






ನೆಲ್ಯಾಡಿ: ಕಡಬ ತಾಲೂಕಿನ ಕೊಣಾಜೆ ಗ್ರಾಮದ ನೆಕ್ಕಜೆ ಎಂಬಲ್ಲಿರುವ ಕಿಂಡಿ ಅಣೆಕಟ್ಟು ನೀರಿಗೆ ಪ್ಯಾಂಪರ್ಸ್ ಹಾಕಿ ಮಲೀನಗೊಳಿಸಲಾಗಿದೆ ಎಂದು ನೆಕ್ಕಜೆ ನಿವಾಸಿ, ಸಾಮಾಜಿಕ ಕಾರ್ಯಕರ್ತ ಲೋಕಯ್ಯ ಗೌಡ ಅವರು ಕಡ್ಯ ಕೊಣಾಜೆ ಗ್ರಾ.ಪಂ. ಪಿಡಿಒ ಅವರಿಗೆ ದೂರು ನೀಡಿದ್ದಾರೆ.


ಸಣ್ಣ ನೀರಾವರಿ ಇಲಾಖೆಯಿಂದ ಕೊಣಾಜೆ ಗ್ರಾಮದ ನೆಕ್ಕಜೆ ಎಂಬಲ್ಲಿ 2009ರಲ್ಲಿ ಕಿಂಡಿಅಣೆಕಟ್ಟು ನಿರ್ಮಾಣವಾಗಿದೆ. ಈ ಅಣೆಕಟ್ಟು ನೀರನ್ನು ಸ್ಥಳೀಯರು ಉಪಯೋಗಿಸುತ್ತಿದ್ದಾರೆ. ಈ ವಿಚಾರ ತಿಳಿದಿದ್ದರೂ ಸ್ಥಳೀಯರೊಬ್ಬರು ಮಕ್ಕಳಿಗೆ ಉಪಯೋಗಿಸಿದ ಪ್ಯಾಂಪರ್ಸ್ ಎಸೆದು ನೀರು ಮಲೀನಗೊಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅಣೆಕಟ್ಟಿನ ಹಲಗೆ ತೆಗೆಯಿರಿ, ಅದು ಕೆಳಗೆ ಹೋಗುತ್ತದೆ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. ಆದ್ದರಿಂದ ನೂರಾರು ಜನ ಬಳಕೆ ಮಾಡುತ್ತಿದ್ದ ನೀರಿಗೆ ಮಕ್ಕಳ ಪ್ಯಾಂಪರ್ಸ್ ಹಾಕಿ ನೀರು ಮಲೀನಗೊಳಿಸಿರುವವರ ವಿರುದ್ಧ ಕ್ರಮ ಕೈಗೊಂಡು ಮುಂದೆ ಈ ರೀತಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲೋಕಯ್ಯ ಗೌಡ ಅವರು ಒತ್ತಾಯಿಸಿದ್ದಾರೆ.













