ರೆಂಜ ಶ್ರೀ ಮಣಿಕಂಠ ಸಿಂಗಾರಿ ಮೇಳದ ಚೆಂಡೆ ಸಂಭ್ರಮ-ಮಕರ ಸಂಕ್ರಮಣ ಉತ್ಸವ – ಅಭಿನಂದನಾ ಕಾರ್ಯಕ್ರಮ

0

ಚೆಂಡೆ ಬಡಿಯುವವರು ಎಂಬ ತಾತ್ಸಾರ ಭಾವ ಬೇಡ
ಚೆಂಡೆ ಬಡಿಯುವವರು ಎಂಬ ತಾತ್ಸಾರ ಭಾವ ಸಲ್ಲದು. ಚೆಂಡೆಯೂ ಒಂದು ಸಾಂಸ್ಕೃತಿಕ ಕಲೆ. ವೃತ್ತಿಯ ಜೊತೆ ಕಲೆಯನ್ನು ಪೋಷಿಸುತ್ತಿರುವ ಯುವಕರು ಇಂದು ಕರ್ನಾಟಕ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ಹೋಗಿ ಕಲಾಪ್ರದರ್ಶನ ನೀಡುತ್ತಿರುವುದು ನಮ್ಮ ಊರಿಗೆ ತಂದಿರುವ ಕೀರ್ತಿ. ಅವರಿಗೆ ಪ್ರೋತ್ಸಾಹ ಕೊಡುವ ಕೆಲಸ ಆಗಬೇಕುʼ ಎಂಬ ಆಶಯದ ಮಾತುಗಳು ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಗುರುಗಳಿಗೆ, ಪೋಷಕರಿಗೆ, ಪ್ರಾಯೋಜಕರಿಗೆ ಗೌರವಾರ್ಪಣೆ
ಸಿಂಗಾರಿ ಮೇಳ ಆರಂಭಿಸಲು ಮಾರ್ಗದರ್ಶನ ನೀಡಿದ ಮಂದಿರದ ಗುರುಸ್ವಾಮಿ ಕೃಷ್ಣಪ್ಪ ಗೌಡ ರೆಂಜ, ಚೆಂಡೆ ತರಬೇತುದಾರ ಮನು ಪಣಿಕ್ಕರ್‌ ಹಾಗೂ ಪ್ರಾಯೋಜಕರಾಗಿ ಸಹಕರಿಸಿದವರನ್ನು ಹಾಗೂ ಸಿಂಗಾರಿ‌ ಮೇಳದಲ್ಲಿ ಪ್ರಸ್ತುತ 51 ಮಂದಿ ಸದಸ್ಯರಿದ್ದು, ಅವರ ಪೋಷಕರನ್ನು ವೇದಿಕೆಗೆ ಕರೆದು ಸದಸ್ಯರ ಜೊತೆ ಗುರುತಿಸಿ ಗೌರವಿಸಲಾಯಿತು.

ಬೆಟ್ಟಂಪಾಡಿ: ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಶ್ರೀ ಮಣಿಕಂಠ ಸಿಂಗಾರಿ ಮೇಳದ 7ನೇ ವರ್ಷದ ಪಾದಾರ್ಪಣೆಯ ಸುಸಂದರ್ಭದಲ್ಲಿ ‘ಚೆಂಡೆ ಸಂಭ್ರಮ’ ಹಾಗೂ ಮಕರ ಸಂಕ್ರಮಣ ಉತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ಜ.14ರಂದು ಮಂದಿರದ ಆವರಣದಲ್ಲಿ ಜರಗಿತು.

ಅಭಿನಂದನಾ ಸಮಾರಂಭದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ ರವರು ಮಾತನಾಡಿ  ‘ಇಂದು ಮಣಿಕಂಠ ಚೆಂಡೆ ಮೇಳ ಭಾರೀ ಹೆಸರು ಪಡೆದಿದೆ. 7 ವರ್ಷಗಳ ಹಿಂದೆ ಕೇರಳದ ಚೆಂಡೆಯವರು ಇಲ್ಲಿಗೆ ಬಂದಿದ್ದರು‌. ಆಗ ಮನು ಪಣಿಕ್ಕರ್ ರವರು ಮನಸ್ಸು ಮಾಡಿ ಇಲ್ಲಿನ ಯುವಕರಿಗೆ ಚೆಂಡೆ ತರಬೇತಿ ನೀಡಲು ಮುಂದಾದರು. ಅವರ ಅಂದಿನ ಆಸಕ್ತಿ ಇಂದು ನಮ್ಮ ಪರಿಸರದಲ್ಲಿ ಈ ಯುವಕರ ತಂಡಕ್ಕೆ ಸ್ಥಾನಮಾನ, ಗೌರವ ತಂದುಕೊಟ್ಟಿದೆʼ ಎಂದು ಹೇಳಿ ಭಕ್ತಿಯೇ ಪರವಶವಾಗಿರುವಂತಹ ಗುರುಸ್ವಾಮಿ ಕೃಷ್ಣಪ್ಪ ಗೌಡರ ರೀತಿ ನೀತಿಗಳನ್ನು ಶ್ಲಾಘಿಸಿ ʻಈ ಈರ್ವರು ಗುರುಗಳ ಮಾರ್ಗದರ್ಶನದಲ್ಲಿ ಚೆಂಡೆ ತಂಡ ಬೆಳೆಯುತ್ತಿದೆʼ ಎಂದರು.


