ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆ ಈಶ್ವರಮಂಗಲದಲ್ಲಿ ಉದ್ಘಾಟನೆ

0

ಪುತ್ತೂರು: ಸಹಕಾರ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಿ, ಬಳಿಕ ಸಹಕಾರ ರಂಗದ ಎಲ್ಲಾ ವಿಚಾರಗಳನ್ನು ಮೈಗೂಡಿಸಿಕೊಂಡಿರುವ ಸವಣೂರು ಸೀತಾರಾಮ ರೈಯವರು ಪ್ರಾರಂಭಿಸಿದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ರಾಷ್ಟ್ರೀಕೃತ ಸಂಸ್ಥೆಗಳಿಗೆ ಸರಿಸಾಟಿಯಾಗಿ ಬೆಳೆಯುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಮಾಜಿ ಸಂಸದ, ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಾದ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ.ಸಿ.ರೋಡ್ ಮತ್ತು ಕಲ್ಲಡ್ಕ, ಪಾಂಡೇಶ್ವರ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ, ಸವಣೂರು ಕೆ.ಸೀತಾರಾಮ ರೈ ಅವರ ಅಧ್ಯಕ್ಷತೆಯ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆಯನ್ನು ಜ.10ರಂದು ಈಶ್ವರಮಂಗಲದ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು. ಕುಗ್ರಾಮವಾಗಿದ್ದ ಸವಣೂರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸವಣೂರನ್ನು ಶಿಕ್ಷಣ ಕ್ಷೇತ್ರದ ಕಾಶಿಯಾಗಿ ಪರಿವರ್ತನೆಯನ್ನು ಮಾಡಿರುವ ಸೀತಾರಾಮ ರೈಯವರು ಸವಣೂರು ಎಂಬ ಗ್ರಾಮೀಣ ಪ್ರದೇಶದ ಸಾಧನೆಯ ನಕ್ಷತ್ರವಾಗಿ ಹೊರ ಹೊಮ್ಮಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಹಕಾರ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆದರ್ಶ ವಿವಿಧೋದ್ದೇಶ ಸಂಸ್ಥೆಯನ್ನು ಕಟ್ಟಿ, 25ನೇ ವರ್ಷಕ್ಕೆ 20 ಶಾಖೆಗಳನ್ನು ಆರಂಭ ಮಾಡುವ ಉದ್ದೇಶ ಹೊಂದಿ ಕಾರ್ಯೋನ್ಮುಖರಾಗಿರುವ ಸೀತಾರಾಮ ರೈಯವರ ಸಾಧನೆ ಸಹಕಾರ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ ಎಂದರು. ಆದರ್ಶ ಸಹಕಾರ ಸಂಸ್ಥೆಗಳ ಮೂಲಕ ನೂರಾರು ಮಂದಿಗೆ ಉದ್ಯೋಗ ನೀಡಿದ ಸೀತಾರಾಮ ರೈಯವರು ಸವಣೂರಿನಲ್ಲೇ ಸಂಸ್ಥೆಯ ಪ್ರಧಾನ ಕಚೇರಿಯನ್ನು ತೆರೆಯುವ ಮೂಲಕ, ಸವಣೂರನ್ನು ಸಹಕಾರ ಕ್ಷೇತ್ರದ ಕಾಶಿಯಾಗಿಯೂ ಪರಿವರ್ತನೆ ಮಾಡಲು ಹೊರಟಿದ್ದು ಸಹಕಾರ ಕ್ಷೇತ್ರದ ಅವರ ಸಾಧನೆಯನ್ನು ವರ್ಣಿಸಲು ಶಬ್ದಗಳೇ ಸಿಗುತ್ತಿಲ್ಲ ಎಂದು ಹೇಳಿದರು.


