






ರಂಗಪೂಜೆ, ಧಾರ್ಮಿಕ ಸಭೆ, ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆ
ಭಕ್ತರ ಭಕ್ತಿಗೆ ಶ್ರೀ ದೇವಿ ಒಲಿದು ಶ್ರೀ ಕ್ಷೇತ್ರ ಶರವೂರು ಬೇಗ ಜೀರ್ಣೋದ್ಧಾರಗೊಂಡಿದೆ – ಶಾಸಕಿ ಭಾಗೀರಥಿ ಮುರುಳ್ಯ


ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.14 ಮಕರ ಸಂಕ್ರಾಂತಿಯಂದು ಬೆಳಿಗ್ಗೆ ನಾಗತಂಬಿಲ, ದೈವಗಳಿಗೆ ತಂಬಿಲ ಮಧ್ಯಾಹ್ನ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆದು ರಾತ್ರಿ ಶ್ರೀ ದೇವಿಗೆ ರಂಗಪೂಜೆ, ಧಾರ್ಮಿಕ ಸಭೆ ನಡೆಯಿತು.




ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಮಕರಜ್ಯೋತಿಯಂದು ಶಬರಿಮಲೆಯಲ್ಲಿ ಮಕರಜ್ಯೋತಿ ಬೆಳಗಿದಂತೆ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನವು ದೀಪದಂತೆ ಎಲ್ಲಾ ಕಡೆ ಪ್ರಜ್ವಲಿಸುತ್ತಿದೆ. ಊರ ಪರವೂರ ಭಕ್ತಾಧಿಗಳು ಸೇರಿದರೆ ಮಾತ್ರ ದೇವಸ್ಥಾನ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ. ಶ್ರೀ ಕ್ಷೇತ್ರ ಶರವೂರು ಭಕ್ತರ ಭಕ್ತಿಗೆ ಶ್ರೀ ದೇವಿ ದುರ್ಗಾಪರಮೇಶ್ವರಿ ಒಲಿದು ಅತಿ ಶ್ರೀಘ್ರದಲ್ಲಿ ಜೀರ್ಣೋದ್ಧಾರಗೊಂಡಿದೆ. ನನ್ನ ಕ್ಷೇತ್ರ ಅಭಿವೃದ್ಧಿ ಅನುದಾನದಲ್ಲಿ 20 ಲಕ್ಷ, ಸಂಸದರಾದ ಬೃಜೇಶ್ ಚೌಟ ರವರು 10 ಲಕ್ಷ ಅನುದಾನ ಶ್ರೀ ಕ್ಷೇತ್ರ ಶರವೂರಿಗೆ ನೀಡುವುದಾಗಿ ತಿಳಿಸಿದರು. ಈ ಹಣವನ್ನು ಶರವೂರು ಕ್ಷೇತ್ರದ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ವಿನಿಯೋಗಿಸಬಹುದು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ ಆದರೆ ಅನುದಾನ ಬಂದಿಲ್ಲ ಮತ್ತೊಮ್ಮೆ ಶ್ರೀ ಕ್ಷೇತ್ರ ಶರವೂರಿಗೆ ಅನುದಾನ ನೀಡುವಂತೆ ಸಚಿವರಲ್ಲಿ ಮನವಿ ಮಾಡುವುದಾಗಿ ತಿಳಿಸಿ ಜೀರ್ಣೋದ್ಧಾರ ಕೆಲಸ ಕಾರ್ಯಗಳಲ್ಲಿ ಹಗಲುಳಿರುಲು ಶ್ರಮಿಸುತ್ತಿರುವ ಎಲ್ಲಾ ಭಕ್ತಾಧಿಗಳಿಗೆ ಅಭಿನಂದನೆ ಸಲ್ಲಿಸಿದರು.

ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲು ಮಾತನಾಡಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಿ ಇಷ್ಟಾರ್ಥಗಳನ್ನು ಸಿದ್ದಿಸುವ ದೇವಿಯಾಗಿದ್ದು, ಎ ಗ್ರೇಡ್ ದೇವಸ್ಥಾನವಾಗಿದೆ ಶ್ರೀ ದೇವಿಯ ಸಂಕಲ್ಪದಂತೆ ಅಭಿವೃದ್ಧಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಶರವೂರಿಗೆ ಮಾತ್ರ ಸೀಮಿತವಾಗದೇ, ಸಮಸ್ತ ಹಿಂದೂಗಳ ದೇವಸ್ಥಾನವಾಗಿದೆ ಎಂದು ತಿಳಿಸಿದರು. ನನ್ನಿಂದ ಆದ ಸಹಕಾರವನ್ನು ಶ್ರೀ ಕ್ಷೇತ್ರ ಶರವೂರಿಗೆ ನೀಡುವುದಾಗಿ ತಿಳಿಸಿ, ಬ್ರಹ್ಮಕಲಶೋತ್ಸವದಲ್ಲಿ ಹೊರೆಕಾಣಿಕೆ ಯಶಸ್ವಿಯಾದರೆ ಬ್ರಹ್ಮಕಲಶೋತ್ಸವ ಯಶಸ್ವಿಯಾದಂತೆ ಎಂದು ಶುಭಹಾರೈಸಿದರು.

