ಕಡಬ: ಅಂಚೆ ಸಹಾಯಕ ಬಾಲಕೃಷ್ಣ ಪೂಜಾರಿಯವರಿಗೆ ಬೀಳ್ಕೊಡುಗೆ

0

ಕಡಬ: ಅಂಚೆ ಇಲಾಖೆಯಲ್ಲಿ ಸುದೀರ್ಘ 44 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಡಬ ಉಪ ಅಂಚೆಕಚೇರಿಯ ಗ್ರಾಮೀಣ ಅಂಚೆ ಸಹಾಯಕ ಬಾಲಕೃಷ್ಣ ಎಂ. ಪೂಜಾರಿಯವರಿಗೆ ಬೀಳ್ಕೊಡುಗೆ ಸಮಾರಂಭ ಜ.15ರಂದು ಸಂಜೆ ಕಡಬ ಉಪ ಅಂಚೆಕಚೇರಿಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಅಂಚೆ ಇಲಾಖೆಯ ಸುಳ್ಯ ಸಬ್‌ಡಿವಿಜನ್ ಅಂಚೆ ನಿರೀಕ್ಷಕರಾದ ವಿನೋದ್ ಕುಮಾರ್‌ರವರು ಬಾಲಕೃಷ್ಣ ಪೂಜಾರಿಯವರನ್ನು ಸನ್ಮಾನಿಸಿ ಮಾತನಾಡಿ, ಇಲಾಖೆಯಲ್ಲಿ 44 ವರ್ಷ ಉತ್ತಮ ಸೇವೆ ಸಲ್ಲಿಸಿರುವ ಬಾಲಕೃಷ್ಣ ಪೂಜಾರಿಯವರ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು. ಕಡಬ ಉಪಅಂಚೆ ಕಚೇರಿ ಸಬ್ ಪೋಸ್ಟ್ ಮಾಸ್ಟರ್ ಕೊರಗಪ್ಪ ನಾಯ್ಕ್‌ರವರು ಬಾಲಕೃಷ್ಣ ಪೂಜಾರಿಯವರ ಸೇವೆಯನ್ನು ಶ್ಲಾಘಿಸಿ ಶುಭಹಾರೈಸಿದರು. ನೂಜಿಬಾಳ್ತಿಲ ಬ್ರಾಂಚ್ ಪೋಸ್ಟ್ ಮಾಸ್ಟರ್ ಜಿನೇಂದ್ರ ಜೈನ್‌ರವರು ನಿವೃತ್ತರಾದ ಬಾಲಕೃಷ್ಣ ಪೂಜಾರಿಯವರೊಂದಿಗಿನ ಒಡನಾಟ, ಬಾಂಧವ್ಯ ಹಾಗೂ ವೃತ್ತಿ ಜೀವನದಲ್ಲಿ ಹಂಚಿಕೊಂಡ ಅನುಭವದ ಬಗ್ಗೆ ತಿಳಿಸಿ ಶುಭ ಹಾರೈಸಿದರು.

ಪುತ್ತೂರು ವಿಭಾಗದ ಪರವಾಗಿ ಅಂಚೆ ನಿರೀಕ್ಷಕ ವಿನೋದ್‌ಕುಮಾರ್, ಕಡಬ ಅಂಚೆ ಕಚೇರಿ, ನೆಟ್ಟಣ ಅಂಚೆ ಕಚೇರಿ ಸಿಬ್ಬಂದಿಗಳು ನಿವೃತ್ತರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಕೃಷ್ಟ ಪೂಜಾರಿಯವರು, 44 ವರ್ಷ ಅಂಚೆ ಇಲಾಖೆಯಲ್ಲಿ ದಕ್ಷತೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸಿ ಪ್ರೀತಿ ವಿಶ್ವಾಸ ಗಳಿಸಿರುವುದಕ್ಕೆ ಸಂದ ಗೌರವ ಇದಾಗಿದೆ. ಅಂಚೆ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಹೆಮ್ಮೆ ನನಗೆ ಇದೆ ಎಂದು ಹೇಳಿದ ಅವರು ವೃತ್ತಿ ಜೀವನದಲ್ಲಿ ಅನುಭವಿಸಿದ ಸಿಹಿ ಹಾಗೂ ಕಹಿ ಅನುಭವಗಳನ್ನು ಹಂಚಿಕೊಂಡರು.

ಬ್ರಾಂಚ್ ಪೋಸ್ಟ್ ಮೇಲ್ವಿಚಾರಕರಾದ ರಮೇಶ್ ಹಾಗೂ ಬಾಬು, ನೂಜಿಬಾಳ್ತಿಲ ಅಂಚೆ ಕಚೇರಿಯ ಎಬಿಪಿಎಂ ಧನಲಕ್ಷ್ಮೀ, ಎಡಮಂಗಲ ಅಂಚೆ ಕಚೇರಿಯ ಬಿಪಿಎಂ ಶಿವಪ್ಪ, ಎಬಿಪಿಎಂ ಸಾಗರ್, ಕೋಡಿಂಬಾಳ ಅಂಚ ಕಚೇರಿಯ ಬಿಪಿಎಂ ಭಾರತಿ, ಎಬಿಪಿಎಂ ಸುಂದರ್, ರೆಂಜಿಲಾಡಿ ಅಂಚೆ ಕಚೇರಿಯ ಕುಮಾರ್, ಮರ್ದಾಳ ಅಂಚೆ ಕಚೇರಿಯ ಬಿಪಿಎಂ ಕಮಾಲಾಕ್ಷ, ಎಬಿಪಿಎಂ ಮಲ್ಲಮ್ಮ, ಕಡ್ಯ ಅಂಚೆ ಕಚೇರಿಯ ಬಿಪಿಎಂ ಸೌಜನ್ಯ, ಕಡಬ ಅಂಚೆ ಕಚೇರಿಯ ಪಿಎ ಸಂಗಪ್ಪ, ಡಾಕ್ ಸೇವಕರಾದ ಉಷಾ, ದಯಾನಂದ, ವಿಶೇಷ ಅತಿಥಿಯಾಗಿದ್ದ ಭೂಷಣ್ ಮತ್ತಿತರರು ಶುಭಹಾರೈಸಿದರು. ಬಾಲಕೃಷ್ಣ ಪೂಜಾರಿಯವರ ಪತ್ನಿ ಮೀರಾ, ಸಹೋದರಿಯರಾದ ರತ್ನಾವತಿ ಬರೆಂಬೆಟ್ಟು, ಶೀಲಾವತಿ ಕುಟ್ರುಪ್ಪಾಡಿ, ಸೊಸೆ ಶಿಲ್ಪಾ ಉಪಸ್ಥಿತರಿದ್ದರು. ಕುಟ್ರುಪ್ಪಾಡಿ ಅಂಚೆ ಕಚೇರಿಯ ಬಿಪಿಎಂ ಕೊರಗಪ್ಪ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here