ಆದರ್ಶ ಸಹಕಾರ ಸಂಸ್ಥೆಯಲ್ಲಿ ಗಟ್ಟಿಯಾದ ಆಡಳಿತ ಮಂಡಳಿಯಿದ್ದು ಇಲ್ಲಿ ಡಿಪಾಸಿಟ್ ಭದ್ರವಾಗಿದೆ.ಪಾರದರ್ಶಕವಾಗಿ ಉತ್ತಮ ವ್ಯವಹಾರ ನಡೆಯುತ್ತಿದೆ.ದ.ಕ ಜಿಲ್ಲೆಯಲ್ಲಿ ಸಹಕಾರ ಸಂಸ್ಥೆ ಸುಭದ್ರವಾಗಿ ಬೆಳೆದಿದೆ.ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತುಳು-ಕನ್ನಡ ಭಾಷೆ ಗೊತ್ತಿಲ್ಲದ ಸಿಬ್ಬಂದಿಗಳೇ ಹೆಚ್ಚಾಗಿ ಇರುವುದು.ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆ ಮಾತನಾಡುವ ಸಿಬ್ಬಂದಿಗಳೊಂದಿಗೆ ಇಲ್ಲಿನವರಿಗೆ ವ್ಯವಹಾರ ಸುಲಭವಲ್ಲ.ಈ ನಿಟ್ಟಿನಲ್ಲಿ ಅವರಿಗೆ ಸಹಕಾರ ಸಂಸ್ಥೆಗಳು ಉತ್ತಮವಾದ ಸೇವೆಯನ್ನು ನೀಡುವುದರಿಂದ ದ.ಕ.,ಉಡುಪಿ ಸೇರಿದಂತೆ ರಾಜ್ಯದಲ್ಲಿ ಸಹಕಾರ ಸಂಸ್ಥೆಗಳು ಸುಭದ್ರವಾಗಿ ಬೇರೂರಿವೆ ಎಂದು ನಳಿನ್ ಕುಮಾರ್ ಹೇಳಿದರು.


ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಂತೆ ಸವಣೂರು ಸೀತಾರಾಮ ರೈಯವರು ಸಹಕಾರ ಕ್ಷೇತ್ರದಲ್ಲಿ ಕೀರ್ತಿ ಗಳಿಸಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದ ನಳಿನ್ ಕುಮಾರ್ ಕಟೀಲ್‌ ರವರು, ಆದರ್ಶ ವಿವಿಧೋದ್ದೇಶ ಸಹಕಾರ ಸಂಸ್ಥೆಯು ದೇಶಾದ್ಯಂತ ಶಾಖೆಗಳನ್ನು ಹೊಂದುವ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ನಂತೆ ಉಜ್ವಲವಾಗಿ ಬೆಳಗಲಿ ಎಂದು ಶುಭಹಾರೈಸಿದರು.


ಸೀತಾರಾಮ ರೈ-ಸುಂದರ ರೈ ಟಾಟಾ-ಬಿರ್ಲಾರಂತೆ ಸಾಧಕರು
ಸೀತಾರಾಮ ರೈಯವರಿಗೆ ಸುಂದರ ರೈಯವರಂತಹ ಹಿರಿಯ ಉದ್ಯಮಿಯ ಸಾಥ್ ದೊರೆತಿದೆ. ಸವಣೂರಿನಲ್ಲಿ ಸೀತಾರಾಮ ರೈ ಟಾಟಾ ಆದರೆ ಸುಂದರ ರೈ ಬಿರ್ಲಾ ಆಗಿದ್ದಾರೆ. ಒಟ್ಟಿನಲ್ಲಿ ಟಾಟಾ-ಬಿರ್ಲಾರಂತೆ ಇವರಿಬ್ಬರೂ ಸಾಧಕರಾಗಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಶ್ಲಾಸಿದರು.


