ್ಯಜಾತ್ರೆಯನ್ನು ಉದ್ಘಾಟಿಸಿದರು.


ಕೃಷಿಕ ಸಮಾಜದ ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.




ಮಾಹಿತಿ ಗೋಷ್ಠಿ:
ವಿವಿಧ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿ ವಿವಿಧ ಮಾಹಿತಿ ವಿಚಾರಸಂಕಿರಣಗಳು ನಡೆಯಲಿದೆ.ಜ.10ರಂದು ಮಧ್ಯಾಹ್ನ 2.30ರಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ‘ಗೇರುಕೃಷಿ-ತಾಂತ್ರಿಕತೆಗಳು’ ಕುರಿತು ಡಿ.ಸಿ.ಆರ್ ವಿಜ್ಞಾನಿ ಮತ್ತು ಪ್ರಶಸ್ತಿ ಪುರಸ್ಕೃತ ಗೇರುಕೃಷಿಕ ಕಡಮಜಲು ಸುಭಾಷ್ ರೈ ಮಾಹಿತಿ ನೀಡಲಿದ್ದಾರೆ.ಜ.11ರಂದು ಬೆಳಿಗ್ಗೆ 10ರಿಂದ ‘ಅಡಿಕೆ ಮತ್ತು ಕಾಳುಮೆಣಸಿನ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳು’ ಮತ್ತು ‘ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆ’ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಸಿಪಿಸಿಆರ್ಐ ವಿಟ್ಲದ ವಿಜ್ಞಾನಿ, ಕಾಳುಮೆಣಸು ಕೃಷಿಕ ಸಾಧಕರೂ ಆಗಿರುವ ಸುರೇಶ್ ಭಟ್ ಬಲ್ನಾಡು ಹಾಗೂ ಪಲ್ಲತ್ತಡ್ಕ ಅನಂತರಾಮಕೃಷ್ಣ ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ 2.30ರಿಂದ ಕಾಫಿ, ಹಣ್ಣು ಹಾಗು ಇನ್ನಿತರ ಪರ್ಯಾಯ ಬೆಳೆಗಳ ಕುರಿತು ಚಟ್ಟಳ್ಳಿ ಕಾಫಿಬೋರ್ಡ್ನ ವಿಜ್ಞಾನಿ, ಕಾಫಿ ಬೆಳೆ, ಕಾಳುಮೆಣಸು ಕೃಷಿಕ ಅಜಿತ್ ಪ್ರಸಾದ್ ರೈ, ಚಂದ್ರಶೇಖರ ತಾಳ್ತಜೆ, ಹಣ್ಣಿನ ಬೆಳೆಗಳ ಕೃಷಿಕ ಕೆ.ಪಿ.ಮಹಮ್ಮದ್ ಸಾದಿಕ್ ಮಾಹಿತಿ ನೀಡಲಿದ್ದಾರೆ. ಜ.12ರಂದು ಬೆಳಗ್ಗೆ 10ರಿಂದ ಭತ್ತದ ಕೃಷಿ ಮತ್ತು ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಂಗಳೂರು ಕೆವಿಕೆ ವಿಜ್ಞಾನಿ, ಸಾವಯವ ಭತ್ತದ ಕೃಷಿಕ ಎ.ಪಿ.ಸದಾಶಿವ ಮರಿಕೆ ಮಾಹಿತಿ ನೀಡಲಿದ್ದಾರೆ.
ವಿವಿಧ ಪ್ರದರ್ಶನಗಳು- ಸ್ಪರ್ಧೆಗಳು
ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯಲ್ಲಿ ಕೃಷಿಗೆ ಸಂಬಂಽಸಿದ ಹಲವು ಪ್ರದರ್ಶನಗಳು, ಸ್ಪರ್ಧೆಗಳು,ಇದೆ. ಸುಮಾರು 40 ಮಳಿಗೆಗಳಲ್ಲಿ ವಿವಿಧ ಇಲಾಖೆಗಳ ಮಾಹಿತಿ ಪ್ರದರ್ಶನ ಇರಲಿದೆ. ಯಂತ್ರೋಪಕರಣ, ಸಸಿಗಳ ವಿವಿಧ ತಳಿಯ ಬೀಜಗಳು, ರಸಗೊಬ್ಬರಗಳ ಮಳಿಗೆ, ಉತ್ಪನ್ನಗಳ ಸಂತೆ, ವಿಷಮುಕ್ತ ಆಹಾರಕ್ಕಾಗಿ ತರಕಾರಿ ಗಿಡಗಳು, ಹಣ್ಣಿನ ಗಿಡಗಳು, ಸೌಂದರ್ಯಕ್ಕಾಗಿ ಅಲಂಕಾರಿಕ ಗಿಡಗಳು, ಫಲ-ಪುಷ್ಪ ಗಿಡಗಳ ಮಾರಾಟ ಮಳಿಗೆಗಳು, ಕೃಷಿ, ಆರೋಗ್ಯಕರ ವಾತಾವರಣಕ್ಕಾಗಿ ಮನೆ ಗಾರ್ಡನ್ ವಿಶೇಷಗಳು, ಆಹಾರ ಮೇಳದ ಮಳಿಗೆಗಳು ಇರಲಿದೆ. ಮಡಿಕೆ ತಯಾರಿಕೆ, ಬೆಲ್ಲ ತಯಾರಿ, ಕೃಷಿ ಉಪಕರಣಕ್ಕೆ ಬೇಕಾದ ಕತ್ತಿ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಯಲಿದೆ. ಹೈನು ಉದ್ಯಮದಾರರಿಗೆ ಜಾನುವಾರು ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು ಆರಂಭದ ದಿನ ಚಿತ್ರಕಲಾ ಸ್ಪರ್ಧೆ, ಹಾಲು ಕರೆಯುವ ಸ್ಪರ್ಧೆಗಳು ನಡೆಯಲಿದೆ.