ಕಲೆಯನ್ನು ಉಳಿಸುವ ಕೆಲಸವಾಗಿದೆ – ಶಶಿಕುಮಾರ್‌ ರೈ
ಸಂಜೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಮಾತನಾಡಿ ʻಉದ್ಯೋಗ ಇಲ್ಲದಿದ್ದರೂ ಉದ್ಯೋಗ ಮಾಡಲು ಮನಸ್ಸು ಮಾಡಿದ ಮಣಿಕಂಠ ಚೆಂಡೆಮೇಳ ಶ್ಲಾಘನೀಯ ಕೆಲಸ ಮಾಡಿದೆ. ಕಲೆಯನ್ನು ಉಳಿಸುವ ಕೆಲಸ ಈ ತಂಡ ಮಾಡಿದೆ. ಚೆಂಡೆ ಬಡಿಯುವವರು ಎಂಬ ತಾತ್ಸಾರ ಮನೋಭಾವ ಬಿಡಬೇಕು. ಕಲೆಯೊಂದಿಗೆ ಉದ್ಯೋಗಕ್ಕೆ ಅವಕಾಶ ಮಾಡಿಕೊಡುತ್ತಿರುವ ತಂಡಕ್ಕೆ ಅಭಿನಂದನೆ ಸಲ್ಲಿಸಬೇಕು. ಸುಮ್ಮನೇ ತಿರುಗಿ ಕಾಲಹರಣ ಮಾಡುವ ಬದಲು ಯುವಜನತೆ ಇಂತಹ ಕಲೆಯಲ್ಲಿ ತೊಡಗಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಮಣಿಕಂಠ ಚೆಂಡೆ ಮೇಳ ಸಾಕ್ಷಿಯಾಗಿದೆʼ ಎಂದರು.


ಸಹಕಾರಿ ಸಂಘದಿಂದ ಸಾಲಸೌಲಭ್ಯ
ಸ್ವ ಉದ್ಯೋಗ ಮಾಡುವುದಿದ್ದರೆ 2 ಲಕ್ಷ ರೂ. ಸಾಲ ಸೌಲಭ್ಯ ಕೊಡುವ ವ್ಯವಸ್ಥೆ ಇರ್ದೆ ಬೆಟ್ಟಂಪಾಡಿ ಸಹಕಾರಿ ಸಂಘದಲ್ಲಿ ಆಗುತ್ತಿದೆ. ಇರ್ದೆ ಬೆಟ್ಟಂಪಾಡಿಯಲ್ಲಿ ಆಧಾರ್‌, ಆರ್‌ಟಿಸಿ ಹೊಂದಿದ್ದರೆ ಕೇವಲ 2 ದಿನಗಳಲ್ಲಿ ಸಾಲ ನೀಡಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ 15 ಸೆಂಟ್ಸ್‌ ಕ್ಕಿಂತ ಹೆಚ್ಚು ಜಾಗ ಇದ್ದಲ್ಲಿ ೦% ಸಾಲ ಸೌಲಭ್ಯ ಕೊಡುವ ಕೆಲಸ ಮಾಡುತ್ತೇವೆʼ ಎಂದ ಅವರು ಕೊಂಚಾಡಿಯ ಚೆಂಡೆ ತಂಡಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ನೀಡಿ ಅವರಿಗೆ 3 ಬಸ್‌ ತೆಗೆಯಲು ಅವಕಾಶ ಮಾಡಿಕೊಟ್ಟಿರುವುದನ್ನು ಉಲ್ಲೇಖಿಸಿದರು.


ಸಭಾಂಗಣಕ್ಕೆ ಶೀಟ್‌ ಅಳವಡಿಕೆಯ ಭರವಸೆ
10 ಲಕ್ಷ ರೂ. ಯೋಜನೆಯಲ್ಲಿ ಸಭಾಂಗಣ ಆಗಲಿದೆ. ಇಂಟರ್‌ಲಾಕ್ ಅಳವಡಿಸುವ ಕಾರ್ಯವೂ ನಡೆಯಲಿದೆ. ಇದಕ್ಕೆ ಶಾಸಕರೂ ಅನುದಾನದ ಭರವಸೆ ನೀಡಿದ್ದಾರೆ ಎಂದು ಶಶಿಕುಮಾರ್‌ ರೈ ಬಾಲ್ಯೊಟ್ಟು ಹೇಳಿದರು.