ಮಾರ್ಚ್ ಪ್ರಥಮ ವಾರ ಕೇಂದ್ರ ಕಚೇರಿ ಕಟ್ಟಡ ಉದ್ಘಾಟನೆ -ಸೀತಾರಾಮ ರೈ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ‘ಸಹಕಾರ ರತ್ನ’ ಕೆ.ಸೀತಾರಾಮ ರೈ ಸವಣೂರು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರಿ ಕ್ಷೇತ್ರದೊಂದಿಗೆ ಸಾಮಾಜಿಕ ಚಟುವಟಿಕೆಯಲ್ಲೂ ಸಂಘ ಕೆಲಸ ಮಾಡುತ್ತಿದೆ. ಸಂಘದಲ್ಲಿ ಸುಮಾರು 30,400 ಸದಸ್ಯರಿದ್ದಾರೆ. ಸಂಘವು ದಾಖಲೆಯ ವ್ಯವಹಾರ ನಡೆಸಿ ರೂ. ೨.೧ ಕೋಟಿಗೂ ಮಿಕ್ಕಿ ಲಾಭಾಂಶ ಗಳಿಸಿದೆ. ಆರಂಭದಿಂದಲೂ ಸದಸ್ಯರಿಗೆ ಡಿವಿಡೆಂಡ್ ನೀಡಿದ ಹೆಗ್ಗಳಿಕೆಯೂ ಸಂಘಕ್ಕಿದೆ. ಇದರ ಜೊತೆಗೆ ಸಿಬ್ಬಂದಿಗಳಿಗೆ ಬೋನಸ್ ಕೂಡಾ ನೀಡಲಾಗುತ್ತಿದೆ. ಸಾಮಾಜಿಕವಾಗಿ, ಸಂಘದ ಶಾಖಾ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಯ 7 ರಿಂದ 10ನೇ ತಗತಿಯಲ್ಲಿ ಕಲಿಯುತ್ತಿರುವ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವಿದ್ಯಾನಿಧಿ ಧನಸಹಾಯ ನೀಡಿಕೊಂಡು ಬರುತ್ತಿದ್ದು, ಇಲ್ಲಿನ ತನಕ ಒಟ್ಟು 1545 ಮಕ್ಕಳಿಗೆ ರೂ. 31,29,000 ಮೊತ್ತ ವಿತರಿಸಲಾಗಿದೆ. ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಕೆಲಸ ಪ್ರಗತಿಯಲ್ಲಿದ್ದು, ಇದೇ ಮಾರ್ಚ್ ಪ್ರಥಮ ವಾರದಲ್ಲಿ ಲೋಕಾರ್ಪಣೆಯಾಗಲಿದೆ ಎಂದರು.

2002ನೇ ಮಾ.11ರಂದು ನಮ್ಮ ಸಂಘದ ಪ್ರಥಮ ಶಾಖೆಯನ್ನು ದಿ.ಅಮರನಾಥ ಶೆಟ್ಟಿ ಮತ್ತು ಡಾ|ಎ.ಜೆ.ಶೆಟ್ಟಿಯವರು ಉದ್ಘಾಟಿಸಿದ್ದರು. ಅಲ್ಲಿಂದ 23 ವರ್ಷದಲ್ಲಿ ಸಂಘ ಬೆಳೆದು ಈ ಮಟ್ಟಕ್ಕೆ ಬಂದಿದೆ. ಆದರ್ಶ ಸಹಕಾರ ಸಂಸ್ಥೆಯಲ್ಲಿ ಗ್ರಾಹಕ ಬಂಧುಗಳಿಗೆ ಉತ್ತಮವಾದ ಸೇವೆಯನ್ನು ನೀಡುತ್ತೇವೆ. ಚಿನ್ನದ ಸಾಲಕ್ಕೆ ಗರಿಷ್ಠ ಮೊತ್ತವನ್ನು ನೀಡುತ್ತೇವೆ.ನನ್ನ ಗ್ರಾಹಕ ಬಂಧುಗಳಿಗೆ ಕ್ಷಪ್ತ ಸಮಯದಲ್ಲಿ ಸಾಲವನ್ನು ನೀಡುತ್ತೇವೆ. ಯಾವುದೇ ಸಮಸ್ಯೆ ಬಂದಲ್ಲಿ ಕೂಡಲೇ ನನ್ನ ಸಂಸ್ಥೆಯ ಪ್ರಬಂಧಕರನ್ನು ಸಂಪರ್ಕಿಸಿ, ಆ ಬಳಿಕ ನನ್ನನು ಸಂಪರ್ಕಿಸಬಹುದು ಎಂದು ಸವಣೂರು ಸೀತಾರಾಮ ರೈ ಹೇಳಿದರು


