ಕೊಂಬಾರು ಗ್ರಾ.ಪಂ.ಗ್ರಾಮಸಭೆ, ವಿಶೇಷ ಚೇತನರ ಸಮನ್ವಯ ಗ್ರಾಮಸಭೆ

0

ಬೆಳೆವಿಮೆ ಪರಿಹಾರ ಮೊತ್ತ ಕಡಿಮೆ ಜಮೆಯಾಗಿರುವುದಕ್ಕೆ ಗ್ರಾಮಸ್ಥರ ಅಸಮಾಧಾನ

ನೆಲ್ಯಾಡಿ: ಕೊಂಬಾರು ಗ್ರಾಮ ಪಂಚಾಯತದ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ಹಾಗೂ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ಜ.20ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಗ್ರಾ.ಪಂ.ಅಧ್ಯಕ್ಷ ಮಧುಸೂದನ್ ಓಡೋಳಿ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾ.ಪಂ. ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಕಳೆದ ವರ್ಷ ವಿಪರೀತ ಮಳೆಯಾಗಿರುವುದರಿಂದ ಕೃಷಿಕರು ಕಂಗಾಲು ಆಗಿದ್ದಾರೆ. ಆದರೂ ಹವಮಾನ ಆಧಾರಿತ ಬೆಳೆ ವಿಮೆಯಲ್ಲಿ ಕಡಿಮೆ ಪರಿಹಾರ ಮೊತ್ತ ಜಮೆಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಚರ್ಚೆ ನಡೆದು ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಉಳಿದಂತೆ ಸುಂಕದಕಟ್ಟೆ-ಬೋಳ್ನಡ್ಕ-ಓಡೋಳಿ-ಕೆಂಜಾಳ ಜಿ.ಪಂ.ರಸ್ತೆಯ ಕಾಂಕ್ರಿಟೀಕರಣ ಯಾ ಡಾಮರೀಕರಣ, ಕಾಯರ್ತಡ್ಕ ಮಿತ್ತಬೈಲು ಪ.ಜಾತಿ ಕಾಲೋನಿ ಮಣಿಬಾಂಡ ರಸ್ತೆ ಅಭಿವೃದ್ದಿ, ಗ್ರಾಮ ಪಂಚಾಯತ್‌ನ ವಿವಿಧ ಕಡೆ ವಿದ್ಯುತ್ ದಾರಿದೀಪಗಳನ್ನು ಅಳವಡಿಸುವುದು, ಬೀದಿ ನಾಯಿಗಳಿಗೆ ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡುವುದು, ಮಣಿಬಾಂಡ ಶಾಲಾ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು, ಹೊಸ ಕಟ್ಟಡ ರಚನೆ, ಗ್ರಾ.ಪಂ.ವ್ಯಾಪ್ತಿಯ 4 ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದ್ದು, ಭರ್ತಿ ಮಾಡಿಕೊಡುವ ಸಂಬಂಧ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಅಲ್ಲದೆ ಗ್ರಾಮದ ಅಭಿವೃದ್ದಿಯ ಬಗ್ಗೆ ಮತ್ತು ಇಲಾಖೆಗಳ ವಿವಿಧ ಸಮಲತ್ತುಗಳ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು.


ಮೆಸ್ಕಾಂ ಜೆ.ಇ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಲಯ ಮೇಲ್ವಿಚಾರಕಿ, ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಅರಣ್ಯ ಇಲಾಖೆಯ ಅರಣ್ಯ ಪಾಲಕರು, ಕೊಂಬಾರು ಮತ್ತು ಸಿರಿಬಾಗಿಲು ಗ್ರಾಮ ಆಡಳಿತಾಧಿಕಾರಿ, ಶಿಕ್ಷಣ ಇಲಾಖೆ ಸಿ.ಆರ್.ಪಿ., ತೋಟಗಾರಿಕಾ ಇಲಾಖೆ ಪ್ರಭಾರ ಸಹಾಯಕ ನಿದೇಶಕರು, ಪಶು ಸಂಗೋಪಣಾ ಇಲಾಖೆ ಸಿಬ್ಬಂದಿ ಇಲಾಖಾವಾರು ಮಾಹಿತಿ ನೀಡಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಅಕ್ಷತಾ ಅವರು ವಿಶೇಷ ಚೇತನರಿಗೆ ಸಿಗುವ ಸರಕಾರದ ವಿವಿಧ ಸೌಲಭ್ಯ ಮತ್ತು ಪಿಂಚಣಿ, ಇ-ಕೆವೈಸಿ ಬಗ್ಗೆ ಮಾಹಿತಿ ನೀಡಿದರು.

ಗ್ರಾ.ಪಂ.ಅಧ್ಯಕ್ಷ ಮಧುಸೂದನ್ ಓಡೋಳಿ ಮಾತನಾಡಿ, ಈ ಗ್ರಾಮಸಭೆ ನಮ್ಮ ಆಡಳಿತ ಮಂಡಳಿಯ ಅವಧಿಯ ಕೊನೆಯ ಗ್ರಾಮಸಭೆಯಾಗಿದ್ದು, 5 ವರ್ಷದಲ್ಲಿ ಗ್ರಾಮದ ಅಭಿವೃದ್ದಿಯಲ್ಲಿ ಆಡಳಿತ ಮಂಡಳಿಯೊಂದಿಗೆ ಸಹಕರಿಸಿದ ಗ್ರಾಮಸ್ಥರಿಗೆ, ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಇನ್ನೂ ಮುಂದೆ ಕೂಡಾ ಗ್ರಾಮದ ಅಭಿವೃದ್ದಿ ಇನ್ನೂ ಉತ್ತಮ ರೀತಿಯಲ್ಲಿ ಆಗಲಿ. ಸರಕಾರದ ಅನುದಾನದಲ್ಲಿ ಪ್ರಗತಿ ಕಾಮಗಾರಿಗಳು ನಡೆಯಲಿ ಎಂದರು. ಗ್ರಾ.ಪಂ.ಉಪಾಧ್ಯಕ್ಷೆ ಸುಜಾತ ಜಯರಾಮ, ಸದಸ್ಯರಾದ ಚೆನ್ನಕೇಶವ ಕೆ, ಸದಾನಂದ, ಸುಶೀಲ ಶಿವಪ್ರಸಾದ್, ಜಯಶ್ರೀ ರಾಮಚಂದ್ರ ಗೌಡ, ಸರಿತಾ ನಿತ್ಯಾನಂದ, ವೀಣಾ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೀನ ಎ., ವರದಿ ವಾಚಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಲೋಕನಾಥ ನಿರೂಪಿಸಿದರು. ಸಿಬ್ಬಂದಿಗಳಾದ ಜನಾರ್ದನ, ಅಶ್ವತ್, ಸುಜಾತ, ಲಕ್ಷ್ಮೀ, ಶಿಲ್ಪಕಲಾ ಸಹಕರಿಸಿದರು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಹೊಳ್ಳಾರು, ಮಂಜುನಾಥ ಪೆರುಂದೋಡಿ, ಅಂಗನವಾಡಿ ಬಾಲ ವಿಕಾಸ ಸಮಿತಿ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಸಿಬ್ಬಂದಿಗಳು, ಸಖಿಗಳು, ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು, ವಿಶೇಷ ಚೇತನ ಫಲಾನುಭವಿಗಳು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here