ಈ ತಂಡಕ್ಕೆ ದೇವರ ಅನುಗ್ರಹವಿದೆ – ಮನು ಪಣಿಕ್ಕರ್‌
ಗುರುವಂದನೆ ಸ್ವೀಕರಿಸಿ ಮಾತನಾಡಿದ ಮನು ಪಣಿಕ್ಕರ್ ಅಗಲ್ಪಾಡಿಯವರು ಮಾತನಾಡಿ ʻಈ ಭಾಗದವರ ಪ್ರೋತ್ಸಾಹದಿಂದಾಗಿ ಮಣಿಕಂಠ ಚೆಂಡೆ ಮೇಳ ಹೆಸರು ಪಡೆದಿದೆ. ಅವರ ಪರಿಶ್ರಮ, ತ್ಯಾಗ ಮತ್ತು ಮನಸ್ಸಿನ ದೃಢತೆ ಅವರನ್ನು ಯಶಸ್ಸಿಗೆ ಕೊಂಡೊಯ್ದಿದೆ. 7 ವರ್ಷಗಳ ಮಗು ಇಂದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ದೇವರ ಪೂಜೆಯಲ್ಲೂ ತಂಡವು ಚೆಂಡೆ ಬಾರಿಸುವ ಶಕ್ತಿಯನ್ನು ದೇವರು ಈ ತಂಡಕ್ಕೆ ಅನುಗ್ರಹಿಸಿದ್ದಾರೆʼ ಎಂದರು.


ತಂದೆ ತಾಯಿ, ಗುರು ಗೌರವ ಖುಷಿ ನೀಡಿದೆ – ಪ್ರಕಾಶ್‌ ರೈ
ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್‌ ರೈ ಬೈಲಾಡಿ ಯವರು ಮಾತನಾಡಿ ʻಜನ್ಮ ಕೊಟ್ಟ ತಂದೆ ತಾಯಿ ಹಾಗೂ ಕಲಿಸಿದ ಗುರುಗಳನ್ನು ಗೌರವಿಸಿದ ಈ ಕಾರ್ಯಕ್ರಮ ಮನಸ್ಸಿಗೆ ಬಹಳ ಖುಷಿ ನೀಡಿದೆ. ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ ಸಭಾಂಗಣಕ್ಕೆ ಶೀಟ್‌ ಹಾಕುವ ಯೋಜನೆ ಮುಂದಿಟ್ಟಿದ್ದೆವು. ಇದರ ಅಭಿವೃದ್ಧಿಗೆ ಚಾಲನೆ ನೀಡುವ ಕೆಲಸ ಮಾಡಲಿದ್ದೇವೆ. ಒಂದು ವರ್ಷದೊಳಗೆ ಸುಂದರ ಮಂದಿರವಾಗಿ ಬೆಳಗುವುದನ್ನು ನಾವೆಲ್ಲಾ ನೋಡಬೇಕುʼ ಎಂದರು.


ಗೌರವ ಆಹ್ವಾನಿತರಾಗಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಗೌಡ ಪಾರ, ವಿಘ್ನೇಶ್ವರ ಅರ್ಥ್‌ಮೂವರ್ಸ್ ಮ್ಹಾಲಕ  ಸುರೇಶ್ ಕುಮಾರ್, ಶಿವಂ ಕಂಪ್ಯೂಟರ್ಸ್ ಮ್ಹಾಲಕ ಸುದರ್ಶನ್ ರೈ ನೀರ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗುರುವಂದನೆ
ಇದೇ ವೇಳೆ ಮಂದಿರದ ಸಂಚಾಲಕ, ಗುರುಸ್ವಾಮಿ ಕೃಷ್ಣಪ್ಪ ಗೌಡರಿಗೆ ಮಣಿಕಂಠ ಚೆಂಡೆ‌ ಮೇಳದ ವತಿಯಿಂದ ಗೌರವ ಗುರುವಂದನೆ ಸಲ್ಲಿಸಲಾಯಿತು. ಚೆಂಡೆ ತರಬೇತುದಾರರಾದ ʻಕರ್ನಾಟಕ ಜಾನಪದ ಲೋಕʼ, ʻಕೇರಳ ಗುರುಪೂಜ್ಯʼ ಪ್ರಶಸ್ತಿ ಪುರಸ್ಕೃತ ಮನು ಪಣಿಕ್ಕರ್ ರವರಿಗೆ ಗುರುವಂದನೆ ಸಲ್ಲಿಸಲಾಯಿತು.  ಭವ್ಯ ಮಹೇಶ್‌ ಹಾಗೂ ಹೇಮಲತಾ ಸನ್ಮಾನ ಪತ್ರ ವಾಚಿಸಿದರು.