ಈಶ್ವರಮಂಗಲ ಅಭಿವೃದ್ಧಿ ಹೊಂದುತ್ತಿರುವ ಐಶ್ವರ್ಯಮಂಗಲವಾಗುತ್ತಿದೆ-ನನ್ಯ ಅಚ್ಚುತ ಮೂಡಿತ್ತಾಯ
ಕಂಪ್ಯೂಟರ್ ಉದ್ಘಾಟನೆಗೈದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯರವರು ಮಾತನಾಡಿ ಸಹಕಾರ ಕ್ಷೇತ್ರ ಸೀತಾರಾಮ ರೈಯವರಿಗೆ ಅತ್ಯಂತ ಪ್ರೀತಿಯ ಕ್ಷೇತ್ರವಾಗಿದೆ.ಸೀತಾರಾಮ ರೈಯವರು ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅನನ್ಯವಾದದ್ದು.ಶಿಸ್ತು, ಸಮಯಪಾಲನೆ ಸೀತಾರಾಮ ರೈಯವರ ಬದುಕಿನ ಸೂತ್ರವಾಗಿದ್ದು, ರೈಯವರು ಅತ್ಯಂತ ದಕ್ಷತೆಯಿಂದ ಆದರ್ಶ ವಿವಿಧೋದ್ಧೇಶ ಸಹಕಾರ ಸಂಸ್ಥೆಯನ್ನು ಬೆಳೆಸಿದ್ದಾರೆ ಎಂದರು.ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ,ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿದ್ದ ವೇಳೆ ಸೀತಾರಾಮ ರೈಯವರು ಜಿಲ್ಲೆಯಲ್ಲಿ ವಿಶಿಷ್ಟವಾದ ಸೇವೆಯ ಮೂಲಕ, ಇತರ ಸಹಕಾರಿಗಳಿಗೆ ಮಾರ್ಗದರ್ಶಕರಾಗಿದ್ದರು ಎಂದು ನೆನಪಿಸಿದ ಅಚ್ಚುತ ಮೂಡಿತ್ತಾಯರವರು, ಈಶ್ವರಮಂಗಲ ಅಭಿವೃದ್ಧಿ ಹೊಂದುತ್ತಿರುವ ಐಶ್ವರ್ಯಮಂಗಲವಾಗುತ್ತಿದೆ.ಇಲ್ಲಿ ಪ್ರಾರಂಭವಾದ ಯಾವುದೇ ಉದ್ಯಮ ದಿನಕಳೆದಂತೆ ಹುಣ್ಣಿಮೆಯ ಚಂದ್ರನಂತೆ ಪ್ರಕಾಶಮಾನವಾಗಿ ಬೆಳಗುತ್ತಿದೆ,ಇದಕ್ಕೆ ಈ ಊರಿನವರ ಪ್ರೋತ್ಸಾಹದ ಬೆಂಬಲವೇ ಕಾರಣ ಎಂದು ಹೇಳಿದರು. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾದ ಆದರ್ಶ ಸಹಕಾರ ಸಂಸ್ಥೆಯ ವಿದ್ಯಾನಿಽ ಧನಸಹಾಯ ಯೋಜನೆ ತುಂಬಾ ಪ್ರಯೋಜನಕಾರಿ ಆಗಿದೆ ಎಂದು ನನ್ಯ ಮೆಚ್ಚುಗೆ ವ್ಯಕ್ತಪಡಿಸಿದರು.