ಪ್ರಗತಿಪರ ಕೃಷಿಕರಾದ ಲಕ್ಷ್ಮಣ ಗೌಡ ಕರಂದ್ಲಾಜೆ ಮಾತನಾಡಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ 69 ದಿನಗಳು ಬಾಕಿಯಿದ್ದು ಇನ್ನೂ ಕೆಲವು ಕೆಲಸಗಳು ಬಾಕಿ ಇದೆ. ನೋಟು ಬ್ಯಾನ್ ನ ಸಂಧರ್ಭದಲ್ಲಿ ಕಪೀಲೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿತ್ತು ನೋಟು ಬ್ಯಾನ್ ನಿಂದ ದುಡ್ಡಿನ ಕೊರತೆಯಾಗಿತ್ತು. ನಂತರ ಸತ್ಯನಾರಾಯಣ ದೇವರ ಪೂಜೆ ಮಾಡಿಸಿದ ನಂತರ ಎಲ್ಲಾವು ಸರಿಯಾಯಿತು. ನಾವೆಲ್ಲರೂ ಶ್ರೀ ಕ್ಷೇತ್ರ ಶರವೂರಿನ ಬ್ರಹ್ಮಕಲಶೋತ್ಸವಕ್ಕೆ ಒಂದು ಯಜ್ಞದ ತರ ಕೆಲಸ ಕಾರ್ಯಗಳನ್ನು ಮಾಡಬೇಕು. ಬ್ರಹ್ಮಕಲಶೋತ್ಸವ ನಡೆದರೆ ಸಾಲದು, ದೇವಸ್ಥಾನಕ್ಕೆ ನಮ್ಮ ಮಕ್ಕಳನ್ನು ಸಂಸ್ಕಾರಯುತವಾಗಿ ಕರೆದುಕೊಂಡು ಬರುವ ಕೆಲಸ ಕಾರ್ಯಗಳು ಆಗಬೇಕೆಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷರಾದ ವಿಶ್ವೇಶರ ಭಟ್ ಮಾತನಾಡಿ 1990ನೇ ಇಸವಿಯಲ್ಲಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೆ. ಬ್ರಹ್ಮಕಲಶೋತ್ಸವ ನಡೆಯುವುದರೊಂದಿಗೆ ದೇವಸ್ಥಾನದ ಆರ್ಚಕರಿಗೆ ಹಾಗೂ ಸಿಬ್ಬಂದಿಗಳಿಗೂ ಸರಿಯಾದ ವ್ಯವಸ್ಥೆಯೂ ಆಗಲಿ, ಊರಿನ ಸಮಸ್ತ ಭಕ್ತಾಧಿಗಳ ಸಹಕಾರದೊಂದಿಗೆ ಬ್ರಹ್ಮಕಲಶೋತ್ಸವ, ಅಭಿವೃದ್ಧಿ ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರಲಿ ಎಂದು ಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಗೋಪಾಲಕೃಷ್ಣ ಪಡ್ಡಿಲ್ಲಾಯರು ಮಾತನಾಡಿ 2024ರಲ್ಲಿ ಶ್ರೀ ದೇವಿಯಲ್ಲಿ ಪ್ರಾರ್ಥಿಸಿ ಜೀರ್ಣೋದ್ಧಾರ ಕೆಲಸಕ್ಕೆ ಪ್ರಾರಂಭ ಮಾಡಿದ್ದೇವೆ. ದೇವಸ್ಥಾನದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಹಣದ ಕೊರತೆಯಾಗದ ರೀತಿಯಲ್ಲಿ ಊರಪರವೂರ ಭಕ್ತಾಧಿಗಳು ಸಹಕರಿಸಿದ್ದಾರೆ. ಮಾ.25 ರಿಂದ ಎ.2 ರ ತನಕ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಲ್ಲಾ ಭಕ್ತಾಧಿಗಳು ತನು,ಮನ,ಧನಗಳಿಂದ ಸಹಕರಿಸುವಂತೆ ವಿನಂತಿಸಿದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ.ಹೇಮಂತ್ ರೈ ಮನವಳಿಕೆಗುತ್ತು ರವರು ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸಮಗ್ರ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಒಬ್ಬರಿಂದ ಆಗುವ ಕೆಲಸವಲ್ಲ, ಸಮಸ್ತ ಭಕ್ತಾಧಿಗಳ ಸಹಕಾರದಿಂದ ನೇರವೆರಲು ಸಾಧ್ಯವಾಗುತ್ತದೆ ಎಂದು ತಿಳಿಸಿ ಹಗಲಿರುಳು ಶ್ರಮಿಸುತ್ತಿರುವ ಎಲ್ಲಾ ಭಕ್ತಾಧಿಗಳಿಗೆ ಕೃತಜ್ಞತೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಸುಬ್ರಹ್ಮಣ್ಯ ರಾವ್ ನಗ್ರಿಯವರು ಮಾತನಾಡಿ ನಮ್ಮ ವ್ಯವಸ್ಥಾಪನ ಸಮಿತಿ ಅಧಿಕಾರಕ್ಕೆ ಬಂದು ಒಂದೂವರೇ ವರ್ಷ ಆಯಿತು ಅದಕ್ಕಿಂತ ಮುಂಚನೇ ಜೀರ್ಣೋದ್ಧಾರ ಕೆಲಸ ಪ್ರಾರಂಭವಾಗಿತ್ತು .ಮಾಜಿ ಸಚಿವರಾದ ಆಂಗಾರ ಎಸ್ ರವರು 25 ಲಕ್ಷ ಅನುದಾನವನ್ನು ಕಾಯ್ದಿರಿಸಿ ಜೀರ್ಣೋದ್ಧಾರ ಕೆಲಸದ ಪ್ರಾರಂಭಕ್ಕೆ ಕಾರಣರಾದರು ಎಂದರು. ನಂತರ ಆದ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಧನ್ಯವಾದ ಸಮರ್ಪಿಸಿದರು.
ಸರೋಜ ಮಾಯಿಲ್ಗ ಸಭಾ ಕಾರ್ಯಕ್ರಮದಲ್ಲಿ ಪ್ರಾರ್ಥಿಸಿ, ಸರಿತಾ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು. ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ ಕೊಂಡಾಡಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ವ್ಯವಸ್ಥಾಪನ ಸಮಿತಿಯ ಸದಸ್ಯ ವಾಸಪ್ಪ ಗೌಡ ಕೆದ್ದೋಟ್ಟೆ, ಅಭಿವೃದ್ಧಿ ಸಮಿತಿಯ ಸದಸ್ಯ ಗುರುಪ್ರಸಾದ್ ಆಲೆಕ್ಕಿ ಅತಿಥಿಗಳನ್ನು ಶಾಲು ಹೊದಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪವಿತ್ರಪಾಣಿ ಹರೀಶ ಆಚಾರ್ಯ ನಗ್ರಿಗುತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕೆ.ಹರಿಪ್ರಸಾದ ಉಪಾಧ್ಯಾಯ, ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ, ವಿಠಲ ರೈ ಪೆರಾಬೆ ಪಟ್ಟೆ, ಮೋಹನ.ಎಸ್ ಪುಷ್ಪಲತಾ.ಕೆ, ರೋಹಿಣಿ ಬಿ.ಯನ್, ಗೌರವ ಸದಸ್ಯರಾದ ದಾಮೋದರ ಶರವೂರು ಸೇರಿದಂತೆ ಅಭಿವೃದ್ಧಿ ಸಮಿತಿಯ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಊರ ಪರವೂರ ಭಕ್ತಾಧಿಗಳು ಸಹಕರಿಸಿದರು. ನಂತರ ಶ್ರೀ ದೇವಿಯ ಬಲಿಹೊರಟು ಉತ್ಸವ, ಅನ್ನಸಂತರ್ಪಣೆ ನಡೆಯಿತು.