ಪ್ರಾಯೋಜಕರಿಗೆ ಗೌರವಾರ್ಪಣೆ
ತಂಡಕ್ಕೆ ಪ್ರಾಯೋಜಕತ್ವ ನೀಡಿ ಸಹಕರಿಸಿದವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಶ್ರೀವತ್ಸ ಕಾಜಿಮೂಲೆ, ಉಲ್ಲಾಸ್‌ ಗೌಡ, ಗಣೇಶ್‌ ಹೊಳ್ಳ, ಸುರೇಶ್‌ ಕುಮಾರ್‌, ಸುದರ್ಶನ್‌ ರೈ ನೀರ್ಪಾಡಿ, ಮುರಳೀಧರ ಕೀನ್ಯ ರವರಿಗೆ ಗೌರವಾರ್ಪಣೆ ಮಾಡಲಾಯಿತು.


ತಾರನಾಥ ಸವಣೂರು ರವರಿಗೆ ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ʻರಾಣಿ ಶಶಿಪ್ರಭೆʼ ಯಕ್ಷಗಾನ ಪ್ರದರ್ಶನ ನೀಡಿದ ವೀರಮಂಗಲ ಪಿಎಂಶ್ರೀ ಬಾಲಕಲಾವಿದರ ತಂಡದ ನಿರ್ದೇಶಕರಾದ ಶಿಕ್ಷಕ ತಾರನಾಥ ಸವಣೂರುರವರನ್ನು ಗೌರವಿಸಲಾಯಿತು.
ಪ್ರಧ್ವಿ ಪ್ರಾರ್ಥಿಸಿದರು. ತಂಡದ ಸದಸ್ಯರಾದ ಅಂಕಿತ್ ಕೋನಡ್ಕ ಸ್ವಾಗತಿಸಿ, ವೈಭವ್‌ ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಹಾಗೂ ಭವ್ಯ ಮಹೇಶ್‌ ಪೈಕ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಣಿಕಂಠ ಸಿಂಗಾರಿ ಮೇಳದ  ಮುಖ್ಯಸ್ಥ ಚೇತನ್‌ ಕುಮಾರ್‌ ರೆಂಜ, ಸದಸ್ಯರಾದ ಶರತ್‌ ಮಿತ್ತಡ್ಕ, ಅಕ್ಷಯ್‌ ನೀರುಕುಕ್ಕು, ಕೌಶಿಕ್‌ ಕಾಜಿಮೂಲೆ, ತುಷಾರ್‌ ಕಜೆ, ಮುರಳೀಕೃಷ್ಣ, ರಾಧಾಕೃಷ್ಣ ಇರ್ದೆ, ರಂಜಿತ್‌ ಕೋನಡ್ಕ, ಭವಿತ್‌ ಅತಿಥಿಗಳನ್ನು ಸ್ಮರಣಿಕೆ ಶಾಲು ನೀಡಿ ಗೌರವಿಸಿದರು.


ವೈದಿಕ ಕಾರ್ಯಕ್ರಮಗಳು
ಬೆಳಿಗ್ಗೆ ಮಂಜುಳಗಿರಿ ವೆಂಕಟರಮಣ ಭಟ್ ರವರ ನೇತೃತ್ವದಲ್ಲಿ ಗಣಹೋಮ ಜರಗಿತು‌. ಬೆಳಿಗ್ಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆದು, ಸಂಜೆ ಕುಣಿತ ಭಜನೆ ನಡೆಯಿತು. ಸಂಜೆ ಮಕರ ಸಂಕ್ರಮಣ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿಗೆ ಪಡಿಪೂಜೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಿತು. ಸಂಜೆ ಶಬರಿಮಲೆ ಕ್ಷೇತ್ರದಿಂದ ಮಕರಜ್ಯೋತಿ ದರ್ಶನದ ನೇರ ಪ್ರಸಾರವನ್ನು ಎಲ್‌ಇಡಿ ಪರದೆಯಲ್ಲಿ ನೀಡಲಾಯಿತು. ಅಯ್ಯಪ್ಪ ಭಕ್ತರು ಜ್ಯೋತಿ ದರ್ಶನ ಕಣ್ತುಂಬಿಕೊಂಡರು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನೆರವೇರಿತು.

LEAVE A REPLY

Please enter your comment!
Please enter your name here