ಸಹಕಾರಿ ಕ್ಷೇತ್ರದ ಕಾಶಿಯಾಗಿ ಪರಿವರ್ತನೆ-ಶಶಿಕುಮಾರ್ ರೈ ಬಾಲ್ಯೊಟ್ಟು
ಪ್ರಥಮ ಠೇವಣಿ ಪತ್ರವನ್ನು ಬಾಲಕೃಷ್ಣ ರೈ ಅಲೆಪ್ಪಾಡಿ, ನವೀನ್ ಕುಮಾರ್ ಕುಕ್ಕುಡೇಲುರವರಿಗೆ ವಿತರಿಸಿದ ಜಿಲ್ಲಾ ಸಹಕಾರಿ ಯೂನಿಯನ್ ಆಧ್ಯಕ್ಷ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಭದ್ರತೆ, ಲಾಭಾಂಶ, ಸೇವೆಯೊಂದಿಗೆ ಉತ್ತಮ ವ್ಯವಹಾರ ಮಾಡುತ್ತಾ ಆದರ್ಶ ಸಹಕಾರಿ ಸಂಘ ಬಹಳ ಯಶಸ್ವಿಗಾಗಿ ಕೆಲಸ ಮಾಡುತ್ತಿದೆ.ಎಲ್ಲಾ ಸಹಕಾರಿ ಬಂಧುಗಳಿಗೆ ನಿಮ್ಮ ನಗುಮೊಗದ ಸೇವೆ ಇನ್ನಷ್ಟು ಜಾಸ್ತಿ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು. ಆದರ್ಶ ಸಹಕಾರ ಸಂಸ್ಥೆಯ ಕೇಂದ್ರ ಕಚೇರಿಯನ್ನು ಸವಣೂರಿಗೆ ಸ್ಥಳಾಂತರ ಮಾಡುವ ಮೂಲಕ ಸವಣೂರನ್ನು ಅದ್ಬುತವಾಗಿ ಬೆಳೆಸುತ್ತಿರುವ ಸೀತಾರಾಮ ರೈಯವರು ಸವಣೂರನ್ನು ಸಹಕಾರಿ ಕ್ಷೇತ್ರದ ಕಾಶಿಯಾಗಿ ಪರಿವರ್ತನೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಬಾಲ್ಯೊಟ್ಟು ಹೇಳಿದರು.


ಗ್ರಾಹಕರ ಆದರ್ಶ ಸಂಸ್ಥೆಯಾಗಿ ಬೆಳೆಯಲಿ-ಎಸ್.ಬಿ.ಜಯರಾಮ ರೈ
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ.ಜಯರಾಮ ರೈ ಮಾತನಾಡಿ ನನ್ನ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸವಣೂರು ಸೀತಾರಾಮ ರೈಯವರ ಮಾರ್ಗದರ್ಶನ ಸದಾ ಇದೆ.ಸೀತಾರಾಮ ರೈಯವರು ಸಹಕಾರ ಕ್ಷೇತ್ರದಲ್ಲಿ ಪಡೆದಿರುವ ಅನುಭವ ಅನನ್ಯವಾದ್ದು.ಈಶ್ವರಮಂಗಲದಲ್ಲಿ ಪ್ರಾರಂಭವಾದ ಆದರ್ಶ ಸಹಕಾರ ಸಂಸ್ಥೆಯ ಶಾಖೆ ಈ ಪರಿಸರದಲ್ಲಿ ಉತ್ತಮವಾದ ಸೇವೆಯನ್ನು ನೀಡುವ ಮೂಲಕ, ಗ್ರಾಹಕರ ಆದರ್ಶ ಸಂಸ್ಥೆಯಾಗಿ ಬೆಳೆಯಲಿ ಎಂದರು.


ಒಳ್ಳೆಯ ರೀತಿಯಲ್ಲಿ ಸೌಲಭ್ಯವನ್ನು ನೀಡಿ–ಝಿಯಾ ಇಬ್ರಾಹಿಂ
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ -ಝಿಯಾ ಇಬ್ರಾಹಿಂರವರು ಮಾತನಾಡಿ ಗ್ರಾಹಕರಿಗೆ ಸಾಲ ನೀಡುವಲ್ಲಿ ಬರುವ ಕಾನೂನನ್ನು ಬಾಗಿಸಿ, ಬಗ್ಗಿಸಿ, ಅದಷ್ಟು ಒಳ್ಳೆಯ ರೀತಿಯಲ್ಲಿ ಸೌಲಭ್ಯವನ್ನು ನೀಡಿ ಎಂದರು.ಈಶ್ವರಮಂಗಲದಲ್ಲಿ ಈ ಸಂಸ್ಥೆಯನ್ನು ಸೀತಾರಾಮ ರೈಯವರು ಮಾಡಿಕೊಟ್ಟಿದ್ದಾರೆ.ಆದರೆ ಇದನ್ನು ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಹೇಳಿ ಸಂಸ್ಥೆಯು ಉನ್ನತವಾದ ಹೆಸರನ್ನು ಪಡೆಯಲಿ ಎಂದರು. ಸಂಘದ ಉಪಾಧ್ಯಕ್ಷ ಸವಣೂರು ಸುಂದರ ರೈ, ಈಶ್ವರಮಂಗಲ ಶ್ರೀ ಗಣೇಶ್ ಕಾಂಪ್ಲೆಕ್ಸ್ ಮಾಲಕ ಗಣೇಶ್ ರೈ ಮುಳಿಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಜೀವ ಮಠಂದೂರು ಶುಭಹಾರೈಕೆ
ಮಾಜಿ ಶಾಸಕ ಸಂಜೀವ ಮಠಂದೂರುರವರು ಆಗಮಿಸಿ,ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈಯವರಿಗೆ ಶುಭಹಾರೈಸಿ ತೆರಳಿದರು.

ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ಮತ್ತು ಸಂಘದ ಪಾಂಡೇಶ್ವರ ಶಾಖಾ ವ್ಯವಸ್ಥಾಪಕಿ ಮಹಾಲಕ್ಷ್ಮಿ ಕಾರ‍್ಯಕ್ರಮ ನಿರೂಪಿಸಿದರು.ಶಾಖಾ ವ್ಯವಸ್ಥಾಪಕಿ ರಕ್ಷಾ ಡಿಜೆ ವಂದಿಸಿದರು.ಸುಳ್ಯ ಶಾಖೆಯ ಪ್ರಿಯಾ ಪಿ.ಬಿ ಪ್ರಾರ್ಥನೆಗೈದರು. ಸಂಘದ ಸಹಾಯಕ ಮಹಾಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಸಹಕರಿಸಿದರು. ಸಂಘದ ನಿರ್ದೇಶಕರುಗಳಾದ ನ್ಯಾಯವಾದಿ ಅಶ್ವಿನ್ ಎಲ್ ಶೆಟ್ಟಿ, ಮಹಾಬಲ ರೈ ಬೋಳಂತೂರು, ಸೀತಾರಾಮ ಶೆಟ್ಟಿ ಮಂಗಳೂರು, ಜಯಪ್ರಕಾಶ್ ರೈ ಸುಳ್ಯ, ಎಸ್.ಎನ್.ಬಾಪು ಸಾಹೇಬ್, ಕೆ.ರವೀಂದ್ರನಾಥ ಶೆಟ್ಟಿ, ವಿ.ವಿ.ನಾರಾಯಣ ಭಟ್, ಎನ್.ರಾಮಯ್ಯ ರೈ ತಿಂಗಳಾಡಿ ಹಾಗೂ ರಶ್ಮಿ ಆಶ್ವಿನ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಚಿಕ್ಕಪ್ಪ ನಾೖಕ್‌ ಅರಿಯಡ್ಕ, ಜೈರಾಜ್ ಭಂಡಾರಿ ನೊಣಾಲು, ಮಹಾದೇವ ಎಂ, ಪೂರ್ಣಿಮಾ ಎಸ್ ಆಳ್ವ, ಯುಮುನಾ ಎಸ್ ರೈ ಗುತ್ತುಪಾಲ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸವಣೂರು ಸೀತಾರಾಮ ರೈ ಪತ್ನಿ ಕಸ್ತೂರಿಕಲಾ ಎಸ್ ರೈ, ಎ.ಕೆ.ಜಯರಾಮ ರೈ, ಸಂತೋಷ್ ಕುಮಾರ್ ರೈ ಇಳಂತಾಜೆ, ಶರತ್ ಕುಮಾರ್ ರೈ ಕಾವು, ಸಾಜ ರಾಧಾಕೃಷ್ಣ ಆಳ್ವ, ನಾಗಪ್ಪ ಮಾಸ್ಟರ್ ಬೊಮ್ಮೆಟ್ಟಿ, ರಾಮ್‌ಪ್ರಸಾದ್ ಆಳ್ವ ಮೇನಾಲ, ರವಿರಾಜ್ ರೈ ಸಜಂಕಾಡಿ, ರಮೇಶ್ ರೈ ಸಾಂತ್ಯ, ರತನ್ ನಾೖಕ್‌, ಚೇತನ್ ಬೊಮ್ಮೆಟ್ಟಿ, ಮಹಾಬಲ ರೈ ಮೇಗಿನಗುತ್ತು, ಶಶಿಕಲಾ ರೈ ಮುಳಿಪಡ್ಪು, ಅಜಿತ್ ಕುಮಾರ್ ರೈ ಮುಳಿಪಡ್ಪು, ಕುಸುಮ ಪಿ.ಶೆಟ್ಟಿ ಕೆರೆಕ್ಕೋಡಿ, ಬೆಳ್ಳಿಪ್ಪಾಡಿ ಸದಾಶಿವ ರೈ, ಇಂಜಿನಿಯರ್ ಸಚ್ಚಿದಾನಂದ, ಶ್ರೀ ಗಣೇಶ್ ಕಾಂಪ್ಲೆಕ್ಸ್ ಇಂಜಿನಿಯರ್ ಪ್ರಸಾದ್ ರೈ, ಮೋಹನ್ ರೈ ಮೂನಡ್ಕ, ಅರುಣಾಕ್ಷಿ, ಮಂಜುನಾಥ ರೈ, ಲೀಲಾವತಿ ರೈ, ವಿಠಲ ರೈ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಸನ್ಮಾನ
ದಕ್ಷಿಣ ಏಷ್ಯಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಂಡವನ್ನು ಮುನ್ನಡೆಸಿ, ಪ್ರಥಮ ಸ್ಥಾನ ಪಡೆದಿರುವ ಸಂಘದ ಉದ್ಯೋಗಿ ಜಯಲಕ್ಷ್ಮಿಯವರನ್ನು ಸನ್ಮಾನಿಸಲಾಯಿತು. ಜಯಲಕ್ಷ್ಮಿಯವರ ಪತಿ ಕೇದಾರ್‌ನಾಥ್ ಉಪಸ್ಥಿತರಿದ್ದರು.


ಶ್ರದ್ಧಾಂಜಲಿ
ಇತ್ತೀಚಿಗೆ ಅಕಾಲಿಕವಾಗಿ ನಿಧನರಾದ ಸಂಘದ ಸಿಬ್ಬಂದಿ ಸಿಂಧುಶ್ರೀಯವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದಾಖಲೆಯ ಲಾಭಾಂಶ
ಸಂಘವು ತನ್ನ 14 ಶಾಖೆಗಳ ಮೂಲಕ 2024-25ನೇ ಸಾಲಿನಲ್ಲಿ 829 ಕೋಟಿ 88 ಲಕ್ಷದಷ್ಟು ವ್ಯವಹಾರ ನಡೆಸಿ ದಾಖಲೆಯ 2 ಕೋಟಿ 01 ಲಕ್ಷಕ್ಕೂ ಮೇಲಿನ ಲಾಭಾಂಶಗಳಿಸಿರುತ್ತದೆ. ಪ್ರಸ್ತುತ ಸಂಘದಲ್ಲಿ ಒಟ್ಟು 30,900 ಸದಸ್ಯರಿದ್ದು, ಒಟ್ಟು ಪಾಲು ಬಂಡವಾಳ ರೂ.3.45 ಕೋಟಿಯಷ್ಟು ಹೊಂದಿದೆ. ಸಂಘವು ಪ್ರಸ್ತುತ 161 ಕೋಟಿಯಷ್ಟು ಠೇವಣಾತಿಯನ್ನು ಹೊಂದಿದ್ದು, ರೂ.143 ಕೋಟಿಯಷ್ಟು ವಿವಿಧ ರೀತಿಯ ಸಾಲಗಳಾದ ಜಾಮೀನು, ಅಡಮಾನ, ಗೃಹ, ವಾಹನ, ಆಭರಣ, ಉಚಾಪತಿ ಮತ್ತು ಇನ್ನಿತರ ಸಾಲಗಳ ಮೂಲಕ ಸಾಲವನ್ನು ನೀಡಿರುತ್ತದೆ. ಅಡಿಟ್ ವರ್ಗೀಕರಣದಲ್ಲೂ ಸತತವಾಗಿ ’ಎ’ ತರಗತಿಯನ್ನು ಹೊಂದಿ ಪ್ರಾರಂಭದಿಂದಲೂ ಡಿವಿಡೆಂಡ್‌ನ್ನು ತನ್ನ ಸದಸ್ಯರಿಗೆ ನೀಡಿದ ಹೆಗ್ಗಳಿಕೆಯಿದೆ. 2024-25ರ ಸಾಲಿನಲ್ಲಿ ಶೇ.17ರಂತೆ ಡಿವಿಡೆಂಡ್ ವಿತರಿಸಲಾಗಿದೆ. ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣವು ಪ್ರಗತಿ ಹಂತದಲ್ಲಿದ್ದು, ಮಾರ್ಚ್ 2026 ಪ್ರಥಮ ವಾರ ಲೋಕಾರ್ಪಣೆ ಮಾಡಲಾಗುವುದು.

ಸವಣೂರು ಸೀತಾರಾಮ ರೈ, ಅಧ್ಯಕ್ಷರು, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ

ಸವಣೂರು ಸೀತಾರಾಮ ರೈ, ಅಧ್ಯಕ್ಷರು, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ

ಬಡವರಿಗೆ ಮೊದಲು ಬ್ಯಾಂಕಿನ ದಾರಿ ತೋರಿಸಿದವರು ಜನಾರ್ದನ ಪೂಜಾರಿ
ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮೊದಲ ಬಾರಿಗೆ ಬಡವರಿಗೆ ದಾರಿ ತೋರಿಸಿ ಸಾಲ ಕೊಡಿಸಿದವರು ಕೇಂದ್ರ ವಿತ್ತ ಸಚಿವರಾಗಿದ್ದ ಬಿ.ಜನಾರ್ದನ ಪೂಜಾರಿಯವರು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಜನಧನ್ ಯೋಜನೆಯ ಮೂಲಕ ಬಡವರು ಬ್ಯಾಂಕಿನಲ್ಲಿ ಖಾತೆ ತೆರೆಯುವಲ್ಲಿ ಸಹಕಾರಿಯಾದರು ಮತ್ತು ಬ್ಯಾಂಕಿನ ಸವಲತ್ತು ಪಡೆಯಲು ದಾರಿ ತೋರಿಸಿದವರು. ಈ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಶ್ರೀಮಂತರ ಕೈಯಲ್ಲಿ ಇತ್ತು. ಜನಧನ್ ಯೋಜನೆ ಜಾರಿಗೆ ಬರುವ ಮೊದಲೇ ಈ ಭಾಗದಲ್ಲಿ ಶೇ.80ರಷ್ಟು ಜನರು ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದರೆ ಇದಕ್ಕೆ ಮೂಲಕಾರಣ ಇಲ್ಲಿನ ಸಹಕಾರಿ ಸಂಸ್ಥೆಗಳು

ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದ,ದ.ಕ.ಲೋಕಸಭಾ ಕ್ಷೇತ್ರ

ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದ,ದ.ಕ.ಲೋಕಸಭಾ ಕ್ಷೇತ್ರ

LEAVE A REPLY

Please enter your comment!
Please enter your name here